ಪ್ರಾಯೋಜಕರಿಲ್ಲದೆ ಸೊರಗುತ್ತಿದೆ ಪ್ರಾಮಾಣಿಕತೆ
Team Udayavani, Mar 14, 2019, 12:30 AM IST
ದಶಕಗಳ ಹಿಂದೆ ಸರಕಾರಿ ಬಸ್ಸುಗಳ ಮೇಲೆ ಮಾತು ಕಡಿಮೆ, ಹೆಚ್ಚು ದುಡಿಮೆ ಎಂದು ಬರೆಸಿತ್ತು ಸರಕಾರ. ಅದಕ್ಕೆ ತದ್ವಿರುದ್ಧವಾಗಿ ಈಗ ಕೆಲಸ ಕಡಿಮೆ, ಪ್ರಚಾರ ಜಾಸ್ತಿ ಎನ್ನುವ ಸ್ಥಿತಿ ನಿರ್ಮಾಣವಾಗುತ್ತಿದೆ.
ಮಾಹಿತಿ ಕ್ರಾಂತಿಯ ವರ್ತಮಾನ ಸಮಯದಲ್ಲಿ ಮಾಹಿತಿಯ ಮೂಲಗಳು ನೂರಾರು ಲಭ್ಯವಿದೆಯಾದರೂ ಅವುಗಳ ಸಾಚಾತನ ಮತ್ತು ವಿಶ್ವಾಸಾರ್ಹತೆಯನ್ನು ಅಳೆಯುವುದು ಸುಲಭವಲ್ಲ. ಸಟೆಯನ್ನು ದಿಟವನ್ನಾಗಿಸುವ ದಕ್ಷತೆ, ಕಳಪೆಯನ್ನು ಉತ್ಕೃಷ್ಟವನ್ನಾಗಿಸುವ ಕುಶಲತೆ ಕರಗತ ಮಾಡಿಸಿಕೊಂಡ ಖದೀಮರು ಸರ್ವಾಂತರ್ಯಾಮಿಯಾಗಿದ್ದಾರೆ. ಯಾವುದೋ ಶರೀರಕ್ಕೆ ಯಾವುದೋ ಶಿರವನ್ನು ಜೋಡಿಸಿ ನಕಲಿ ವಿಡಿಯೋ ಗಳನ್ನು ಜಾಲತಾಣಗಳಿಗೆ ಹಂಚಿ ತಮ್ಮ ವಾದವನ್ನು ಪುಷ್ಟೀಕರಿ ಸುವ ಭೂಪರಿಗೆ ಎಲ್ಲೂ ಕೊರತೆಯಿಲ್ಲ. ಯಾರೋ ಯಾವಾಗಲೋ ನೀಡಿದ ಹೇಳಿಕೆಗಳನ್ನು ಸಂದರ್ಭದ ಹೊರಗೆ ಇನ್ನಾವಗಲೋ ಹರಿಯ ಬಿಟ್ಟು ಜನಾಭಿಪ್ರಾಯಕ್ಕೆ ಹೊಸ ದಿಕ್ಕು ನೀಡುವ ತಂತ್ರ ಹೆಣೆಯುವ ವೃತ್ತಿಪರ ತಂತ್ರಜ್ಞರ ಕುತಂತ್ರವನ್ನು ಅರಿಯುವುದು ಸಾಮಾನ್ಯರಿಗೆ ಅಂದುಕೊಂಡಷ್ಟು ಸುಲಭವಲ್ಲ. ಬ್ರಾಂಡ್ ನೇಮ್ ಪ್ರಚಾರ ಕೇವಲ ಸರಕುಗಳಿಗಷ್ಟೇ ಸೀಮಿತ ವಾಗಿಲ್ಲ. ವ್ಯಕ್ತಿಗಳು, ಸಂಘಟನೆಗಳು, ಸಂಸ್ಥೆಗಳು ಸಹಾ ನಾನಾ ಪ್ರಚಾರ ತಂತ್ರಗಳಿಗೆ ಮೊರೆ ಹೋಗುತ್ತವೆ. ಯಾವುದನ್ನು ನಂಬ ಬೇಕು, ಯಾವುದನ್ನು ಬಿಡಬೇಕು ಎನ್ನುವುದನ್ನು ತೋಚದೇ ನಾವು ಕಕ್ಕಾಬಿಕ್ಕಿಯಾಗಬೇಕಾಗುತ್ತದೆ.
ಒಳ್ಳೆಯ ವಸ್ತುಗಳಿಗೆ ಜಾಹೀರಾತಿನ ಅಗತ್ಯವಿಲ್ಲ ಎಂದಿದ್ದರು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ. ಪ್ರಗತಿಯ ಧಾವಂತದ ಇಂದಿನ ಪ್ರಚಾರ ಯುಗದಲ್ಲಿ ಜಾಹೀರಾತಿಲ್ಲದೆ ಸರಕುಗಳ ಬಿಕರಿಯಾಗದು ಎನ್ನುವ ಸ್ಥಿತಿ ಇದೆ. ನುಣುಪಾದ ಗಲ್ಲಗಳಿಗಾಗಿ ನಮ್ಮ ಕ್ರೀಮ್ ಹಚ್ಚಿಕೊಕೊಳ್ಳಿ ಎಂದೋ, ಹೇಮಮಾಲಿನಿಯ ಗಲ್ಲದಂತಹ ರಸ್ತೆ ನಿರ್ಮಿಸುವ ನನಗೆ ಮತ ನೀಡಿ ಎನ್ನುವ ಮನಸ್ಸನ್ನು ಮರಳುಗೊಳಿಸುವ ಹೇಳಿಕೆಗಳನ್ನು, ಜಾಹೀರಾತನ್ನು ನೋಡಿಕೊಂಡೆ ನಿರ್ಧಾರ ತೆಗೆದುಕೊಳ್ಳುವ ನಾವು ಮೂರ್ಖ ರಾಗುತ್ತಿದ್ದೇವೆ ಎಂದು ನಮಗೆ ಗೊತ್ತಾಗುವುದೇ ಇಲ್ಲ. ಸಮಾಜ ಸೇವೆ,ಸಾಹಿತ್ಯ, ಕಲೆ, ರಾಜಕಾರಣದ ದುರಂಧರರು, ಬಾಬಾಗಳು, ಧಾರ್ಮಿಕ ನಾಯಕರೇ ಮೊದಲಾದ ದೊಡ್ಡ ವ್ಯಕ್ತಿಗಳ ವೈಯಕ್ತಿಕ ರಹಸ್ಯವನ್ನು ಅಗೆಯುತ್ತಾ ಹೋದರೆ ಅವರ ಬ್ರಾಂಡ್ ಇಷ್ಟೊಂದು ದೊಡ್ಡದಾಗಿ ಹೇಗೆ ಬೆಳೆಯಿತು ಎಂದು ಮೂಗಿನ ಮೇಲೆ ಬೆರಳಿಡುವ ಸರದಿ ನಮ್ಮದಾಗಬಹುದು. ಮುಖವಾಡ ಗಳನ್ನು ಧರಿಸಿ ಸಮಾಜ ಸೇವೆ, ಜನ ಸೇವೆ ಎಂದು ಆಲಾಪಿಸುವ, ಸರಳ ಜೀವನದ ಡೈಲಾಗ್ ಹೊಡೆಯುತ್ತಾ, ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ವ್ಯಕ್ತಿಗಳು ಅಧಿಕಾರದ ಮೆಟ್ಟಿಲೇರಿ ತಿಂಗಳಿನೊಪ್ಪತ್ತಿನೊಳಕ್ಕೆ ತಾವು ಪ್ರತಿಪಾದಿಸುತ್ತಾ ಬಂದಿದ್ದ ತತ್ವಗಳಿಗೆ ಒಂದೊಂದಾಗಿ ಮುಲಾಜಿಲ್ಲದೆ ತಿಲಾಂಜಲಿಯನ್ನಿತ್ತು ಹತ್ತರ ಜತೆಯಲ್ಲಿ ಹನ್ನೊಂದಾಗುವುದನ್ನು ಕಾಣುತ್ತಿದ್ದೇವೆ. ಅಧಿಕಾರದ ಅಮಲೇರಿದೊಡನೆ ಮುಖವಾಡಗಳು ಧರಾಶಾಯಿ ಯಾಗಲು ಹೆಚ್ಚೇನೂ ಸಮಯ ಹಿಡಿಯುವುದಿಲ್ಲ.
ಕಾಯಕವೇ ಕೈಲಾಸ ಎಂದಿದ್ದರು ಜಗಜ್ಯೋತಿ ಬಸವಣ್ಣ. ದಶಕಗಳ ಹಿಂದೆ ಸರಕಾರಿ ಬಸ್ಸುಗಳ ಮೇಲೆ “ಮಾತು ಕಡಿಮೆ, ಹೆಚ್ಚು ದುಡಿಮೆ’ ಎಂದು ಬರೆಸಿತ್ತು ನಮ್ಮ ಘನ ಸರಕಾರ. ಅದಕ್ಕೆ ತದ್ವಿರುದ್ಧವಾಗಿ ಕೆಲಸ ಕಡಿಮೆ, ಪ್ರಚಾರ ಜಾಸ್ತಿ ಮಾಡಿದರೆ ಮಾತ್ರ ವರ್ಚಸ್ಸನ್ನು ಸ್ಥಾಪಿಸಲು ಸಾಧ್ಯ ಎನ್ನುವ ಸ್ಥಿತಿ ನಿರ್ಮಾಣ ವಾಗುತ್ತಿದೆ. ಕಠಿಣ ದುಡಿಮೆಗಿಂತ ಪ್ರಚಾರಕ್ಕೆ ಪ್ರಾಧಾನ್ಯತೆ ನೀಡುವ ಸ್ಥಿತಿ ಢಾಳಾಗಿದೆ. ಜನೋಪಯೋಗಿ ಕೆಲಸ ಮಾಡ ಬೇಕಾದ ಸರ್ಕಾರ ತನ್ನ ಸಾಧನೆಗಳ ವರ್ಣನೆಯ ಬೋರ್ಡು, ಜಾಹೀರಾತಿಗಾಗಿ ಬೊಕ್ಕಸವನ್ನು ಬರಿದು ಮಾಡುತ್ತಿವೆ.
ಸಾಹಿತ್ಯ, ಸಮಾಜ ಸೇವೆ, ರಾಜಕಾರಣ, ಕಲೆ ಹೀಗೆ ಜೀವನದ ಎಲ್ಲಾ ಕ್ಷೇತ್ರದಲ್ಲೂ ಮಾರ್ಕೆಟಿಂಗ್ ಸಾಮರ್ಥ್ಯ ಇದ್ದರೆ ಮಾತ್ರ ಬ್ರಾಂಡ್ ನೇಮ್ ಎತ್ತರಕ್ಕೇರಲು ಸಾಧ್ಯ. ಕೆರೆಯಲ್ಲಿ ಹೂಳೆ ತ್ತಿಯೋ, ಸ್ವತ್ಛತಾ ಅಭಿಯಾನ ನಡೆಸಿಯೋ, ಸಾರ್ವಜನಿಕ ರಸ್ತೆಯ ಹೊಂಡ ಮುಚ್ಚಿಯೋ, ಅನಾಥರಿಗೆ ಹಣ್ಣುಹಂಪಲ ನೀಡಿಯೋ ಗಮನ ಸೆಳೆಯುವ ವೀರರಿಗೆ ಬರವಿಲ್ಲ. ಪ್ರಚಾರದ ಸುಪ್ತ ಆಸೆಯೇ ಅನೇಕ ಸಮಾಜ ಸೇವೆಯ ಕಾರ್ಯಗಳ ಹಿಂದಿ ರುವ ಸ್ಫೂರ್ತಿ ಎಂದರೆ ತಪ್ಪಾಗದು. ಶಂಕುಸ್ಥಾಪನೆ, ಉದ್ಘಾಟನೆ, ಲೋಕಾರ್ಪಣೆಯ ಸಮಾರಂಭಗಳು ಪ್ರತಿಷ್ಠೆ ಮೆರೆಯುವ ರಣರಂಗಗಳಾಗುತ್ತಿವೆ. ಕೆಲಸ ಪ್ರಾರಂಭವಾಗುವುದಕ್ಕಿಂತ ಮೊದಲೇ ಕಾರಣೀಭೂತರಿಗೆ ಧನ್ಯವಾದ ಸಮರ್ಪಣೆಯ ಬೃಹತ್ ಕಟೌಟುಗಳು ರಾರಾಜಿಸುತ್ತವೆ.
ಒಂದೇ ಕೆಲಸ ಎರಡೆರಡು ಬಾರಿ ಉದ್ಘಾಟನೆ, ಶಂಕು ಸ್ಥಾಪನೆ ನಡೆಯುವುದೂ ಉಂಟು. ಪ್ರಾಯೋಜಕರಿಂದಲೇ ನಡೆಯುವ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಇರಿಸಲಾದ ಸೀಟ್‌ಗಳನ್ನೆಲ್ಲಾ ಭಟ್ಟಂಗಿಗಳೇ ಆಕ್ರಮಿಸಿಕೊಂಡು ವಿಜೃಂಭಿಸುತ್ತಿರುವ, ಅರ್ಹರಿಗೆ ಒಂದೋ ಎರಡೋ ಮೆರಿಟ್ ಕೋಟಾ ಕೂಡಾ ಇಲ್ಲದೇ ಇರುವ ಸ್ಥಿತಿ ಹಳ್ಳಿ ಪಟ್ಟಣಗಳೆಂಬ ಭೇದವಿಲ್ಲದೇ ಎಲ್ಲೆಡೆ ಕಾಣಬಹುದು.
ಸೈನಿಕರ ಸಮ್ಮಾನ, ಹುತಾತ್ಮರ ಸ್ಮರಣೆ, ಸಾಧಕರಿಗೆ ಪುರಸ್ಕಾರ, ನೊಂದವರಿಗೆ ಸಹಾಯ ಎಂದೆಲ್ಲಾ ನಡೆಯುವ ಸಮಾರಂಭಗಳು ಯಾರಲ್ಲೋ ಹೆಗ್ಗಳಿಕೆಯನ್ನು, ಇನ್ನಾರದೋ ಉದಾರತೆಯನ್ನು ಮೆರೆಯುವ, ಮತ್ತಾರಲ್ಲೋ ಅದೃಷ್ಟಕ್ಕೆ ಮೆರುಗು ನೀಡುವ ಇವೆಂಟ್‌ಗಳಾಗುತ್ತಿರುವುದು ವಿಪರ್ಯಾಸ. ಮಾಜಿ ಸೈನಿಕರನ್ನು ಸಮ್ಮಾನಿಸುವ ಸಮಾರಂಭವೊಂದರಲ್ಲಿ ಸನ್ಮಾನಿತರನ್ನು ಹಿಂದೆ ತಳ್ಳಿ ಪ್ರಾಯೋಜಕ ಸಂಸ್ಥೆಯ ಪದಾಧಿಕಾರಿಗಳು, ಆಯೋಜಕರು, ಸಂಘಟಕರು ಫೋಟೋಗಾಗಿ ನಡೆಸುವ ಮೇಲಾಟಗಳು ಅಸಹ್ಯಕಾರಿ ಎನಿಸುತ್ತದೆ. ಸತ್ಕಾರ್ಯದ ಹೆಸರಲ್ಲಿ ಶ್ರೇಯಸ್ಸು ಪಡೆಯಲು ನಡೆಸುವ ಕಾರ್ಯಗಳು ಯಾರಲ್ಲೋ ವ್ಯಕ್ತಿತ್ವವನ್ನು ವೈಭವೀಕರಿಸುವ ಸಮಾರಂಭಗಳಾಗಿ ಕಾಣುವುದು ಬದಲಾಗುತ್ತಿ ರುವ ನಮ್ಮ ಜೀವನ ಮೌಲ್ಯಗಳಿಗೆ ಕನ್ನಡಿ ಹಿಡಿದಂತೆ ಭಾಸವಾ ಗುತ್ತದೆ. ಅರ್ಹರಿಗೆ ದಕ್ಕದ ಪ್ರಶಸ್ತಿಗಳು, ಪುರಸ್ಕಾರಗಳು, ಸಮ್ಮಾನ ಗಳು ಮಾರ್ಕೆಟಿಂಗ್ ಯೋಗ್ಯತೆ ಇದ್ದವರಿಗೆ ಸುಲಭವಾಗಿ ಒಲಿದು ಬಿಡುತ್ತದೆ. ಪ್ರತಿಭೆಗೆ ಇಲ್ಲದ ಕಿಮ್ಮತ್ತು, ಇಲ್ಲದ್ದನ್ನು ಇದೆಯೆಂದು ತೋರಿಸುವ, ಇದ್ದುದನ್ನು ಇದ್ದದ್ದಕ್ಕಿಂತ ಅಧಿಕವಾಗಿ ತೋರಿಸುವ ಕಲೆ ಗೊತ್ತಿರುವವರು ಮಾತ್ರ ಸೊಂಪಾಗಿ ಬೆಳೆಯ ಬಹುದಾದ ಪ್ರಸ್ತುತ ಸನ್ನಿವೇಶದಲ್ಲಿ ಅಸಲಿ-ನಕಲಿ ಬೇಧ ಅರಿಯು ವುದು ಕಷ್ಟಸಾಧ್ಯದ ಕೆಲಸ. ಕಲೆ, ಸಾಹಿತ್ಯದ ಪುರಸ್ಕಾರ ಗಳು, ಸಮಾಜಸೇವೆ ಶೈಕ್ಷಣಿಕ ಗೌರವಗಳು ಯಾರಲ್ಲೋ ವಶೀಲಿ, ಇನ್ನಾರಲ್ಲೋ ಪ್ರಾಯೋಜಕತ್ವ ದೊರೆತವರಿಗೆ ಮಾತ್ರ ಲಭ್ಯ ಎನ್ನುವುದನ್ನು ಹೆಚ್ಚು ಕಡಿಮೆ ನಾವು ಒಪ್ಪಿಕೊಂಡೇ ಬಿಟ್ಟಿದ್ದೇವೆ.
ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕು ಎನ್ನುವ ಗಾದೆ ಮಾತಿನಂತೆ ಮುಖವಾಡಗಳನ್ನು ಧರಿಸಿ ಎತ್ತರಕೆತ್ತರಕ್ಕೆ ಬೆಳೆಯು ತ್ತಿರುವ ದೈತ್ಯ ವ್ಯಕ್ತಿತ್ವದ ಠಕ್ಕತನಕ್ಕೆ ಮಾರುಹೊಗದಿರುವ ರಕ್ಷಣಾತ್ಮಕ ನೀತಿ ನಮ್ಮದಾಗಬೇಕಿದೆ. ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಅಧಿಕ ಅಪಾಯಕಾರಿ. ನಿಮಗಾದ್ದಕ್ಕೆ ಅಸಲಿ ಬೆಲೆಗೆ ಮಾರುವೆ ಎನ್ನುವ ವ್ಯಾಪಾರಿಯ ಸೋಗಿನ ನುಡಿಗೂ ವೈಚಾರಿಕ ನುಡಿಗಳನ್ನಾಡುತ್ತಾ ಇನ್ನಾರಲ್ಲೋ ಹಿತ ಸಾಧಿಸುವ ಹೊಣೆ ಹೊತ್ತಿರುವ (ಪ್ರಾಯೋಜಕತ್ವದ) ವಿಷ ಜಂತುಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳೋಣ. ಪ್ರತಿಯೊಂದು ಕಾರ್ಯದಲ್ಲೂ ಲಾಭ-ನಷ್ಟ ಹುಡುಕುವ ವ್ಯಾಪಾರಿ ಬುದ್ಧಿ(ಯ)ಜೀವಿಗಳ ಪರ-ವಿರೋಧದ ಹಿಂದಿರುವ ನಿಗೂಢತೆಯನ್ನು ಭೇಧಿಸುವುದು ಕಷ್ಟಕರವಾದರೂ ಸಮಾಜದ ವಿಶಾಲ ಹಿತಕ್ಕಾಗಿ ಶ್ರಮಿಸೋಣ. ಅಂತೆಕಂತೆಗಳು ಅಪ್ಪಟ ಬಂಗಾರವೇನಲ್ಲ, ಉಜ್ಜಿ ನೋಡಿದರೆ ಗಿಲೀಟು ಗೊತ್ತಾಗುತ್ತದೆ. ಮಾಧ್ಯಮಗಳಲ್ಲಿ ಬಂದದ್ದೆಲ್ಲಾ ಸಥ್ಯವಲ್ಲ ಎನ್ನುವ ಪಾಠ ಕಲಿಯೋಣ. ವಿಮರ್ಶಿ ಸುವ ಬುದ್ಧಿಗೆ ಒಂದಿಷ್ಟು ಸಾಣೆ ಹಚ್ಚೋಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.