ಎಲ್‌ಎಸ್‌ಎಸ್‌ ದರ್ಶನ


Team Udayavani, Feb 24, 2019, 12:30 AM IST

lss.jpg

ಈಗ ಮುಪ್ಪಿನಿಂದ ಹಣ್ಣಾಗಿರುವ ಎಲ್‌. ಎಸ್‌. ಶೇಷಗಿರಿ ರಾಯರು ಒಂದು ಕಾಲದಲ್ಲಿ ಲೋಕಕ್ಕೆಲ್ಲ ಬೇರುಹರೆ ಚಾಚಿ ಹರಡಿಕೊಂಡಿದ್ದ ದೊಡ್ಡ ಮರ. ನಾವು ನೋಡುನೋಡುತ್ತಿರುವಂತೆಯೇ ಹಿಡಿಯೊಂದರಲ್ಲಿ ಅಡಕಗೊಳ್ಳುವ ಬೀಜರೂಪೀ ವೃಕ್ಷವಾದ ಬೆಡಗಿನಂತೆ ನನಗೆ ಕಾಣುವರು. ತೊಂಬತ್ತನಾಲಕ್ಕರ ಪಕ್ವ ಪ್ರಾಯ. ಮಾತು ಅಸ್ಪಷ್ಟ. ದೇಹ ಅಸ್ಥಿರ. ಚಕ್ರಾಸನದಲ್ಲಿ ಕೂತು ನಿಧಾನಕ್ಕೆ ಚಲಿಸುವ ಪರಾವಲಂಬಿತ ಶರೀರ. ನಿಂತಲ್ಲೇ ಲೋಕವನ್ನೇ ಕಾಣಿಸುತ್ತಿದ್ದ ಅವರ ಅಸ್ಖಲಿತ ಮಾತುಗಾರಿಕೆ ಕೇಳಿ ಮರುಳಾಗಿದ್ದವನು ನಾನು. ಆ ವಾಕ್ಸಂಪತ್ತು ಈಗ ಅವರ ಮಾನಸದಲ್ಲಿಯೇ ಮುಳುಗಿ ಹೋಗಿರುವುದೆ? ನಾನು ಕೇಳಿದ ಅವರ ಕೊನೆಯ ಭಾಷಣ ನಮ್ಮ ಕಾಲೇಜಿಗೆ ಅವರು ಬಂದು ವಿದ್ಯಾರ್ಥಿಗಳಿಗೆ ಮಾಡಿದ್ದು. ಅದು ಕೇವಲ ಹೊರೆ ಇಳಿಸಿ ಹಗುರಾಗುವ ಕೈಂಕರ್ಯವಾಗಿರಲಿಲ್ಲ. ಗುರು, ಶಿಷ್ಯನಿಗೆ ಏಕಾಂತದಲ್ಲಿ ಮೆಲುದನಿಯಲ್ಲಿ ನೀಡುವ ಆಪ್ತ ಬೋಧೆಯಂತಿತ್ತು. ಬದುಕಿನ ಅರ್ಥವೇನು? ಹುಟ್ಟು-ಸಾವು, ದೈವ-ಕೇಡು ಇವುಗಳ ನಿಗೂಢ ಮನುಷ್ಯ ಜೀವಿತವನ್ನು ಶತಮಾನಗಳಿಂದ ಹೇಗೆ ಕಾಡುತ್ತ ಬಂದಿದೆ? ಇಂಥ ತಲ್ಲಣಗೊಳಿಸುವ ಸಂಗತಿಗಳನ್ನು ಜಗತ್ತಿನ ಮಹಾನ್‌ ಸಾಹಿತ್ಯದ ಮಹಾಪಾತ್ರಗಳ ಮತ್ತು ತಾವು ತಮ್ಮ ಜೀವನದಲ್ಲಿ ಕಂಡ ವಿಭಿನ್ನ ವ್ಯಕ್ತಿಗಳ ಹೆಣಿಗೆಯಲ್ಲಿ ಪ್ರತಿಮಿಸುತ್ತ ಹೋಗಿದ್ದರು. ಅವರ ಮಾತುಗಳು ಅದೆಷ್ಟು ಗಾಢ ಪ್ರಭಾವ ಬೀರಿದ್ದವೆಂದರೆ ಮಾತು ಮುಗಿದ ಮೇಲೂ ಸಭೆ ಮೌನದಲ್ಲಿ ಅದ್ದಿದಂತಿತ್ತು. ನಮ್ಮ ಪ್ರಾಚಾರ್ಯ ಫಾ| ಆಂದ್ರಾದೆ ಅವರ ಕಣ್ಣಲ್ಲಿ ತೆಳ್ಳನೆಯ ನೀರಿನ ಪಸೆ. “ಹಿ ಈಜ್‌ ಟೋಟಲ್ಲಿ ಡಿಫ‌ರೆಂಟ್‌ ಟುಡೆ’ ಎಂದು ಜಿಕೆಜಿ ಉದ್ಗಾರ ತೆಗೆದಿದ್ದರು. ಆವತ್ತಿನ ಶೇಷಗಿರಿರಾಯರ ಭಾಷಣವನ್ನು ನಾನು ಯಾವತ್ತೂ ಮರೆಯಲಾರೆ. ಅದು ಭಾಷಣವಾಗಿರದೆ ಗೀತೆಯ ಆಪ್ತವಾಕ್ಯದಂತಿತ್ತು.

ಅಂತರಂಗದ ದೀಪಕ್ಕೆ ನಾನಾ ಮೂಲೆಗಳಿಂದ ವಿಶ್ವಸಾಹಿತ್ಯದ ತೈಲದ ಪೂರೈಕೆ, ಜೊತೆಗೆ ಆ ಅಧ್ಯಯನದೊಂದಿಗೆ ತಮ್ಮ ಜೀವನಾನುಭವವನ್ನು ಮೇಳೈಸುವ ಆತ್ಮಾನುಸಂಧಾನ ರಾಯರ ಮಾತಿಗೆ ಆ ಕಣ್ತಂಪಿನ ಬೆಳಕಿನ ಶಕ್ತಿಯನ್ನು ನೀಡಿದ್ದವೆಂದು ನಾನು ಈವತ್ತೂ ನಂಬುತ್ತೇನೆ. ಎಲ್‌ಎಸ್‌ಎಸ್‌ ತಮ್ಮ ಬದುಕಿನ ಉತ್ತರಾರ್ಧದಲ್ಲಿ ಹೀಗೆ ಹೃದಯಕ್ಕೆ ತಾಗುವಂತೆ ಮಾತಾಡುತ್ತಿದ್ದರು. ನಾನು ಹೋದಾಗಲ್ಲೆಲ್ಲ ಅವರ ಕೋಣೆಯಲ್ಲಿ ಅಭ್ಯಾಸದ ಕುರ್ಚಿಯಲ್ಲಿ ಕೂತು ಏನೋ ಬರೆಯುವ-ಓದುವ ಶೇಷಗಿರಿರಾಯರನ್ನೇ ನಾನು ನೋಡಿದ್ದು. ಒಂದು ಬನಿಯನ್ನು, ಬಿಳಿಯ ಲುಂಗಿ ಅವರ ಸಾಮಾನ್ಯ ಉಡುಪು. ಕೋಣೆಯ ತುಂಬ ಪೇರಿಸಿಟ್ಟ ಪುಸ್ತಕಗಳು. ಸಾಹಿತ್ಯ, ವಿಮರ್ಶೆ, ಚರಿತ್ರೆ, ತತ್ವಶಾಸ್ತ್ರ- ಹೀಗೆ ಎಷ್ಟು ವೈವಿಧ್ಯಮಯವಾದ ಗ್ರಂಥಗಳು! ಅವರ ಕೋಣೆಯನ್ನು ಪ್ರವೇಶಿಸಬೇಕಾದರೆ ಮೈಯೆಲ್ಲ ಕಣ್ಣಾಗಿರಬೇಕು. 

ಗೋಡೆಗೊರಗಿಸಿ ನಿಲ್ಲಿಸಿರುವ ಪುಸ್ತಕಗಳ ಅಟ್ಟಣಿಗೆಗೆ ಎಲ್ಲಿ ಕೈ ಮೈ ತಾಗಿ ಕೆಳಕ್ಕೆ ಉರುಳಿ ಬೀಳುವುವೋ ಎಂಬ ಭಯ! “ಬನ್ನಿ ಬನ್ನಿ’ ಎಂದು ಎಲ್‌ಎಸ್‌ಎಸ್‌ ಕೋಣೆಯಲ್ಲಿ ಕೂತೇ ಆಹ್ವಾನಿಸುತ್ತಿದ್ದರು. ಅವರನ್ನು ಕಾಣಲು ಬರುವವರೂ ನಾನಾ ಬಗೆಯ ವಯೋಮಾನದ ಆಸಕ್ತಿಗಳ ಜನ-ಸಾಹಿತಿಗಳು, ಕಲಾವಿದರು, ಕನ್ನಡ ಚಳುವಳಿಗಾರರು, ರಾಜಕಾರಣಿಗಳು, ಪತ್ರಕರ್ತರು,  ವಿದ್ಯಾರ್ಥಿಗಳು.

“ಚಿಮೂ ಬಂದಿದ್ದರು. ಈಗಷ್ಟೇ ಹೋದರು’ ಎನ್ನುವರು. “ಭಾರತೀ… ಮೂರ್ತಿ ಬಂದಿದಾರೆ ಕಣ್ರೀ’ ಎನ್ನುವರು. ಅದು ಕೇವಲ ಮಾಹಿತಿ ಪೂರೈಕೆಯಲ್ಲ. “ಕಾಫಿ ತನ್ನಿ’ ಎಂಬ ಸೂಚನೆ. ಪತ್ನಿ ಒಂದು ವೇಳೆ ಮನೆಯಲ್ಲಿ ಇಲ್ಲದಿದ್ದರೆ ಎಲ್‌ಎಸ್‌ಎಸ್‌ ತಾವೇ ಮುಂಗಾಲಲ್ಲಿ ಜೋಲಿ ಹೊಡೆಯುತ್ತ ಒಳಗೆ ಹೋಗಿ ಟೀಯೊಂದಿಗೆ ಹಿಂದಿರುಗುವರು. “”ಹೇಳಿ… ಹೊಸ ಪದ್ಯ ಬರೆದಿರಾ?” ಎಂದು ಪ್ರೀತಿಯಿಂದ ವಿಚಾರಿಸುವರು. ಲಹರಿ ಬಂತೆಂದರೆ ತಾವು ಕಂಡುಂಡ ಅನೇಕ ರಸವತ್ತಾದ ಪ್ರಸಂಗಗಳನ್ನು ವಿವರವಾಗಿ ನಿರೂಪಿಸುವರು. ಎಷ್ಟೇ ಆಗಲಿ ಕಥೆಗಾರರಲ್ಲವೆ? ದೊಡ್ಡವರ ಹಿರಿಮೆ, ಕಿರಿಮೆ, ಜೀವನೋತ್ಸಾಹ ಒಂದೊಂದೂ ಗರಿಬಿಚ್ಚಿ  ಹಾರುವುವು. ಹೀಗೆ ಗಂಟೆಗಟ್ಟಲೆ ಮಾತು ಸಾಗುವುದು. ತಾವು ಈಚೆಗೆ ಅಭ್ಯಾಸ ಮಾಡಿದ ಗ್ರೀಕ್‌ ಕೃತಿಯೋ, ಇಂಗ್ಲಿಷ್‌ ಕೃತಿಯೋ, ಕನ್ನಡದ ಹೊಸ ಕೃತಿಯೋ… ಯಾವುದಾದರೂ ಆಗಬಹುದು. ವಿವರವಿವರವಾಗಿ ವಿಶ್ಲೇಷಿಸುವರು. ಅಭ್ಯಾಸದ ಕೋಣೆ ತರಗತಿಯಾಗಿ ರೂಪಾಂತರಗೊಳ್ಳುವುದು. ನಾನು ವಿದ್ಯಾರ್ಥಿಗಳ ಪ್ರತಿನಿಧಿ. ಅವರು ಪ್ರಾಧ್ಯಾಪಕರು! ಗಂಟೆಯ ಕಂಟಕವಿಲ್ಲದ ತರಗತಿ ಅದು!

ನನ್ನ ಸಿಂದಬಾದನ ಆತ್ಮಕಥೆ ಪ್ರಕಟವಾದ ಹೊಸದು. ಆ ಸಂಗ್ರಹದಲ್ಲಿ ಸೌಗಂಧಿಕಾ ಎಂಬ ಹೆಸರಿನ ದೀರ್ಘ‌ ಷಟ³ದಿ ಕವಿತೆಯಿತ್ತು. ಅದನ್ನು ಗಮಕ ರೂಪದಲ್ಲಿ ಹಾಡಿಸಿದರೆ ಹೇಗಿರುತ್ತೆ ಎಂಬ ಹುಚ್ಚು ಹತ್ತಿತು. ಗೆಳೆಯ ಉಪಾಧ್ಯರು ಎನ್‌.ಆರ್‌. ಕಾಲೋನಿಯ ರಾಮ ಮಂದಿರದ ಸಭಾಂಗಣ ನಿಗದಿಪಡಿಸಿದರು. ಗಮಕಿ ಎಂ. ಆರ್‌. ಸತ್ಯನಾರಾಯಣ ಅವರಿಂದ ಸೌಗಂಧಿಕಾದ ಗಮಕ ವಾಚನ! ಎಲ್‌. ಎಸ್‌. ಶೇಷಗಿರಿರಾವ್‌ ಮುಖ್ಯ ಅತಿಥಿಗಳು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಘವೇಂದ್ರ ಪಾಟೀಲ ಮಲ್ಲಾಡಿಹಳ್ಳಿಯಿಂದ ಬಂದಿದ್ದರು. ಅವರಿನ್ನೂ ಸಣ್ಣಕಥೆಗಳನ್ನು ಬರೆಯಲು ಪ್ರಾರಂಭಿಸಿದ ಹೊಸತು. ತಮ್ಮ ಕಥಾಸಂಗ್ರಹಕ್ಕೆ ಶೇಷಗಿರಿರಾಯರಿಂದ ಮುನ್ನುಡಿ ಬರೆಸಬೇಕೆಂಬ ಉಮೇದು ಅವರಿಗೆ. “”ನೀವು ಹೇಳಿ ಅವರಿಂದ ಮುನ್ನುಡಿ ಬರೆಸಿಕೊಡಿ” ಎಂದು ನನ್ನನ್ನು ಕೇಳಿದರು. ಅನೇಕ ವಿಶೇಷ ಸಂಚಿಕೆಗಳಲ್ಲಿ ಬಹುಮಾನ ಪಡೆದಿದ್ದ ಕಥೆಗಳವು. ನಾನು ಪಾಟೀಲರನ್ನು ಶೇಷಗಿರಿರಾಯರಿಗೆ ಪರಿಚಯಮಾಡಿಕೊಟ್ಟು ಪಾಟೀಲರಿಗೆ ಮುನ್ನುಡಿ ಬರೆದುಕೊಡಲು ಪ್ರಾರ್ಥಿಸಿದೆ. ಒಂದೇ ಮಾತಿಗೆ “ಆಯಿತು’ ಎಂದು ಎಲ್‌ಎಸ್‌ಎಸ್‌ ಒಪ್ಪಿಕೊಂಡರು. ಹೊಸ ಲೇಖಕರನ್ನು ಬೆಳೆಸುವುದು ಹಿರಿಯರ ಹೊಣೆಗಾರಿಕೆ ಎಂಬ ನಿಲುವು ಅವರದ್ದು. ಪ್ರಕಾಶಕರು ಅನಕೃ ಅವರ ಬಳಿ ಹೋಗಿ, ಹೊಸ ಕಾದಂಬರಿ ಪ್ರಕಾಶನಕ್ಕೆ ಕೇಳಿದರೆ, “”ಸುಬ್ಬ ರಾವ್‌ ಅಂತ ತರುಣ ಇದ್ದಾರೆ. ಬಹಳ ಚೆನ್ನಾಗಿ ಬರೆಯುತ್ತಾರೆ. ನೀವು ಅವರ ಕಾದಂಬರಿ ಪ್ರಕಟಿಸುವುದಾದರೆ ನನ್ನ ಕಾದಂಬರಿ ನಿಮಗೆ ಕೊಡುತ್ತೇನೆ! ಕಟ್ಟಿàಮನಿ ಅವರ ಕಾದಂಬರಿ ಹಾಕಿದರೆ ನನ್ನ ಕಾದಂಬರಿ ಕೊಡುತ್ತೇನೆ” ಎನ್ನುತ್ತಿದ್ದರಂತೆ. ಈ ಸಂಗತಿಯನ್ನು ಬಹಳ ಅಭಿಮಾನದಿಂದ ಎಲ್‌ಎಸ್‌ಎಸ್‌ ಅನೇಕ ಬಾರಿ ನನಗೆ ಹೇಳಿದ್ದಾರೆ.

ಈಚೆಗೆ ನನ್ನ ಬಳಿ ಬಂದ ತರುಣ ಲೇಖಕರೊಬ್ಬರು “”ಹೆಸರು ಮಾಡಬೇಕೆಂದರೆ ಎಷ್ಟು ಬರೆಯಬೇಕು” ಎಂಬ ವಿಲಕ್ಷಣ ಪ್ರಶ್ನೆ ಮುಂದಿಟ್ಟರು. “”ಎಲ್‌ಎಸ್‌ಎಸ್‌ ಬರೆದಷ್ಟನ್ನು ನೀವು ಓದಿದರೆ ಸಾಕು. ಆನಂತರ ನೀವು ಬರೆಯುವ ಒಂದೇ ಪುಸ್ತಕ ನಿಮ್ಮ ಹೆಸರನ್ನು ಬೆಳಕಿಗೆ ತರಬಲ್ಲದು” ಎನ್ನುತ್ತ ನಾನು ನಕ್ಕೆ. ಎಲ್‌ಎಸ್‌ಎಸ್‌ ಕೋಪಗೊಂಡಿದ್ದು , ಉದ್ರಿಕ್ತರಾಗಿದ್ದು ನಾನು ನೋಡಿಲ್ಲ. ಸದಾ ಸಮಾಧಾನ. ನೊಂದು ಬಂದವರಿಗೆ ಸಾಂತ್ವನ. ನನ್ನ ಶ್ರೀಮತಿ ತೀರಿಕೊಂಡಾಗ ಮನೆಗೆ ಬಂದರು. ಒಂದೂ ಮಾತಾಡಲಿಲ್ಲ. ಬಹಳ ಹೊತ್ತು ನನ್ನ ಕೈ ಹಿಡಿದು ಕೂತಿದ್ದರು. ಹಾಗೆ ಅವರು ಕೈ ಒತ್ತಿ ಹಿಡಿದು ಕೂತಿದ್ದು ನನಗೆ ಕೊಟ್ಟ ಸಮಾಧಾನ ಅಷ್ಟಿಷ್ಟಲ್ಲ.

ನನ್ನ ಎಷ್ಟೊಂದು ಮುಗಿಲು ಸಾನೆಟ್‌ ಸಂಗ್ರಹ ಪ್ರಕಟವಾದಾಗ ಕನ್ನಡದ ಪ್ರಭಾವಿ ಲೇಖಕರೊಬ್ಬರು ಪತ್ರಿಕೆಯಲ್ಲಿ ಅದನ್ನು ಉಧ್ವಸ್ತಗೊಳಿಸುವಂಥ ವಿಮರ್ಶೆ ಬರೆದಾಗ ಎರಡೇ ದಿನಗಳಲ್ಲಿ ಶೇಷಗಿರಿರಾಯರ ಪತ್ರ ಬಂತು. “ಆ ವಿಮರ್ಶೆ ನಿಮ್ಮ ಕೃತಿಗೆ ನ್ಯಾಯ ಕೊಡುವಲ್ಲಿ ಸೋತಿದೆ. ನಾನು ಈಚೆಗೆ ಓದಿದ ಅತ್ಯುತ್ತಮ ಕವಿತಾಸಂಗ್ರಹಗಳಲ್ಲಿ ಎಷ್ಟೊಂದು ಮುಗಿಲು ಒಂದು. ನೀವು ಹತಾಶರಾಗದೆ ಯಾವತ್ತಿನ ಉತ್ಸಾಹದಿಂದ ಮುಂದುವರೆಯಿರಿ’ ಎಂದು ಧೈರ್ಯ-ಆತ್ಮವಿಶ್ವಾಸ ಕುದುರಿಸುವ ದೀರ್ಘ‌ ಪತ್ರ ಬರೆದಿದ್ದರು! ಒಬ್ಬ ಲೇಖಕನ ಬದುಕಿನಲ್ಲಿ ಇಂಥವೆಲ್ಲ ಮರೆಯಲಾಗದ ಕ್ಷಣಗಳು.

ಕೇಡಿನ ಕಲ್ಪನೆ ಮತ್ತು ಸಾವಿನ ನಿಗೂಢತೆ ಎಲ್‌ಎಸ್‌ಎಸ್‌ ಅವರನ್ನು ಸದಾ ಕಾಡುವ ಸಂಗತಿಗಳಾಗಿದ್ದವು. ತನ್ನ ಮನಸ್ಸಲ್ಲಿ ಕಿಂಚಿತ್‌ ದುಷ್ಟತನವಿದ್ದರೂ ದುಷ್ಟತನವನ್ನು ಎದುರಿಸಲಾಗದು ಎನ್ನುತ್ತ ಎಲ್‌ಎಸ್‌ಎಸ್‌ ಒಮ್ಮೆ ನನಗೆ ಪ್ರಮಿಥ್ಯೂಸ್‌ ಎಂಬ ಗ್ರೀಕ್‌ ದೇವತೆಯ ಕಥೆ ಹೇಳಿದ್ದರು. ಈ ಪ್ರಮಿಥ್ಯೂಸನನ್ನು ಕುರಿತು ಇಂಗ್ಲಿಷ್‌ ಕವಿ ಶೆಲ್ಲಿ ಒಂದು ನಾಟಕ ಬರೆದಿದ್ದಾರೆ. ಪ್ರಮಿಥ್ಯೂಸ್‌ ಆನ್‌ ಬೌಂಡ್‌ ಎನ್ನುವುದು ಆ ನಾಟಕದ ಹೆಸರು. ಆ ನಾಟಕದಲ್ಲಿ ಬರುವಂತೆ ದೇವತೆಗಳ ಸರ್ವಪ್ರಭುವಾದ ಸ್ಯೂಸ್‌ ದುಷ್ಟ ಬುದ್ಧಿಯ ದಬ್ಟಾಳಿಕೆ ಅರಸ.  ಪ್ರಮಿಥ್ಯೂಸ್‌, ಸ್ಯೂಸನ ಇಚ್ಛೆಗೆ ವಿರುದ್ಧವಾಗಿ ಮಾನವನಿಗೆ ಅಗ್ನಿಯನ್ನು ತಂದುಕೊಡುತ್ತಾನೆ. ಇದರಿಂದ ಕ್ರುದ್ಧನಾದ ಸ್ಯೂಸ್‌, ಪ್ರಮಿಥ್ಯೂಸನನ್ನು ಒಂದು ಬಂಡೆಗೆ ಕಟ್ಟಿಹಾಕುತ್ತಾನೆ. ಪ್ರತಿದಿನವೂ ಸ್ಯೂಸನಿಗೆ ಪ್ರಿಯವಾಗಿದ್ದ ಹಕ್ಕಿಯೊಂದು ಹಾರಿ ಬಂದು ಪ್ರಮಿಥ್ಯೂಸನ ಕರುಳನ್ನು ಬಗಿದು ತಿನ್ನುತ್ತದೆ. ಮರು ಬೆಳಿಗ್ಗೆಯ ವೇಳೆಗೆ ಪ್ರಮಿಥ್ಯೂಸನ ಕರುಳು ಮತ್ತೆ ಬೆಳೆಯುತ್ತದೆ. ಹದ್ದು ಪುನಃ ಕರುಳು ಕಿತ್ತು ತಿನ್ನುತ್ತದೆ. ಇದು ಸಹಸ್ರಾರು ವರ್ಷ ಅವಿರತವಾಗಿ ಸಾಗುತ್ತದೆ. ಮಹಾಕ್ರೂರಿಯಾದ ಸ್ಯೂಸನ ಅನ್ಯಾಯಕ್ಕೆ ಒಳಗಾಗಿದ್ದ ಇತರರು ಪ್ರಮಿಥ್ಯೂಸನ ಬಿಡುಗಡೆ ಎಂದು? ಎಂದು ಹಂಬಲಿಸುತ್ತಾರೆ. ಯಾವಾಗ ಪ್ರಮಿಥ್ಯೂಸನ ಹೃದಯದಲ್ಲಿ ಸ್ಯೂಸನ ಬಗ್ಗೆ ಕ್ರೋಧ-ದ್ವೇಷಗಳು ನಾಮಾವಶೇಷವಾಗುವುವೋ ಅಲ್ಲಿಯವರೆಗೆ ಪ್ರಮಿಥ್ಯೂಸನಿಗೆ ಬಿಡುಗಡೆಯಿಲ್ಲ. 

ಕ್ರೋಧ-ದ್ವೇಷಗಳು ಮಾಯವಾದ ಮರುಗಳಿಗೆಯೇ ಸ್ಯೂಸ್‌ ತಾನಾಗಿ ಸಿಂಹಾಸನಪತಿತನಾಗುತ್ತಾನೆ. “ನಮ್ಮಲ್ಲಿಯೇ ಕೇಡು ಇರುವಾಗ ಇನ್ನೊಬ್ಬರಲ್ಲಿರುವ ಕೇಡನ್ನು ಎದುರಿಸುವುದು ಹೇಗೆ?’ ಎಂದು ಎಲ್‌ಎಸ್‌ಎಸ್‌ ಒಂದು ಕ್ಷಣ ಮೌನವಾಗಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ಕೂತರು. ನನಗೆ ಆದಿಪುರಾಣದ ಭರತ-ಬಾಹುಬಲಿಯ ಕಥೆ ನೆನಪಾಗುತ್ತಿತ್ತು. ಎಂಥ ಪಾಪಿಗೂ ಕಡೆಗೆ ಕ್ಷಮೆಯುಂಟು ಎಂಬ ಆದರ್ಶ ಕಲ್ಪನೆಯನ್ನು ಎಲ್‌ಎಸ್‌ಎಸ್‌ ಆಳದಲ್ಲಿ ಒಪ್ಪಲಾರರು. ತಮ್ಮ ಮಾತಿಗೆ ಅನುಬಂಧವೆನ್ನುವಂತೆ ಒಮ್ಮೆ ಹೇಳಿದರು, “ನನ್ನ ಮಾತು ಪಾಪಿಯೂ ಉದ್ಧಾರವಾಗುತ್ತಾನೆ ಎನ್ನುವ ದರ್ಶನದ ನಿರಾಕರಣೆಯಲ್ಲ. ಅದು ನನ್ನಂಥವನಿಗೆ ಉದ್ಭವಿಸುವ ಸಂದೇಹಗಳ ವಿವರಣೆ’.

ತಮ್ಮ ಬದುಕನ್ನು ರೂಪಿಸಿದ ಸಾಹಿತ್ಯ ಒಂದು ತಕ್ಕಡಿಯಲ್ಲಿ , ಬದುಕು ಇನ್ನೊಂದು ತಕ್ಕಡಿಯಲ್ಲಿ. ಇವೆರಡರಲ್ಲಿ ಯಾವುದರ ತೂಕ ಹೆಚ್ಚು ಎಂದು ಕೇಳಿದರೆ ಎಲ್‌ಎಸ್‌ಎಸ್‌ ಏನು ಹೇಳುತ್ತಾರೆ? ಅವರು ವಿಶ್ವಾಸದಿಂದ ಹೇಳುತ್ತಾರೆ: ಸಾಹಿತ್ಯವು ಬಹಳ ದೊಡ್ಡದು; ಬದುಕಿನ ವರಗಳಲ್ಲಿ ಒಂದು. ಆದರೂ ಬದುಕು ಅದಕ್ಕಿಂತ ದೊಡ್ಡದು! 

ಬದುಕನ್ನು ಅದು ಇದ್ದಂತೇ ಒಪ್ಪಿಕೊಳ್ಳುವುದು… ಅದೇ ನನ್ನ ಬಾಳ ಗುರಿ ಎನ್ನುತ್ತಾರೆ ಎಲ್‌ಎಸ್‌ಎಸ್‌.
ನಮ್ಮ ಸಂಸ್ಕೃತಿಯ ಸಮಾಜ ಋಣದ ಕಲ್ಪನೆ ಬಹುದೊಡ್ಡದು ಎನ್ನುತ್ತಾರೆ ಎಲ್‌ಎಸ್‌ಎಸ್‌. ಎಷ್ಟೊಂದನ್ನು ನಾನು ಬದುಕಿನಲ್ಲಿ ಪಡೆಯುತ್ತೇನೆ- ನನ್ನ ಪೂರ್ವಜರಿಂದ, ನಾನು ಕಾಣದ ದೇಶಗಳ ಮತ್ತು ನನ್ನ ದೇಶದ ವಿಜ್ಞಾnನಿಗಳು ಮತ್ತು ತಂತ್ರಜ್ಞಾನಿಗಳಿಂದ, ನನ್ನ ಹೆಂಡತಿ ಮಕ್ಕಳಿಂದ, ಸುತ್ತ ಇರುವವರಿಂದ! ನನಗೆ ಹೃದಯಾಘಾತವಾದಾಗ ನನ್ನನ್ನು ಉಳಿಸಿದ ಯಂತ್ರಗಳನ್ನು , ಔಷಧಿಗಳನ್ನು ಜಗತ್ತಿಗೆ ಕೊಡಲು ಎಷ್ಟು ಶತಮಾನಗಳ, ಎಷ್ಟು ದೇಶಗಳ, ಎಷ್ಟು ಮಂದಿ ವಿಜ್ಞಾನಿಗಳು, ತಂತ್ರಜ್ಞಾನಿಗಳು, ಯಂತ್ರ ನಿರ್ಮಾಪಕರು, ಕಟ್ಟಡಗಳನ್ನು ಕಟ್ಟುವವರು ಶ್ರಮಿಸಿದ್ದಾರೆ! ಪ್ರತಿಯಾಗಿ ನಾನೇನು ಕೊಡಬಲ್ಲೆ? ನಮ್ಮ ಸಂಸ್ಕೃತಿಯ ಈ ಋಣದ ಕಲ್ಪನೆ ನೈತಿಕವಾದದ್ದು; ಅಗತ್ಯವಾದದ್ದು.

ಯೂಜಿಸ್‌ ಹ್ಯಾಮಿಲ್ಟನ್‌ ಬರೆದ ನಾಲಕ್ಕು ಸಾಲುಗಳನ್ನು ಎಲ್‌ಎಸ್‌ಎಸ್‌ ತಮ್ಮ ಆತ್ಮಕಥನದ ಕೊನೆಗೆ ಉಲ್ಲೇಖೀಸುತ್ತಾರೆ:
ಗಾಳಿಯಂದದಿ ನಾವು
ಹೋದ ಮೇಲೂ
ವನ ಮಧುರವಾಗುವುವು
ಇಂದಿನಂತೇ!
(ಅನುವಾದ: ವಿಸೀ)

ನಗರಗಳಲ್ಲೂ ಇರುಳಾಗಿಯೇ ಆಗುತ್ತದೆ. ಶೇಷಗಿರಿರಾಯರನ್ನು ನೋಡಿ ಅವರ ಮೌನ ಸಂದೇಶವನ್ನು, ಅಶ್ರುತ ವಾಣಿಯನ್ನು ಎದೆಯಲ್ಲಿ ಆವಾಹಿಸಿಕೊಂಡು, ನಾನು ಹೊರಗೆ ಬಂದಾಗ ಮೇಲಿಂದ ನನ್ನ ಕರ್ತವ್ಯ ನಾನು ಬಿಡಲಾರೆ ಎಂಬಂತೆ ಕತ್ತಲೆ ಇಳಿಯುತ್ತಿತ್ತು. ಸಾಲು ದೀಪಗಳು ಯಾಕೋ ಇನ್ನೂ ಹತ್ತಿರಲಿಲ್ಲ. ಬೆಳಕು ಹೋಗಿ ಹೊಸಬೆಳಕಿನ್ನೂ ಬಾರದಿರುವ ಸಂಧಿಕ್ಷಣ ನನ್ನ ಎದೆಯಲ್ಲಿ ವಿವರಿಸಲಾಗದ ದಿಗಿಲು ಹುಟ್ಟಿಸುತ್ತಿರುವಾಗ ಕ್ಷಿತಿಜದ ಅಂಚಲ್ಲಿ ಒಂದು ಒಂಟಿ ನಕ್ಷತ್ರ ಫ‌ಳಕ್ಕನೆ ಹೊಳೆಯಿತು.

– ಎಚ್‌. ಎಸ್‌. ವೆಂಕಟೇಶ‌ಮೂರ್ತಿ

ಫೊಟೊ : ಎ. ಎನ್‌. ಮುಕುಂದ್‌

ಟಾಪ್ ನ್ಯೂಸ್

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್

mamata

West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.