ಶಾಲೆಯ ದಾರಿಯಲ್ಲಿ ಕಲಿತ ಪಾಠಗಳು
Team Udayavani, Feb 22, 2019, 12:30 AM IST
ಎಲ್ಲರ ಜೀವನದಲ್ಲೂ ಬಾಲ್ಯ ಎಂಬುದು ಮರು ಕಳಿಸಲಾಗದ ಅತ್ಯಮೂಲ್ಯ ನೆನಪುಗಳನ್ನು ಹೊತ್ತ ವಿಶೇಷ ಕಾಲಘಟ್ಟ. ಸಾಮಾನ್ಯವಾಗಿ ನಮ್ಮ ಪೀಳಿಗೆಯವರಿಗೆ ಬಾಲ್ಯ ಎಂದಾಕ್ಷಣ ನೆನಪಿಗೆ ಬರುವುದು ಶಾಲೆ. ಶಾಲೆಗೆ ಹೋಗಲು ಮನಸ್ಸಿಲ್ಲದಿದ್ದರೂ ಗೆಳೆಯರೊಡನೆ ಸೇರಿ ಆಟವಾಡಲೋ ಅಥವಾ ಯಾವುದೋ ಹುಚ್ಚುಸಾಹಸಗಳಿಗೆ ಕೈ ಹಾಕಲೋ ಹೋಗುತ್ತಿದ್ದವರು ಕೆಲವರಾದರೆ, ಮನೆಯವರ ಒತ್ತಾಯಕ್ಕೆ ಮತ್ತು ಶಾಲೆಯಲ್ಲಿ ಶಿಕ್ಷಕರು ಹಿಡಿಯುವ ಬೆತ್ತದ ಕೋಲಿನ ಭಯಕ್ಕೆ ಹೋಗುವವರು ಹಲವರು. ಸಾಮಾನ್ಯವಾಗಿ ಎಲ್ಲರ ಬಾಲ್ಯದಲ್ಲಿಯೂ ಶಾಲೆಯಲ್ಲಿ ಕಳೆದ ದಿನಗಳೇ ಹೆಚ್ಚು ಅನುಭವ ಕೊಟ್ಟರೆ, ನನಗೆ ಶಾಲೆಯಿಂದ ಮನೆಗೆ ಹೋಗುತ್ತಿದ್ದ ದಾರಿ ಕೊಟ್ಟ ಅನುಭವವೇ ಹೆಚ್ಚು.
ನಮ್ಮದು ಹಳ್ಳಿಗಾಡಿನಲ್ಲಿರುವ ಊರು. ಐದನೆಯ ತರಗತಿಯವರೆಗೆ ಓದಲು ಮನೆಯ ಹತ್ತಿರವೇ ಶಾಲೆ ಇತ್ತು. ಮತ್ತೆ ಕನಿಷ್ಠ ಮೂರು ಕಿ. ಮೀ. ಊರಿನ ಮೂಲೆಯಲ್ಲಿರುವ ಶಾಲೆಗೆ ನಡೆದುಕೊಂಡೇ ಸಾಗಬೇಕಿತ್ತು. ದಿನಕ್ಕೆ 6 ಬಾರಿ ಇದೇ ದಾರಿಯಲ್ಲಿ ಬಸ್ಸು ಓಡಾಡುತ್ತಿತ್ತು. ಆದರೆ, ಅದು ಕೂಡ ನಮ್ಮ ಅನುಕೂಲಕ್ಕೆ ತಕ್ಕಂತೆ ಇರಲಿಲ್ಲ. ಯಾರ ಬಳಿಯಾದರೂ ಡ್ರಾಪ್ ಕೇಳ್ಳೋಣವೆಂದರೂ ತಮ್ಮ ದಿನನಿತ್ಯದ ಕೆಲಸಗಳಿಗೆ ಅಥವಾ ಪೇಟೆಗೆ ಎಂದು ನಮಗೆ ಅಭಿಮುಖವಾಗಿ ಚಲಿಸುವ ವಾಹನಗಳ ಸಂಖ್ಯೆಯೇ ಜಾಸ್ತಿಯಾಗಿರುತ್ತಿತ್ತು. ಬೆಳಿಗ್ಗೆ ಶಾಲೆಗೆ ಹೋಗುವಾಗ ಹೆಚ್ಚಾಗಿ ಒಬ್ಬನೇ ಹೋಗಬೇಕಾಗುತ್ತಿತ್ತು. ಆದರೆ, ಬರುವಾಗ ಮಾತ್ರ ಒಂದಿಷ್ಟು ಮಂದಿ ಸ್ನೇಹಿತರೊಡಗೂಡಿಯೇ ಬರುತ್ತಿದ್ದೆವು.
ಹೆಚ್ಚು-ಕಡಿಮೆ ಈ ಸುತ್ತಮುತ್ತಲಿನ ಗುಡ್ಡಗಾಡಿನ ಸಂಪೂರ್ಣ ಪರಿಚಯವಿದ್ದ ನಮಗೆ ಯಾವ ಗುಡ್ಡದಲ್ಲಿ ಯಾವ ಗಿಡಮರಗಳಿವೆಯೆಂದೂ, ಯಾವ ಸೀಸನ್‌ನಲ್ಲಿ ಯಾವ ಹಣ್ಣುಗಳು ದೊರಕುತ್ತವೆಯೆಂದೂ ತಿಳಿದಿದ್ದೆವು. ಈ ನೈಸರ್ಗಿಕ ಸಂಪತ್ತಿನ ನೈಜ ಫಲಾನುಭವಿಗಳು ನಾವಾಗಿದ್ದೆವು ಎಂದರೆ ತಪ್ಪಾಗಲಾರದು. ಇದೇ ಕಾರಣದಿಂದಾಗಿ ಸಾಯಂಕಾಲ ಮನೆ ಸೇರುವ ಸಮಯ ಕೆಲವೊಮ್ಮೆ 7 ಗಂಟೆ ಆಗಿರುತ್ತಿತ್ತು. ಬೋಳುಗುಡ್ಡದ ಮೇಲೆ ಯಾವುದೇ ದಟ್ಟ ಮರಗಳ ಅಡೆತಡೆಗಳಿಲ್ಲದೇ ಇರುವುದರಿಂದ ಬೆಳಕು ಚೆನ್ನಾಗಿ ಹರಿದಿರುತ್ತಿತ್ತು. ಯಾರಿಗೇ ಕತ್ತಲಾದರೂ ನಾವು ಮಾತ್ರ ಮರಗಳಲ್ಲಿರುವ ನೆಲ್ಲಿಕಾಯನ್ನೋ, ಚೂರಿ ಹಣ್ಣನ್ನೋ ಅಥವಾ ಇನ್ನಾವುದೋ ಗಿಡದ ಫಸಲನ್ನು ತಿಂದು ಮಿಕ್ಕಿದ್ದನ್ನು ಬ್ಯಾಗಿಗೆ ತುರುಕಿಕೊಳ್ಳುವ ಭರದಲ್ಲಿ ಕತ್ತಲಿನ ಅರಿವಾಗುವುದು ರಸ್ತೆಗಿಳಿದ ಬಳಿಕವೇ!
ಒಮ್ಮೆಲೆ ಕತ್ತಲಾದ ಅನುಭವ. ರಸ್ತೆಯಲ್ಲಿ ಓಡಾಡುವ ವಾಹನಗಳ ಹೆಡ್‌ಲೈಟ್ ಆನ್ ಆಗಿರುತ್ತಿತ್ತು. ನಾವು ಮಾತ್ರ ಮನೆಯವರಿಂದ ಬರುವ ಬೈಗುಳವನ್ನು ಎದುರಿಸಲು ತಯಾರಿ ನಡೆಸುತ್ತ ಸಾಗುತ್ತಿದ್ದೆವು. ನನಗಂತೂ ಮೊದಲೇ ತಂದೆ ಎಂದರೆ ಭಯ. ತಡವಾದುದಕ್ಕೆ ಕಾರಣ ಕೇಳಿದಾಗ ನನ್ನಲ್ಲಿ ಯಾವುದೇ ಧನಾತ್ಮಕ ಕಾರಣಗಳಿಲ್ಲದೇ ಹೋದುದರಿಂದ ಸ್ವಲ್ಪ ಜಾಸ್ತಿಯೇ ಭಯದಿಂದ ಮನೆ ತಲುಪಿದೆ. ಮನೆಯ ಬಾಗಿಲ ಬಳಿಯೇ ನಿಂತು ನನ್ನ ಬರುವಿಕೆಗಾಗಿಯೇ ಅಪ್ಪ ಕಾಯುತ್ತಿದ್ದರು. ನಾನು ಅಂಗಳದ ತುದಿಯಲ್ಲೇ ನಿಂತೆ. ಅವರ ಕೋಪ ಕಣ್ಣಿನಲ್ಲೇ ಗೋಚರಿಸುತ್ತಿತ್ತು. ಅದಾಗ ತಾನೆ ಊರಿಗೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬೆಲ್ಲ ಗಾಳಿಸುದ್ದಿಗಳು ಹರಿದಾಡುತ್ತಿದ್ದರಿಂದ ನಮ್ಮ ತಂದೆ ಸ್ವಲ್ಪ ಜಾಸ್ತಿಯೇ ಕುಪಿತರಾಗಿದ್ದರು. “”ಬೇರೆ ಮಕ್ಕಳು ಬೇಗ ಮನೆ ಸೇರಿದ್ದಾರೆ. ನಿನಗೇನು ಲೇಟು” ಎಂದು ಗದರಿ ನನಗೆ ಮನೆಯ ಒಳಗೆ ಪ್ರವೇಶವನ್ನೇ ನಿಕಾರಿಸಿ ಬಿಟ್ಟರು. ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ಮೌನ ವ್ಯಕ್ತಪಡಿಸಿದೆ. ಅಮ್ಮನ ಬಳಿ ನನ್ನನ್ನು ಒಳಗೆ ಸೇರಿಸಬೇಡವೆಂದು ಹೇಳಿ ಯಾವುದೋ ಕೆಲಸಕ್ಕೆ ಹೊರಟರು. ಅವರ ದಿನಚರಿಯ ಪ್ರಕಾರ ಸಣ್ಣಪುಟ್ಟ ವೈರಿಂಗ್ ಕೆಲಸ ಎಂದು ಹೇಳಿ ಹೊರಟರೆ ಬರುವುದು ರಾತ್ರಿ 10 ಗಂಟೆ. ಅಷ್ಟರೊಳಗೆ ಅಮ್ಮನ ಮನವೊಲಿಸಿ ಒಳಗೆ ಬಂದು ಎಲ್ಲ ಚಟುವಟಿಕೆಗಳನ್ನು ಮುಗಿಸಿ ಮಲಗಿ ಬಿಡುವುದು ನನಗೆ ಕಷ್ಟವಾಗಲಿಲ್ಲ. ಇದೇ ರೀತಿಯ ಸನ್ನಿವೇಶ ಮತ್ತೆ ಮರುಕಳಿಸಿದ್ದುಂಟು.
ನಾವು ಶಾಲೆಯಲ್ಲಿ ಎಷ್ಟೇ ಮುಗ್ಧರೆನಿಸಿಕೊಂಡರೂ ದಾರಿಯಲ್ಲಿ ಮಾಡುತ್ತಿದ್ದ ಕಿಡಿಗೇಡಿ ಕೆಲಸಗಳಿಗೆ ಎತ್ತಿದ ಕೈ. ಶಾಲೆಗೆ ಹೋಗುವ ರಸ್ತೆಯ ಬದಿಯ ತೋಡಿನಂಚಿನಲ್ಲಿದ್ದ ಸುಮಾರು ಸೊಂಟದೆತ್ತರದ ಕಿ.ಮೀ. ಮೈಲಿಗಲ್ಲನ್ನು ತುಳಿದು ತುಳಿದು ಒಂದು ತಿಂಗಳ ಸತತ ಪ್ರಯತ್ನದಿಂದ ನೆಲಸಮ ಮಾಡಿದ್ದೆವು. ಇದರಿಂದ ಯಾವುದೋ ದೊಡ್ಡ ಸಾಹಸ ಮಾಡಿದ ತೃಪ್ತಿ ನಮ್ಮಲ್ಲಿತ್ತು ಬಿಟ್ಟರೆ ಮತ್ತಾವ ದುರುದ್ದೇಶಗಳಿರಲಿಲ್ಲ.
ಮೊನ್ನೆ ತಾನೆ ವೋಟಿಗೆಂದು ವರ್ಷಗಳ ನಂತರ ಈ ದಾರಿಯಲ್ಲಿ ಶಾಲೆಗೆ ಹೋದಾಗ ಹಳೆ ನೆನಪುಗಳು ಮರುಕಳಿಸಿದವು. ಶಾಲೆಯ ಮಕ್ಕಳಿಂದ ಹಿಡಿದು ಶಿಕ್ಷಕರವರೆಗೂ ಬದಲಾಗಿದ್ದರು. ಅಂತೆಯೇ ಶಾಲೆಯ ವಾತಾವರಣ ಕೂಡ ಬದಲಾಗಿತ್ತು. ಶಾಲೆ ಬಿಟ್ಟು ಎಷ್ಟೋ ವರ್ಷಗಳ ಬಳಿಕ ಅನಿವಾರ್ಯಕ್ಕಾಗಿ ಭೇಟಿ ಕೊಟ್ಟು ನಾನು ಕೂಡ ಬದಲಾಗಿದ್ದು ಅರಿವಿಗೆ ಬಂತು!
ಮಧು ಎಂ.ಎಸ್.
ಅಂತಿಮ ಬಿ.ಕಾಂ. ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾಪು, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.