ಹೆಚ್ಚಿನ ಅನಾಹುತ ತಪ್ಪಿಸಿದ ಅಗ್ನಿಶಾಮಕ ದಳ
Team Udayavani, Feb 25, 2019, 6:30 AM IST
ಬೆಂಗಳೂರು: ಏರ್ ಶೋ ಆವರಣದ ಪಾರ್ಕಿಂಗ್ ಸ್ಥಳದಲ್ಲಿ ನಡೆದ ಅಗ್ನಿ ಅವಘಡ ರಾಜಕೀಯ ತಿರುವು ಪಡೆದಿದ್ದು, ಕೇಂದ್ರ ರಾಜ್ಯ ಸರ್ಕಾರಗಳು ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ. ಯಲಹಂಕ ವಾಯುನೆಲೆಯಲ್ಲಿ ಶನಿವಾರ ಅಗ್ನಿ ಅವಘಡ ನಡೆದ ಸ್ಥಳಕ್ಕೆ ಭಾನುವಾರ ಗೃಹ ಸಚಿವ ಎಂ.ಬಿ.ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
“ಘಟನೆ ನಡೆದ ನಾಲ್ಕೇ ನಿಮಿಷದಲ್ಲಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಆಗಲಿದ್ದ ದೊಡ್ಡ ಅನಾಹುತ ತಪ್ಪಿಸಿದ್ದಾರೆ. 277 ಕಾರು ಬೆಂಕಿಗಾಹುತಿಯಾಗಿದ್ದು, ಸಾವಿರಾರು ಕಾರುಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಅಗ್ನಿಶಾಮಕ ದಳದ ಕಾರ್ಯವನ್ನು ಸಮರ್ಥಿಸಿಕೊಂಡರು.
ವಾಯುನೆಲೆ ಆವರಣದಲ್ಲಿ ಸಿಎಸ್‌ಎಫ್ ಹಾಗೂ ಏರ್‌ಫೋರ್ಸ್ ಪಡೆ ಭದ್ರತೆಯ ಜವಾಬ್ದಾರಿ ವಹಿಸಿಕೊಂಡಿದ್ದು, ಹೊರಗಿನ ಜವಾಬ್ದಾರಿಯನ್ನು ರಾಜ್ಯ ಪೊಲೀಸರು ವಹಿಸಿಕೊಂಡಿದ್ದರು. ದುರಂತ ನಡೆದಿರುವುದು ಮಿಲಿಟರಿ ಕಾರ್ಯವ್ಯಾಪ್ತಿಯಲ್ಲಿ. ಆದರೆ, ನಾನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಆರೋಪ ಪ್ರತ್ಯಾರೋಪ ಮಾಡಲು ಅವಕಾಶ ಕೊಡುವುದಿಲ್ಲ.
ಎರಡೂ ಸರ್ಕಾರಗಳು ಆಯೋಜನೆ ಜವಾಬ್ದಾರಿ ವಹಿಸಿಕೊಂಡಿವೆ. ಇದು ಅತ್ಯಂತ ಸೂಕ್ಷ್ಮ ವಿಷಯ ಎಂದರು. ಈ ಘಟನೆಯಲ್ಲಿ ನಷ್ಟ ಅನುಭವಿಸಿದವರಿಗೆ ಸೂಕ್ತ ದಾಖಲೆ ಹಿಂತಿರುಗಿಸಲು ಸೂಚನೆ ನೀಡಲಾಗಿದೆ. ರಾಜ್ಯ ಪೊಲಿಸರು ಸರಿಯಾಗೇ ಕಾರ್ಯ ನಿರ್ವಹಿಸಿದ್ದಾರೆ ಎಂದ ಗೃಹ ಸಚಿವರು, ಸಂಸದೆ ಶೋಭಾ ಕರಂದ್ಲಾಜೆ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿ, ಇದರಲ್ಲಿ ರಾಜಕೀಯ ಮಾಡಲು ಇಷ್ಟ ಪಡುವುದಿಲ್ಲ.
ಅವಘಡದಲ್ಲಿ ನೊಂದವರಿಗೆ ಸ್ಪಂದಿಸುವುದು ನಮ್ಮ ಆದ್ಯತೆ. ಶೋಭಾ ಅವರಿಗೆ ರಾಜಕೀಯ ಮಾಡಲು ಮನಸಾಗಿರಬೇಕು ಎಂದು ತಿರುಗೇಟು ನೀಡಿದರು. ಬೆಂಕಿ ಅವಘಡದಲ್ಲಿ ಕಾರುಗಳನ್ನು ಕಳೆದುಕೊಂಡ ಟ್ಯಾಕ್ಸಿ ಚಾಲಕರಿಗೆ ಮಾನವೀಯ ದೃಷ್ಟಿಯಿಂದ ಸಹಾಯಧನ ನೀಡುವ ಕುರಿತು ಆಲೋಚನೆ ನಡೆದಿದೆ. ಈ ಕುರಿತು ಸೋಮವಾರ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಲಾಗುವುದು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.