ಮಾನಸಿಕ ಅನಾರೋಗ್ಯ ಆರೈಕೆದಾರರ ಹೊರೆಮತ್ತು ಅದರ ನಿರ್ವಹಣೆ
Team Udayavani, Feb 24, 2019, 12:30 AM IST
ಕೇರ್‌ಗೀವರ್ ಬರ್ನ್ಔಟ್ ಎನ್ನುವುದು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಹತಾಶ ಸ್ಥಿತಿ. ಇದರ ಜತೆಗೆ ರೋಗಿಯ ಆರೈಕೆಯ ಬಗ್ಗೆ ಧನಾತ್ಮಕ ಪ್ರವೃತ್ತಿಯಿಂದ ಋಣಾತ್ಮಕ ಪ್ರವೃತ್ತಿಯತ್ತ ತಿರುಗಬಹುದಾದ ವರ್ತನೆಯ ಬದಲಾವಣೆಯೂ
ಇದರ ಜತೆಗೆ ಸೇರಿಕೊಳ್ಳಬಹುದು.
ದೀರ್ಘಕಾಲಿಕ ದೈಹಿಕ ಮತ್ತು ಮಾನಸಿಕ ಅನಾರೋಗ್ಯ ಹೊಂದಿರುವವರಿಗೆ ಮೊದಲ ಆರೈಕೆದಾರರು ಅವರ ಕುಟುಂಬ ಸದಸ್ಯರೇ ಆಗಿರುತ್ತಾರೆ. ಭಾರತದಲ್ಲಿ ಸ್ಕಿಝೊಫ್ರೀನಿಯಾ, ಬೈಪೋಲಾರ್ ಅಫೆಕ್ಟಿವ್ ಡಿಸಾರ್ಡರ್, ಎಚ್‌ಐವಿ/ಏಡ್ಸ್, ಕ್ಯಾನ್ಸರ್ ಮತ್ತು ಇತರ ದೀರ್ಘಕಾಲಿಕ ಕಾಯಿಲೆಗಳನ್ನು ಹೊಂದಿರುವವರು ತಮ್ಮ ಕುಟುಂಬದ ಜತೆಗೆ ಜೀವಿಸುತ್ತಿರುತ್ತಾರೆ.
ದೈನಿಕ ಆರೈಕೆ, ಔಷಧ ಸೇವನೆಯ ಮೇಲ್ವಿಚಾರಣೆ, ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದು ಮತ್ತು ಹಣಕಾಸು ಅಗತ್ಯಗಳನ್ನು ನೋಡಿಕೊಳ್ಳುವುದು ಕುಟುಂಬ ಸದಸ್ಯರ ಹೊಣೆಯೇ ಆಗಿರುತ್ತದೆ. ದೀರ್ಘಕಾಲಿಕ ಕಾಯಿಲೆಗಳು ಅವುಗಳಿಂದ ಪೀಡಿತರಾಗಿರುವವರು ಮಾತ್ರ ಅಲ್ಲ; ಅವರ ಆರೈಕೆಯನ್ನು ನೋಡಿಕೊಳ್ಳುವ ಕುಟುಂಬ ಸದಸ್ಯರ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಆರೈಕೆ ನೋಡಿಕೊಳ್ಳುವ ಕುಟುಂಬ ಸದಸ್ಯರು ಗಮನಾರ್ಹ ಪ್ರಮಾಣದ ಒತ್ತಡವನ್ನು ಅನುಭವಿಸುತ್ತಾರೆ ಮತ್ತು ಅವರಿಗೆ ಆ ಒತ್ತಡವನ್ನು ನಿಭಾಯಿಸುವಲ್ಲಿ ಸಹಾಯದ ಅಗತ್ಯವಿರುತ್ತದೆ. ಕ್ರಮೇಣವಾಗಿ ಇದರಿಂದ ಆರೈಕೆ ನೋಡಿಕೊಳ್ಳುವವರಿಗೂ ತೊಂದರೆ (ಕೇರ್‌ಗೀವರ್ ಬರ್ನ್ಔಟ್) ಉಂಟಾಗಬಹುದು.
ಮಾನಸಿಕ ಅಸ್ವಸ್ಥರನ್ನು ನೋಡಿಕೊಳ್ಳುವವರ ಕಾರ್ಯಚಟುವಟಿಕೆಗಳು ಇನ್ನಷ್ಟು ಜಟಿಲವಾಗಿರಬಹುದಾಗಿದೆ. ಸಾಮಾನ್ಯವಾಗಿ ಮಾನಸಿಕ ಅಸ್ವಸ್ಥತೆಯು ಸಣ್ಣ ವಯಸ್ಸಿನಲ್ಲಿ ಪ್ರಾರಂಭವಾಗುವುದರಿಂದ ರೋಗಿಗಳು ತಮ್ಮ ದೈನಿಕ ಕೆಲಸ ಕಾರ್ಯಗಳಿಗಾಗಿ ಆರೈಕೆದಾರರ ಮೇಲೆ ಅವಲಂಬಿತರಾಗಿರುತ್ತಾರೆ.
ಆರೈಕೆ ಮಾಡುವುದು ಮತ್ತದರ ಪರಿಣಾಮಗಳು
ಆರೈಕೆ ಒದಗಿಸುವ ಸಮಯ ದೀರ್ಘವಾದಂತೆ ಆರೈಕೆಯ ಅಗತ್ಯವೂ ಹೆಚ್ಚುವುದರ ಪರಿಣಾಮವಾಗಿ ಆರೈಕೆದಾರರ ದೈಹಿಕ ಆರೋಗ್ಯ ತೊಂದರೆಗೀಡಾಗುವ ಸಾಧ್ಯತೆ ಹೆಚ್ಚು ಎಂಬುದಾಗಿ ಅಧ್ಯಯನಗಳು ಹೇಳುತ್ತವೆ. ನಿದ್ದೆಗೆ ಅಡಚಣೆ, ನೋವಿನ ಲಕ್ಷಣಗಳು, ತಲೆನೋವು, ಜೀರ್ಣ ಕ್ರಿಯೆಯ ಸಮಸ್ಯೆಗಳು, ತೂಕ ಏರುಪೇರು ಹಾಗೂ ತಲೆಗೂದಲು ಉದುರುವುದು, ದಣಿವು, ಹೆಚ್ಚಿದ ರಕ್ತದೊತ್ತಡ ಮತ್ತು ಇತರ ನೋವಿನ ಅನುಭವಗಳು ಸಾಮಾನ್ಯವಾಗಿರುತ್ತವೆ.
ದೀರ್ಘಕಾಲ ರೋಗಿಯ ಆರೈಕೆ ಮಾಡುವುದು ದೈಹಿಕ ಸಮಸ್ಯೆಗಳ ಜತೆಗೆ ಆರೈಕೆದಾರರ ಮಾನಸಿಕ ಆರೋಗ್ಯದ ಮೇಲೆಯೂ ಪರಿಣಾಮ ಬೀರಬಹುದಾಗಿದೆ. ಆರೈಕೆದಾರರು ಖನ್ನತೆ, ಆತಂಕ, ಒತ್ತಡ, ಅಸಹಾಯಕ ಭಾವನೆ ಅಥವಾ ನಿರಾಶೆ, ಭಾವನಾತ್ಮಕ ಸಮಸ್ಯೆಗಳು ಹಾಗೂ ಆತ್ಮವಿಶ್ವಾಸ ನಷ್ಟ ಅನುಭವಿಸಬಹುದು.
ದೀರ್ಘಕಾಲಿಕ ಅನಾರೋಗ್ಯ ಹೊಂದಿರುವ ಕುಟುಂಬ ಸದಸ್ಯನ ಜತೆಗೆ ಜೀವಿಸುವುದು ಆರೈಕೆದಾರರ ಸಾಮಾಜಿಕ ಬದುಕು ಮತ್ತು ವಿರಾಮದ ಚಟುವಟಿಕೆಗಳ ಮೇಲೆಯೂ ಭಾರೀ ಪರಿಣಾಮವನ್ನು ಉಂಟು ಮಾಡುತ್ತದೆ. ಅವರ ಸಾಮಾಜಿಕ ಸಂಪರ್ಕ ಕಡಿಮೆಯಾಗುತ್ತದೆಯಲ್ಲದೆ ಅವರಲ್ಲಿ ಏಕಾಕಿತನದ ಭಾವನೆ ಹೆಚ್ಚುವ ಸಾಧ್ಯತೆಯಿದೆ. ಬಹುತೇಕ ಬಾರಿ ಆರೈಕೆದಾರರಿಗೆ ಕುಟುಂಬದ ಇತರ ಸದಸ್ಯರ ಜತೆಗೆ ಹೆಚ್ಚು ಕಾಲ ಕಳೆಯಲಾಗುವುದಿಲ್ಲ. ಪ್ರೀತಿಪಾತ್ರರು ದೀರ್ಘಕಾಲ ಅನಾರೋಗ್ಯದಿಂದ ಇರುವುದು ಆರೈಕೆದಾರರ ದೈನಿಕ ಚಟುವಟಿಕೆಗಳು, ಮನೆಗೆಲಸಗಳ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಿ ಒಟ್ಟಾರೆ ಉತ್ಪಾದಕತೆಯನ್ನು ಕಡಿಮೆ ಮಾಡುತ್ತದೆ. ರೋಗಿಯ ಜತೆಗೆ ಕಾಲ ಕಳೆಯುವುದರಿಂದ ಆರೈಕೆದಾರರ ಉದ್ಯೋಗ ಸಂಬಂಧಿ ಚಟುವಟಿಕೆಗಳ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುತ್ತದೆ.
ಆರೈಕೆದಾರರ ಮೇಲೆ ಬೀಳುವ ಹೊರೆಯಿಂದಾಗಿ ಕಾಲಾಂತರದಲ್ಲಿ ಆರೈಕೆದಾರರು ತೀವ್ರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಬಹುದು ಮಾತ್ರವಲ್ಲದೆ, ಆರೈಕೆಯ ಗುಣಮಟ್ಟವೂ ಕಡಿಮೆಯಾಗಬಹುದು. ಇದರ ಜತೆಗೆ ಆರೈಕೆದಾರರು ರೋಗಿಯತ್ತ ಋಣಾತ್ಮಕ ಭಾವನೆಗಳನ್ನು (ಸಿಟ್ಟು, ಟೀಕೆ) ತೋರುವ ಸಾಧ್ಯತೆಗಳಿವೆ. ಕಡಿಮೆ ಸಾಮಾಜಿಕ- ಆರ್ಥಿಕ ಸ್ಥಿತಿಗತಿ ಹೊಂದಿರುವ ಆರೈಕೆದಾರರು ಕಡಿಮೆ ಸಾಮಾಜಿಕ ಬೆಂಬಲ ಹೊಂದಿರುವವರು, ಹೊಂದಿಕೊಳ್ಳುವಿಕೆ ಕಡಿಮೆ ಇರುವವರು, ಮಾನಸಿಕ ಆರೋಗ್ಯ ಸೇವೆಗಳ ಅಲಭ್ಯತೆ, ಪ್ರೀತಿ ಪಾತ್ರರ ಅನಾರೋಗ್ಯದ ಬಗ್ಗೆ ಕಡಿಮೆ ಅರಿವು ಅಥವಾ ಅರಿವು ಇಲ್ಲದಿರುವುದು – ಇವುಗಳಿಂದ ಆರೈಕೆದಾರರ ಹೊರೆ ಇನ್ನಷ್ಟು ಅಧಿಕವಾಗುತ್ತದೆ.
– ಮುಂದುವರಿಯುವುದು
– ಪ್ರವೀಣ್ ಎ. ಜೈನ್.
ಮನೋ-ಸಾಮಾಜಿಕ ತಜ್ಞ
ಮನಶಾÏಸ್ತ್ರ ವಿಭಾಗ, ಕೆಎಂಸಿ, ಮಣಿಪಾಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.