ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವೆ
Team Udayavani, Feb 23, 2019, 5:16 AM IST
ದಾವಣಗೆರೆ: ಯಾವುದೇ ರೀತಿಯ ಸಮಸ್ಯೆಯೇ ಇರಲಿ ಜನರ ನಿರೀಕ್ಷೆಗೆ ತಕ್ಕಂತೆ ಪ್ರಾಮಾಣಿಕವಾಗಿ ಸ್ಪಂದಿಸುವುದಾಗಿ ನೂತನ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ತಿಳಿಸಿದ್ದಾರೆ.
ಶುಕ್ರವಾರ, ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ರೀತಿಯ ಸಮಸ್ಯೆ ಉಂಟಾದಾಗ ಜಿಲ್ಲಾಧಿಕಾರಿಗಳು ತಮ್ಮ ಕಷ್ಟಕ್ಕೆ ಸ್ಪಂದಿಸಬೇಕು, ಕೆಲಸ ಮಾಡಿಕೊಡಬೇಕು ಎಂದು ಜನರು ನಿರೀಕ್ಷೆ ಮಾಡುವುದು ಸಹಜ. ಅದಕ್ಕೆ ತಕ್ಕಂತೆ
ಸ್ಪಂದಿಸುವ ಜೊತೆಗೆ ಪ್ರಾಮಾಣಿಕ ಕೆಲಸ ಮಾಡುವುದಾಗಿ ತಿಳಿಸಿದರು.
ಶಾಂತಿ ಮತ್ತು ಸುವ್ಯವಸ್ಥಿತವಾಗಿ ಲೋಕಸಭಾ ಚುನಾವಣೆ ನಡೆಸಲಾಗುವುದು. ಹಿಂದಿನ ಜಿಲ್ಲಾಧಿಕಾರಿ ಚುನಾವಣೆಗೆ ಸಂಬಂಧಿಸಿದಂತೆ ಸಾಕಷ್ಟು ಕೆಲಸ ಮಾಡಿದ್ದಾರೆ. ಒಂದರೆಡು ದಿನದ ಒಳಗೆ ಚುನಾವಣೆ ಹಿನ್ನೆಲೆಯಲ್ಲಿ ನಡೆಯುವ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿವೆ. ಆ ನಂತರ ಅಧಿಕಾರಿಗಳ ಮತ್ತೂಂದು ಸಭೆ ನಡೆಸಿ, ಸುಗಮ ಚುನಾವಣೆಗೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ತಮ್ಮ ಸೇವಾವಧಿಯಲ್ಲಿ ಈಗ ನಡೆಸುತ್ತಿರುವುದು 26ನೇ ಚುನಾವಣೆ. 6 ರಾಜ್ಯಗಳಲ್ಲಿ ಚುನಾವಣಾ ವೀಕ್ಷಕರಾಗಿ ಕೆಲಸ ಮಾಡಿರುವ ಅನುಭವ ಇದೆ. ಚುನಾವಣೆಯ ಎಲ್ಲಾ ವಿಷಯ ಚೆನ್ನಾಗಿ ಗೊತ್ತಿವೆ. ಹಾಗಾಗಿ ಯಾವುದೇ ಒತ್ತಡಕ್ಕೆ ಒಳಗಾಗದೆ ಅತ್ಯಂತ ಮುಕ್ತ, ಸುವ್ಯವಸ್ಥಿತವಾಗಿ ಚುನಾವಣೆ ನಡೆಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಒಂದು ರೀತಿಯಲ್ಲಿ ತಾವು ಒಂದು ಕಡೆ ಬರ ಮತ್ತು ಇನ್ನೊಂದು ಕಡೆ ಚುನಾವಣಾ ಸವಾಲುಗಳ ಮಧ್ಯೆ ಅಧಿಕಾರ ವಹಿಸಿಕೊಂಡಿರುವ ಜಿಲ್ಲಾಧಿಕಾರಿ. ಚುನಾವಣಾ ನಂತರ ಜಿಲ್ಲೆಯಲ್ಲಿನ ಸಮಸ್ಯೆ, ಆಗಬೇಕಾದ ಕೆಲಸ-ಕಾರ್ಯಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುವುದು. ಎಲ್ಲೆಡೆ ಬರ. ಹಾಗಾಗಿ ಎಲ್ಲಾ ಕಡೆ ನೀರಿನ ಸಮಸ್ಯೆ ತಲೆದೋರುವುದು ಸಾಮಾನ್ಯ. ಭದ್ರಾ ಜಲಾಶಯದಲ್ಲಿ ನೀರಿದ್ದರೂ ಸಮಸ್ಯೆ ಎದುರಾಗುವ ಸಾಧ್ಯತೆಯ ಗಮನದಲ್ಲಿಟ್ಟುಕೊಂಡೇ ಯಾವುದೇ ರೀತಿಯ ಸಮಸ್ಯೆ ಆಗದಂತೆ ಅಕ್ರಮ ಪಂಪ್‌ಸೆಟ್ ತೆರವು ಒಳಗೊಂಡಂತೆ ಅಗತ್ಯ ಕ್ರಮ ಗೆದುಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಅಕ್ರಮ ಗಣಿ, ಕ್ವಾರಿ, ಕ್ರಷರ್‌ಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಈಶಾನ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕನಾಗಿ ಕೆಲಸ ಮಾಡಿರುವ ಅನುಭವದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಗ್ರಾಮಾಂತರ ಭಾಗಗಳಿಗೆ ಬಸ್ ಸಂಚಾರ ಸೌಲಭ್ಯ ಒದಗಿಸುವ ಜೊತೆಗೆ ಈ ಹಿಂದೆ ಗ್ರಾಮೀಣ ಭಾಗದಲ್ಲಿ ಬಸ್ ಸೌಲಭ್ಯ ಇಲ್ಲದ ಕಾರಣಕ್ಕಾಗಿ ಸಂಭವಿಸಿರುವ ಅಹಿತಕರ ಘಟನೆಗಳು ಮುಂದೆಯೂ ಆಗದಂತೆ ಸಂಬಂಧಿತರೊಡನೆ ಚರ್ಚಿಸಿ, ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಈಶಾನ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ನಿರ್ವಾಹಕರು, ಚಾಲಕರು ರಜೆಯ ಸೌಲಭ್ಯದ ಸಮಸ್ಯೆ ತಪ್ಪಿಸುವ ಉದ್ದೇಶದಿಂದ ಎಲ್ಲಾ ಡಿಪೋಗಳಲ್ಲಿ ಎಟಿಎಂ ಬಾಕ್ಸ್ ಮಾದರಿಯ ವ್ಯವಸ್ಥೆ ಮಾಡಲಾಗಿತ್ತು. ಅದಕ್ಕೆ ರಾಷ್ಟ್ರ ಮಟ್ಟದ ಪ್ರಶಸ್ತಿಯೂ ಲಭಿಸಿತ್ತು ಎಂದು ತಿಳಿಸಿದರು.
ಹಿಂದಿನ ಬಿಜಾಪುರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಜಯಪುರ ನಗರ ಸಾರಿಗೆ ಸೌಲಭ್ಯ ಪ್ರಾರಂಭಿಸಿದ್ದು ಬಿಜಾಪುರ ಮುಂದೆ ವಿಜಯಪುರ.. ಎಂದು ನಾಮಕರಣಗೊಳ್ಳಲು ಪ್ರಮುಖ ಕಾರಣವಾಯಿತು. ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಸಾಹಿತ್ಯ ಲೋಕದ ದಿಗ್ಗಜರ ಹೆಸರಿನಲ್ಲಿ ಬಸ್ ಸಂಚಾರ ವ್ಯವಸ್ಥೆ ಮಾಡಿದ್ದು ಭಾರೀ ಮೆಚ್ಚುಗೆ ಗಳಿಸಿತ್ತು. ಈ ನಾಡಿನಲ್ಲಿ ಹುಟ್ಟಿರುವ ನಾವು ನೆಲ-ಜಲ-ಭಾಷೆ ಬಗ್ಗೆ ಪ್ರಾಮಾಣಿಕ ಸೇವೆ ಮಾಡಬೇಕು ಎಂಬುದು ತಮ್ಮ ಇಚ್ಛೆ. ಅದರಂತೆ ಕೆಲಸ ಮಾಡುವುದಾಗಿ ಹೇಳಿದರು.
ಈಶಾನ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕನಾಗಿದ್ದ ಸಂದರ್ಭದಲ್ಲಿ ಬಸ್‌ಗಳಲ್ಲಿ ಆ ಭಾಗದ ಐತಿಹಾಸಿಕ ಸ್ಥಳಗಳ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಾ ಐತಿಹಾಸಿಕ ಸ್ಥಳಗಳಿಗೆ ಬಸ್ ಸೌಲಭ್ಯ ಪ್ರಾರಂಭಿಸುವ ಮೂಲಕ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳಕಿಗೆ ತರುವ ಕೆಲಸ ಮಾಡಲಾಗಿತ್ತು. ಆದೇ ಮಾದರಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದಾವಣಗೆರೆ ನಗರ ಪ್ರದೇಶದಲ್ಲಿ ಆಶ್ರಯ ಯೋಜನೆಯಡಿ ಮನೆ ಸೌಲಭ್ಯ ಕೋರಿ ಜಿಲ್ಲಾಡಳಿತ, ನಗರಪಾಲಿಕೆಗೆ ಮತ್ತು ಜನಸ್ಪಂದನಾ ಸಭೆಗೂ ಸಾಕಷ್ಟು ಅರ್ಜಿ ಸಲ್ಲಿಕೆಯಾಗುತ್ತಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಮಾಡಿರುವ ಕೆಲಸದ ಅನುಭವದ ಆಧಾರದಲ್ಲೂ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ತಹಶೀಲ್ದಾರ್ ಜಿ. ಸಂತೋಷ್ ಕುಮಾರ್ ಇದ್ದರು.
ದೂಡಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ
ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷರಾಗಿ ನೂತನ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಅಧ್ಯಕ್ಷರ ವೈಯಕ್ತಿಕ ಗಮನಕ್ಕೆ ತರುವಂತಹ ಪತ್ರಗಳು ಹಾಗೂ ಅರೆ ಸರ್ಕಾರಿ ಪತ್ರಗಳನ್ನು ಜಿ.ಎನ್.ಶಿವಮೂರ್ತಿ, ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ, ಡಿ.ದೇವರಾಜ ಅರಸು ಬಡಾವಣೆ, ದಾವಣಗೆರೆ-577006. (ದೂ.ಸಂ: 08192-259394, 08192-232022) ಈ ವಿಳಾಸಕ್ಕೆ ಕಳುಹಿಸಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೂತನ ಜಿಲ್ಲಾಧಿಕಾರಿಯಾಗಿಶಿವಮೂರ್ತಿ ಅಧಿಕಾರ ಸ್ವೀಕಾರ
ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಜಿ.ಎನ್. ಶಿವಮೂರ್ತಿ ಶುಕ್ರವಾರ ಅಧಿಕಾರ ವಹಿಸಿಕೊಂಡರು. ಡಾ| ಬಗಾದಿ ಗೌತಮ್ ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರ ಜಿ.ಎನ್. ಶಿವಮೂರ್ತಿ ಅವರನ್ನು ನಿಯೋಜಿಸಿದ್ದು, ಪ್ರಭಾರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪರಿಂದ ಅಧಿಕಾರ ವಹಿಸಿಕೊಂಡರು.
2010ನೇ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಜಿ.ಎನ್. ಶಿವಮೂರ್ತಿ, ಕರ್ನಾಟಕ ಹೌಸಿಂಗ್ ಬೋರ್ಡ್ ಆಯುಕ್ತ, ರಾಜ್ಯ ಸಾರಿಗೆ ಸಂಸ್ಥೆಯ ಈಶಾನ್ಯ ವಿಭಾಗದ ವ್ಯವಸ್ಥಾಪಕ ನಿರ್ದೇಶಕ, ಎಪಿಎಂಸಿ ವ್ಯವಸ್ಥಾಪಕ ನಿರ್ದೇಶಕ, ಹೊಸಪೇಟೆ ಉಪ ವಿಭಾಗಾಧಿಕಾರಿ, ಬಳ್ಳಾರಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಒಳಗೊಂಡಂತೆ 26 ವರ್ಷ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಅವಿಭಜಿತ ಚಿತ್ರದುರ್ಗ ಜಿಲ್ಲೆಯ ತುರವನೂರು ಗ್ರಾಮದ ಜಿ.ಎನ್. ಶಿವಮೂರ್ತಿ, ತುರವನೂರು, ಚಿತ್ರದುರ್ಗ, ಧಾರವಾಡ, ಬಳ್ಳಾರಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಪ್ರಥಮ ಬಾರಿಗೆ ಜಿಲ್ಲಾಧಿಕಾರಿಯಾಗುವ ಮುನ್ನ ಬೆಂಗಳೂರಿನಲ್ಲಿ ಉದ್ಯಮಶೀಲತೆ ಹಾಗೂ ಜೀವನಶೈಲಿ ಅಭಿವೃದ್ಧಿ ಇಲಾಖೆಯ ಆಯುಕ್ತರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.