ಖರ್ಗೆ ವಿರುದ್ಧ ಗೆದ್ದು ಇತಿಹಾಸ ಸೃಷ್ಟಿಸುವೆ
Team Udayavani, Mar 7, 2019, 1:34 AM IST
ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರೇಮದ ವಿರುದ್ದ ಸಿಡಿದೆದ್ದು ಅವರ ವಿರುದ್ಧವೇ ಚುನಾವಣೆಯಲ್ಲಿ ಸ್ಪರ್ಧಿಸಲು
ಚಿಂಚೊಳ್ಳಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿರುವ ಉಮೇಶ್ ಜಾಧವ್, ಲೋಕಸಭಾ
ಚುನಾವಣೆಯಲ್ಲಿ ಕಲಬುರಗಿಯಲ್ಲಿ ಇತಿಹಾಸ ಸೃಷ್ಟಿಸುವ ಬಯಕೆ ಹೊಂದಿದ್ದಾರೆ. ಪಕ್ಷ ತೊರೆಯಲು ಕಾರಣ
ಹಾಗೂ ಮುಂದಿನ ಯೋಜನೆಯ ಬಗ್ಗೆ “ಉದಯವಾಣಿ’ಯೊಂದಿಗೆ ಅವರು ಮನ ಬಿಚ್ಚಿ ಮಾತನಾಡಿದ್ದಾರೆ.
ರಾಜೀನಾಮೆ ಅಂಗೀಕಾರವಾಗುವ ಮೊದಲೇ ಬಿಜೆಪಿ ಸೇರಿದ್ದೀರಲ್ಲಾ?
ನನಗೆ ಸಭಾಧ್ಯಕ್ಷರ ಮೇಲೆ ಸಂಪೂರ್ಣ ನಂಬಿಕೆ ಇದೆ. ನಾನು ಎರಡು ಬಾರಿ ಸಭಾಧ್ಯಕ್ಷರ ಕಚೇರಿಗೆ ಹೋಗಿದ್ದೆ. ಶಿವರಾತ್ರಿ ದಿನ ಅವರ ಮನೆಗೆ ತೆರಳಿದ್ದೆ. ತಕ್ಷಣ ನನ್ನ ರಾಜೀನಾಮೆ ಪತ್ರ ತೆಗೆದುಕೊಂಡು ತಮ್ಮ ಕಾರ್ಯದರ್ಶಿಗೆ ಫೋನ್ ಮಾಡಿ, ಯಾರಿಗೂ ಅನ್ಯಾಯವಾಗದಂತೆ ನ್ಯಾಯ ಕೊಡಬೇಕು ಎಂದು ಸೂಚಿಸಿದರು. ಅವರು ಯಾವುದೇ ರಾಜಕೀಯ ಮಾತನಾಡ ಲಿಲ್ಲ. ನನಗೆ ಎರಡು ದೋಸೆ ತಿನಿಸಿ, ಅತಿಥಿ ಸತ್ಕಾರ ಮಾಡಿದರು.ಅಂತಹ ಅತಿಥಿ ಸತ್ಕಾರ ಕಲಬುರಗಿಯಲ್ಲಿ ಯಾರೂ ಮಾಡಿಲ್ಲ. ಅವರೇ ನನ್ನನ್ನು ಕಾರಿನವರೆಗೂ ಬಂದು ಬಿಟ್ಟು ಹೋದರು.
ಕಾಂಗ್ರೆಸ್‌ನಲ್ಲಿ ನಿಮಗೆ ಯಾರಿಂದ ಅನ್ಯಾಯ ಆಯಿತು?
ನಾನು ಅದನ್ನು ಬಹಿರಂಗವಾಗಿ ಹೇಳುವುದಿಲ್ಲ. ಜಿಲ್ಲೆಯಲ್ಲಿ ಒಳ್ಳೆಯ ವಾತಾವರಣ ಇರಲಿಲ್ಲ. ನನ್ನ ಕೇಳದೆ ಜಿಲ್ಲಾಧ್ಯಕ್ಷರ ನೇಮಕ, ತಾಲೂಕು ಸಮಿತಿ ಅಧ್ಯಕ್ಷರ ನೇಮಕ ಮಾಡಲಾಗುತ್ತಿತ್ತು. ನನ್ನನ್ನು ಯಾವುದಕ್ಕೂ ಪರಿಗಣಿಸುತ್ತಿರಲಿಲ್ಲ.
ಯಾರ ಮೇಲೆ ನಿಮ್ಮ ಕೋಪ?
ಜಿಲ್ಲಾಧ್ಯಕ್ಷರು ಯಾರ ಮಾತು ಕೇಳಿ ಕೆಲಸ ಮಾಡುತ್ತಾರೆ ಹೇಳಿ?.ಇಂದು ಕಾಂಗ್ರೆಸ್ ಒಬ್ಬ ನಿಷ್ಠಾವಂತ ನಾಯಕನನ್ನು ಕಳೆದುಕೊಂ ಡಿದೆ. ನಾನು ಪಕ್ಷದಿಂದ ಯಾವುದೇ ನಿರೀಕ್ಷೆ ಮಾಡದೆ ಎಲ್ಲ ಕಾರ್ಯಕ್ರಮಗಳಿಗೆ ಕ್ಷೇತ್ರದಿಂದ ಕಾರ್ಯಕರ್ತರನ್ನು ಕರೆದು ಕೊಂಡು ಹೋಗುತ್ತಿದ್ದೆ. ಬಿಜೆಪಿ ವಿರುದ್ಧ ವೇದಿಕೆ ಮೇಲೆಯೇ ಜಗಳವಾಡಿದ್ದೇನೆ. ಆದರೆ, ಯಾವುದಕ್ಕೂ ಬೆಲೆ ಕೊಡಲಿಲ್ಲ. ಅಭಿವೃದಿಟಛಿ ಕಾರ್ಯಗಳಿಗಂತೂ ನನಗೆ ಬೆಲೆಯನ್ನೇ ಕೊಡಲಿಲ್ಲ. ಕ್ಷೇತ್ರದ ಯೋಜನೆಗಳಿಗೆ ಒಪ್ಪಿಗೆಯನ್ನೇ ನೀಡುತ್ತಿರಲಿಲ್ಲ.
ಮಂತ್ರಿ ಸ್ಥಾನ ಸಿಗಲಿಲ್ಲ ಅಂತ ರಾಜೀನಾಮೆ ಕೊಟ್ಟಿದ್ದೀರಾ?
ಮಂತ್ರಿ ಆಗಬೇಕು ಎಂಬ ಆಸೆ ಇರಲಿಲ್ಲ. ಶಾಸಕನಾಗಿಯೆ ನಾನು ಖುಷಿಯಾಗಿದ್ದೆ. ಚಿಂಚೊಳ್ಳಿ ಕ್ಷೇತ್ರದಿಂದ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದಾರೆ. ವೈಜನಾಥ್ ಪಾಟೀಲ್ ಸಚಿವರಾಗಿದ್ದಾರೆ. ನಾನು ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂತರದಿಂದ ಜಯ ಗಳಿಸಿದ್ದೇನೆ. ಆದರೆ, 2 ಸಾವಿರ ಅಂತರದಿಂದ ಗೆದ್ದವನಿಗೆ ಮಂತ್ರಿ ಸ್ಥಾನ ನೀಡಿದ್ದಾರೆ.
ನೀವು ಯಾರದೋ ಮೇಲಿನ ಸಿಟ್ಟಿಗೆ ಈ ರೀತಿಯ ನಿರ್ಧಾರ ತೆಗೆದುಕೊಂಡೆ ಎಂದು ಅನಿಸುತ್ತಿಲ್ಲವಾ?
ನನಗೆ ಯಾವುದೇ ವಿಷಾದವಿಲ್ಲ. ನಾನೂ ಇನ್ನೂ ಹತ್ತು-ಹದಿನೈದು ವರ್ಷ ಇದೇ ವ್ಯವಸ್ಥೆಯಲ್ಲಿ ಇರಬೇಕಿತ್ತು. ನನಗೆ ಆ್ಯಕ್ಸಿಡೆಂಟ್ ಆಗಿದ್ದಾಗ ಯಾವುದೇ ರೀತಿಯ ಕರೆ ಮಾಡಿ ಸಮಾಧಾನದ ಮಾತು ಕೂಡ ಆಡಲಿಲ್ಲ.
ಬಿಜೆಪಿ ಮೇಲ್ವರ್ಗದವರ ಪಕ್ಷ ಎಂಬ ಆರೋಪ ಇದೆ. ಅಲ್ಲಿ ನಿಮಗೆ ನ್ಯಾಯ ಸಿಗುತ್ತದೆ ಅನ್ನುವ ನಂಬಿಕೆ ಇದಿಯಾ ?
ಬಿಜೆಪಿಯಲ್ಲಿ ಈಡಿಗ ಸಮುದಾಯದ ಮಾಲಿಕಯ್ಯ ಗುತ್ತೇದಾರ್ ಇದ್ದಾರೆ. ಕೋಲಿ ಸಮುದಾಯದ ಬಾಬುರಾವ್ ಚಿಂಚನ ಸೂರ್ ಇದ್ದಾರೆ. ಗೋವಿಂದ ಕಾರಜೋಳ ಹಾಗೂ ಬಂಜಾರಾ ಸಮುದಾಯದ ಅನೇಕ ನಾಯಕರಿದ್ದಾರೆ. ಇದನ್ನು ಹೇಗೆ ಮೇಲ್ವರ್ಗದವರ ಪಕ್ಷ ಎಂದು ಹೇಳುತ್ತೀರಿ. ರೇವು ನಾಯಕ್ ಬೆಳಮಗಿ ಅವರನ್ನು ಬಿಜೆಪಿಯಿಂದ ಮಂತ್ರಿ ಮಾಡಿದ್ದರು.
ನೀವು ಆಪರೇಷನ್ ಕಮಲಕ್ಕೆ ಬಲಿಯಾಗಿದ್ದೀರಿ ಎಂದು ಆರೋಪ ಮಾಡುತ್ತಿದ್ದಾರಲ್ಲಾ?
ನನ್ನ ಮೇಲೆ ಆರೋಪ ಮಾಡುವವರ ಮೇಲೆಯೂ ಸಾಕಷ್ಟು ಆರೋಪ ಇದೆ. ನಾನು ಅವರ ಮಟ್ಟಕ್ಕೆ ಕೆಳಗೆ ಇಳಿಯುವುದಿಲ್ಲ. ನಾನು ಸಣ್ಣ ಮನೆಯಲ್ಲಿ ಬದುಕುತ್ತಿದ್ದೇನೆ. ನನ್ನ ಮನೆಗೆ ಬಂದು ನೋಡಿ, ನನ್ನ ಜೀವನ ಶೈಲಿ ಹೇಗಿದೆ ಎಂದು. ನಮ್ಮ ಮನೆಯಲ್ಲಿ ಎರಡು ಬಾತ್‌ರೂಂ ಇವೆ. ದೊಡ್ಡ ಕುಟುಂಬ ಇದೆ. ಬೆಳಿಗ್ಗೆ ಎದ್ದರೆ, ಎಲ್ಲರೂ ಕ್ಯೂನಲ್ಲಿ ನಿಲ್ಲುವಂತಹ ಪರಿಸ್ಥಿತಿ ಇದೆ. ನಾನು ಐಷಾರಾಮಿ ಜೀವನ ಮಾಡುತ್ತಿಲ್ಲ. ನಮ್ಮದು ಲೆಕ್ಕಾಚಾರದ ಬದುಕು. ಆರೋಪ ಮಾಡುವವರು ಸೂಕ್ತ ದಾಖಲೆ ತೋರಿಸಬೇಕು. ನಮ್ಮ ಹಿಂದೆ ಯಾರೂ ಇಲ್ಲ ಎಂದು ಈ ರೀತಿ ಮಾತನಾಡುತ್ತಾರೆ. ನಮ್ಮ ಮನೆಯ ಮುಂದೆ ಪ್ರತಿಭಟನೆ ಮಾಡಿದವರು, ರಮೇಶ್ ಜಾರಕಿಹೊಳಿ ಮನೆಯ ಮುಂದೆ ಏಕೆ ಮಾಡಲಿಲ್ಲ. ಇದೊಂದು ರೀತಿ ಜಾತಿ ನಿಂದನೆಯೇ ಆಗುತ್ತದೆ.
ಬಿಜೆಪಿಯಿಂದ ನಿಮಗೆ ಟಿಕೆಟ್ ಸಿಗುವ ಭರವಸೆ ಇದೆಯಾ?
ನಾನು ಯಾವುದೇ ಷರತ್ತು ಹಾಕದೆ ಬಿಜೆಪಿ ಸೇರಿದ್ದೇನೆ. ಆ ಪಕ್ಷ ದಲ್ಲಿ ಸಮಿತಿಗಳಿವೆ. ಅವರು ಟಿಕೆಟ್ ನೀಡುವ ಬಗ್ಗೆ ತೀರ್ಮಾನ ಮಾಡುತ್ತಾರೆ. ನನಗೆ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆ ಇದೆ.
ಬಿಜೆಪಿಯಿಂದ ಟಿಕೆಟ್ ಸಿಗದೆ ಹೋದರೆ ಏನು ಮಾಡುತ್ತೀರಿ?
ನಾನು ನಂಬಿಕೆಯ ಮೇಲೆ ಬದುಕಿದ್ದೇನೆ. ಎಲ್ಲವನ್ನೂ ಬಾಂಡ್ ಪೇಪರ್ ಮೇಲೆ ಬರೆಯಿಸಿಕೊಂಡು ಮಾಡುವ ಅಗತ್ಯವಿಲ್ಲ.
ಮೋದಿಯವರೇ ಕಲಬುರಗಿಗೆ ಬಂದರೂ, ರಾಜ್ಯ ನಾಯಕರೇ ನಿಮ್ಮನ್ನು ಸೇರಿಸಿಕೊಂಡಿದ್ದೇಕೆ?
ನಾನು ಬಿಜೆಪಿಗೆ ಸೇರ್ಪಡೆಯಾಗುವಾಗ ಮೂವರು ಮಾಜಿ ಮುಖ್ಯಮಂತ್ರಿಗಳು, ಮಾಜಿ ಉಪ ಮುಖ್ಯಮಂತ್ರಿ ಹಾಜರಿದ್ದರು. ಸಮಯದ ಹೊಂದಾಣಿಕೆಗಾಗಿ ಆ ರೀತಿ ಮಾಡಿದ್ದಾರೆ. ಮೋದಿಯವರಿಗೆ ಸನ್ಮಾನ ಮಾಡಲು ನನಗೆ ಅವಕಾಶ ನೀಡಿದ್ದರು.
ಖರ್ಗೆಯವರೇ ನಿಮ್ಮ ಮಾರ್ಗದರ್ಶಕರು ಎಂದುಕೊಂಡಿದ್ರಿ, ಈಗ ಅವರ ವಿರುದ್ಧ ಏಕೆ ತಿರುಗಿ ಬಿದ್ದಿದ್ದೀರಿ?
ಹೌದು, ಧರ್ಮಸಿಂಗ್ ಹೋದ ಮೇಲೆ ಖರ್ಗೆಯವರೇ ನಮ್ಮ ಮಾರ್ಗದರ್ಶಕರು ಎಂದು ತಿಳಿದುಕೊಂಡಿದ್ದೆ. ಅವರ ಮೇಲೆ ನನಗೆ ಸಿಟ್ಟಿಲ್ಲ. ಬಂಜಾರಾ ಸಮಾಜದಲ್ಲಿ ಇದುವರೆಗೂ ಯಾರೂ ಸಂಸತ್ತಿಗೆ ಹೋಗಿಲ್ಲ. ಸ್ವಾತಂತ್ರ್ಯ ಬಂದ ಮೇಲೆ ನಮ್ಮ ಸಮುದಾಯದವರು ಯಾರಾದರೂ ಸಂಸದರಾಗಬೇಕು ಎಂಬ ಕನಸಿದೆ. ಅದಕ್ಕಾಗಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ.
ಖರ್ಗೆ ವಿರುದ್ಧ ಸ್ಪರ್ಧೆ ಮಾಡಿದ್ರೆ, ಗೆಲ್ಲುವ ವಿಶ್ವಾಸ ಇದೆಯಾ?
ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸ ಇದೆ. ಕ್ಷೇತ್ರದಲ್ಲಿ ಇಂದು ಹಬ್ಬದ ವಾತಾವರಣ ಇತ್ತು. ಎಲ್ಲಾ ಸಮುದಾಯದವರು ನನ್ನೊಂದಿಗೆ ಇದ್ದಾರೆ. ನಾನು ಅತ್ಯಂತ ಸರಳ ಸಜ್ಜನ ವ್ಯಕ್ತಿ. ಯುವಕರು ನನ್ನೊಂದಿಗೆ ಇದ್ದಾರೆ. ಇತಿಹಾಸ ನಿರ್ಮಾಣವಾಗುತ್ತದೆ ಎನ್ನುವ ನಂಬಿಕೆ ಇದೆ.
ಸಂದರ್ಶನ: ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.