ಮತದಾರರ ಜಾಗೃತಿಗೆ ಚು.ಆಯೋಗ ನಾನಾ ತಂತ್ರ
Team Udayavani, Mar 4, 2019, 1:00 AM IST
ಉಡುಪಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರ ರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ “ಸ್ವೀಪ್'(ಮತದಾರರ ಜಾಗೃತಿ ಅಭಿಯಾನ) ತಂಡ ವಿವಿಧ ತಂತ್ರಗಳ ಮೊರೆ ಹೋಗುತ್ತಿದೆ.
35 ಅಂಬಾಸಿಡರ್‌ಗಳು
ಜಿಲ್ಲೆಯ ಸರಕಾರಿ, ಅನುದಾನಿತ, ಖಾಸಗಿ ಕಾಲೇಜುಗಳ ಸುಮಾರು 35 ಮಂದಿ ವಿದ್ಯಾರ್ಥಿಗಳು ಸ್ವಯಂ ಆಗಿ
ಅಂಬಾಸಿಡರ್‌ಗಳಾಗಲು ಮುಂದೆ ಬಂದಿದ್ದು ಅವರಿಗೆ ತರಬೇತಿ ನಡೆಯಲಿದೆ. ತಮ್ಮ ಕಾಲೇಜಿನ ವಿದ್ಯಾರ್ಥಿ ಗಳು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳುವಂತೆ ನೋಡಿಕೊಳ್ಳುವುದು, ಮತದಾನ ಮಾಡಲು
ಸ್ಫೂರ್ತಿ ತುಂಬಿಸುವುದು ಮೊದಲಾದ ಕೆಲಸ ಇವರು ಮಾಡುತ್ತಾರೆ. ಮುಖ್ಯವಾಗಿ ಯಾವುದೇ ಆಮಿಷಕ್ಕೆ ಒಳಗಾಗದೆ “ನೈತಿಕ ಮತದಾನ’ ಮಾಡಲು ಜಾಗೃತಿ ಮೂಡಿಸಲಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳಲ್ಲಿ ಗುರುತಿಸಿ ಕೊಂಡಿರದವರನ್ನು ಕ್ಯಾಂಪಸ್ ಅಂಬಾಸಿಡರ್‌ಗಳನ್ನಾಗಿ ಆಯ್ಕೆ ಮಾಡಲಾಗುತ್ತದೆ.
ತಂತಿಯಲ್ಲಿ ಮೂಡಿದ ಜಾಗೃತಿ
ಮತದಾನ ಜಾಗೃತಿ ಕಾರ್ಯ ಕ್ರಮಗಳಲ್ಲಿ ಪ್ರದರ್ಶಿಸುವ ಉದ್ದೇಶದಿಂದ ಆಲೂರು ಸರಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ರಾಜಶೇಖರ ಎಂ.ತಾಳಿಕೋಟೆ ಅವರು ತಂತಿ ಮತ್ತು ಪೇಪರ್ ಗಮ್‌ನಿಂದ ಕಲಾಕೃತಿ ರಚಿಸಿದ್ದು ಇದನ್ನು ಜಿಲ್ಲಾ ಸ್ವೀಪ್ ಸಮಿತಿಗೆ ನೀಡಿದ್ದಾರೆ. ಈ ಕಲಾಕೃತಿ ಯುವಕ – ಯುವತಿಯರು, ಹಿರಿಯರು ಸೇರಿದಂತೆ ಒಟ್ಟು 6 ಮಂದಿಯ ಸಣ್ಣ ಪ್ರತಿಕೃತಿಗಳನ್ನು ಹೊಂದಿದೆ. ಈ ಗುಂಪಿನಲ್ಲಿ ಅಂಗವಿಕಲರೋರ್ವರ ಪ್ರತಿಕೃತಿಯೂ ಇದೆ. ಅಂಗವಿಕಲರು ಕೂಡ ಜನತಂತ್ರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬ ಸಂದೇಶ ಇದರಲ್ಲಿದೆ. ಪ್ರತಿಯೋರ್ವರ ಕೈಯಲ್ಲಿಯೂ ತಲಾ ಎರಡು ಮತದಾನ ಜಾಗೃತಿ ಘೋಷವಾಕ್ಯಗಳ ಫಲಕಗಳಿವೆ. ಜತೆಗೆ ಮತದಾನದ ಮೂಲಕ ಸದೃಢ ಭಾರತ ನಿರ್ಮಾಣ ಪರಿಕಲ್ಪನೆಯಂತೆ ರಾಷ್ಟ್ರಧ್ವಜವನ್ನು ಇಡಲಾಗಿದೆ.
7 ಮಂದಿಯ ಯಕ್ಷ ತಂಡ
ರಾಜ್ಯವೊಂದರಲ್ಲಿ ಮತದಾನ ನಡೆದುದರಿಂದ ಜನರಿಗೆ ಏನು ಮತ್ತು ಹೇಗೆ ಪ್ರಯೋಜನವಾಯಿತು ಎಂದು ತಿಳಿಸುವ ಕಥೆಯೂ ಸೇರಿದಂತೆ ಜನತಂತ್ರಕ್ಕೆ ಪೂರಕ ವಾದ ಕಥಾ ಪ್ರಸಂಗವನ್ನೊಳಗೊಂಡ ಯಕ್ಷಗಾನ ಸಿದ್ಧಗೊಳ್ಳುತ್ತಿದ್ದು ಇದಕ್ಕೆ 7 ಮಂದಿ ಪ್ರಮುಖ ಕಲಾವಿದರನ್ನು ಗುರುತಿಸಲಾಗಿದೆ. ಸುಮಾರು 30 ನಿಮಿಷ ಗಳ ಕಾಲಾವಧಿಯ ಈ ಸಂಚಾರಿ ಯಕ್ಷಗಾನ ಪ್ರದರ್ಶನ ವಿವಿಧೆಡೆ ನಡೆಯಲಿದೆ. ಯಕ್ಷಗಾನದಿಂದ ಸ್ಥಳೀಯರನ್ನು ಸುಲಭ ವಾಗಿ ಆಕರ್ಷಿಸಬಹುದು ಎಂಬ ಲೆಕ್ಕಾಚಾರ ಸ್ವೀಪ್ ಸಮಿತಿಯದ್ದು.
ಸ್ಥಳೀಯ ಕಲಾವಿದರು
ಪ್ರತಿಭಾವಂತ ಶಿಕ್ಷಕರು, ಸ್ಥಳೀಯ ಜಾನಪದ ಕಲಾವಿದರ ಮೂಲಕ ಜಿಂಗಲ್ಸ್, ಹಾಡುಗಳು, ನಾಟ್ಯ ಪ್ರದರ್ಶನ, ಘೋಷಣೆ ಸಿದ್ಧಪಡಿಸಲು ಸ್ವೀಪ್ ನಿರ್ಧರಿಸಿದೆ. ಜಿಲ್ಲೆಯ ಐಕಾನ್‌ಗಳ ಮೂಲಕವೂ ಮತದಾನ ಜಾಗೃತಿಗೆ ಯೋಜನೆ ಇದೆ. ತುಳುಭಾಷೆ ಸೇರಿದಂತೆ ಸ್ಥಳೀಯ ಭಾಷೆಗಳಿಗೂ ಪ್ರಾಧಾನ್ಯತೆ ದೊರೆಯಲಿದೆ. ಕಸ ವಿಲೇವಾರಿ ವಾಹನ ಕೂಡ ಮತದಾನ ಜಾಗೃತಿಯ ಹಾಡು, ಘೋಷಣೆಗಳನ್ನು ಮೊಳಗಿಸಲಿವೆ.
ರ್‍ಯಾಂಪ್ ಕಡ್ಡಾಯ
ಈ ಬಾರಿ ಹೊಸ ಮತದಾನ ಕೇಂದ್ರಗಳು ಸೇರಿದಂತೆ ಎಲ್ಲ ಕಡೆ ರ್‍ಯಾಂಪ್ ನಿರ್ಮಾಣ ಕಡ್ಡಾಯ. ಗ್ರಾ.ಪಂ.ಗಳು ತಮ್ಮ 14ನೇ ಹಣಕಾಸು ಅನುದಾನ ಬಳಕೆ ಮಾಡಿ ತಮ್ಮ ವ್ಯಾಪ್ತಿಯ ಮತದಾನ ಕೇಂದ್ರಗಳಲ್ಲಿ ರ್‍ಯಾಂಪ್ ನಿರ್ಮಿಸುವ ಕೆಲಸ ಮಾಡುತ್ತಿವೆ.
ರಾಜ್ಯ ಮಟ್ಟದಲ್ಲಿ ಪ್ರಶಂಸೆ
ಕಳೆದ ವಿಧಾನಸಭಾ ಚುನಾವಣೆ ವೇಳೆ ಉಡುಪಿ ಜಿಲ್ಲೆಯಲ್ಲಿ ಸ್ವೀಪ್ ನೇತೃತ್ವದಲ್ಲಿ ನಡೆದ ವಿಭಿನ್ನ ರೀತಿಯ ಮತದಾನ ಜಾಗೃತಿ ಚಟುವಟಿಕೆಗಳಿಗೆ ರಾಜ್ಯಮಟ್ಟದಲ್ಲಿಯೇ ಪ್ರಶಂಸೆ ವ್ಯಕ್ತವಾಗಿತ್ತು. ಅದೇ ರೀತಿ ಈ ಬಾರಿಯೂ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು.
-ಸಿಂಧೂ ರೂಪೇಶ್, ಸ್ವೀಪ್ ಸಮಿತಿ ಅಧ್ಯಕ್ಷರು