ಕೋಲಾರಕ್ಕೆ ಖರ್ಗೆ, ಚಿತ್ರದುರ್ಗಕ್ಕೆ ಮುನಿಯಪ್ಪ?
Team Udayavani, Feb 28, 2019, 1:07 AM IST
ಬೆಂಗಳೂರು: ಕಾಂಗ್ರೆಸ್‌ನಲ್ಲಿ ಮೀಸಲು ಕ್ಷೇತ್ರದಲ್ಲಿಯೂ ಗೆಲುವಿಗಾಗಿ ನಾಯಕರ ಕ್ಷೇತ್ರಗಳ ಬದಲಾವಣೆಯ ಮಾತುಗಳು ಕೇಳಿ ಬರುತ್ತಿವೆ. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರ ಕ್ಷೇತ್ರಗಳ ಬದಲಾವಣೆ ಮಾಡುವ ಕುರಿತಂತೆ ಕೈ ಪಾಳಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.
ರಾಜ್ಯದ ಏಳು ಮೀಸಲು ಕ್ಷೇತ್ರಗಳಲ್ಲಿ ಎಸ್ಸಿ ಸಮುದಾಯಕ್ಕೆ ಐದು ಕ್ಷೇತ್ರಗಳು ಮೀಸಲಾಗಿದ್ದು, ಅವುಗಳಲ್ಲಿ ಎರಡು ಕ್ಷೇತ್ರಗಳಲ್ಲಿ ಸೋಲಿಲ್ಲದ ಸರದಾರರಾಗಿರುವ ಇಬ್ಬರು ನಾಯಕರ ಕ್ಷೇತ್ರಗಳ ಬದಲಾವಣೆಯ ಕುರಿತು ಕಾಂಗ್ರೆಸ್ ವಲಯದಲ್ಲಿ ಗಂಭೀರ ಪ್ರಯತ್ನ ನಡೆಯುತ್ತಿದೆ.
ಕಾಂಗ್ರೆಸ್‌ನಲ್ಲಿ ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿರುವ ಕಲಬುರಗಿ ಸಂಸದ ಮಲ್ಲಿಕಾರ್ಜುನ ಖರ್ಗೆಯವರನ್ನು ಶತಾಗತಾಯ ಸೋಲಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಬಿಜೆಪಿ ನಾಯಕರಿಗೆ ಫರ್ಮಾನು ಹೊರಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಈಗಾಗಲೇ ಗೋಪಾಲ್ ಜಿ ಎನ್ನುವ ಆರ್‌ಎಸ್‌ಎಸ್ ಚಿಂತಕರೊಬ್ಬರನ್ನು ಕ್ಷೇತ್ರದಲ್ಲಿ ಕಾರ್ಯತಂತ್ರ ರೂಪಿಸಲು ಕಳುಹಿಸಲಾಗಿದ್ದು, ಮಹಾರಾಷ್ಟ್ರದ ಲಂಬಾಣಿ ಸಮುದಾಯಕ್ಕೆ ಸೇರಿರುವ ಸಚಿವರೊಬ್ಬರಿಗೆ ಕ್ಷೇತ್ರದ ಉಸ್ತುವಾರಿ ವಹಿಸಿ ಕೊಡಲಾಗಿದೆ ಎಂದು ತಿಳಿದು ಬಂದಿದೆ. ಕೋಲಾರದಲ್ಲಿ ಏಳು ಬಾರಿ ಸಂಸದರಾಗಿರುವ ಕೆ.ಎಚ್.ಮುನಿಯಪ್ಪ ಸೋಲಬಹುದು ಎಂಬ ಮಾಹಿತಿಯನ್ನು ಅವರ ಪಕ್ಷದ ಶಾಸಕರೇ ಹೈ ಕಮಾಂಡ್‌ಗೆ ನೀಡಿದ್ದು, ಈ ಬಾರಿ ಅವರ ಬದಲು ಕೋಲಾರದಲ್ಲಿ ಬೇರೆಯವರಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಕೋಲಾರ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಐವರು ಶಾಸಕರು, ಇಬ್ಬರು ಜೆಡಿಎಸ್ ಹಾಗೂ ಒಬ್ಬರು ಪಕ್ಷೇತರ ಶಾಸಕರಿದ್ದಾರೆ. ಕಾಂಗ್ರೆಸ್‌ನ ಐವರೂ ಶಾಸಕರು ಕೆ.ಎಚ್.ಮುನಿಯಪ್ಪ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ ಎನ್ನಲಾಗಿದ್ದು, ಅವರ ಬದಲು ಕೋಲಾರ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಣಕ್ಕಿಳಿಸಬೇಕು ಎಂಬ ಬೇಡಿಕೆಯನ್ನು ಹೈ ಕಮಾಂಡ್ ಮುಂದೆ ಇಟ್ಟಿದ್ದಾರೆ ಎನ್ನಲಾಗಿದೆ. ಎಡ ಬಲದ ಲೆಕ್ಕಾಚಾರ: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಮುನಿಯಪ್ಪ ಸ್ಪರ್ಧೆ ಮಾಡಿದರೂ ಸ್ವಪಕ್ಷೀಯರ ವಿರೋಧ ಹೆಚ್ಚಾಗಿರುವುದರಿಂದ ಗೆಲುವು ಕಷ್ಟವಾಗುವ ಸಾಧ್ಯತೆ ಇದೆ. ಅಲ್ಲದೆ, ಈ ಕ್ಷೇತ್ರದಲ್ಲಿ ದಲಿತ ಎಡಗೈ ಸಮುದಾಯ ಕ್ಕಿಂತ ಬಲಗೈ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಬಲಗೈ ಸಮುದಾಯಕ್ಕೆ ಸೇರಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೋಲಾರ ದಿಂದ ಸ್ಪರ್ಧಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಮುನಿಯಪ್ಪ ಅವರಿಗೆ ಕೋಲಾರದ ಬದಲು ದಲಿತ ಎಡಗೈ ಸಮುದಾಯದ ಜನಸಂಖ್ಯೆ ಹೆಚ್ಚಿರುವ ಚಿತ್ರದುರ್ಗ ಅಥವಾ ಉತ್ತರ ಕರ್ನಾಟಕದ ವಿಜಯಪುರ ಮೀಸಲು ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ಕಲ್ಪಿಸಬಹುದು ಎಂಬ ಲೆಕ್ಕಾಚಾರ ನಡೆದಿದೆ.
ಕೆ.ಎಚ್.ಮುನಿಯಪ್ಪ ಅವರು ಕೋಲಾರ ಕ್ಷೇತ್ರ ಬದಲಾಯಿಸಿ, ಚಿತ್ರದುರ್ಗದಲ್ಲಿ ಸ್ಪರ್ಧೆಗೆ ಮುಂದಾದರೆ, ಚಿತ್ರದುರ್ಗದ ಹಾಲಿ ಸಂಸದ ಚಂದ್ರಪ್ಪ ಅವರು ಕ್ಷೇತ್ರ ಕಳೆದುಕೊಳ್ಳುವ ಸಾಧ್ಯತೆ ಇದೆ. ಅವರಿಗೆ ಮೂಡಿಗೆರೆ ಕ್ಷೇತ್ರದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸ್ಪರ್ಧೆಗೆ ಅವಕಾಶ ಕಲ್ಪಿಸುವ ಭರವಸೆ ನೀಡುವ ಸಾಧ್ಯತೆ ಇದೆ. ಖರ್ಗೆಯವರು ಕಲಬುರಗಿ ಕ್ಷೇತ್ರ ಬಿಟ್ಟು ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆಗೆ ನಿರ್ಧರಿಸಿದರೆ, ಕಲಬುರಗಿ ಕ್ಷೇತ್ರದಲ್ಲಿ ಲಂಬಾಣಿ ಸಮುದಾಯಕ್ಕೆ ಸೇರಿರುವ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ. ಬಿಜೆಪಿ ಲಂಬಾಣಿ ಸಮುದಾಯವನ್ನೇ ಪ್ರಮುಖವಾಗಿಟ್ಟು ಕೊಂಡು ಕಾಂಗ್ರೆಸ್‌ನ ಚಿಂಚೊಳ್ಳಿ ಶಾಸಕ ಉಮೇಶ್ ಜಾಧವ್ ಅವರನ್ನು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿಸುವ ಲೆಕ್ಕಾಚಾರ ಹಾಕಿರುವುದಕ್ಕೆ ತಿರುಗೇಟು ನೀಡಲು ಈ ರೀತಿಯ ಆಲೋಚನೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಕ್ಷೇತ್ರ ಬದಲಾಯಿಸಲು ಖರ್ಗೆ ಹಿಂದೇಟು
ಕೋಲಾರ ಜಿಲ್ಲಾ ಶಾಸಕರು, ನಾಯಕರ ಲೆಕ್ಕಾಚಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಸಂಪೂರ್ಣ ರಾಜಕೀಯ ಜೀವನವನ್ನೇ ಕಲಬುರಗಿಯಿಂದ ಮಾಡಿಕೊಂಡು ಬಂದಿದ್ದು, ಈಗ ಸೋಲುವ ಭೀತಿಯಿಂದ ಕ್ಷೇತ್ರ ಬದಲಾಯಿಸಿದರು ಎನ್ನುವ ಮಾತು ಕೇಳಿ ಬರುತ್ತದೆ. ಅಲ್ಲದೆ, ಕೋಲಾರ ಕ್ಷೇತ್ರದಲ್ಲಿ ಹಾಲಿ ಸಂಸದ ಮುನಿಯಪ್ಪ ಅವರು ದಲಿತ ಎಡಗೈ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಎಡಗೈ ಸಮುದಾ ಯದವರನ್ನು ಕ್ಷೇತ್ರದಿಂದ ಹೊರ ಹಾಕಿದರು ಎನ್ನುವ ಅಪವಾದ ಬರುತ್ತದೆ ಎಂಬ ಕಾರಣಕ್ಕೆ ಖರ್ಗೆ ಅವರು, ಕ್ಷೇತ್ರ ಬದಲಾವಣೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸತತ 11 ಬಾರಿ ಕಲಬುರಗಿ ಜಿಲ್ಲೆಯ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಹತ್ವದ ಹುದ್ದೆಗಳನ್ನು ನಿಭಾಯಿಸಿ ಯಶಸ್ವಿಯಾಗಿದ್ದೇನೆ. 11 ತಿಂಗಳು ರೈಲ್ವೆ ಸಚಿವನಾಗಿದ್ದಾಗ 27 ಹೊಸ ರೈಲುಗಳನ್ನು ಓಡಿಸಿದ್ದೇನೆ. ಇನ್ನೊಂದು ಬಾರಿ ಚುನಾಯಿಸಿದರೆ ಸಾಕು ಮತ್ತೆ ಇನ್ನೆಂದೂ ನಾನು ಚುನಾವಣೆಗೆ ನಿಲ್ಲಲ್ಲ. ಇದೇ ನನ್ನ ಕೊನೆಯ ಚುನಾವಣೆ.
● ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ
ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.