ಬೆಳ್ತಂಗಡಿ ಜನತೆಗೆ ಇನ್ನೂ ದಕ್ಕಿಲ್ಲ ಇಂದಿರಾ ಕ್ಯಾಂಟೀನ್ ರುಚಿ
Team Udayavani, Mar 6, 2019, 4:51 AM IST
ಬೆಳ್ತಂಗಡಿ: ಕಳೆದ ಅವಧಿಯ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್ ಸೌಲಭ್ಯ ರಾಜ್ಯದ ಬಹುತೇಕ ತಾ| ಕೇಂದ್ರಗಳಲ್ಲಿ ಅನುಷ್ಠಾನ ಗೊಂಡರೂ ಜನತೆಗೆ ಅದರ ರುಚಿ ಅನುಭವಿಸುವ ಕಾಲ ಇನ್ನೂ ಸಿಕ್ಕಿಲ್ಲ.!
ಹಲವು ಅಡ್ಡಿಗಳ ಬಳಿಕ ಬೆಳ್ತಂಗಡಿಯಲ್ಲಿ ಕಳೆದ ತಿಂಗಳ ಹಿಂದೆ ಕಾಂಟೀನ್ ಕಾಮಗಾರಿ ಆರಂಭಗೊಂಡಿದ್ದರೂ ಗುತ್ತಿಗೆ ವಹಿಸಿಕೊಂಡ ಸಂಸ್ಥೆಯು ಬೆಳ್ತಂಗಡಿಯ ಕಾಮಗಾರಿಯನ್ನು ಅರ್ಧಕ್ಕೆ ಬಿಟ್ಟು ಉತ್ತರ ಕರ್ನಾಟಕದ ಕಡೆಗೆ ತೆರಳಿದೆ. ಹೀಗಾಗಿ ಅಲ್ಲಿ ಕಾಮಗಾರಿ ಮುಗಿಯದೆ ಇಲ್ಲಿನ ಕಾಮಗಾರಿ ಮುಂದುವರಿಯುವ ಸಾಧ್ಯತೆ ಕಡಿಮೆ ಇದೆ.
ನ.ಪಂ. ಕಾಮಗಾರಿಗೂ ಅಡ್ಡಿ
ಕಳೆದ 2 ತಿಂಗಳ ಹಿಂದೆಯೇ ಬೆಳ್ತಂಗಡಿ ಬಸ್ ನಿಲ್ದಾಣ ಹಿಂಬದಿಯ ನಿವೇಶನದಲ್ಲಿ ಇಂದಿರಾ ಕ್ಯಾಂಟೀನ್ ಕಾಮಗಾರಿ ಆರಂಭಗೊಂಡಿದ್ದು, ಇದರಿಂದಾಗಿ ಬೆಳ್ತಂಗಡಿ ನ.ಪಂ.ನ ತಡೆಗೋಡೆ ನಿರ್ಮಾಣಕ್ಕೂ ಅಡ್ಡಿಯಾಗಿದೆ. ಅಂದರೆ ಇಂದಿರಾ ಕ್ಯಾಂಟೀನ್‌ಗೆ ನಿವೇಶನ ಸಮತಟ್ಟು ಮಾಡುವಾಗ ಹಳೆ ತಾಲೂಕು ಕಚೇರಿ ಹಿಂಬದಿ ಮಣ್ಣು ತೆಗೆಯಲಾಗಿದೆ. ಪ್ರಸ್ತುತ ತಡೆ ಗೋಡೆ ನಿರ್ಮಾಣವಾಗದೇ ಇದ್ದರೆ ಕಟ್ಟಡ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ.
ನ.ಪಂ.ಗೆ 17 ಲಕ್ಷ ರೂ. ಅನುದಾನ ಮಂಜೂರಾಗಿದ್ದು, 4 ಮೀ. ಎತ್ತರ, 23 ಮೀ. (ಪ್ರಸ್ತುತ 18 ಮೀ. ಮಾತ್ರ) ಉದ್ದದ ತಡೆಗೋಡೆ ನಿರ್ಮಾಣವಾಗಬೇಕಿದೆ. ಕಳೆದ 2 ತಿಂಗಳ ಹಿಂದೆ ಕ್ಯಾಂಟೀನ್, ತಡೆಗೋಡೆ ನಿರ್ಮಾಣ ಕಾಮಗಾರಿ ಏಕಕಾಲದಲ್ಲಿ ಆರಂಭಗೊಂಡಾಗ ಕ್ಯಾಂಟೀನ್ ಗುತ್ತಿಗೆ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿ, ತಡೆಗೋಡೆ ನಿರ್ಮಾಣವನ್ನು ನಿಲ್ಲಿಸಲಾಗಿತ್ತು.
ಆದರೆ ಕ್ಯಾಂಟೀನ್ ನಿರ್ಮಾಣವೂ ಅರ್ಧಕ್ಕೆ ನಿಂತು, ಅದೂ ಇಲ್ಲ-ಇದೂ ಇಲ್ಲ ಎಂಬ ಪರಿಸ್ಥಿತಿಯಿತ್ತು. ನ.ಪಂ. ಜಿಲ್ಲಾಧಿಕಾರಿ ಕಚೇರಿ ಮೂಲಕ ಅನುಮತಿ ಪಡೆದು ಪ್ರಸ್ತುತ ತಡೆಗೋಡೆ ಕಾಮಗಾರಿ ಪ್ರಾರಂಭಿಸಿದೆ ಎಂದು ನ.ಪಂ.ಎಂಜಿನಿಯರ್ ಮಹಾವೀರ ಅರಿಗ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭ ಗುತ್ತಿಗೆ ಸಂಸ್ಥೆ ಕಾಮಗಾರಿ ಕೈಗೆತ್ತಿಕೊಂಡರೆ ಆಯೋಗ ಆಕ್ಷೇಪ ವ್ಯಕ್ತಪಡಿಸಿದರೆ ನಿರ್ಮಾಣ ಮತ್ತಷ್ಟು ವಿಳಂಬವಾಗಲಿದೆ.
ಆರಂಭದಿಂದಲೂ ವಿಘ್ನ
ಬೆಳ್ತಂಗಡಿಯ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾಮಗಾರಿ ನ.ಪಂ.ನ ಚುನಾ ವಣೆಗೆ ಮೊದಲೇ ಅಂದರೆ ಕಳೆದ ಅಕ್ಟೋಬರ್ ನಲ್ಲೇ ಆರಂಭಗೊಂಡಿತ್ತು. ಬಳಿಕ ಅದು ಶೌಚಾಲಯದ ಪಕ್ಕದಲ್ಲಿ ನಿರ್ಮಾಣವಾಗುತ್ತಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಅದಕ್ಕೆ ಬೆಳ್ತಂಗಡಿ ನಗರದಲ್ಲಿ ಬೇರೆ ಕಡೆ ಸ್ಥಳವಿದೆಯೇ ಎಂದು ಪರಿಶೀಲಿಸಿದಾಗ ಸೂಕ್ತ ಸ್ಥಳ ಸಿಗದೇ ಹಿಂದಿನ ಸ್ಥಳದಲ್ಲೇ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಆದರೆ ಈಗ ಕಾಮಗಾರಿ ಆರಂಭಗೊಂಡು 2 ತಿಂಗಳು ಕಳೆದರೂ ಇನ್ನೂ ಅಡಿಪಾಯದ ಕಾಮಗಾರಿಯೂ ಪೂರ್ತಿಗೊಂಡಿಲ್ಲ.
ಕಾಮಗಾರಿ
ಆರಂಭದಲ್ಲಿ ಸೈಟ್ ಕ್ಲಿಯರೆನ್ಸ್ ಇಲ್ಲದೆ ಕ್ಯಾಂಟೀನ್ ನಿರ್ಮಾಣ ವಿಳಂಬವಾಗಿದ್ದು, ಪ್ರಸ್ತುತ ಗುತ್ತಿಗೆ ವಹಿಸಿಕೊಂಡ ಸಂಸ್ಥೆ ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಕ್ರೇನ್ ತರುವು ದಕ್ಕೆ ಅನಾನುಕೂಲವಾಗಿ ಬೆಳ್ತಂಗಡಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅಲ್ಲಿ ಕಾಮಗಾರಿ ಮುಗಿದು ಮುಂದಿನ 15 ದಿನಗಳಲ್ಲಿ ಅವರು ಬೆಳ್ತಂಗಡಿಗೆ ಆಗಮಿಸುವ ಸಾಧ್ಯತೆ ಇದೆ.
– ಡಿ. ಸುಧಾಕರ್
ಮುಖ್ಯಾಧಿಕಾರಿ, ಬೆಳ್ತಂಗಡಿ ನ.ಪಂ.
ಕಿರಣ್ ಸರಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.