ಹೊಸ ದರನೀತಿ: ಮುಗಿಯದ ಗೊಂದಲ
Team Udayavani, Mar 11, 2019, 12:30 AM IST
ಟ್ರಾಯ್ ನಿಗದಿಪಡಿಸಿರುವಂತೆ ಕೇಬಲ್ ಅಥವಾ ಡಿಷ್ ಗ್ರಾಹಕ ತಿಂಗಳಿಗೆ 130 ರೂ. ಕನಿಷ್ಠ ಶುಲ್ಕವನ್ನು ಕಟ್ಟಲೇಬೇಕು. ಇಷ್ಟು ಮೊತ್ತ ನೀಡಿದ್ದಕ್ಕೆ ಸೇವಾದಾತ 100 ಚಾನೆಲ್‌ಗಳ ಸೇವೆಯನ್ನು ಕೊಡಬೇಕು. ಇದರ ಆಯ್ಕೆಯನ್ನು ಮಾಡಿಕೊಳ್ಳುವಲ್ಲಿ ಗ್ರಾಹಕನಿಗೆ ಸ್ವಾತಂತ್ರ್ಯವಿದೆ. ಡಿಡಿ ಡೈರೆಕ್ಟ್‌ನ ಕಡ್ಡಾಯ 24 ಚಾನೆಲ್ ಹೊರತಾಗಿ ಉಳಿದ 76ನ್ನು ಗ್ರಾಹಕ ಸೆಲೆಕ್ಟ್ ಮಾಡಬಹುದು.
ಡಿಟಿಎಚ್ ಹಾಗೂ ಕೇಬಲ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿರುವ ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ ಟ್ರಾಯ್‌ನ ಹೊಸ ದರ ನೀತಿ ಸಾಕಷ್ಟು ಗೊಂದಲಗಳನ್ನೂ ಹುಟ್ಟು ಹಾಕಿದೆ. ಇದೇ ಅಂಕಣದಲ್ಲಿ ಈಗಾಗಲೇ ಮೂರು ಬಾರಿ ಈ ದರ ನೀತಿಯ ಬಗ್ಗೆ ವಿಶ್ಲೇಷಣೆ ನಡೆಸಿದ್ದರೂ ಜನರ ಗೊಂದಲಗಳು ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚು ಜನರಿಗೆ ಸರಳವಾಗಿ ಅರ್ಥವಾಗುವಂತೆ, ಸಾಮಾನ್ಯ ಜನರಲ್ಲಿ ಮೂಡುವ ಈ ಪ್ರಶ್ನೆಗಳನ್ನೇ ಅವಲಂಬಿಸಿ ಈ ಪ್ರಶ್ನೋತ್ತರ ಮಾದರಿಯನ್ನು ನಿಮ್ಮ ಮುಂದಿಡಲಾಗಿದೆ.
ಏನಿದು ಹೊಸ ಕೇಬಲ್ ಡಿಷ್ ದರ ಮಾದರಿ?
ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ ಅರ್ಥಾತ್ ಟ್ರಾಯ್, ಕೇಬಲ್ ಗ್ರಾಹಕರಿಗೆ ಹಾಗೂ ಡೈರೆಕ್ಟ್ ಟು ಹೋಮ್ ಬಳಕೆದಾರರಿಗಾಗಿ ಹೊಸ ದರ ಪಟ್ಟಿಯನ್ನು ಪ್ರಕಟಿಸಿದೆ. ಟ್ರಾಯ್ 2018ರ ಜುಲೈ ಮೂರರಂದೇ ಚಾನೆಲ್‌ಗಳ ಆಯ್ಕೆಯಲ್ಲಿ ಹೊಸ ದರ ಪಟ್ಟಿಯನ್ನು ಜಾರಿಗೆ ತಂದಿತ್ತು. ಈ ಮಾದರಿ 2018ರ ಡಿಸೆಂಬರ್ 30ರಿಂದಲೇ ಅನ್ವಯವಾಗಬೇಕಿತ್ತಾದರೂ ಸಿದ್ಧತೆಗಳ ಕೊರತೆ ಕಾರಣದಿಂದಲೇ ಮೊದಲು 2019ರ ಫೆಬ್ರವರಿವರೆಗೆ ಮತ್ತು ಈಗ ಮಾರ್ಚ್ 31ರವರೆಗೆ ಮುಂದೂಡಲಾಗಿದೆ. ಈ ಮಾರ್ಪಾಡಿನ ನಂತರ ಡಿಷ್ ಕೇಬಲ್‌ಗಳ ದರದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಎರಡೂ ವರ್ಗಕ್ಕೆ ಒಂದೇ ಕಾನೂನು ಅನ್ವಯವಾಗುತ್ತದೆ.
ಹೊಸ ದರದ ಅನ್ವಯ ಪ್ರತಿ ತಿಂಗಳು ಎಷ್ಟು ಬಿಲ್ ಬರುತ್ತದೆ?
ಟ್ರಾಯ್ ನಿಗದಿಪಡಿಸಿರುವಂತೆ ಕೇಬಲ್ ಅಥವಾ ಡಿಷ್ ಗ್ರಾಹಕ ತಿಂಗಳಿಗೆ 130 ರೂ. ಕನಿಷ್ಠ ಶುಲ್ಕವನ್ನು ಕಟ್ಟಲೇಬೇಕು. ಇಷ್ಟು ಮೊತ್ತ ನೀಡಿದ್ದಕ್ಕೆ ಸೇವಾದಾತ 100 ಚಾನೆಲ್‌ಗಳ ಸೇವೆಯನ್ನು ಕೊಡಬೇಕು. ಇದರ ಆಯ್ಕೆಯನ್ನು ಮಾಡಿಕೊಳ್ಳುವಲ್ಲಿ ಗ್ರಾಹಕನಿಗೆ ಸ್ವಾತಂತ್ರ್ಯವಿದೆ. ಡಿಡಿ ಡೈರೆಕ್ಟ್‌ನ ಕಡ್ಡಾಯ 24 ಚಾನೆಲ್ ಹೊರತಾಗಿ ಉಳಿದ 76ನ್ನು ಗ್ರಾಹಕ ಸೆಲೆಕ್ಟ್ ಮಾಡಬಹುದು. ಕೇಬಲ್, ಡಿಷ್‌ನವರು ಉಚಿತ ಚಾನೆಲ್ ಆಯ್ಕೆ ನಮ್ಮದು. ನಾವು ಕೊಟ್ಟಿದ್ದು ನೀವು ನೋಡಬೇಕು ಎನ್ನುತ್ತಿದ್ದಾರೆ. ಅದು ಕಾನೂನು ಬಾಹಿರ. ಮೊದಲ 100ಕ್ಕೆ 130 ರೂ. ಬಾಡಿಗೆ ಹಾಗೂ ಮುಂದಿನ ಪ್ರತಿ 25 ಚಾನೆಲ್ ಸೇವೆಗೆ ಹೆಚ್ಚುವರಿ 20 ರೂ. ಬಾಡಿಗೆ. 100 ಚಾನೆಲ್‌ನಲ್ಲಿ ಉಚಿತದ ಜೊತೆಗೆ ಪೇ ಚಾನೆಲ್ ಕೂಡ ಆಯ್ಕೆ ಮಾಡಿಕೊಳ್ಳಬಹುದು. ಇದೊಂದು ರೀತಿ ಮನೆಯನ್ನು ಬಾಡಿಗೆಗೆ ಪಡೆದುಕೊಂಡಂತೆ. ಈ ಮನೆಯ ಬಾಡಿಗೆ 130 ರೂ. ವಿದ್ಯುತ್, ಎಲೆಕ್ಟ್ರಿಕ್ ಬಿಲ್ ಹೆಚ್ಚುವರಿ ಎನ್ನುವಂತೆ ಪೇ ಚಾನೆಲ್‌ನ ಶುಲ್ಕವನ್ನು ಪ್ರತ್ಯೇಕವಾಗಿ ನೀಡಬೇಕಾಗುತ್ತದೆ. 100 ಚಾನೆಲ್‌ಗಳಲ್ಲಿ 98 ಉಚಿತ ಚಾನೆಲ್ ಹಾಗೂ 19 ರೂ.ನ ಎರಡು ಕನ್ನಡ ಚಾನೆಲ್ ತೆಗೆದುಕೊಂಡವ 130 + 38 + ಶೇ. 18ರ ಜಿಎಸ್‌ಟಿ ಕಟ್ಟಬೇಕಾಗುತ್ತದೆ. ಅದೇ ಮತ್ತೂಬ್ಬ 100 ಉಚಿತ ಚಾನೆಲ್ ಹಾಗೂ ಇದೇ ಎರಡು ಪೇ ಚಾನೆಲ್ ತೆಗೆದುಕೊಂಡರೆ, 130+38+ 100ರ ನಂತರದ ಪ್ರತಿ 25 ಚಾನೆಲ್‌ಗೆ ವೆಚ್ಚವಾಗುವ ಹೆಚ್ಚುವರಿ ಬಾಡಿಗೆ 20 ರೂ. ಹಾಗೂ ಜಿಎಸ್‌ಟಿ ಕಟ್ಟಬೇಕಾಗುತ್ತದೆ.
ಉಚಿತ ಚಾನೆಲ್, ಪೇ ಚಾನೆಲ್, ಬಾಂಕ್ವೆಟ್, ಅ ಲಾ ಕಾರ್ಟೆ ಎಂದೆಲ್ಲ ಹೇಳುವುದು ಏನು?
ಚಾನೆಲ್‌ಗಳಲ್ಲಿ ಎರಡು ಮಾದರಿ ಇದೆ. ವೀಕ್ಷಕ ಯಾವುದೇ ಮಾಸಿಕ ಶುಲ್ಕ ನೀಡದೆ ವೀಕ್ಷಿ$ಸಬಹುದಾದ ಚಾನೆಲ್‌ಗಳು. ಭಾರತದಲ್ಲಿ ಸುಮಾರು 564 ಫ್ರೀ ಚಾನೆಲ್‌ಗಳು ಪ್ರಸಾರವಾಗುತ್ತಿವೆ. ಡಿಡಿ ಡೈರೆಕ್ಟ್ ಮೂಲಕ ಪ್ರಸಾರವಾಗುವ 24 ಚಾನೆಲ್ ಕೂಡ ಸಂಪೂರ್ಣ ಉಚಿತ. ಬಹುತೇಕ ಕನ್ನಡದ ಸುದ್ದಿ ಚಾನೆಲ್‌ಗಳು ಉಚಿತವಾಗಿಯೇ ಲಭಿಸುತ್ತವೆ. ಉಳಿದಂತೆ 10 ಪೈಸೆ, 25 ಪೈಸೆ ಮಾಸಿಕ ಬಾಡಿಗೆಯಿಂದ ಆರಂಭಿಸಿ 19 ರೂ.ವರೆಗಿನ ಹತ್ತು ಹಲವು ಚಾನೆಲ್‌ಗಳನ್ನು ಪೇ ಚಾನೆಲ್ ಎನ್ನಲಾಗುತ್ತದೆ. ಸೇವಾದಾತ ಅಥವಾ ಚಾನೆಲ್‌ಗಳ ನಿರ್ಮಾಣ ಸಂಸ್ಥೆ ತಾನು ಒದಗಿಸುವ ಪೇ ಚಾನೆಲ್‌ಗಳ ಕೋಂಬೋ ಆಫರ್‌ಅನ್ನು ಮಾಡಿ ಜನರಿಗೆ ನೀಡಬಹುದು. ಇದನ್ನು ಟ್ರಾಯ್ ಭಾಷೆಯಲ್ಲಿ ಬಾಂಕ್ವೆಟ್ ಎನ್ನಲಾಗುತ್ತದೆ. ಕಲರ್ ಸೂಪರ್‌ನ 10 ಚಾನೆಲ್‌ಗಳನ್ನು ಬಿಡಿ ಬಿಡಿಯಾಗಿ ಖರೀದಿಸಿದ್ದರೆ ನಿಮಗೆ 60 ರೂ. ಬೀಳುತ್ತಿತ್ತು ಎಂದುಕೊಳ್ಳೋಣ. ಒಂದೊಮ್ಮೆ ಕೇವಲ 30 ರೂ.ಗೆ ಈ ಚಾನೆಲ್‌ಗಳಿರುವ ಬಾಂಕ್ವೆಟ್ ಸಿಕ್ಕರೆ ಲಾಭ ತಾನೆ? ಇಲ್ಲಿ ಎರಡು ಮೂರು ನಿಯಮಗಳಿವೆ. ಬಾಂಕ್ವೆಟ್‌ನಲ್ಲಿ ಅಡಕವಾಗುವ ಚಾನೆಲ್‌ಗಳ ಬಿಡಿ ದರ 19 ರೂ.ಗಿಂತ ಹೆಚ್ಚಿರುವಂತಿಲ್ಲ. ಒಂದೇ ಬಾಂಕ್ವೆಟ್‌ನಲ್ಲಿ ಒಂದು ಚಾನೆಲ್‌ನ ಎಸ್‌ಡಿ ಹಾಗೂ ಹೆಚ್‌ಡಿ ಮಾದರಿಗಳನ್ನು ಸೇರಿಸುವಂತಿಲ್ಲ. ಏಕಾಏಕಿ ಒಂದು ಚಾನೆಲ್‌ನ ದರ ಏರಿಕೆ ಮಾಡುವಂತಿಲ್ಲ. ಒಟ್ಟೂ ಬಾಂಕ್ವೆಟ್‌ನ ದರ, ಬಿಡಿ ಚಾನೆಲ್‌ಗಳನ್ನು ಖರೀದಿಸುವ ಚಂದಾ ಮೊತ್ತಕ್ಕಿಂತ ಜಾಸ್ತಿ ಇರುವಂತಿಲ್ಲ. ಕಲರ್ ಸೂಪರ್‌ನ ಬಿಡಿ ಚಾನೆಲ್ ಕೊಂಡರೆ 10ಕ್ಕೆ 60ರೂ. ಬೀಳುವುದಾದರೆ ಬಾಂಕ್ವೆಟ್‌ಗೆ 60 ರೂ.ಗಿಂತ ಕಡಿಮೆ ಮೊತ್ತ ಇರಿಸಲೇಬೇಕು.
ಚಾನೆಲ್ ಆಯ್ಕೆಗೆ “ಲಾಕ್ ಇನ್ ಪೀರಿಯಡ್’ ಇದೆಯೇ?
ಆಯ್ಕೆ ಮಾಡಿಕೊಂಡ ಚಾನೆಲ್‌ಗೆ ಕನಿಷ್ಠ ಇಷ್ಟು ಅವಧಿಗೆ ಚಂದಾದಾರರಾಗಿರಲೇಬೇಕು ಎಂಬುದು ಲಾಕಿನ್ ಪೀರಿಯಡ್. ಈ ಹಿಂದೆ ಒಂದು ತಿಂಗಳ ಮಟ್ಟಿಗೆ ಐಪಿಎಲ್‌ನಲ್ಲಿ ಸೋನಿ ಸೆಟ್ ಮ್ಯಾಕ್ಸ್ ಬೇಕಾಗಿದೆ ಎಂದರೂ ಲಾಕ್ ಇನ್ ಪೀರಿಯಡ್ ಮೂರು ತಿಂಗಳು ಇರುತ್ತಿತ್ತಾದ್ದರಿಂದ ಅಷ್ಟು ತಿಂಗಳಿಗೆ ತಗಲುವ ವೆಚ್ಚವನ್ನು ಗ್ರಾಹಕ ಭರಿಸಲೇಬೇಕಾಗುತ್ತಿತ್ತು. ಈಗ ಈ ಲಾಕ್ ಇನ್ ಪಿರಿಯಡ್ ಕೇವಲ ಒಂದು ತಿಂಗಳು ಮಾತ್ರ. ಅದಕ್ಕಿಂತ ಮುಖ್ಯವಾಗಿ ಚಾನೆಲ್‌ನವರು ಕ್ರಿಕೆಟ್ ಲೈವ್ ಸಮಯದಲ್ಲಿ ಚಾನೆಲ್‌ನ ಬೆಲೆಯನ್ನು ಬೇಕಾಬಿಟ್ಟಿ ಏರಿಸಲು ಈಗ ಅವಕಾಶವಿಲ್ಲ. ಮೇಲೆ ತಿಳಿಸಿದ ಬೆಸ್ಟ್ ಫಿಟ್ ಪ್ಲಾನ್‌ಗೆ ಲಾಕ್ ಇನ್ ಪೀರಿಯಡ್ ನಿಯಮ ಅನ್ವಯಿಸುವುದಿಲ್ಲ. ಗ್ರಾಹಕ ಯಾವಾಗ ಬೇಕಾದರೂ ತನ್ನ ಇಷ್ಟದ ಚಾನೆಲ್ ಪ್ಯಾಕ್ ರೂಪಿಸಿಕೊಳ್ಳಬಹುದು.
ಈಗಿನ ಪರಿಸ್ಥಿತಿಯಿಂದ ಯಾರಿಗೆ ಲಾಭ?
ಪ್ರಸ್ತುತದ ವ್ಯವಸ್ಥೆ ಬದಲಾಗುವುದು ನಿಶ್ಚಿತ. ಕಡಿಮೆ ದರದ ಚಾನೆಲ್‌ಗಳಾಗಿದ್ದೂ ಗುಣಮಟ್ಟದಲ್ಲಿ ಸುಧಾರಿಸಿಕೊಳ್ಳದಿದ್ದರೆ ಅವುಗಳ ಜನಪ್ರಿಯತೆ ಕುಸಿದು ಫ್ರೀ ಚಾನೆಲ್‌ಗಳಾಗುವ ಸಾಧ್ಯತೆ ಇದೆ. ಅದಕ್ಕಿಂತ ಮುಖ್ಯವಾಗಿ ಹೆಚ್ಚು ಜಾಹೀರಾತು ಆದಾಯ, ಅಧಿಕ ಟಿಆರ್‌ಪಿ ಹೊಂದಿರುವ ಚಾನೆಲ್‌ಗಳು ಗರಿಷ್ಠ 19 ರೂ. ದರ ಹೊಂದಿರುವುದು ಪ್ರಶ್ನಾರ್ಹ, ವಿವಿಧ ಮಾಧ್ಯಮಗಳಲ್ಲಿ ಜನ ಇದನ್ನು ಪ್ರಶ್ನಿಸಬೇಕಾಗಿದೆ. ದರ ಸಮರದ ವಾತಾವರಣ ಸೃಷ್ಟಿಯಾಗುವ ಎಲ್ಲ ಸಾಧ್ಯತೆಗಳಿದ್ದು ಮುಂದಿನ ಆರು ತಿಂಗಳ ನಂತರ ಜನರಿಗೆ ಕೈಗೆಟುಕುವ ದರದಲ್ಲಿ ಚಾನಲ್ ಶುಲ್ಕ ಇಳಿಯಲಿದೆ ಎಂದು ಈ ಕ್ಷೇತ್ರದ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಚಾನೆಲ್‌ಗಳನ್ನು ಆಯ್ಕೆ ಮಾಡಿಕೊಳ್ಳದಿದ್ದರೆ ಏನಾದೀತು?
ಈಗಿನ ಹಂತದಲ್ಲಿ ಚಾನೆಲ್‌ಗಳ ಆಯ್ಕೆಯ ಕ್ರಮಗಳು ಗ್ರಾಹಕ ಸ್ನೇಹಿಯಾಗಿಲ್ಲ. ಅದರಿಂದಾಗಿಯೇ ನಿಗದಿತ ದಿನಾಂಕದೊಳಗೆ ಈ ಪ್ರಕ್ರಿಯೆ ಮುಗಿಸಲು ಸೇವಾದಾತರಿಗೆ ಸಾಧ್ಯವಾಗಿಲ್ಲ. ಇದೇ ಕಾರಣದಿಂದ ಮಾರ್ಚ್ 31ರವರೆಗೆ ಹಳೆಯ ಕ್ರಮ ಅನುಸರಿಸಲು ಸೂಚಿಸಲಾಗಿದೆ. ಈ ನಡುವೆ ಟ್ರಾಯ್, ಸೇವಾದಾತರಿಗೆ ಒಂದು ಸೂಚನೆ ನೀಡಿದೆ. ಹಳೆಯ ಪದ್ಧತಿಯಲ್ಲಿ ಗ್ರಾಹಕ ಆಯ್ಕೆ ಮಾಡಿಕೊಂಡ ಚಾನೆಲ್‌ಗಳನ್ನೇ ಒಳಗೊಂಡ “ಬೆಸ್ಟ್ ಫಿಟ್ ಪ್ಲಾನ್’ಅನ್ನು ಪ್ರಕಟಿಸಬೇಕು. ಆ ಮೂಲಕ ಗ್ರಾಹಕನ ಅಗತ್ಯದ ಚಾನೆಲ್ ಸೇವೆ ಮುಂದುವರೆಯಬೇಕು ಎಂದು ಸಲಹೆ ನೀಡಿದೆ.
– ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರಳಾಸ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Belthangady: ಕಡೆಗೂ ಬಂತು ಇಂದಿರಾ ಕ್ಯಾಂಟೀನ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.