ಅನಧಿಕೃತ ಅಂಗಡಿ ತೆರವಿಗೆ 15 ದಿನ ಗಡುವು
Team Udayavani, Mar 4, 2019, 5:13 AM IST
ಪುತ್ತೂರು: ಗ್ರಾಮಾಂತರದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ರಸ್ತೆಗಳ ಬದಿಗಳಲ್ಲಿರುವ ಅನಧಿಕೃತ ಅಂಗಡಿ, ಜೋಪಡಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ವಲಯದಿಂದ ಕೇಳಿಬಂದ ಒತ್ತಾಯಕ್ಕೆ ಕಡೆಗೂ ಇಲಾಖೆ ಮಣಿದಿದೆ.
ಅನಧಿಕೃತ ಅಂಗಡಿಗಳ ತೆರವಿಗೆ 15 ದಿನಗಳ ಗಡುವನ್ನು ಇಲಾಖೆ ವಿಧಿಸಿದೆ. ಪುತ್ತೂರು ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳಾದ, ಸುಬ್ರಹ್ಮಣ್ಯ- ಮಂಜೇಶ್ವರ ರಸ್ತೆ, ಬಿಸಿಲೆ ಘಾಟಿ ರಸ್ತೆ, ಗುಂಡ್ಯ- ಕುಲ್ಕುಂದ ರಸ್ತೆ, ಲೋಕೋಪಯೋಗಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಾದ ಪುತ್ತೂರು-ಉಪ್ಪಿನಂಗಡಿ ರಸ್ತೆ, ಕೌಡಿಚ್ಚಾರು- ಪಾಣಾಜೆ ರಸ್ತೆ, ಕಾವು- ಈಶ್ವರಮಂಗಲ- ಅಡೂರು ರಸ್ತೆ, ಹಂಟ್ಯಾರು- ಬೆಟ್ಟಂಪಾಡಿ ರಸ್ತೆ, ಅರಿಯಡ್ಕ- ನಿಂತಿಕಲ್‌ಕಟ್ಟ ರಸ್ತೆ, ಕಾಣಿಯೂರು- ಚಾರ್ವಾಕ- ಬರೆಪ್ಪಾಡಿ ರಸ್ತೆ, ಪದ್ದೊಟ್ಟು- ಬೆಳ್ಳಾರೆ ರಸ್ತೆ, ಅಮಿcನಡ್ಕ- ನೆಟ್ಟಾರು ರಸ್ತೆ, ಕುದ್ಮಾರು- ಶರವೂರು- ಆಲಂಕಾರು- ನೆಲ್ಯಾಡಿ ರಸ್ತೆ ಬದಿಗಳಲ್ಲಿ ಅನಧಿಕೃತ ಗೂಡಂಗಡಿ ನಿರ್ಮಿಸಿ ವ್ಯಾಪಾರ ನಡೆಸುವುದು ಇಲಾಖೆಯ ಗಮನಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಸ್ತೆ ಬದಿಗಳಲ್ಲಿ ಅನಧಿಕೃತ ಅಂಗಡಿ ತಲೆಎತ್ತುತ್ತಿರುವ ಕುರಿತು ಕ್ರಮ ಕೈಗೊಳ್ಳದ ಕುರಿತು ಇಲಾಖೆಯ ಅಧಿಕಾರಿಗಳ ವಿರುದ್ಧ ಪುತ್ತೂರು ತಾ.ಪಂ. ಸಭೆಯಲ್ಲೂ ವಿಚಾರ ಪ್ರಸ್ತಾವವಾಗಿತ್ತು
ಪಿಡಬ್ಲ್ಯೂಡಿ ಇಲಾಖೆಯಿಂದ ಎನ್ ಒಸಿ ಪಡೆದು ಅನಂತರ ಸ್ಥಳೀಯಾಡಳಿತ ಗ್ರಾ.ಪಂ.ನಲ್ಲಿ ಅನುಮತಿ ಪಡೆಯಬೇಕೆಂಬ ನಿಯಮವಿದ್ದರೂ ಗ್ರಾ.ಪಂ.ನಿಂದ ಮಾತ್ರ ಅನುಮತಿ ಪಡೆಯಲಾಗುತ್ತಿದೆ ಅಥವಾ ಅಧಿಕೃತ ಅನುಮತಿಯನ್ನೇ ಪಡೆಯುತ್ತಿಲ್ಲ ಎನ್ನುವ ವಿಚಾರ ಸಭೆಯಲ್ಲಿ ಚರ್ಚೆಯಾಗಿತ್ತು.
ತೆರವುಗೊಳಿಸಿ: ಸೂಚನೆ
ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಬದಿಗಳಲ್ಲಿ ಅನಧಿಕೃತ ಅಂಗಡಿಗಳನ್ನು ನಿರ್ಮಿಸಿಕೊಂಡು ವ್ಯಾಪಾರ ನಡೆಸುತ್ತಿರುವ ಗೂಡಂಗಡಿಗಳನ್ನು 15 ದಿನಗಳೊಳಗೆ ತೆರವುಗೊಳಿಸದಿದ್ದಲ್ಲಿ ಇಲಾಖೆಯ ವತಿಯಿಂದಲೇ ತೆರವು ಕಾರ್ಯಾಚರಣೆ ನಡೆಸಬೇಕಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಗಮನಹರಿಸಿ
ಉಪ್ಪಿನಂಗಡಿ ಮೂಲಕ ಹಾದು ರಾಷ್ಟ್ರೀಯ ಹೆದ್ದಾರಿ ಮತ್ತು ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲೂ ಇಂತಹ ನೂರಾರು ಅನಧಿಕೃತ ಅಂಗಡಿಗಳು ಇವೆ. ಹಣ್ಣು, ತಿನಿಸುಗಳನ್ನೂ ಇಲ್ಲಿ ಮಾರಾಟ ಮಾಡಲಾಗುತ್ತದೆ. ಅನಧಿಕೃತವಾಗಿ ವ್ಯಾಪಾರ ನಡೆಸುವ ಈ ಅಂಗಡಿಗಳಿಗೆ ಯಾವುದೇ ನಿರ್ಬಂಧ ಹೇರಿಲ್ಲ.
ಅಪಾಯದ ಸಾಧ್ಯತೆ
ಅನಾಮಿಕರು ಬಂದು ಗ್ರಾಮೀಣ ಭಾಗದ ರಸ್ತೆ ಬದಿಗಳಲ್ಲಿ ತಾತ್ಕಾಲಿಕ ವ್ಯಾಪಾರ ಮಳಿಗೆಯನ್ನು ಆರಂಭಿಸಿ ಅದನ್ನು ಶಾಶ್ವತವಾಗಿ ಮುಂದುವರೆಸುವುದು ಮತ್ತು ಅಲ್ಲಿ ಜನ ಸೇರುವುದು ಜನರಲ್ಲಿ ಅನುಮಾನ ಹಾಗೂ ಆತಂಕಕ್ಕೆ ಕಾರಣವಾಗಿತ್ತು. ಅನೇಕ ಬಾರಿ ರಸ್ತೆ ಅಪಘಾತಗಳಿಗೂ ಇದು ಕಾರಣವಾಗಿದ್ದಿದೆ. ಎಗ್ಗಿಲ್ಲದೆ ನಡೆಯುವ ಈ ಅಂಗಡಿಗಳಲ್ಲಿ ವ್ಯಾಪಾರವಾಗುವ ವಸ್ತುಗಳ ಕುರಿತ ಸಂಶಯವೂ ಸಾರ್ವಜನಿಕ ವಲಯದಲ್ಲಿದೆ.
ಸ್ವಯಂ ತೆರವಿಗೆ ಅವಕಾಶ
ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ ಗೂಡಂಗಡಿಗಳನ್ನು ನಿರ್ಮಿಸಿಕೊಂಡಿರುವುದರಿಂದ ಜನತೆ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. 15 ದಿನಗಳ ಒಳಗಾಗಿ ಸ್ವಯಂ ಪ್ರೇರಿತವಾಗಿ ಈ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ಅವಕಾಶ ನೀಡಲಾಗಿದೆ.
– ಬಿ.ರಾಜಾರಾಮ್
ಎಇಇ, ಪಿಡಬ್ಲ್ಯುಡಿ ಪುತ್ತೂರು
ಮಾಫಿಯಾದಂತೆ ಬೆಳೆಯುತ್ತಿದೆ
ರಸ್ತೆ ಬದಿ ಎಲ್ಲ ಕಡೆಗಳಲ್ಲಿ ಅನಧಿಕೃತ ಅಂಗಡಿಗಳು ಹುಟ್ಟಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದೊಂದು ಮಾಫಿಯಾದಂತೆ ಬೆಳೆಯುತ್ತಿದೆ. ಯಾರೋ ಅಂಗಡಿಗಳನ್ನು ಮಾಡುತ್ತಾರೆ. ಇನ್ಯಾರನ್ನೋ ವ್ಯಾಪಾರಕ್ಕೆ ಕುಳ್ಳಿರಿಸುತ್ತಾರೆ. ಬಳಿಕ ಆ ಜಾಗವನ್ನೂ ಒಳಗೆ ಹಾಕಿಕೊಳ್ಳುತ್ತಾರೆ. ಗಂಭೀರ ವಿಚಾರವಾಗಿರುವುದರಿಂದ ತಾ.ಪಂ.ನಲ್ಲಿ ಪ್ರಸ್ತಾವಿಸಿದ್ದೆ. ಇಲಾಖೆಯ ಕ್ರಮಕ್ಕೆ ನಮ್ಮದೂ ಬೆಂಬಲ ಇದೆ.
– ಶಿವರಂಜನ್,
ಪುತ್ತೂರು ತಾ.ಪಂ. ಸದಸ್ಯರು
ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.