ನಿಂತು ಹೋಯಿತೇ ಟಿಂಟು ಓಟ?
Team Udayavani, Mar 16, 2019, 12:30 AM IST
ಬದುಕಿನಲ್ಲಿ ಪ್ರತಿಭೆಯಿದ್ದರೆ, ಪರಿಶ್ರಮವಿದ್ದರೆ ಮಾತ್ರ ಸಾಲದು, ಅದನ್ನೂ ಮೀರಿದ ಇನ್ನೊಂದರ ನೆರವೂ ಬೇಕಾಗುತ್ತದೆ. ಅದನ್ನು ದೇವರು ಎಂದಾದರೂ ಕರೆಯಬಹುದು, ಅದೃಷ್ಟ ಎಂದಾದರೂ ಹೇಳಿಕೊಳ್ಳಬಹುದು. ಅದು ಜೊತೆಗಿರಲೇಬೇಕಾಗುತ್ತದೆ. ಇಲ್ಲವಾದರೆ ಕಾಲನ ಹೊಡೆತದಲ್ಲಿ ಕೊಚ್ಚಿಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಬದುಕಿನ ಯಾವುದೇ ವಿಭಾಗದಲ್ಲಿ ಅದ್ಭುತ, ಅನನ್ಯ ಸಾಧನೆ ಮಾಡಿದವರು, ಆಯಾಚಿತವಾಗಿ, ಅನಿರೀಕ್ಷಿತವಾಗಿ ಬಂದೆರಗುವ ಸವಾಲುಗಳಿಗೆ ಎದೆಯೊಡ್ಡಿ ನಿಂತು ಹೋರಾಡುತ್ತಾರೆ. ಹಿಂದಕ್ಕೆ ಮರಳಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಯನ್ನು ಎದುರಿಸಿ ಗೆದ್ದವರು ದಿಗ್ಗಜರ ಸಾಲಿಗೆ ಸೇರುತ್ತಾರೆ.
ಕ್ರಿಕೆಟಿಗ ಸಚಿನ್ ತೆಂಡುಲ್ಕರ್‌ಗೆ ತಮ್ಮ ಶೂವಿನ ಮೊಳೆ ಚುಚ್ಚಿ, ಮತ್ತೆ ಆ ಪಾದ ಬಳಸುವುದು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿತ್ತು. ದ.ಆಫ್ರಿಕಾದ ವಿಶ್ವವಿಖ್ಯಾತ ವೈದ್ಯರು ತೆಂಡುಲ್ಕರ್ ಪಾದವನ್ನು ಪರಿಶೀಲಿಸಿ, ಇನ್ನು ಆಡಿದರೇ ಪಾದವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದಿದ್ದರು. ಹತಾಶೆಗೊಂಡಿದ್ದ ಸಚಿನ್, ಮುಂಬೈನಲ್ಲಿ ಇನ್ನೊಬ್ಬ ವೈದ್ಯರನ್ನು ಸಂಪರ್ಕಿಸಿ ಹೇಗೋ ಮತ್ತೆ ಪಾದದ ಸ್ಥಿತಿಯನ್ನು ಸುಧಾರಿಸುವ ಯತ್ನ ನಡೆಸಿದರು. ಕಡೆಗೆ ಯಶಸ್ವಿಯಾಗಿ ಕ್ರಿಕೆಟ್‌ಗೆ ಮರಳಿದರು. 2003ರ ವಿಶ್ವಕಪ್‌ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದರು. ಇದು ಅವರ ಆತ್ಮಕಥನ ಪ್ಲೇಯಿಂಗ್ ಇಟ್ ಮೈ ವೇನಲ್ಲಿ ಬಂದಿದೆ.
ಬಹುಶಃ ಅಂತಹದ್ದೇ ಒಂದು ಸಂದರ್ಭ ಭಾರತದ ಪ್ರತಿಭಾವಂತ ಓಟಗಾರ್ತಿ, ಕೇರಳದ ಟಿಂಟು ಲೂಕಾಗೂ ಬಂದಿದೆ. ತಮ್ಮ 13ನೇ ವಯಸ್ಸಿನಿಂದ ಓಟವೊಂದನ್ನು ಬಿಟ್ಟು ಬೇರೇನನ್ನೂ ಅರಿಯದ ಈಕೆಗೆ 2018ರಿಂದ ಬರ ಸಿಡಿಲು ಬಡಿದಂತಾಗಿದೆ. ಆಕೆಗೆ ಅಂಗಾಲು ವಿಪರೀತ ಉರಿಯುವ ಪ್ಲಾಂಟರ್ ಫ್ಯಾಸಿಟಿಸ್ ಎಂಬ ಸಮಸ್ಯೆ ಶುರುವಾಗಿದೆ. ನೋವು ಎಷ್ಟು ತೀವ್ರವಾಗಿದೆಯೆಂದರೇ, ಕಳೆದ ವರ್ಷ ಇಂಡೊನೇಷ್ಯಾದಲ್ಲಿ ನಡೆದ ಏಷ್ಯಾಡ್‌ನಿಂದ ಅವರು ಹೊರಗುಳಿಯಲೇಬೇಕಾಯಿತು. ಹಲವು ವೈದ್ಯರನ್ನು ಸಂಪರ್ಕಿಸಿದರೂ ಪಾದದ ಉರಿಗೆ ಪರಿಹಾರ ಸಿಕ್ಕದ ಕಾರಣ, ಬೇರೆ ದಾರಿ ಕಾಣದ ಸ್ಥಿತಿಗೆ ತಲುಪಿದ್ದಾರೆ. ಸದ್ಯ ಅವರು ಆಯ್ದುಕೊಂಡಿದ್ದು ತತ್ಕಾಲೀನವಾಗಿ ರೈಲ್ವೇಸ್ ಉದ್ಯೋಗ. ತಮಿಳುನಾಡಿನ ಸೇಲಂನಲ್ಲಿರುವ ದಕ್ಷಿಣ ರೈಲ್ವೆ ವಿಭಾಗದಲ್ಲಿ ವಿಶೇಷ ಅಧಿಕಾರಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಆದರೂ ಅವರಿಗೆ ಶಾಶ್ವತವಾಗಿ ಓಟವನ್ನು ತ್ಯಜಿಸಲು ಮನಸ್ಸಿಲ್ಲ. ಅವರಲ್ಲಿ ಇನ್ನೂ ಸಾಕಾರವಾಗದ ಕನಸುಗಳಿವೆ. ಅದನ್ನು ನಿಜ ಮಾಡಿಕೊಳ್ಳುವರೆಗೂ ಓಟವನ್ನು ನಿಲ್ಲಿಸಲು ತಾನು ಸಿದ್ಧವಿಲ್ಲ ಎಂದು ಟಿಂಟು ಹೇಳುತ್ತಾರೆ.
ಹಳ್ಳಿ ಹುಡುಗಿ ಉಷಾ ಅಕಾಡೆಮಿ ಸೇರಿದ್ದು
ಕೇರಳದ ಇರಿಟ್ಟಿ ತಾಲೂಕಿನ ವಲಥೋಡ್ ಎಂಬ ಹಳ್ಳಿ ಹುಡುಗಿ ಲೂಕಾ ಹುಟ್ಟಿದ್ದು 1989ರಲ್ಲಿ. ಇನ್ನೂ 29 ವರ್ಷ. ಆಕೆಯ ಓಡುವ ಪ್ರತಿಭೆಯನ್ನು ನೋಡಿದ ಭಾರತದ ಓಟದ ದಂತಕಥೆ ಪಿ.ಟಿ.ಉಷಾ, ಕೇರಳದ ಬಲುಶೆರಿಯಲ್ಲಿರುವ ತಮ್ಮ ಓಟದ ಅಕಾಡೆಮಿಗೆ ಸೇರಿಸಿಕೊಂಡರು. ಇದು ಸರಿಯಾಗಿ ಫಲಕೊಟ್ಟಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಿಂಟು ಅದ್ಭುತ ಸಾಧನೆ ಮಾಡಿದ್ದರಿಂದ ಉಷಾ ಅಕಾಡೆಮಿಗೂ ಖ್ಯಾತ ಬಂತು. ಈ ಅಕಾಡೆಮಿಗೆ ಅಧಿಕೃತ ರಾಷ್ಟ್ರೀಯ ಅಥ್ಲೀಟ್‌ಗಳ ಶಿಬಿರ ಎಂಬ ಮಾನ್ಯತೆ ಸಿಕ್ಕಿದೆ.
ಟಿಂಟು 2014ರ ಏಷ್ಯಾಡ್‌ನ 400 ಮೀ. ರಿಲೇನಲ್ಲಿ ಚಿನ್ನ ಗೆದ್ದರು. ಅದೇ ಕೂಟದ 800 ಮೀ. ಓಟದಲ್ಲಿ ಬೆಳ್ಳಿ ಗೆದ್ದರು. ಇದೇ ವಿಭಾಗದಲ್ಲಿ 2010ರ ಏಷ್ಯಾಡ್‌ನಲ್ಲಿ ಕಂಚು ಗೆದ್ದಿದ್ದರು. 2013ರ ಏಷ್ಯನ್ ಅಥ್ಲೆಟಿಕ್ಸ್‌ನ 400 ಮೀ. ರಿಲೇನಲ್ಲಿ ಚಿನ್ನ, 2015ರಲ್ಲಿ ಚೀನಾದ ವುಹಾನ್ ಕೂಟದಲ್ಲಿ 800 ಮೀ. ಓಟದಲ್ಲಿ ಚಿನ್ನ ಗೆದ್ದಿದ್ದಾರೆ.
ಸಾಧನೆಯ ಹೊಸ್ತಿಲಲ್ಲಿ ಸವಾಲು
ಹೀಗೆ ಟಿಂಟು ಅಸಾಧ್ಯ ವೇಗದಿಂದ ಸಾಧನೆಯ ಪಥದಲ್ಲಿ ಓಡುತ್ತಿದ್ದಾಗಲೇ, ನಿಂತು ಹೋಗಿದ್ದಾರೆ. ಇನ್ನೊಂದು ಹೆಜ್ಜೆ ಇಡಲೂ ಸಾಧ್ಯವಿಲ್ಲದ ಸ್ಥಿತಿಗೆ ತಲುಪಿದ್ದಾರೆ. ಕೇರಳದ ಬಲುಶೆರಿಯಲ್ಲಿ ಉಷಾ ಆಶ್ರಯದಲ್ಲಿದ್ದವರು, ಈಗ ತಮಿಳುನಾಡಿನ ಸೇಲಂ ಸೇರಿಕೊಂಡಿದ್ದಾರೆ. ಅಥ್ಲೀಟ್‌ಗಳಿಗೆ ಕ್ರೀಡೆಯೇ ಜೀವನ. ಅಂತಹವರಿಗೆ ಕ್ರೀಡೆ ಇನ್ನು ಸಾಧ್ಯವಿಲ್ಲ ಎಂಬ ಸ್ಥಿತಿ ಬಂದರೆ, ಜೀವನದಲ್ಲಿ ಎಲ್ಲವೂ ಮುಗಿಯಿತೇ ಎಂಬ ಅನುಮಾನ ಮೂಡುತ್ತದೆ. ಸದ್ಯ ಟಿಂಟು ಈಗ ಅನಿವಾರ್ಯವಾಗಿ ಉಷಾ ಅಕಾಡೆಮಿಯನ್ನು ಬಿಟ್ಟು, ವೃತ್ತಿಗೇ ಸೇರಿಕೊಂಡಿದ್ದಾರೆ. ಹಿಂದೆಯೂ ಅವರು ರೈಲ್ವೇಸ್‌ನಲ್ಲೇ ವೃತ್ತಿ ಮಾಡುತ್ತಿದ್ದರು. ಆಗವರು ಹೆಸರಿಗೆ ಮಾತ್ರ ವಿಭಾಗೀಯ ವ್ಯವಸ್ಥಾಪಕಿಯಾಗಿದ್ದರೂ, ವರ್ಷವಿಡೀ ರಜೆ ತೆಗೆದುಕೊಂಡು ಅಭ್ಯಾಸ ಮಾಡುವ ಅವಕಾಶವಿತ್ತು. ಈಗ ಬೆಳಗ್ಗೆ 9.30ಕ್ಕೆ ಕಚೇರಿಗೆ ಕಾಲಿಟ್ಟರೆ, ಸಂಜೆ 5.30ರವರೆಗೆ ಕೆಲಸ ಮಾಡಲೇಬೇಕು. ಇಲ್ಲಿ ಯಾವುದೇ ವಿನಾಯ್ತಿ ಇಲ್ಲ. ಇದುವರೆಗೆ ಓಡುವುದೊಂದು ಬಿಟ್ಟು, ಬೇರಾವುದೇ ರೀತಿ ಹೊರಜಗತ್ತಿನ ಸಂಪರ್ಕವಿಲ್ಲದೇ ಇದ್ದ ಟಿಂಟುಗೆ ಇದು ದೊಡ್ಡ ಸವಾಲು. ಈ ಸವಾಲನ್ನು ಗೆಲ್ಲುವುದರ ಜೊತೆಗೆ ಏಷ್ಯಾಡ್‌ನಲ್ಲಿ 800 ಮೀ. ಓಟದಲ್ಲಿ ಚಿನ್ನ ಗೆಲ್ಲುವ ಇನ್ನೊಂದು ಸವಾಲು ಇದೆ. ಅವರ ಪ್ರಕಾರ, ಇದನ್ನು ಗೆಲ್ಲುವುದರಲ್ಲೇ ಅವರ ಬದುಕಿನ ಸಾರ್ಥಕ್ಯವಿರುವುದು. ಎರಡನ್ನೂ ಗೆದ್ದು ಟಿಂಟು ದಿಗ್ಗಜರ ಸಾಲಿಗೆ ಸೇರಲಿ ಎನ್ನುವುದು ಹಾರೈಕೆ.
ಏನಿದು ಪ್ಲಾಂಟರ್ ಫ್ಯಾಸಿಟಿಸ್?
ಅಂಗಾಲಿನ ಬೆರಳುಗಳಿಂದ ಹಿಡಿದು ಹಿಮ್ಮಡಿ ಮೂಳೆಗಳವರೆಗೆ ನೇರ ಮಾಂಸದ ಪದರವೊಂದಿರುತ್ತದೆ. ಈ ಪದರ ಚುಚ್ಚಿದಂತೆ ಅನುಭವವಾಗುತ್ತದೆ. ಸಾಮಾನ್ಯವಾಗಿ ರಾತ್ರಿ ಮಲಗಿ ಬೆಳಗ್ಗೆ ಎದ್ದಾಗ, ಚುಚ್ಚಿದ ಅನುಭವ ಬರುತ್ತದೆ. ನಡೆದಾಡುತ್ತಿದ್ದಾಗ, ಚಟುವಟಿಕೆಯಲ್ಲಿದ್ದಾಗ ನೋವಿನ ಅನುಭವ ಆಗುವುದಿಲ್ಲ. ಒಮ್ಮೆ ವಿಶ್ರಾಂತಿ ತೆಗೆದುಕೊಂಡು ಮತ್ತೆ ಎದ್ದರೆ, ನಿಂತುಕೊಂಡರೆ ಉರಿ ಶುರುವಾಗುತ್ತದೆ. ಸಾಮಾನ್ಯವಾಗಿ ಈ ಕಾಯಿಲೆ ಓಟಗಾರರಿಗೆ ಬರುತ್ತದೆ. ಬಹಳ ಭಾರವಿರುವರಿಗೂ ಇದು ಬರುತ್ತದೆ. ಸರಿಯಾದ ಶೂಗಳನ್ನು ಧರಿಸದವರಿಗೂ ಇದು ಬರುವ ಸಾಧ್ಯತೆಯಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.