ಅಕ್ಕ-ಪಕ್ಕ ಜಿಪಂ ಅಧ್ಯಕ್ಷೆ ಯಾರಕ್ಕ?
Team Udayavani, Mar 2, 2019, 9:17 AM IST
ಬಾಗಲಕೋಟೆ: ಇಲ್ಲಿನ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ವೀಣಾ ಕಾಶಪ್ಪನವರ ನೀಡಿದ್ದ ರಾಜೀನಾಮೆ ಅಂಗೀಕಾರವಾಗಿದ್ದು, ಹಂಗಾಮಿ ಅಧ್ಯಕ್ಷರಾಗಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ನೇಮಕಗೊಂಡಿದ್ದಾರೆ. 15 ದಿನದೊಳಗೆ ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದ್ದು, ತೀವ್ರ ಕುತೂಹಲ ಕೆರಳಿದೆ. ಯಾರ ‘ಬಂಡವಾಳ’ ಎಷ್ಟಿದೆ ಎಂಬುದು ಸಾಬೀತಾಗಲಿದೆ.
ವೀಣಾ ಕಾಶಪ್ಪನವರ ರಾಜೀನಾಮೆ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳಲ್ಲಿನ ಸದಸ್ಯರು ಜಿಪಂ ಅಧ್ಯಕ್ಷ ಸ್ಥಾನ ಪಡೆಯಲು ತಂತ್ರಗಾರಿಕೆ ಹಣೆಯಲು ತಯಾರಾಗಿದ್ದಾರೆ. ಯಾರ ತಂತ್ರಗಾರಿಕೆ ಫಲ ನೀಡುತ್ತದೆ ಎಂಬುದು ಗಮನ
ಸೆಳೆದಿದೆ. ಮುಧೋಳ ತಾಲೂಕು ಶಿರೋಳ ಜಿ.ಪಂ. ಕ್ಷೇತ್ರಕ್ಕೆ ರೈತ ಸಂಘದಿಂದ ಸ್ಪರ್ಧಿಸಿ, ಆಯ್ಕೆಯೂ ಆಗಿದ್ದ ಮುತ್ತಪ್ಪ ಕೋಮಾರ, ಅತಂತ್ರ ಜಿಪಂ ನಲ್ಲಿ ಕಾಂಗ್ರೆಸ್ ಆಡಳಿತ ಬರಲು ನೆರವಾಗಿದ್ದರು. ಜತೆಗೆ ಉಪಾಧ್ಯಕ್ಷ ಸ್ಥಾನವನ್ನೂ ಪಡೆದಿದ್ದರು. ಒಟ್ಟು 36 ಸದಸ್ಯ ಬಲದ ಜಿಪಂನಲ್ಲಿ ಕಾಂಗ್ರೆಸ್ 17 ಸ್ಥಾನ ಪಡೆದಿದ್ದರೆ, ಬಿಜೆಪಿ 18 ಸ್ಥಾನ ಪಡೆದಿವೆ. ಓರ್ವ ಪಕ್ಷೇತರ (ರೈತ ಸಂಘ) ಸದಸ್ಯರಿದ್ದು, ಯಾವ ಪಕ್ಷಕ್ಕೂ ಅಧಿಕಾರಕ್ಕೆ ಬರಲು ಸ್ಪಷ್ಟ ಬಹುಮತವಿಲ್ಲ.
ಬಿಜೆಪಿ ಅತಿಹೆಚ್ಚು ಸ್ಥಾನ ಪಡೆದು ದೊಡ್ಡ ಪಕ್ಷವಾದರೂ ಅಧಿಕಾರಕ್ಕೆ ಬರಲು ಬೇಕಾದ ಇನ್ನೊಂದು ಸ್ಥಾನದ ಕೊರತೆ ಎದುರಿಸುತ್ತಿದೆ. ರೈತ ಸಂಘದ ಸದಸ್ಯ ಬಿಜೆಪಿಗೆ ಬೆಂಬಲ ಕೊಟ್ಟಿದ್ದರೆ, ಬಿಜೆಪಿಗೆ ಅಧಿಕಾರ ಸಲೀಸಾಗಿ ದೊರೆಯುತ್ತಿತ್ತು. ಆದರೆ, ಕಾಂಗ್ರೆಸ್ ನಾಯಕರ ಒಗ್ಗಟ್ಟಿನ ತಂತ್ರಗಾರಿಕೆಯಿಂದ ಕಳೆದ 2016ರಲ್ಲಿ ನೆಡದ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕೋಮಾರ ಅವರು, ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಪರ ಕೈ ಎತ್ತಿದ್ದರು. ಜತೆಗೆ ಬಿಜೆಪಿಯ ಓರ್ವ ಸದಸ್ಯೆಯನ್ನು ಚುನಾವಣೆ ಪ್ರಕ್ರಿಯೆಯಿಂದಲೇ ಗೈರು ಉಳಿಯುವಂತೆ ಕೈ ನಾಯಕರು ಮಾಡಿದ್ದರು. ಆಗ ಒಂದು ಕೋಟಿ ಬಂಡವಾಳ ಹೂಡಲಾಗಿತ್ತು ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು.
ಬಾಯಕ್ಕ-ಶಶಿಕಲಾ ಆಕಾಂಕ್ಷಿಗಳು: ಜಿಪಂನಲ್ಲಿ ಕಾಂಗ್ರೆಸ್ ಆಡಳಿತವಿದ್ದರೂ ಅದೇ ಪಕ್ಷದ ಕೆಲ ಸದಸ್ಯರು ಮೂರು ಬಾರಿ ಸಾಮಾನ್ಯ ಸಭೆಗೆ ಬಾರದೆ ಅಧ್ಯಕ್ಷರಾಗಿದ್ದ ವೀಣಾ ಕಾಶಪ್ಪನವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. 30 ತಿಂಗಳ ಬಳಿಕ ಅವರನ್ನು ಅಧಿಕಾರದಿಂದ ಇಳಿಸಲು ದೊಡ್ಡ ಪ್ರಯತ್ನ ನಡೆಸಿದ್ದರು. ಕೊನೆಗೆ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ವೀಣಾ ರಾಜೀನಾಮೆ ನೀಡಿದ್ದು, ತೆರವಾದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಪೈಪೋಟಿ ನಡೆದಿದೆ.
ಸದಸ್ಯರ ಸಂಖ್ಯಾಬಲದ ಕೊರತೆ ನೀಗಲು ಯಾರು, ಯಾವ ತಂತ್ರಗಾರಿಕೆ ಮಾಡುತ್ತಾರೆ ಎಂಬುದರ ಮೇಲೆ ಮುಂದಿನ ಅಧ್ಯಕ್ಷರು ಯಾರಾಗಬೇಕು ಎಂಬ ನಿರ್ಧಾರ ಅಡಗಿದೆ. ಎರಡೂ ಪಕ್ಷಗಳ ಸದಸ್ಯರು ಯಾವುದೇ ಆಮಿಷಕ್ಕೆ ಒಳಗಾಗದೇ ಒಗ್ಗಟ್ಟು ಪ್ರದರ್ಶಿಸಿದರೆ ಕೊನೆಗೆ ಚೀಟಿ ಎತ್ತಿ ಹೊಸ ಅಧ್ಯಕ್ಷರ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಹೀಗಾಗಿ ಕನಿಷ್ಠ ಒಂದಿಬ್ಬರು ಬಿಜೆಪಿ ಸದಸ್ಯರು ಗೈರು ಉಳಿದರೆ ಕಾಂಗ್ರೆಸ್‌ಗೆ ಲಾಭ. ಕಾಂಗ್ರೆಸ್‌ನ ಕನಿಷ್ಠ ಒಬ್ಬರು ಗೈರು ಉಳಿದರೂ, ಬಿಜೆಪಿಗೆ ಲಾಭ. ಕಾಂಗ್ರೆಸ್ ನಲ್ಲಿ ಮಾಜಿ ಸಚಿವ, ಬಿಟಿಡಿಎ ಅಧ್ಯಕ್ಷ ಎಚ್.ವೈ. ಮೇಟಿ ಅವರ ಪುತ್ರಿ ಹಾಗೂ ಬಾದಾಮಿ ತಾಲೂಕು ಅನವಾಲ ಕ್ಷೇತ್ರದ ಸದಸ್ಯೆ ಶಶಿಕಲಾ ರಾಮಚಂದ್ರ ಯಡಹಳ್ಳಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇಬರಿಬ್ಬರಲ್ಲಿ ಸಿದ್ದರಾಮಯ್ಯ ಅವರ ಕೃಪಾಕಟಾಕ್ಷ ಯಾರ ಮೇಲಿರುತ್ತದೆಯೋ ಅವರೇ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ.
ಮೂವರು ಪರೋಕ್ಷ ಬೆಂಬಲ?: ಬಾಯಕ್ಕ ಮೇಟಿ ಅಧ್ಯಕ್ಷರಾದರೆ ಬಿಜೆಪಿಯ ಮೂವರು ಸದಸ್ಯರು ಪರೋಕ್ಷ ಬೆಂಬಲ ಕೊಡಲಿದ್ದಾರೆ ಎಂಬ ಮಾತು ಹರಿದಾಡುತ್ತಿದೆ. ಆದರೆ, ಇದನ್ನು ಬಿಜೆಪಿ ಸದಸ್ಯರು ತಳ್ಳಿ ಹಾಕುತ್ತಿದ್ದಾರೆ. ವಿರೋಧ ಪಕ್ಷದಲ್ಲಿ ಕುಳಿತರೂ ಪರವಾಗಿಲ್ಲ, ಈ ಬಾರಿ ಯಾವ ಸದಸ್ಯರೂ, ಕಾಂಗ್ರೆಸ್‌ಗೆ ಬೆಂಬಲ ಕೊಡಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ಕೊನೆ ಗಳಿಗೆಯಲ್ಲಿ ಏನು ಬೇಕಾದರೂ ನಡೆಯಬಹುದು ಎಂಬ ಆತಂಕ ಬಿಜೆಪಿಯಲ್ಲಿ ಮನೆ ಮಾಡಿದೆ.
ಜಿಪಂ ಅಧ್ಯಕ್ಷ ಸ್ಥಾನಕ್ಕೆ ನಾನೂ ಆಕಾಂಕ್ಷಿ. ಜಿ.ಪಂ. ಇತಿಹಾಸದಲ್ಲಿ ಈ ವರೆಗೆ ಬಾದಾಮಿ ತಾಲೂಕಿಗೆ ಅಧ್ಯಕ್ಷ ಸ್ಥಾನ ದೊರೆತಿಲ್ಲ. ಹೀಗಾಗಿ ಪಕ್ಷದ ಹಿರಿಯ ನನಗೆ ಅವಕಾಶ ಕೊಟ್ಟರೆ, ನಿಭಾಯಿಸಲು ಸಿದ್ದಳಿದ್ದೇನೆ. ಪಕ್ಷದ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧಳಾಗಿರುತ್ತೇನೆ.
ಶಶಿಕಲಾ ಯಡಹಳ್ಳಿ,
ಅನವಾಲ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ
ಹಿಂದೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ವೇಳೆಯೇ ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಪಕ್ಷದ ಹಿರಿಯರಿಗೆ ಹೇಳಿದ್ದೆ. ಮತ್ತೆ ನಿಮಗೆ ಅವಕಾಶ ಕೊಡುವುದಾಗಿ ಹೇಳಿದ್ದರು. ಹೀಗಾಗಿ ಈಗ ಅವಕಾಶ ಸಿಗಲಿದೆ ಎಂಬ ವಿಶ್ವಾಸವಿದೆ.
ಬಾಯಕ್ಕ ಮೇಟಿ,
ಐಹೊಳೆ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ
ಹಂಗಾಮಿ ಅಧ್ಯಕ್ಷರಾಗಿ ಕೋಮಾರ
ವೀಣಾ ಕಾಶಪ್ಪನವರ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ, ಶುಕ್ರವಾರ ಸರ್ಕಾರ ನೇಮಕ ಮಾಡಿದೆ. ಸರ್ಕಾರದ ಆದೇಶ ಸಂಜೆ ಕೈ ಸೇರುತ್ತಿದ್ದಂತೆ, ಉಪಾಧ್ಯಕ್ಷ ಕೋಮಾರ ಅವರು, ಸಂಜೆ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.