ಇಂದಿನ ಸಾಹಿತ್ಯ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ ಅಪಾರ
Team Udayavani, Mar 3, 2019, 12:30 AM IST
ಚಿಕ್ಕಮಗಳೂರಿನಲ್ಲಿ ಮಾ. 2ರಿಂದ ರಾಜ್ಯಮಟ್ಟದ ಎರಡನೇ ಮಹಿಳಾ ಸಾಹಿತ್ಯ ಸಮ್ಮೇಳನ ಆರಂಭವಾಗಿದೆ. ಎರಡು ದಿನಗಳ ಈ ಸಮ್ಮೇಳನದ ಸರ್ವಾಧ್ಯಕ್ಷರಾದ ಇನ್ಫೋಸಿಸ್ ಫೌಂಡೇಶನ್‌ನ ಮುಖ್ಯಸ್ಥೆ ಸುಧಾ ಮೂರ್ತಿ, “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ, ಸಮ್ಮೇಳನದ ಉದ್ದೇಶಗಳು, ಮಹಿಳಾ ಸಾಹಿತ್ಯದ ಆಗುಹೋಗುಗಳ ಬಗ್ಗೆ ಮಾತನಾಡಿದ್ದಾರೆ. ನಿಂದನೆಯ ಅಂಜಿಕೆ ತೊರೆದು ಮಹಿಳೆಯರು ಬರೆಯಲು ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.
ಸಾಹಿತ್ಯವೆಂಬ ತೊರೆಗೆ ಮಹಿಳಾ ಮತ್ತು ಪುರುಷ ಎಂಬ ಪ್ರತ್ಯೇಕ ಧಾರೆಗಳ ಹರಿವೇಕೆ? ಮಹಿಳಾ ಸಾಹಿತ್ಯ ಸಮ್ಮೇಳನದ ಪ್ರಸ್ತುತತೆಯೇನು?
ಹಳೆಕಾಲದಲ್ಲಿ ಬರಹಗಾರ್ತಿಯರ ಸಂಖ್ಯೆ ಬಹಳ ಕಡಿಮೆ ಇತ್ತು. ಎಲ್ಲ ಮಹಿಳೆಯರಿಗೆ ವಿದ್ಯಾಭ್ಯಾಸ ಸಿಗದ ಕಾರಣ ಅವರು ಬರವಣಿಗೆಯಲ್ಲಿ ತೊಡಗಿಕೊಂಡಿರಲಿಲ್ಲ. ಆಗೆಲ್ಲಾ, ಸಾಹಿತ್ಯ ಸಮ್ಮೇಳನಗಳಲ್ಲಿ ಮಹಿಳೆಯರಿಗಾಗಿ ಸೀಮಿತ ಗೋಷ್ಠಿಗಳನ್ನು ಮೀಸಲಿಡುತ್ತಿದ್ದರು. ಕಾಲಾಂತರದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸ್ತ್ರೀಯರ ಕೊಡುಗೆ ಹೆಚ್ಚಾಯ್ತು. ನಾಲ್ಕು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಅವರ ಭಾವಾಭಿವ್ಯಕ್ತಿಗೆ ವೇದಿಕೆ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಮನಗಂಡು, ಪ್ರತ್ಯೇಕ ಸಮ್ಮೇಳನ ಹಮ್ಮಿಕೊಳ್ಳ ಲಾಗುತ್ತಿದೆ. ಮಹಿಳೆಯರ ಅನೇಕ ವಿಷಯಗಳನ್ನು ಚರ್ಚಿಸಲು ಇದೊಂದು ವೇದಿಕೆಯಷ್ಟೇ ಹೊರತು, ಸಾಹಿತ್ಯದಲ್ಲಿ ಮಹಿಳೆ-ಪುರುಷ ಎಂಬ ಭೇದ ಭಾವವೇ ಇಲ್ಲ. ಇದು ಕೇವಲ ಕಾವ್ಯಗೋಷ್ಠಿ, ಸಂವಾದವಷ್ಟೇ ಅಲ್ಲ; ಸ್ತ್ರೀಯರ ಆತಂಕಗಳ, ಆಶೋತ್ತರಗಳ ಬಗ್ಗೆ ಚರ್ಚಿಸುವುದು, ವಿಚಾರ ಮಂಡಿಸುವುದು ಈ ಸಮ್ಮೇಳನದ ಆಶಯ.
ತಂತ್ರಜ್ಞಾನ ಕ್ಷೇತ್ರವನ್ನು ನೋಡುತ್ತಾ, ಜತೆಜತೆಗೆ ಸಾಮಾಜಿಕ ಕಾರ್ಯ ಕೈಗೊಂಡವರು ನೀವು. ಕನ್ನಡ ಭಾಷೆಯ ಕಟ್ಟುವಿಕೆಯಲ್ಲಿ ತಂತ್ರಜ್ಞರ ಸಹಭಾಗಿತ್ವ ಹೇಗಿರಬೇಕು ಎಂದು ಪರಿಭಾವಿಸುತ್ತೀರಿ?
ಇವತ್ತಿಗೂ ನಾನು ಪೆನ್ನು-ಪೇಪರ್ ಬಳಸಿ ಬರೆಯುತ್ತೇನೆ. ಆದರೆ, ಈಗ ತಂತ್ರಜ್ಞಾನದ ಬೆಳವಣಿಗೆಯಿಂದ ಸಾಹಿತ್ಯ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆಗಳಾಗಿವೆ. ಕನ್ನಡ ಅಂತಲ್ಲ, ಜಗತ್ತಿನ ಎಲ್ಲ ಭಾಷೆಗಳಿಗೂ ತಂತ್ರಜ್ಞಾನದಿಂದ ಕೊಡುಗೆಗಳು ಸಿಕ್ಕಿವೆ. ತಂತ್ರಜ್ಞಾನದಿಂದ ಓದುವ ಹವ್ಯಾಸ ಕಡಿಮೆಯಾಗಿದೆ ಅನ್ನುವವರಿದ್ದಾರೆ. ನಾನು ಹೇಳ್ಳೋ ದಾದ್ರೆ, ಸಾಹಿತ್ಯಾಸಕ್ತರು ಈಗಲೂ ಓದುತ್ತಿದ್ದಾರೆ. ಅವರಿಗಾಗಿ ಆಡಿಯೊ, ಇ-ಬುಕ್, ಗೂಗಲ್, ಕಿಂಡಲ್‌ಗಳು ಬಂದಿವೆ. ಪುಸ್ತಕ ಮುದ್ರಣ ಕಡಿಮೆಯಾಗಿರಬಹುದಷ್ಟೇ ಹೊರತು ಓದುವವರು ಓದುತ್ತಲೇ ಇರುತ್ತಾರೆ.
ಮೊದಲು ಸ್ತ್ರೀ ಬರೆದಾಗ ಅಡುಗೆ ಮನೆ ಸಾಹಿತ್ಯ ಅಂದರು. ಈಗ ಆಕೆ ಸಾಮಾಜಿಕವಾಗಿ ಚಿಂತಿಸುತ್ತಿದ್ದರೂ, “ಫೆಮಿನಿಸಂ’ ಎಂಬ ಹಣೆಪಟ್ಟಿ ಅಂಟಿಸಲಾ ಗುತ್ತಿದೆಯಲ್ಲ… ಸ್ತ್ರೀಯ ನೋಟವನ್ನು ಸಾಹಿತ್ಯದೊಳಗೆ ಮುಕ್ತವಾಗಿ ಸ್ವಾಗತಿಸುವ ದಿನಗಳು ಬರುತ್ತವೆಯೇ?
ಹಿಂದಿನ ಲೇಖಕಿಯರು ಯಾಕೆ ಹಾಗೆ ಬರೀತಾ ಇದ್ದರು ಅಂದ್ರೆ, ಅವರ ಅನುಭವ ಅಡುಗೆಮನೆಗೆ ಸೀಮಿತವಾಗಿತ್ತು. ಹೆಳವನಕಟ್ಟೆ ಗಿರಿಯಮ್ಮ ಅವರ ಬರಹಗಳನ್ನು ಗಮನಿಸಿದರೆ, ಅವರು ಭಕ್ತಿ, ಮದುವೆ ಮುಂತಾದ ವಿಷಯಗಳನ್ನೇ ಹೆಚ್ಚು ಬರೆಯುತ್ತಿದ್ದರು. ಮುಂದಿನ ದಿನಗಳಲ್ಲಿ, ತ್ರಿವೇಣಿ, ಎಂ.ಕೆ.ಇಂದಿರಾ, ಅನುಪಮಾ ನಿರಂಜನ ಅವರ ಕಾದಂಬರಿಗಳು ಅಡುಗೆಮನೆಯ ವ್ಯಾಪ್ತಿಯನ್ನು ದಾಟಿ ಬಂದವು. ಮಹಿಳೆ ಶಿಕ್ಷಣಕ್ಕೆ, ಹೊಸ ಅನುಭವಗಳಿಗೆ ತೆರೆದುಕೊಂಡಂತೆ ಆಕೆಯ ಬರವಣಿಗೆಯಲ್ಲಿ ಬದಲಾವಣೆ ಗಳಾ ದವು. ಜೀವನದ ಅನುಭವಗಳೇ ಅಕ್ಷರ ರೂಪದಲ್ಲಿ ಬರುತ್ತವೆ. ಇಂದಿನ ಸಾಹಿತ್ಯ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ ಬಹಳಷ್ಟಿದೆ ಮತ್ತು ಅವರ ಭಾವಾಭಿವ್ಯಕ್ತಿಯನ್ನು ಗೌರವಿಸುವ, ಪೋಷಿಸುವ ಓದುಗ ವರ್ಗವೂ ಇದೆ ಎಂಬುದು ನನ್ನ ಅಭಿಪ್ರಾಯ.
ಇಂದಿನ ಮಹಿಳೆ ಓದುತ್ತಿದ್ದಾಳೆ ಎಂದು ನಿಮಗೆ ಅನ್ನಿಸುತ್ತಿದೆಯೇ?
ಕಡಿಮೆಯಾಗಿದೆ ಅನ್ನೋದು ನಿಜ. ಮೊದಲೆಲ್ಲ ಮಹಿಳೆ ಮನರಂಜನೆಗಾಗಿ ಪುಸ್ತಕ ಓದ್ತಾ ಇದ್ದಳು. ಆದರೆ, ಈಗ ಆಕೆಯ ಕೈಗೆ ಮೊಬೈಲ್ ಬಂದಿದೆ. ಮನೋರಂಜನೆಯ ಸಾಧನಗಳು ಹೆಚ್ಚಾಗಿವೆ. ಆದರೂ, ಓದುವವರು ಇದ್ದಾರೆ. ಕೆಲವರು ಕನ್ನಡದಿಂದ ಇಂಗ್ಲಿಷ್ ಸಾಹಿತ್ಯದೆಡೆಗೆ ಹೊರಳಿದ್ದಾರೆ. ಹಿಂದೆಲ್ಲಾ ರಾಮಾಯಣ-ಮಹಾಭಾರತವನ್ನು ಓದಿ ತಿಳಿದುಕೊಳ್ಳುತ್ತಿದ್ದೆವು. ಆದರೀಗ ಆ ಕುರಿತಾದ ಸೀರಿಯಲ್, ಸಿನಿಮಾಗಳು ಬಂದಿವೆ. ಅದನ್ನು ನೋಡಿ ರಾಮಾಯಣದ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.
ಪುಸ್ತಕದಲ್ಲಿ ಇರುವ ವಿಷಯವೇ ವಿಶ್ಯುವಲ್ ರೂಪದಲ್ಲಿ ಸಿಗುತ್ತಿದೆ. ಮನೋರಂಜನೆ, ಜ್ಞಾನ ಎರಡರಲ್ಲೂ ಸಿಗುತ್ತೆ ಅನ್ನೋದು ನಿಜ. ಆದರೆ, ಯಾವುದು ನಮ್ಮ ಬರವಣಿಗೆಗೆ ಸಹಾಯ ಮಾಡುತ್ತೆ?
ಇದು ವೈಯಕ್ತಿಕ ಅಭಿಪ್ರಾಯ. ನನಗೆ ನೋಡುವುದಕ್ಕಿಂತ, ಓದುವುದೇ ಹೆಚ್ಚು ಇಷ್ಟವಾಗುತ್ತದೆ. ಯಾಕಂದ್ರೆ, ಪುಸ್ತಕದಲ್ಲಿ ಓದುವಾಗ ರಾಮ ಆಜಾನುಬಾಹು ಇದ್ದ, ಕೃಷನದ್ದು ಶ್ಯಾಮಲ ವರ್ಣ ಅಂತೆಲ್ಲಾ ವರ್ಣಿಸಿರುತ್ತಾರೆ. ಅದನ್ನು ಓದುವಾಗ ನನ್ನೊಳಗೆ ಒಂದು ಕಲ್ಪನಾ ಜಗತ್ತು ತೆರೆದುಕೊಳ್ಳುತ್ತದೆ. ಅದನ್ನೇ ವಿಶ್ಯುವಲ್ ರೂಪದಲ್ಲಿ ನೋಡಿದರೆ, ಯಾರು ರಾಮನ ಪಾತ್ರದಲ್ಲಿ ನಟಿಸಿರುತ್ತಾರೋ ಅವರನ್ನೇ ರಾಮ ಅಂತ ಒಪ್ಪಿಕೊಳ್ಳಬೇಕಾಗುತ್ತೆ. ಆದರೆ, ಪುಸ್ತಕಗಳ ಓದು ನಮ್ಮ ಕಲ್ಪನಾ ಶಕ್ತಿಗೆ ವಿಶಾಲವಾದ ಆಕಾಶವನ್ನು ಒದಗಿಸುತ್ತದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ.
ಮಹಿಳೆಯ ಸಾಹಿತ್ಯ ರಚನೆಯ ಮೂಲ ಅಥವಾ ಪ್ರೇರಣೆ, ಜೀವನ ಪ್ರೀತಿಯೇ? ಅಥವಾ ಆಕೆಯ ಮೇಲಾಗುತ್ತಿರುವ ಶೋಷಣೆಗಳೇ?
ಇದು ಅವರವರ ಬರವಣಿಗೆಗೆ ಬಿಟ್ಟಿದ್ದು. ಇನ್ನೊಬ್ಬರ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ವಿಷಯಕ್ಕೆ ಬಂದರೆ, ಬರವಣಿಗೆ ಅನ್ನೋದು ನನಗೆ ಭಾವನೆಗಳನ್ನು ವ್ಯಕ್ತಪಡಿಸಲು ಇರೋ ಮಾಧ್ಯಮ. ಬದುಕಿನ ಅನುಭವಗಳು, ಬದುಕನ್ನು ನಾನು ನೋಡುವ ಬಗೆ ನನ್ನ ಬರವಣಿಗೆಯಲ್ಲಿ ಕಾಣಿಸುತ್ತೆ. ಆದರೆ, ಹಿಂಗೇ ಬರೆಯಬೇಕು, ಇದನ್ನು ಮಾತ್ರ ಬರೆಯಬೇಕು ಎಂಬ ಯಾವ ರೂಲ್ ಕೂಡ ಇಲ್ಲ. ಕೆಲವರು ತಮ್ಮ ಜೀವನಪ್ರೀತಿಯನ್ನು ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಆಕ್ರೋಶವನ್ನು ಸಾಹಿತ್ಯದ ಮೂಲಕ ಹೊರ ಹಾಕುತ್ತಾರೆ.
ಸಾಹಿತ್ಯದ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವ ಸ್ತ್ರೀಯರಿಗೆ ಫೆಮಿನಿಸ್ಟ್ ಪಟ್ಟ ಕಟ್ಟುವ, ಹೆದರಿಕೆ ಹುಟ್ಟಿಸುವ ವಾತಾವರಣ ಇದೆ. ಅವನ್ನೆಲ್ಲ ಮೀರಿ ಸಾಹಿತ್ಯ ರಚನೆಗೆ ತೊಡಗೋದು ಹೇಗೆ? ನಿಂದಿಸುವ ಜನರಿದ್ದಾರೆ. ಮಹಿಳೆ ಈ ಸಮಾಜದಲ್ಲಿ ನಿರುಮ್ಮಳವಾಗಿ ಬದುಕಬಹುದು ಎಂಬ ವಾತಾವರಣ ಇದೆಯೇ?
ನಾನು ಯಾವತ್ತೂ ಹಾಗೆಲ್ಲಾ ಹೆದರಿಯೇ ಇಲ್ಲ. ಜನ ಏನೋ ಹೇಳ್ತಾರೆ ಅಂತ ಕುಳಿತರೆ, ನಮ್ಮಿಂದ ಯಾವ ಕೆಲಸವೂ ಸಾಧ್ಯವಿಲ್ಲ. ಧೈರ್ಯದಿಂದ ಮುನ್ನುಗ್ಗುತ್ತಾ ಇರಬೇಕು. ಸಾಹಿತ್ಯವನ್ನು ರಾಜ ಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಬಾರದು.
ತಾಯಂದಿರು, ಮಕ್ಕಳನ್ನು ಸಾಹಿತ್ಯಮುಖೀಯಾಗಿ ಹೇಗೆ ಪೋಷಿಸಬೇಕು? ಅವರಲ್ಲಿ ಕನ್ನಡಪ್ರಜ್ಞೆ ಮೂಡಿಸುವ ಬಗೆಯೆಂತು?
ತಾಯಿಯಾದವಳು ಮೊದಲು ಓದುವ ಹವ್ಯಾಸ ಬೆಳೆಸಿ ಕೊಳ್ಳ ಬೇಕು. ಅಮ್ಮ, ಪ್ರತಿದಿನ ಒಂದು ಗಂಟೆ ಓದುತ್ತಾಳೆ ಅಂತಾದ್ರೆ, ಮಕ್ಕಳಲ್ಲೂ ಆಸಕ್ತಿ ಮೂಡುತ್ತದೆ. ನಾನು ಮೊಬೈಲ್ ನೋಡ್ತಾ ಇರ್ತೀನಿ, ನೀನು ಓದು ಅಂದರೆ ಮಕ್ಕಳು ಕೇಳ್ಳೋದಿಲ್ಲ. ತಾಯಿ ಹೇಳಿದ್ದನ್ನು ಮಕ್ಕಳು ಕೇಳುವುದಿಲ್ಲ, ತಾಯಿಯನ್ನು ನೋಡಿ ಮಕ್ಕಳು ಕಲಿಯುತ್ತವೆ.
ರಾಜ್ಯದ ಮೂಲೆಯಿಂದ, ದೇಶದ ಹಲವು ಅಂಚುಗಳಲ್ಲಿ ಮಹಿಳೆಯ ಬದುಕನ್ನು ಕಂಡವರು ನೀವು? ಕನ್ನಡತಿಯರು ಅಲ್ಲಿನವರಿಗಿಂತ ಹೇಗೆ ಭಿನ್ನ?
ಯಾರು ಭಿನ್ನ, ಹೇಗೆ ಭಿನ್ನ ಅಂತ ಹೇಳಲು ಸಾಧ್ಯವಿಲ್ಲ. ಯಾಕಂದ್ರೆ, ಜಗತ್ತಿನ ಪ್ರತಿಯೊಂದು ಸಂಸ್ಕೃತಿಯೂ ವಿಭಿನ್ನವೇ. ಕನ್ನಡದವರು ಸೌಮ್ಯ ಸ್ವಭಾವದವರು, ಬಹುಬೇಗ ಅಡ್ಜಸ್ಟ್ ಆಗುವ ಗುಣದವರು.
ಸಾಹಿತ್ಯಕ್ಕೆ ತೆರೆದುಕೊಳ್ಳಲು ನಿಮ್ಮನ್ನು ಪ್ರೇರೇಪಿಸಿದ ಲೇಖಕಿಯರು ಯಾರು? ನಿಮ್ಮ ಇಷ್ಟದ ಬರಹಗಾರ್ತಿಯರ ಹೆಸರು ಹೇಳ್ಳೋದಾದರೆ…
ಸಾಹಿತ್ಯಕ್ಕೆ ತೆರೆದುಕೊಳ್ಳಲು ನಮ್ಮ ಅಮ್ಮನೇ ಮೊದಲ ಕಾರಣ. ಅವರು ಓದ್ತಾ ಇದ್ದರು, ಬರೀತಾ ಇದ್ದರು. ಅವರನ್ನು ನೋಡಿ ನಾನು ಬರೆಯೋದನ್ನು, ಓದೋದನ್ನು ಕಲಿತೆ. ಆದರೆ, ತ್ರಿವೇಣಿ, ಎಂ.ಕೆ. ಇಂದಿರಾ, ಅನುಪಮಾ ನಿರಂಜನ, ನನ್ನ ನೆಚ್ಚಿನ ಲೇಖಕಿಯರು. ಹೊಸಕಾಲದ ಸಾಹಿತ್ಯಕ್ಕೆ ಬಂದರೆ, ನೇಮಿಚಂದ್ರ ಅವರ ಬರಹ ಇಷ್ಟವಾಗುತ್ತದೆ.
ಎಂಜಿನಿಯರ್, ಲೇಖಕಿ, ಬರಹಗಾರ್ತಿ, ಶಿಕ್ಷಕಿ…ನಿಮ್ಮನ್ನು ನೀವು ಹೇಗೆ ಗುರುತಿಸಿಕೊಳ್ಳಲು ಇಷ್ಟಪಡುತ್ತೀರಿ
ಹೀಗೇ ಗುರುತಿಸಿಕೊಳ್ಳಲು ಇಷ್ಟ ಅಂತೇನಿಲ್ಲ. ನನ್ನ ಪ್ರತಿಯೊಂದು ಕೆಲಸವನ್ನು, ನಾನು ಇಷ್ಟಪಟ್ಟು ಮಾಡುತ್ತೇನೆ. ಹಾಗಾಗಿ ಈ ಎಲ್ಲಾ ರೋಲ್‌ಗಳೂ ಇಷ್ಟವೇ.
ಚಿಕ್ಕಮಗಳೂರಿನಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಜಿಲ್ಲೆಯೊಂದಿಗಿನ ನಿಮ್ಮ ನಂಟು ಹೇಗಿದೆ?
ಚಿಕ್ಕಮಗಳೂರಿನ ಬಗ್ಗೆ ಮೊದಲು ತಿಳಿದದ್ದೇ ತ್ರಿವೇಣಿಯವರ ಕಾದಂಬರಿ ಮೂಲಕ. ಎಂಟೋ, ಒಂಬತ್ತೋ ವರ್ಷದವಳಿದ್ದಾಗ, “ಬೆಳ್ಳಿಮೋಡ’ ಕಾದಂಬರಿ ಓದಿದ್ದೆ. “ಮಿನುಗುತಾರೆ’ ಅನ್ನೋ ಎಸ್ಟೇಟ್‌ನಲ್ಲಿ ನಡೆವ ಕತೆ ಅದು. ಆಗ ಓದಿದ್ದು ಈಗಲೂ ನೆನಪಿದೆ. ಅದನ್ನು ಬಿಟ್ಟರೆ ಜಾಸ್ತಿ ನೆನಪುಗಳೇನೂ ಇಲ್ಲ.
ಸಂದರ್ಶನ: ಪ್ರಿಯಾಂಕಾ ನಟಶೇಖರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…
ನಾನೂ ಸೀನಿಯರ್ ಲೀಡರ್, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ
Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ
ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.