ಕರುಳಿನ ಕೂಗಾಯಿತು ತಮಟೆ ಸದ್ದು
Team Udayavani, Mar 17, 2019, 6:39 AM IST
ಹೆತ್ತವರಿಂದ ಅಚಾನಕ್ ಆಗಿ ದೂರಾದ ಮಗು, ತಿಂಗಳುಗಳ ನಂತರ ತಂದೆ ಬಾರಿಸುತ್ತಿದ್ದ ತಮಟೆಯ ಸದ್ದಿಗೆ ಓಗೊಟ್ಟು ಪೋಷಕರ ಮಡಿಲು ಸೇರಿದ ಅಪರೂಪದ ನೈಜ ಕಥೆಯಿದು.
ಕಥೆ ಹೀಗೆ ಆರಂಭವಾಗುತ್ತದೆ: ಮೂರ್‍ನಾಲ್ಕು ದಿನಗಳಿಂದ ಜ್ವರದಿಂದ ಹಾಸಿಗೆ ಹಿಡಿದಿದ್ದ ಪತಿ ಬಾಲಾಜಿಗೆ ಚಿಕಿತ್ಸೆ ಕೊಡಿಸಲು ಬೌರಿಂಗ್ ಆಸ್ಪತ್ರೆಗೆ ಬಂದಿದ್ದ ಪತ್ನಿ ಲಕ್ಷ್ಮೀ, ಕಂಕುಳಲ್ಲಿ ಎರಡು ವರ್ಷದ ಮಗನನ್ನು ಎತ್ತಿಕೊಂಡು ಟೋಕನ್ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದಳು. ಕಿಕ್ಕಿರಿದ ಜನರ ನಡುವೆ ಸರತಿ ಸಾಲಲ್ಲಿ ನಿಂತಿದ್ದ ಲಕ್ಷ್ಮಿಯ ಕಂಕುಳಲ್ಲಿದ್ದ ಪುನೀತ್ ಅಳಲು ಆರಂಭಿಸಿದ. ಎಷ್ಟೇ ಸಮಾಧಾನ ಮಾಡಿದರು ಅಳು ನಿಲ್ಲಲಿಲ್ಲ.
ಸಾಲ್ಲಿನಲ್ಲಿ ಮುಂದೆ ಇನ್ನೂ 20ರಿಂದ 25ಜನರಿದ್ದರು. ಸರಿ, ಮಗನನ್ನು ಅವರಪ್ಪನ ಜತೆ ಬಿಟ್ಟುಬರೋಣ ಎಂದವಳೇ ಸೀದಾ ಕಾರಿಡಾರ್‌ನಲ್ಲಿ ಮಲಗಿದ್ದ ಪತಿ ಬಾಲಾಜಿ ಬಳಿ ಬಂದಳು. ಜ್ವರದಿಂದ ಹೈರಾಣಾಗಿ ಅರೆನಿದ್ರೆಯಲ್ಲಿದ್ದ ಪತಿ ಬಳಿ ಮಗನನ್ನು ಬಿಟ್ಟು, “ಒಂಚೂರು ನೋಡಿಕೋ, ಟೋಕನ್ ತಗೋಂಡ್ ಬರ್ತೀನಿ’ ಎಂದು ಹೇಳಿ ಹೊರಟಳು.
ಸುಮಾರು ಅರ್ಧಗಂಟೆ ಕಳೆಯಿತು. ಟೋಕನ್ ಪಡೆದು ಪತಿ ಮಲಗಿದ್ದ ಸ್ಥಳಕ್ಕೆ ಬಂದ ಲಕ್ಷ್ಮಿಗೆ ಮಗು ಕಾಣಿಸಲೇ ಇಲ್ಲ. ಬಂದವಳೇ “ಮಗು ಎಲ್ಲಿ’ ಎಂದು ಪ್ರಶ್ನಿಸಿದಳು. “ಇಲ್ಲೇ ಇದ್ದ. ನಾನು ನಿದ್ದೆಗೆ ಜಾರಿದ್ದೆ’ ಎಂದ ಬಾಲಾಜಿ. ಆಸ್ಪತ್ರೆಯ ಮೂಲೆ ಮೂಲೆ ಹುಡುಕಿದರೂ ಮಗು ಕಾಣಲೇ ಇಲ್ಲ. ಯಾರನ್ನು ಕೇಳಿದರೂ “ನಾವು ನೋಡಿಲ್ಲ’ ಎಂಬ ಉತ್ತರ.
ಎಷ್ಟು ಹುಡುಕಿದರೂ ಮಗು ಕಾಣದಿದ್ದಾಗ ಲಕ್ಷ್ಮಿಯ ಚೀರಾಟ, ಗೋಳಾಟ ಹೆಚ್ಚಾಯಿತು. ವಿಷಯ ತಿಳಿದ ಆಸ್ಪತ್ರೆ ಸಿಬ್ಬಂದಿ ದಂಪತಿಯನ್ನು ಸಂತೈಸಿದರು. ಬಾಲಾಜಿಗೆ ಚಿಕಿತ್ಸೆ ಕೊಡಿಸಿ ಮನೆಗೆ ಕರೆತಂದ ಲಕ್ಷ್ಮೀ, ಬೌರಿಂಗ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದಳು.
ಪೊಲೀಸರು ತನಿಖೆ ಆರಂಭಿಸಿದರು. ಮಗು ಪುನೀತ್ ಕಾಣೆಯಾದ ಬಗ್ಗೆ ಪ್ರಕಟಣೆ ಹೊರಡಿಸಿದರು. ನಗರದ ಎಲ್ಲ ಎನ್‌ಜಿಒ ಕೇಂದ್ರಗಳು, ಬಸ್, ರೈಲು ನಿಲ್ದಾಣ ಸೇರಿ ಎಲ್ಲೇ ಹುಡುಕಿದರೂ ಪುನೀತ್ ಸುಳಿವು ಸಿಗಲಿಲ್ಲ. ಮಗನ ಬಗ್ಗೆ ಮಾಹಿತಿ ಕೇಳಲು ದಂಪತಿ ಪೊಲೀಸ್ ಠಾಣೆಗೆ ಬರುವುದು, ನಿರಾಶರಾಗಿ ಮನೆಗೆ ಹೋಗುವ ಪ್ರಕ್ರಿಯೆ ಬರೋಬ್ಬರಿ ಏಳು ತಿಂಗಳು ನಡೆಯಿತು.
ತಮಟೆ ಸದ್ದಿಗೆ ಓಗೊಟ್ಟ ಕಂದ: ಮಗು ಹುಡುಕಲು ಪೊಲೀಸರನ್ನೇ ನೆಚ್ಚಿಕೊಂಡರೆ ಕಷ್ಟವಾಗಬಹುದು ಅಂದುಕೊಂಡ ಬಾಲಾಜಿ ದಂಪತಿ, ಬೆಂಗಳೂರಿನ ಬಸ್, ರೈಲು ನಿಲ್ದಾಣಗಳು ಸೇರಿ ಜನನಿಬಿಡ ಪ್ರದೇಶಗಳಲ್ಲಿ ಹುಡುಕಿದರು. ಮಕ್ಕಳ ಸಹಾಯವಾಣಿ ಕೇಂದ್ರಕ್ಕೂ ದೂರು ನೀಡಿದರು. ಫಲಿತಾಂಶ ಮಾತ್ರ ಶೂನ್ಯ.
ಪುನೀತ್ ತಮ್ಮ ಜತೆಗಿದ್ದಾಗ ಮಾಡಿದ್ದ ತುಂಟಾಟಗಳು, ಆತ ಯಾವುದಕ್ಕೆ ಹೆಚ್ಚು ಸ್ಪಂದಿಸುತ್ತಿದ್ದ ಎಂಬುದನ್ನು ಗಂಪತಿ ಮೆಲುಕು ಹಾಕುತ್ತಿದ್ದರು. ಹೀಗಿರುವಾಗಲೇ, ಬಾಲಾಜಿ ತಮಟೆ ಬಾರಿಸಲು ಆರಂಭಿಸಿದರೆ, ಅದರ ಸದ್ದು ಕೇಳಿ, ಪುನೀತ್ ಉತ್ಸಾಹ ಪುಟಿಯುತ್ತಿತ್ತು. ಕೇಕೆ ಹಾಕುತ್ತಿದ್ದ ಚಿತ್ರಣ ಅವರ ಕಣ್ಮುಂದೆ ಸುಳಿದುಹೋಗಿತ್ತು. ಆಗಿದ್ದಾಗಲಿ; ಶಿವಾಜಿನಗರ, ಡಿ.ಜೆ.ಹಳ್ಳಿ ಸುತ್ತ ಒಮ್ಮೆ ತಮಟೆ ಬಾರಿಸುತ್ತಾ ಹೋಗೋಣ, ಎಲ್ಲಾದರೂ ಮಗ ಕಾಣಬಹುದು.
ತಮಟೆ ಸದ್ದು ಕೇಳಿ ಓಡಿ ಬರಬಹುದು ಎಂಬ ಆಸೆ ಬಾಲಾಜಿಗೆ ಚಿಗುರೊಡೆಯಿತು.ಇದಕ್ಕೆ ಲಕ್ಷ್ಮೀ ಸಹ ಹೂ… ಅಂದಳು. ಇದಾದ ಕೆಲವೇ ದಿನಗಳಲ್ಲಿ ಡಿ.ಜೆ.ಹಳ್ಳಿಯ ನಿವಾಸಿಯೊಬ್ಬರು ತೀರಿಕೊಂಡು, ಶವದ ಮೆರವಣಿಗೆ ವೇಳೆ ತಮಟೆ ಬಡಿಯಲು ಬಾಲಾಜಿಯನ್ನು ಕರೆದಿದ್ದರು. ಲಕ್ಷ್ಮೀ ಕೂಡ ಅಂತ್ಯಸಂಸ್ಕಾರದ ವೇಳೆ ಸಣ್ಣಪುಟ್ಟ ಕೆಲಸ ಮಾಡಲು ಪತಿ ಜತೆ ತೆರಳಿದ್ದಳು. ಅಂತ್ಯಸಂಸ್ಕಾರ ಮುಗಿಯಿತು…
ಕಣ್ಣು ತುಂಬಿದ ಆನಂದ ಭಾಷ್ಪ: ಅಂತಿಮ ಸಂಸ್ಕಾರದ ನಂತರ ದಂಪತಿ ಮನೆಯತ್ತ ನಡೆದು ಹೊರಟಿದ್ದರು. ಕೈಲಿದ್ದ ತಮಟೆಯನ್ನು ಬಾಲಾಜಿ ಬಡಿಯುತ್ತಿದ್ದ. ಲಕ್ಷ್ಮೀ ಆತನನ್ನು ಹಿಂಬಾಲಿಸುತ್ತಿದ್ದಳು. ಅದೊಂದು ಬೇಕರಿ ಎದುರು ತಮಟೆ ಬಡಿಯುತ್ತಿದ್ದ ಬಾಲಾಜಿಗೆ, ಮಗು ಕೂದಿಗ ದನಿ ಕೇಳಿಸಿದಂತಾಯ್ತು. ತ್ತಿತ್ತ ಕಣ್ಣು ಹೊರಳಿಸಿ ನೋಡಿದರೆ, ಅಲ್ಲೊಂದು ಗೋಡೆ ಮರೆಯಲ್ಲಿ ನಿಂತ ಮಗು, ಹೆತ್ತವರತ್ತ ಬೆರಳು ತೋರಿಸುತ್ತಾ ಅಳುತ್ತಿತ್ತು.
ಮಗು ದೂರದಲ್ಲಿದ್ದರೂ ಆತ ತನ್ನ ಮಗ ಪುನೀತ ಎಂಬುದು ಹೆತ್ತ ಕರುಳಿಗೆ ಖಾತ್ರಿಯಾಗಿತ್ತು. ಮಗು ಕಂಡದ್ದೇ ದಂಪತಿ ಇಬ್ಬರೂ ಓಡಿಹೋಗಿ ಎತ್ತಿಕೊಂಡು ಮುದ್ದಾಡಿದರು. ಏಳು ತಿಂಗಳ ಬಳಿಕ ಮಗು ಕಂಡ ಅವರ ಕಣ್ಣಾಲಿಗಳಲ್ಲಿ ಆನಂದ ಭಾಷ್ಪಗಳಿದ್ದವು. ಇದನ್ನೆಲ್ಲಾ ನೋಡುತ್ತಾ ನಿಂತ ಸ್ಥಳೀಯರಿಗೆ ಅಲ್ಲಿ ಏನು ನಡೆಯುತ್ತಿದೆ ಎಂದೇ ಗೊತ್ತಾಗಲಿಲ್ಲ. ಮಗು ಕಳೆದುಕೊಂಡ ಬಗ್ಗೆ ದಂಪತಿ ವಿವರಿಸಿದರು. ಈ ಬೆಳವಣಿಗೆಗಳ ನಡುವೆ, ಪುನೀತ್‌ನನ್ನು ಆಸ್ಪತ್ರೆಯಿಂದ ತಂದಿದ್ದ ಮಹಿಳೆ ಅಲ್ಲಿಂದ ಹೊರಟುಹೋಗಿದ್ದಳು.
ಮಗು ಸಿಕ್ಕ ವಿಚಾರವನ್ನು ದಂಪತಿಯೇ ಪೊಲೀಸರಿಗೆ, ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ತಿಳಿಸಿದರು. ಪೊಲೀಸರು ಪುನೀತ್‌ನನ್ನು ತೆಗೆದುಕೊಂಡು ಹೋಗಿದ್ದ ಮಹಿಳೆಯನ್ನು ಕರೆಸಿ ವಿಚಾರಿಸಿದಾಗ ಮಕ್ಕಳಿಲ್ಲದ್ದಕ್ಕೆ ಮಗುವನ್ನು ತಂದು ಸಾಕಿಕೊಂಡಿದ್ದಾಗಿ ಹೇಳಿಕೆ ನೀಡಿದ್ದಳು. ಬಾಲಾಜಿ ದಂಪತಿ ಕೂಡ ಕೇಸ್ ದಾಖಲಿಸುವುದು ಬೇಡ ಎಂದರು. ಹೀಗಾಗಿ ಮಹಿಳೆಗೆ ಎಚ್ಚರಿಕೆ ನೀಡಿ ಕಳುಹಿಸಲಾಯಿತು ಎಂದು 2009ರಲ್ಲಿ ನಡೆದ ಪ್ರಕರಣವನ್ನು ವಿಚಾರಣೆ ನಡೆಸಿದ್ದ ಅಧಿಕಾರಿಯೊಬ್ಬರು ಮೆಲುಕು ಹಾಕಿದರು.
* ಮಂಜುನಾಥ್ ಲಘುಮೇನಹಳ್ಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.