ಪ್ರವಾಸೋದ್ಯಮಕ್ಕೆ ಬೇಕು ಮೂಲ ಸೌಲಭ್ಯ
Team Udayavani, Mar 16, 2019, 10:04 AM IST
ಕುಮಟಾ ತಾಲೂಕಿನಲ್ಲಿವೆ ಸಾಕಷ್ಟು ನೈಸರ್ಗಿಕ ಜಲ ಧಾರೆಗಳು – ವಿಶ್ವ ಪ್ರಸಿದ್ಧ ದೇಗುಲಗಳು, 30ಕ್ಕೂ ಹೆಚ್ಚು ಪ್ರವಾಸಿ ತಾಣ. ಇವುಗಳ ಅಭಿವೃದ್ಧಿಯಿಂದ ಸರ್ಕಾರದ ಆದಾಯವೂ ಹೆಚ್ಚಲಿದೆ ಎಂಬುದು ಜನರ ಆಶಯ.
ಕುಮಟಾ: ಪುರಾಣ ಪ್ರಸಿದ್ಧ ಹಾಗೂ ನೈಸರ್ಗಿಕವಾಗಿ ರಾಜ್ಯದಲ್ಲಿ ಗುರುತಿಸುಕೊಳ್ಳುವಂತಹ ತಾಲೂಕಿನ ಅನೇಕ ಪ್ರದೇಶಗಳು ಪ್ರವಾಸೋದ್ಯಮ ಇಲಾಖೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಎಲೆಮರೆ ಕಾಯಾಗಿ, ಸಮರ್ಪಕ ಮೂಲ ಸೌಲಭ್ಯಗಳಿಲ್ಲದೇ ಬಡವಾಗುತ್ತಿದೆ.
ಅಘನಾಶನಿ, ಬಡಗಣಿ, ಚಂಡಿಕಾಹೊಳೆ, ವಾಟೆ ಹೊಳೆ, ಅರಬ್ಬಿ ಸಮುದ್ರ ತೀರ, ಪ್ರಸಿದ್ಧ ದೇವಾಲಯಗಳು, ಜಲಪಾತ, ಕೋಟೆಯಿಂದ ಒಳಗೊಂಡಿದೆ. ಆದರೆ ಅಧಿಕಾರಿಗಳು ಜನಪ್ರತಿನಿಧಿಗಳ ನಿರ್ಲಕ್ಷದಿಂದ ಸರಿಯಾದ ಅಭಿವೃದ್ಧಿ ಕಾಣುತ್ತಿಲ್ಲ. ತಾಲೂಕಿನಲ್ಲಿ 30ಕ್ಕೂ ಹೆಚ್ಚು ಪ್ರವಾಸೋದ್ಯಮ ಕೇಂದ್ರವಿದೆ. ಆದರೆ ಕುಡಿಯುವ ನೀರು, ವಸತಿ ವ್ಯವಸ್ಥೆ ಇಲ್ಲ. ಕುಮಟಾದ ಪ್ರವಾಸೋದ್ಯಮ ಕೇಂದ್ರದ ಮಾಹಿತಿ, ದಾರಿಯಾಗಲಿ ಪ್ರವಾಸೋದ್ಯಮ ಇಲಾಖಾ ಕಡತದಲ್ಲಿಯೇ ಕಾಣುತ್ತಿಲ್ಲ. ಅಧಿಕಾರಿಗಳು ಪ್ರತಿವರ್ಷ ತಾಲೂಕಿಗೆ ಪಿಕ್‌ನಿಕ್ ಲೆಕ್ಕದಂತೆ ಬಂದು ಸರಕಾರಿ ಹಣ ಹಾಳು ಮಾಡುವುದನ್ನು ಬಿಟ್ಟರೆ ಮತ್ತೇನು ಅಭಿವೃದ್ಧಿಯಾಗುತ್ತಿಲ್ಲ.
ಲಕ್ಷಾಂತರ ವರ್ಷದ ಇತಿಹಾಸವಿರುವ ಗೋಕರ್ಣ ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿಯಾಗಿದೆ. ಇಲ್ಲಿನ ಮಹಾಗಣಪತಿ, ಮಹಾಬಲೇಶ್ವರ ದೇವಾಲಯಗಳು, ಸರ್ವಪಾಪ ನಿವಾರಕ ಕೋಟಿತೀರ್ಥವಿದೆ. 9ನೇ ಶತಮಾನದ ಧಾರೇಶ್ವರದ ಧಾರಾನಾಥ, ಲಕ್ಷಾಂತರ ಜನರು ಸಂದರ್ಶಿಸುವ ಹಾಗೂ ಎತ್ತರದ ಗುಡ್ಡದ ಮೇಲೆ ಸುತ್ತಲೂ ಸೃಷ್ಟಿ ಸೌಂದರ್ಯದಿಂದ ಕಂಗೊಳಿಸುತ್ತಿರುವ ಬಾಡದ ಕಾಂಚಿಕಾ ಪರಮೇಶ್ವರಿ ದೇವಾಲಯ, ಲುಕ್ಕೇರಿ ಗುಡ್ಡದ ಮೇಲಿರುವ ನೈಸರ್ಗಿಕವಾಗಿಯೇ ಆಕರ್ಷಣೀಯವಾದ ಬೋಳೆ ಶಂಭುಲಿಂಗೇಶ್ವರ, ನಗರದ ಶಾಂತೇರಿ ಕಾಮಾಕ್ಷಿ, ಕಾವೂರೂ ಕಾಮಾಕ್ಷಿ, ರಾಮಾಯಣದ 4ನೇ ಅಧ್ಯಾಯದಲ್ಲಿಯೇ ವರ್ಣಿಸಲ್ಪಟ್ಟ ಭೈರವೇಶ್ವರ ಸನ್ನಿಧಿ ಯಾಣವಿದೆ. ಕುಂಭೇಶ್ವರದಂತ ನೂರಕ್ಕೂ ಹೆಚ್ಚು ದೇವಾಲಯಗಳಿವೆ. ಪ್ರಸಿದ್ಧ ಗೋರೆ ಮತ್ತು ದಿವಗಿ ಮಠಗಳು, ನಿಸರ್ಗ ರಮಣೀಯ ರಾಮಚಂದ್ರಾಪುರ ಮಠದ ಹೋಸಾಡ ಗೋಶಾಲೆಯಂತ ಪ್ರಖ್ಯಾತ ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರವಿದೆ.
ರಾಮನಗಿಂಡಿ ಬೀಚ್, ಹೆಡ್ ಬಂದರ್ ಬೀಚ್, ಮುಂಗೋಡ್ಲದ ಅರ್ಧಚಂದ್ರಾಕೃತಿ ಬೀಚ್, ಕಾಗಾಲದ ಬೀಚ್, ಗೋಕರ್ಣದ ಕುಡ್ಲೆ ಬೀಚ್, ಓಂ ಬೀಚ್ ಇತ್ಯಾದಿ ಜಗತ್ತಿನ ಗಮನ ಸೇಳೆದಿರುವ ಹಲವು ಬೀಚ್‌ಗಳಿವೆ. ದೇವಿಮನೆ ಫಾಲ್ಸ್, ಸಮೀಪದಲ್ಲಿಯ ಬೆಣ್ಣೆ ಫಾಲ್ಸ್ ಹಾಗೂ ಬಡಾಳದ ವಾಟೆ ಫಾಲ್ಸ್ ಸೇರಿದಂತೆ ಹಲವು ಜಲಧಾರೆಗಳಿವೆ.
15ನೇ ಶತಮಾನದ ಸರ್ಪಮಲ್ಲಿಕನ ಐತಿಹಾಸಿಕ ಮಿರ್ಜಾನ ಕೋಟೆ, 10ನೇ ಶತಮಾನದ ಕದಂಬ ವಂಶದ ಚಂದಾವರ ಕೋಟೆ ಪ್ರದೇಶ, 8ನೇ ಶತಮಾನದ ಮೇದನಿ ಕೋಟೆ, 9ನೇ ಶತಮಾನದ ಅಘನಾಶನಿ ಕೋಟೆಗಳಿವೆ, ತದಡಿ, ವನ್ನಳ್ಳಿ, ಹೆಡ್‌ಬಂದರ್‌ನಲ್ಲಿ ಮೀನುಗಾರಿಕಾ ಬಂದರುಗಳಿವೆ. ಐಗಳಕುರ್ವೇಯಂತಹ ಜನವಸತಿ ಇರುವ ರಮಣೀಯ ದ್ವೀಪ ಪ್ರದೇಶವಿದೆ.
ಸಂಪೂರ್ಣ ದಟ್ಟಾರಣ್ಯ ಪ್ರದೇಶದಿಂದಲೇ ಆವೃತವಾಗಿರುವ ಬ್ರಹ್ಮೂರು, ನಾಗೂರು, ಸಂಡಳ್ಳಿ, ಬಡಾಳ, ಸಂತೆಗುಳಿಯಂತ ಮುಂಜಾನೆ ಅವಧಿಯಲ್ಲಿ ಸದಾ ಮಂಜಿನಿಂದ ಆವೃತವಾಗಿರುವ ಸ್ಥಳವಿದೆ. ತಾರಿದೋಣಿಯನ್ನೇ ಅವಲಂಬಿಸಿರುವ ಮೋರ್ಸೆ, ಹೆಗಡೆ-ಮಿರ್ಜಾನ ತಾರಿಬಾಗಿಲು, ಅಘನಾಶಿನಿ-ತದಡಿ ಸಂಪರ್ಕದ ತಾರಿದೋಣಿ ವ್ಯವಸ್ಥೆ ಇರುವ ಪ್ರದೇಶಗಳಿವೆ. ಅಘನಾಶನಿ ಕಿರಬೇಲೆಯ ಆಶ್ಚರ್ಯ ಹುಟ್ಟಿಸುವ ಗುಹೆ, ಯಾಣದ ಗುಹೆಗಳು, ಕಪ್ಪು ಶಿಲಾವೃತ ಬಂಡೆಗಳು, ಜೀವವೈವಿದ್ಯ, ಔಷಧ ಸಸ್ಯಗಳ ಕುರಿತು ಸಂಶೋಧನೆ, ಅಧ್ಯಯನ ಮಾಡುವಂತಹ ವಿದೇಶದವರನ್ನು ಆಕರ್ಷಿಸುವ ದೇವಿಮನೆಯಲ್ಲಿ ಕತ್ತಲೆ ಕಾಡಿನ ಪ್ರದೇಶವಿದೆ.
ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ಅನೇಕ ಕಪ್ಪೆಯ ಪ್ರಭೆದ, ಜೀವ-ಜಂತುಗಳು ತಾಲೂಕಿನ ದೇವಿಮನೆ ಹಾಗೂ ಬಡಾಳದ ಕಾನಿನಲ್ಲಿ ನೋಡಲು ಸಾಧ್ಯ. ಬೆಳಚು, ಅಡ್ಡ ಬೆಳಚು, ಕಲ್ಗ್, ಕೆಂಪುಕಲ್ಗ, ಸಣ್ಣ ಬೆಳಚು ಇತ್ಯಾದಿ ದೇಹಕ್ಕೆ ಕ್ಯಾಲ್ಸಿಯಂ ಒದಗಿಸುವ 49 ಜಾತಿಯ ಬೆಳಚುಗಳು ತದಡಿ ಪ್ರದೇಶದಲ್ಲಿದೆ.
ಮೂರೂರು, ಕಲ್ಲಬ್ಬೆ, ಬೊಗರಿಬೈಲ್, ತದಡಿ ಹಿನ್ನೀರಿನ ಪ್ರದೇಶ, ಮಾಸೂರು, ಲುಕ್ಕೇರಿಯಲ್ಲಿ ನೂರಾರು ಜಾತಿಯ ಪಕ್ಷಿ ನೋಡಲು ಸಾಧ್ಯ. ಅಕ್ಟೋಬರ್‌ದಿಂದ ಎಪ್ರಿಲ್ ತನಕ ವಲಸೆ ಬರುವ ವಿದೇಶಿ ಪಕ್ಷಿಗಳಿಂದ ಇಲ್ಲಿನ ಪ್ರದೇಶಗಳು ಪಕ್ಷಿಧಾಮದಂತೆ ಗೋಚರಿಸುತ್ತದೆ. ಈ ರೀತಿ ಕುಮಟಾ ತಾಲೂಕು ಪ್ರವಾಸೋದ್ಯಮ ದೃಷ್ಟಿಯಿಂದ ಒಂದು ಉಪಖಂಡ ಎನಿಸಿಕೊಂಡಿದೆ.
ವಿಶೇಷ ಯೋಜನೆ ರೂಪಿಸಲಿ
ಪ್ರವಾಸೋದ್ಯಮ ಇಲಾಖೆಯು ಈ ಎಲ್ಲ ಸ್ಥಳದ ಬಗ್ಗೆ ಸರಿಯಾದ ಮಾಹಿತಿ ನೀಡಿದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಸಾಧ್ಯ. ಆದರೆ ಅಧಿ ಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ವಿಶೇಷ ಗಮನ ಹರಿಸದೇ ಇರುವುದು ವಿಷಾದನೀಯ. ಈ ಕುರಿತು ಸಮಗ್ರ ಅಧ್ಯಯನ ನಡೆಸಿ ಇಂತಹ ಪ್ರದೇಶಗಳ ಅಭಿವೃದ್ಧಿ ಕುರಿತು ವಿಶೇಷ ಯೋಜನೆ ರೂಪಿಸಬೇಕು ಎಂಬುದು ಹಲವರ ಅಭಿಪ್ರಾಯ.
ಕೆ. ದಿನೇಶ ಗಾಂವ್ಕರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.