ಜಿಪಂ ಅಧ್ಯಕ್ಷೆ ಅವಿಶ್ವಾಸಕ್ಕೆ ಕೋರಂ ಕೊರತೆ
Team Udayavani, Feb 22, 2019, 7:25 AM IST
ಕೋಲಾರ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗೀತಮ್ಮ ವಿರುದ್ಧ ಗುರುವಾರ ನಿಗದಿಯಾಗಿದ್ದ ಅವಿಶ್ವಾಸ ಮಂಡನೆ ಸಭೆಯು ಕೋರಂ ಕೊರತೆಯಿಂದಾಗಿ ಮುಂದೂಡಲ್ಪಟ್ಟಿತು. ಪಂಚಾಯ್ತಿ ರಾಜ್ ಅಧಿನಿಮಯ 1993ರ 180(2)(ಸಿ) ಪ್ರಕಾರ ಕೋರಂ ಇರಲು ಸಭೆಗೆ ಕನಿಷ್ಠ 15 ಮಂದಿ ಸದಸ್ಯರ ಹಾಜರಾತಿ ಇರಬೇಕಾಗುತ್ತದೆ. ಆದರೆ, 30 ಸದಸ್ಯರ ಜಿಪಂ ಸಭೆಗೆ ಕೇವಲ ನಾಲ್ಕು ಮಂದಿ ಹಾಜರಾಗಿದ್ದರಿಂದ ಸಭೆಯ ಅಧ್ಯಕ್ಷತೆವಹಿಸಿದ್ದ ಉಪಾಧ್ಯಕ್ಷೆ ಕೆ.ಯಶೋದಾ, ಸಿಇಒ ಜಿ.ಜಗದೀಶ್ ಸಭೆ ಮುಂದೂಡಿದರು.
ಜಿಪಂ ಅಧ್ಯಕ್ಷೆ ಗೀತಮ್ಮ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಸಭೆಗೆ ನಿಗದಿಪಡಿಸಿದ್ದ 11 ಗಂಟೆ ಸಭೆಗೆ ಉಪಾಧ್ಯಕ್ಷೆ ಕೆ.ಯಶೋದಾ ಮತ್ತು ಮ್ಯಾಕಲಗಡ್ಡ ನಾರಾಯಣಸ್ವಾಮಿ, ತೂಪಲ್ಲಿ ನಾರಾಯಣಸ್ವಾಮಿ ಹಾಗೂ ದಳಸನೂರು ಶ್ರೀನಿವಾಸ್ ಮಾತ್ರವೇ ಹಾಜರಾಗಿದ್ದರು.
ಅವಿಶ್ವಾಸಕ್ಕೆ ಇನ್ನೂ ಜೀವ: ಅವಿಶ್ವಾಸವನ್ನು ಸೋಲಿಸಬೇಕೆಂಬ ಕಾರಣದಿಂದ ವಾರದಿಂದ ಸಂಸದ ಕೆ.ಎಚ್.ಮುನಿಯಪ್ಪ, ಮಾಜಿ ಶಾಸಕ ವರ್ತೂರು ಪ್ರಕಾಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಆನಂದರೆಡ್ಡಿ ಇತರರು ಅಧ್ಯಕ್ಷರ ವಿರೋಧಿ ಬಣದಿಂದ ಮೂವರು ಸದಸ್ಯರನ್ನು ಸೆಳೆದು ತಮ್ಮ ಬಲವನ್ನು 12ಕ್ಕೇರಿಸಿಕೊಂಡಿದ್ದರು.
ಇದರಿಂದ ಅವಿಶ್ವಾಸಕ್ಕೆ ಸೋಲುಂಟಾಗುತ್ತದೆ ಎಂದು ಭಾವಿಸಿದ್ದ ಅಧ್ಯಕ್ಷರ ವಿರೋಧಿ ಬಣವು ಪಂಚಾಯ್ತಿ ರಾಜ್ ಕಾಯ್ದೆಗೆ ಮೊರೆ ಹೋದರಲ್ಲದೆ, ಇಂತದ್ದೇ ಸನ್ನಿವೇಶವನ್ನು ಎದುರಿಸಿದ್ದ ಕೊಡಗು ಜಿಪಂನ ಪ್ರಕರಣವನ್ನು ಉದಾಹರಣೆಯಾಗಿಟ್ಟುಕೊಂಡು ಸಭೆಯನ್ನು ಕೋರಂ ಇಲ್ಲದಂತೆ ಮಾಡಿ ಮುಂದೂಡಿಸುವ ತಂತ್ರಗಾರಿಕೆಯನ್ನು ರೂಪಿಸಿದ್ದರು.
ಅವಿಶ್ವಾಸಕ್ಕೆ ಸಭೆ ಕರೆಯುವಾಗ ಕೋರಂ ಎಷ್ಟಿರಬೇಕೆಂಬ ಬಗ್ಗೆ ಪಂಚಾಯ್ತಿ ರಾಜ್ ಕಾಯ್ದೆಯಲ್ಲಿ ಸ್ಪಷ್ಟ ಉಲ್ಲೇಖ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಜಿಪಂನ ಸಾಮಾನ್ಯ ಸಭೆಯ ಕೋರಂ ಅನ್ನೇ ಅವಿಶ್ವಾಸ ಮಂಡಿಸುವ ಸಭೆಗೂ ಅನ್ವಯಿಸಿಕೊಳ್ಳಬೇಕಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಅಧ್ಯಕ್ಷರ ವಿರೋಧಿ ಸದಸ್ಯರು ಸಭೆಗೆ ಕೋರಂ ಕೊರತೆಯಾಗುವಂತೆ ಮಾಡಿ ಮುಂದೂಡುವಲ್ಲಿ ಸಫಲರಾದರು.
ಸಭೆ ನಡೆಸಲು ಪ್ರಯತ್ನ: ಅವಿಶ್ವಾಸ ಸಭೆಯನ್ನು ನಡೆಸಿ ಸೋಲುಂಟಾಗುವಂತೆ ಮಾಡಲು ಸಭೆಯಲ್ಲಿ ಹಾಜರಿದ್ದ ತೂಪಲ್ಲಿ ನಾರಾಯಣಸ್ವಾಮಿ, ಸಭೆಯ ಅಧ್ಯಕ್ಷತೆ ವಹಿಸಿದ್ದ ಉಪಾಧ್ಯಕ್ಷೆ ಕೆ.ಯಶೋದಾರಿಗೆ ಸಭೆಯನ್ನು ಚರ್ಚೆಯ ಮೂಲಕ ಆರಂಭಿಸುವಂತೆ ಒತ್ತಡ ಹೇರಿದರು. ಆದರೆ, ಸಭೆ ಆರಂಭಿಸಲು ಕೋರಂ ಕೊರತೆ ಇರುವುದರಿಂದ ಸಾಧ್ಯವಿಲ್ಲ ಎಂದು ಹೇಳಲಾಯಿತು.
ಕೋರಂಗೆ ಅಗತ್ಯ ಸದಸ್ಯರ ಹಾಜರಾತಿ ಇಲ್ಲದಿದ್ದರಿಂದ ಅನಿವಾರ್ಯವಾಗಿ ಸಭೆ ಮುಂದೂಡುವ ನಿರ್ಧಾರವನ್ನು ಸಿಇಒ ತೆಗೆದುಕೊಳ್ಳಬೇಕಾಯಿತು. ಈ ನಿರ್ಧಾರ ತೆಗೆದುಕೊಂಡ ನಂತರ ಸಭೆಗೆ ಅಧ್ಯಕ್ಷರ ವಿರೋಧಿ ಬಣದ ಸದಸ್ಯರಾದ ಡಿ.ಕೆ.ಹಳ್ಳಿ ಸದಸ್ಯ ಬಿ.ಪಿ.ಮಹೇಶ್, ಕ್ಯಾಸಂಬಳ್ಳಿ ಸದಸ್ಯ ಜಯಪ್ರಕಾಶ್ ಮತ್ತು ಮುಳಬಾಗಿಲು ಆವಣಿಯ ಪ್ರಕಾಶ್ ರಾಮಚಂದ್ರ ಆಗಮಿಸಿದರಾದರೂ ಅವರನ್ನು ಹಾಜರಾತಿಗೆ ಪರಿಗಣಿಸಲಿಲ್ಲ.
ರೆಸಾರ್ಟ್, ಸುದೀರ್ಘ ಪ್ರವಾಸ: ಅವಿಶ್ವಾಸಕ್ಕೆ ಕರೆದಿದ್ದ ಸಭೆಗೆ ಕೋರಂ ಕೊರತೆ ಇರುವುದರಿಂದ ಸಭೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಲಿಲ್ಲ. ಇದರಿಂದ ಅವಿಶ್ವಾಸ ಜೀವಂತವಾಗಿದೆ. ಅದಕ್ಕೆ ಸೋಲುಂಟಾಗುತ್ತದೆಯೆಂಬ ನಿರೀಕ್ಷೆಯಲ್ಲಿ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಅಧ್ಯಕ್ಷೆ ಗೀತಮ್ಮ ಸೇರಿ ಅವರ ಬಣದ ಸದಸ್ಯರು ಗುರುವಾರ ಸಂಜೆ ವೇಳೆಗೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಅಧ್ಯಕ್ಷರ ವಿರೋಧಿ ಬಣವೂ ಸುದೀರ್ಘ ಪ್ರವಾಸ ಮತ್ತು ರೆಸಾರ್ಟ್ ವಾಸ್ತವ್ಯದ ನಂತರ ಮನೆಗಳಿಗೆ ತೆರಳಿದ್ದಾರೆ. ಅವಿಶ್ವಾಸಕ್ಕೆ ಉಪಾಧ್ಯಕ್ಷೆ ಯಶೋದಾ ಸಹಿ ಹಾಕಿರುವುದರಿಂದ ಹಾಗೂ ಈಗ ಮುಂದೂಡಲ್ಪಟ್ಟಿರುವ ಸಭೆಯನ್ನು ಕರೆಯುವ ಜವಾಬ್ದಾರಿಯೂ ಉಪಾಧ್ಯಕ್ಷರ ಮೇಲೆಯೇ ಇರುವುದರಿಂದ ಅಧ್ಯಕ್ಷೆ ಗೀತಮ್ಮ ವಿರೋಧಿ ಬಣವು ಚಾಣಾಕ್ಷತನದಿಂದ ಚೆಂಡನ್ನು ತಮ್ಮ ಅಂಗಳದಲ್ಲಿಯೇ ಉಳಿಸಿಕೊಂಡಿದ್ದಾರೆ.
ಏಳು ದಿನಗಳ ಕಾಲಾವಕಾಶ ನೀಡಿದ ನಂತರ ಮುಂದಿನ ಸಭೆ ಕರೆಯಲು ಅವಕಾಶ ಇರುವುದರಿಂದ ಮುಂದಿನ 10 ದಿನಗಳ ಒಳಗಾಗಿ ಮತ್ತೂಂದು ಸಭೆ ಕರೆಯಲು ನಿರ್ಧರಿಸಲಾಗಿದೆ. ಅಷ್ಟರೊಳಗಾಗಿ ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟವಾದರೆ ಮಾತ್ರವೇ ಅಧ್ಯಕ್ಷೆ ಗೀತಮ್ಮರ ವಿರುದ್ಧದ ಅವಿಶ್ವಾಸಕ್ಕೆ ತೊಡಕುಂಟಾಗುತ್ತದೆ. ಇಲ್ಲವಾದರೆ ಮುಂದಿನ 10 ದಿನಗಳೊಳಗಾಗಿ ಮತ್ತೆ ಅವಿಶ್ವಾಸ ಮಂಡನೆ ಸಭೆ ನಡೆಯಬೇಕಾಗುತ್ತದೆ.
ಉರುಳಿಸುವ ಉಳಿಸುವ ಆಟ: ಅಧ್ಯಕ್ಷೆ ಗೀತಮ್ಮ ಅವರನ್ನು ಉರುಳಿಸುವ ಉಳಿಸುವ ಆಟದಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ಸ್ಪೀಕರ್ ರಮೇಶ್‌ಕುಮಾರ್ ಬಣಗಳು ರಾಜಕೀಯವಾಗಿ ಚಾಪೆ ಕೆಳಗೆ ರಂಗೋಲಿ ಕೆಳಗೆ ನುಗ್ಗುವ ಆಟವಾಡುತ್ತಿರುವುದು ಜಿಲ್ಲೆಯ ಜನತೆಗೆ ಚರ್ಚೆಯ ವಸ್ತುವಾಗಿದೆ. ಜಿಲ್ಲೆಯು ಬಿರು ಬೇಸಿಗೆಗೆ ಹೆಜ್ಜೆ ಇಡುತ್ತಿರುವಾಗಲೇ ಜಿಪಂ ಅಧ್ಯಕ್ಷೆ, ಉಪಾಧ್ಯಕ್ಷೆ,
ಸದಸ್ಯರು ತಮ್ಮ ಕ್ಷೇತ್ರಗಳಲ್ಲಿ ಬೇಸಿಗೆಯನ್ನು ಎದುರಿಸುವ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮುಖಂಡರ ಸ್ವಪ್ರತಿಷ್ಠೆಗೆ ತಕ್ಕಂತೆ ಪ್ರವಾಸ, ರೆಸಾರ್ಟ್ ವಾಸ್ತವ್ಯಗಳಲ್ಲಿ ತೊಡಗಿರುವುದು ಸಾರ್ವಜನಿಕವಾಗಿ ಟೀಕೆಗೆ ಗುರಿಯಾಗಿದೆ. ಇದೀಗ ಮತ್ತೆ ಅವಿಶ್ವಾಸ ಸಭೆ ಮುಂದೂಡಿರುವುದರಿಂದ ಹೊಸದಾಗಿ ಸಭೆಗೆ ದಿನಾಂಕ ನಿಗದಿಯಾಗುವವರೆಗೂ ಕುದುರೆ ವ್ಯಾಪಾರಕ್ಕೆ ಹೇರಳ ಅವಕಾಶ ಮಾಡಿಕೊಟ್ಟಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.