ಸತ್ಕರ್ಮಗಳಿಂದ ಭಗವಂತನ ಅನುಗ್ರಹ
Team Udayavani, Feb 20, 2019, 1:00 AM IST
ಕುಂಬಳೆ: ಭಗವದನುಗ್ರಹ ಪ್ರಾಪ್ತಿಗೆ ಸತ್ಕರ್ಮಗಳ ಅಗತ್ಯವಿದೆ. ಸ್ವಾರ್ಥ ರಹಿತ ಆಂತರಂಗಿಕ ಭಕ್ತಿಯಿಂದ ಮಾಡುವ ಆರಾಧನೆಗೆ ಭಗವಂತ ಒಲಿಯುತ್ತಾನೆ. ಸರ್ವರ ಒಳಿತಿಗಾಗಿ ಮಾಡುವ ಯಾಗಗಳಿಂದ ಸಮಾಜ ಮತ್ತು ದೇಶಕ್ಕೆ ಒಳಿತಾಗುವುದು ಎಂದು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಗಳು ನುಡಿದರು.
ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಲೋಕ ಕಲ್ಯಾಣಾರ್ಥ ಆಯೋಜಿಸಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದಂಗವಾಗಿ ಮಂಗಳವಾರ ಜರಗಿದ ಧರ್ಮಸಭೆಯಲ್ಲಿ ಶ್ರೀಗಳು ಸಂದೇಶ ನೀಡಿದರು.
ಚಿನ್ಮಯ ಮಿಷನ್ ಕೇರಳ ವಿಭಾಗ ಮುಖ್ಯಸ್ಥರೂ ಕಾಸರಗೋಡು ಚಿನ್ಮಯ ಕೇಂದ್ರದ ಶ್ರೀ ವಿವಿಕ್ತಾನಂದ ಸರಸ್ವತೀ ಶ್ರೀಗಳು ಆಶೀರ್ವಚನ ನೀಡಿ, ಜಗತ್ತಿನ ಪ್ರತಿಯೊಂದು ಆಗುಹೋಗುಗಳನ್ನು ನಿಯಂತ್ರಿಸುವ ಅಗೋಚರ ದೈವೀ ಶಕ್ತಿಯ ಸಂಪ್ರೀತಿಗೆ ಹಲವು ಪ್ರಾಪಂಚಿಕ ಕ್ರಮಗಳನ್ನು ಅನುಸರಿಸಿದಾಗ ಎಲ್ಲರಿಗೂ ನೆಮ್ಮದಿ ದೊರಕಲು ಸಾಧ್ಯ ಎಂದರು.
ಪ್ರಕೃತಿ ನಿಯಮಕ್ಕನುಗುಣವಾಗಿ ಇತರ ಜೀವಜಾಲಗಳು ಬದುಕುವಂತೆ ಮನುಷ್ಯನೂ ಪ್ರಕೃತಿ ನಿಯಮಗಳನ್ನು ಪಾಲಿಸಬೇಕು. ಅದು ವ್ಯತಿರಿಕ್ತಗೊಂಡಾಗ ಪ್ರಕೃತಿ ಮುನಿಸಿಕೊಳ್ಳುತ್ತದೆ ಎಂದು ತಿಳಿಸಿದರು.
ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಉಪಸ್ಥಿತರಿದ್ದರು. ಪುರುಷೋತ್ತಮ ಭಂಡಾರಿ ಅಡ್ಯಾರು ಸ್ವಾಗತಿಸಿದರು, ಪುಷ್ಪರಾಜ ಐಲ ವಂದಿಸಿದರು. ಗಂಗಾಧರ ಕೊಂಡೆವೂರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಂಗವಾಗಿ ಶ್ರೀ ಗಾಯತ್ರೀ ದೇವಿಯ ಸನ್ನಿಧಿಯಲ್ಲಿ ಬೆಳಗ್ಗೆ ಬಿಂಬಶುದ್ಧಿ, ಶಾಂತಿಹೋಮ, ಪ್ರಾಯಶ್ಚಿತ್ತ ಹೋಮ, ಗಣಪತಿ ಹವನ, ದಕ್ಷಿಣಾಮೂರ್ತಿ ಯಾಗ, ಮಧ್ಯಾಹ್ನ ಪ್ರಸನ್ನ ಮಹಾಪೂಜೆ,
ಅನ್ನ ಸಂತರ್ಪಣೆ ನಡೆದವು. ಯಾಗಶಾಲೆಯಲ್ಲಿ ಕೂಷ್ಮಾಂಡ ಸಾವಿತ್ರಾದಿ ಹೋಮ, ಸೋಮ ಪೂಜೆ, ಪ್ರವಗ್ಯì ಸಂಭರಣ, ದೀಕ್ಷಣಿಯಾ ಇಷ್ಟಿಗಳು ನೆರವೇರಿದವು. ಯಾಗದ ಅಂಗವಾಗಿ ವಿಶೇಷವಾಗಿ ತರಿಸಲಾದ ಬಿಳಿ ವರ್ಣದ ಅಶ್ವ ರಂಗನನ್ನು ಯಾಗ ಶಾಲೆಗೆ ಕರೆದೊಯ್ದು ಪೂಜೆ, ನೈವೇದ್ಯಗಳನ್ನು ಸಮರ್ಪಿಸಲಾಯಿತು.
ಯಾಗದ ಋತ್ವಿಜರಾಗಿ ಗೋಕರ್ಣದ ವಿದ್ವಾನ್ ಗಣೇಶ ವಾಸುದೇವ ಜೋಗಳೇಕರ್ ತಮ್ಮ ತಂಡದೊಂದಿಗೆ ಸೋಮಯಾಗದ ವಿಧಿವಿಧಾನಗಳನ್ನು ನಿರ್ವಹಿಸುತ್ತಿದ್ದಾರೆ.
ಮಹಾರಾಷ್ಟ್ರದ ಬ್ರಹ್ಮಶ್ರೀ ಅನಿರುದ್ಧ ವಾಜಪೇಯಿ ದಂಪತಿ ಯಾಗದ ಯಜಮಾನತ್ವ ವಹಿಸಿರುವರು. ಫೆ. 24ರಂದು ಯಾಗ ಸಂಪನ್ನಗೊಳ್ಳಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.