ಶಾಲಾ ವಾಹನ ಚಾಲಕನ ಕೊಲೆ
Team Udayavani, Mar 12, 2019, 6:36 AM IST
ಬೆಂಗಳೂರು: ಆಟೋದಲ್ಲಿ ಕುಳಿತು ಸಹೋದರನ ಜತೆ ಮದ್ಯ ಸೇವಿಸುತ್ತಿದ್ದ ಖಾಸಗಿ ಶಾಲಾ ವಾಹನ ಚಾಲಕನನ್ನು ಇಬ್ಬರು ದುಷ್ಕರ್ಮಿಗಳು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ಕೊಂದ ಘಟನೆ ಬೈಯಪ್ಪನಹಳ್ಳಿ ಠಾಣೆ ವ್ಯಾಪ್ತಿಯ ಜಿ.ಎಂ.ಪಾಳ್ಯದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಮಲ್ಲೇಶಪಾಳ್ಯ ನಿವಾಸಿ ವೆಂಕಟೇಶ್ (29) ಕೊಲೆಯಾದ ಚಾಲಕ. ಕೃತ್ಯ ಎಸಗಿರುವ ಜಿ.ಎಂ.ಪಾಳ್ಯ ನಿವಾಸಿ ಶರವಣ ಹಾಗೂ ಇತರೆ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಖಾಸಗಿ ಶಾಲಾ ವಾಹನ ಚಾಲಕ ವೆಂಕಟೇಶ್, ಬಿಡುವಿನ ವೇಳೆ ಆಟೋ ಚಾಲನೆ ಕೂಡ ಮಾಡುತ್ತಿದ್ದ. ಎರಡು ವರ್ಷಗಳ ಹಿಂದೆ ವಿವಾಹವಾಗಿರುವ ಆತನಿಗೆ 11 ತಿಂಗಳ ಮಗು ಇದೆ. ಇದೇ ತಿಂಗಳು ಮಗುವಿನ ಮೊದಲ ವರ್ಷದ ಹುಟ್ಟುಹಬ್ಬ ಇದ್ದು, ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆಸಿದ್ದ. ಈ ನಡುವೆ ಭಾನುವಾರ ರಾತ್ರಿ 12.30ರ ಸುಮಾರಿಗೆ ಸಹೋದರ ಸುಂದರ್ ಹಾಗೂ ಸಹೋದರಿಯ ಪತಿ ಜತೆ ಜಿ.ಎಂ.ಪಾಳ್ಯದ 4ನೇ ಕ್ರಾಸ್ ಬಳಿ ಆಟೋದಲ್ಲಿ ಕುಳಿತು ಕಾರ್ಯಕ್ರಮ ಕುರಿತು ಮಾತನಾಡಿದ್ದಾರೆ.
ಬಳಿಕ ಬಾರ್ ಒಂದರಿಂದ ಬಿಯರ್ ತಂದು ಆಟೋದಲ್ಲೇ ಕುಳಿತು ಮೂವರೂ ಕುಡಿಯುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಸ್ನೇಹಿತನ ಜತೆ ಬಂದ ಶರವಣ, ವೆಂಕಟೇಶ್‌ಗೆ ಇಲ್ಲಿ ಯಾರಾದರೂ ಮೆಕಾನಿಕ್ ಇದ್ದಾರಾ ಎಂದು ಪ್ರಶ್ನಿಸಿದ್ದಾನೆ. ಮದ್ಯದ ಅಮಲಿನಲ್ಲಿದ್ದ ವೆಂಕಟೇಶ್ ಇಷ್ಟೋತ್ತಿನಲ್ಲಿ ಮೆಕಾನಿಕ್ ಯಾರು ಸಿಗುವುದಿಲ್ಲ. ಮನೆಗೆ ಹೋಗಿ ಎಂದಿದ್ದಾನೆ.
ಇಷ್ಟಕ್ಕೇ ಆಕ್ರೋಶಗೊಂಡ ಶರವಣ, ವೆಂಕಟೇಶ್ ಜತೆ ವಾಗ್ಧಾದ ನಡೆಸಿದ್ದಾನೆ. ಶರವಣ ಹಾಗೂ ವೆಂಕಟೇಶ್, ಸಹೋದರ ಸುಂದರ್ ನಡುವೆ ಮಾತಿನ ಚಕಮಕಿ ನಡೆದಿದೆ. ಒಂದು ಹಂತದಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಕೋಪಗೊಂಡ ಶರವಣ, ಆಟೋದಲ್ಲಿದ್ದ ಬಿಯರ್ ಬಾಟಲಿಯಿಂದ ವೆಂಕಟೇಶ್ ತಲೆಗೆ ಬಲವಾಗಿ ಹೊಡೆದಿದ್ದು, ತೀವ್ರ ರಕ್ತಸ್ರಾವದಿಂದ ವೆಂಕಟೇಶ್ ಕೆಳಗೆ ಬಿದ್ದಿದ್ದಾನೆ. ಗಾಬರಿಗೊಂಡ ಶರವಣ ಹಾಗೂ ಇತರರು ಪರಾರಿಯಾಗಿದ್ದಾರೆ.
ಕೂಡಲೇ ವೆಂಕಟೇಶ್‌ನನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಬೈಯಪ್ಪನಹಳ್ಳಿ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಸಾಧ್ಯತೆಯಿದೆ. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಬಂಧಿಸುವುದಾಗಿ ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೈಕ್‌ಗಳ ಮಧ್ಯೆ ಡಿಕ್ಕಿ: ಸವಾರ 3 ಪಲ್ಟಿ ಹೊಡೆದರೂ ಪಾರು
Metro Rail: ಮೆಟ್ರೋ ಹಳಿಗೆ ಜಿಗಿದ ಏರ್‌ಫೋರ್ಸ್ ನಿವೃತ ಅಧಿಕಾರಿ
Bengaluru: ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾ*ಚಾರ!
Arrested: ಪತ್ನಿ, ಅತ್ತೆ ಮೇಲೆ ಹಲ್ಲೆ; ಆರೋಪಿ ಬಂಧನ
Bengaluru: ಟೆಕಿಯ 1 ತಿಂಗಳು ಡಿಜಿಟಲ್ ಅರೆಸ್ಟ್ ಮಾಡಿ 11.8 ಕೋಟಿ ರೂ. ವಂಚಿಸಿದ ಮೂವರ ಸೆರೆ