ಸರಳ ಜೀವಿ, ಮಹಾ ಸಂಘಟನಾ ಚತುರ
Team Udayavani, Mar 18, 2019, 12:30 AM IST
ಶುದ್ಧ ಹಸ್ತ, ಕಾರ್ಯತಂತ್ರ ನಿಪುಣ, ಆಡಳಿತಾತ್ಮಕ ಕುಶಾಗ್ರಮತಿ, ಸರಳ ವ್ಯಕ್ತಿತ್ವದ ಮನೋಹರ್ ಪರ್ರಿಕರ್‌ಗೆ ಅವರೇ ಸಾಟಿ. ಗೋವಾದ ಪರ್ರಾ ಗ್ರಾಮದಲ್ಲಿ ರೈತಾಪಿ ಕುಟುಂಬವೊಂದರಲ್ಲಿ ಜನಿಸಿದ ಮನೋಹರ್ ಗೋಪಾಲಕೃಷ್ಣ ಪ್ರಭು ಪರ್ರಿಕರ್(63) ಎರಡು ದಶಕಗಳ ಕಾಲ ರಾಜ್ಯ ರಾಜಕೀಯದಲ್ಲಿ ಪ್ರಭಾವಿಯಾಗಿ ಬೆಳೆದಿದ್ದು ಮಾತ್ರವಲ್ಲ, ಗೋವಾದ ಅಪರೂಪದ ರಾಷ್ಟ್ರೀಯ ನಾಯಕ ಎಂಬ ಹೆಗ್ಗಳಿಕೆಯನ್ನೂ ಮುಡಿಗೇರಿಸಿಕೊಂಡವರು. ಅರ್ಧ ತೋಳಿನ ಅಂಗಿ, ಚರ್ಮದ ಚಪ್ಪಲಿಯೇ ಅವರ ಟ್ರೇಡ್ ಮಾರ್ಕ್ ಆಗಿದ್ದರೂ, ದಿಟ್ಟ ವ್ಯಕ್ತಿತ್ವ, ವೃತ್ತಿಪರ ನಿಲುವುಗಳು ಅವರನ್ನು ರಾಜಕೀಯವಾಗಿ ಎತ್ತರಕ್ಕೇರಿಸಿದ್ದು ಸುಳ್ಳಲ್ಲ.
ಆರಂಭಿಕ ಜೀವನ: ಗೋವಾದ ಮಾಪುಸಾದಲ್ಲಿ 1955ರ ಡಿ. 13ರಂದು ಜನಿಸಿದ್ದ ಮನೋಹರ್ ಪರ್ರಿಕರ್, ಮಾರ್ಗೋಸಾದ ಲೊಯೊಲಾ ಹೈಸ್ಕೂಲಿನಲ್ಲಿ ತಮ್ಮ ಶಿಕ್ಷಣದ ಆರಂಭಿಕ ಹೆಜ್ಜೆಗಳನ್ನು ಇಟ್ಟವರು. ಶಾಲಾ ಹಂತದಲ್ಲಿ ಮರಾಠಿ ಮಾಧ್ಯಮದಲ್ಲೇ ಓದಿದ ಇವರು, ಆನಂತರ, 1978ರಲ್ಲಿ ಬಾಂಬೆಯ ಐಐಟಿಯಲ್ಲಿ ಲೋಹಶಾಸ್ತ್ರದಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. ಆನಂತರ ರಾಜಕೀಯಕ್ಕೆ ಕಾಲಿಟ್ಟರು. ಉತ್ತಮ ಸಂಘಟನಾ ಚತುರರಾಗಿ ಹೆಸರು ಪಡೆದ ಇವರು, ಗೋವಾ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಗಣನೀಯ ಕಾಣಿಕೆ ನೀಡಿದ್ದಾರೆ.
ಆರ್‌ಎಸ್‌ಎಸ್ ಅಡಿಪಾಯ: ಪರ್ರಿಕರ್ ಅವರಲ್ಲಿನ ನಾಯಕತ್ವ ಗುಣ, ಸಂಘಟನಾ ಚಾತುರ್ಯ ಹಾಗೂ ಶಿಸ್ತಿನ ಜೀವನಕ್ಕೆ ಅಡಿಪಾಯ ಹಾಕಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಚಿಕ್ಕ ವಯಸ್ಸಿನಲ್ಲೇ ಆರ್‌ಎಸ್‌ಎಸ್‌ಗೆ ಸೇರ್ಪಡೆಗೊಂಡಿದ್ದ ಅವರು, ತಮ್ಮ ಶಾಲಾ ದಿನಗಳ ಅಂತಿಮ ಘಟ್ಟದಲ್ಲಿ ಮುಖ್ಯ ಶಿಕ್ಷಕ್ ಪಟ್ಟಕ್ಕೇರಿದ್ದರು. ಇಂಜಿನಿಯರಿಂಗ್ ಪದವಿ ಪಡೆದ ನಂತರ, ತಮ್ಮದೇ ಆದ ಸ್ವಂತ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದರೂ, ಆರ್‌ಎಸ್‌ಎಸ್ ನಂಟು ಬಿಟ್ಟಿರಲಿಲ್ಲ. ತಮ್ಮ 26ನೇ ವಯಸ್ಸಿಗೆ ಸಂಘ ಚಾಲಕ್ ಆದ ಅವರು, ಅಲ್ಲಿ ಕಲಿತ ಪಾಠಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡರು. ಮುಖ್ಯಮಂತ್ರಿ, ರಕ್ಷಣಾ ಸಚಿವರಾಗಿದ್ದರೂ ತಮ್ಮನ್ನು ತಾವು ಆರ್‌ಎಸ್‌ಎಸ್ ಪ್ರಚಾರಕ್ ಎಂದು ಗುರುತಿಸಿಕೊಳ್ಳುವುದರಲ್ಲೇ ಅವರಿಗೆ ಹೆಮ್ಮೆಯಿತ್ತು.
ಬಿಜೆಪಿ ವರ್ಚಸ್ಸು ಹೆಚ್ಚಿಸಿದ ಕೀರ್ತಿ: 1998ರಲ್ಲಿ ಬಿಜೆಪಿಗೆ ಸೇರ್ಪಡೆಗೋಂಡ ಅವರು, 1994ರಲ್ಲಿ ಮೊದಲ ಬಾರಿಗೆ ಪಣಜಿ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. ಪಕ್ಷಕ್ಕೆ ಸೇರ್ಪಡೆಗೊಂಡಾಗಿನಿಂದಲೂ ಪಕ್ಷದ ಸಂಘಟನೆಯಲ್ಲಿ ಹೆಚ್ಚಿನ ಆಸ್ಥೆ, ಶ್ರದ್ಧೆ ತೋರಿದ ಅವರು, ನೋಡನೋಡುತ್ತಲೇ ತಮ್ಮ ಶ್ರಮದ ದುಡಿಮೆಯಿಂದ ದಕ್ಷ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಇದರ ಫಲವಾಗಿ, 1999ರಲ್ಲಿ ಅವರಿಗೆ ವಿಧಾನಸಭೆಯ ಪ್ರತಿಪಕ್ಷಗಳ ನಾಯಕನ ಹುದ್ದೆ ಹುಡುಕಿಕೊಂಡು ಬಂತು. ಸಮರ್ಥ ಪ್ರತಿಪಕ್ಷಗಳ ನಾಯಕನಾಗಿ ಅಧಿಕಾರ ಗದ್ದುಗೆಯಲ್ಲಿದ್ದ ಕಾಂಗ್ರೆಸ್‌ನ ಆಡಳಿತ ಲೋಪಗಳನ್ನು ಒಂದೊಂದಾಗಿ ಎಳೆದು ತರುತ್ತಿದ್ದ ಅವರು, ಅದರ ಜತೆಯಲ್ಲೇ ಬಿಜೆಪಿಯ ವರ್ಚಸ್ಸನ್ನು ರಾಜ್ಯದಲ್ಲಿ ಎತ್ತರಕ್ಕೆ ಕೊಂಡೊ ಯ್ಯುವಲ್ಲಿ ಯಶಸ್ವಿಯಾದರು. ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ವರದಿಯಲ್ಲಿ ಗೋವಾದ ಅಕ್ರಮ ಗಣಿಗಾರಿಕೆಯನ್ನು ಬೆಳಕಿಗೆ ತಂದರು. ಇದರ ಫಲವಾಗಿ ನಿವೃತ್ತ ನ್ಯಾಯಮೂರ್ತಿ ಎಂ.ಬಿ. ಶಾ ಅವರ ನೇತೃತ್ವದಲ್ಲಿ ಈ ಪ್ರಕರಣದ ತನಿಖೆಯಾಯಿತು.
ಮುಖ್ಯಮಂತ್ರಿ ಹಾದಿ: 2000ರಲ್ಲಿ ನಡೆದ ವಿಧಾನಸಭಾ ಚುನಾ ವಣೆಯಲ್ಲಿ ಪುನಃ ಗೆದ್ದು ವಿಧಾನಸಭೆಗೆ ಕಾಲಿಟ್ಟ ಅವರನ್ನು ಮುಖ್ಯಮಂತ್ರಿ ಹುದ್ದೆ ಹುಡುಕಿಕೊಂಡು ಬಂತು. ಆದರೆ, ಅವರ ಅಧಿಕಾರಾವಧಿ ಅಲ್ಪಕಾಲದ್ದಾಗಿತ್ತು. 2002ರ ಫೆ. 27ರಂದು ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಆದರೆ, 2002ರ ಜೂ. 5ರಂದು ಮತ್ತೆ ಮುಖ್ಯಮಂತ್ರಿ ಹುದ್ದೆಗೇರಿದರು.
ರಾಜಕೀಯ ಏರಿಳಿತ: 2005ರಲ್ಲಿ ಗೋವಾ ಬಿಜೆಪಿಯ ನಾಲ್ವರು ಶಾಸಕರು ರಾಜೀನಾಮೆ ಸಲ್ಲಿಸಿದ್ದರಿಂದ ಸರಕಾರ ಪತನಗೊಂಡಿತು. 2007ರಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆನಂತರ, 2012ರ ಚುನಾವಣೆಯಲ್ಲಿ ಪುನಃ ಬಿಜೆಪಿ ಅಧಿಕಾರಕ್ಕೆ ಬಂದು ಪರ್ರಿಕರ್ ಮತ್ತೆ ಮುಖ್ಯಮಂತ್ರಿಯಾದರು. 2014ರ ಲೋಕಸಭಾ ಚುನಾವಣೆಯಲ್ಲಿ ಗೋವಾದ 2 ಸಂಸತ್ ಕ್ಷೇತ್ರಗಳನ್ನೂ ಬಿಜೆಪಿ ತನ್ನದಾಗಿಸಿಕೊಂಡಿತು. ಆದರೆ, ಆ ಚುನಾವಣೆಯ ನಂತರ ಪ್ರಧಾನಿಯಾದ ನರೇಂದ್ರ ಮೋದಿಯವರ ಬಲವಂತಕ್ಕೆ ಮಣಿದು ಕೇಂದ್ರದಲ್ಲಿ ರಕ್ಷಣಾ ಸಚಿವರಾದರು. ಆಗ, ಅವರನ್ನು ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯರನ್ನಾಗಿ ಆರಿಸಲಾಗಿತ್ತು. ಆದರೆ, 2017ರಲ್ಲಿ ಆ ಹುದ್ದೆಯಿಂದ ತೆರವುಗೊಂಡು ಪುನಃ ಗೋವಾ ಮುಖ್ಯಮಂತ್ರಿ ಹುದ್ದೆಗೆ ಅವರು ಹಿಂದಿರುಗಿದರು.
ಐಐಟಿಯ ಹೆಮ್ಮೆಯ ವಿದ್ಯಾರ್ಥಿ: ಬಾಂಬೆ ಐಐಟಿಯ ಮೂಲಕ ಇಂಜಿನಿಯರಿಂಗ್ ಪದವೀಧರರಾದ ಪರ್ರಿಕರ್, ಗೋವಾದ ಮುಖ್ಯಮಂತ್ರಿಯಾಗುವ ಮೂಲಕ ಈ ಸಾಧನೆ ಮಾಡಿದ ದೇಶದ ಮೊದಲ ಐಐಟಿ ಮಾಜಿ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಹಾಗಾಗಿ, ಅವರಿಗೆ ಬಾಂಬೆ ಐಐಟಿಯ ಪ್ರತಿಷ್ಠಿತ ಅಲುಮ್ನಿ ಗೌರವ ನೀಡಲಾಗಿತ್ತು.
ನಿಲೇಕಣಿ ಸ್ನೇಹಿತ!: ಬಾಂಬೆ ಐಐಟಿಯಲ್ಲಿ ಪರ್ರಿಕರ್ ಹಾಗೂ ಇನ್ಫೋಸಿಸ್‌ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಸ್ನೇಹಿತರಾಗಿ ದ್ದರು. ಪರ್ರಿಕರ್ ಹಾಗೂ ನಿಲೇಕಣಿ ಇಬ್ಬರೂ ಐಐಟಿಯ ಹಾಸ್ಟೆಲ್‌ನಲ್ಲಿ ಒಂದೇ ರೂಮಿನಲ್ಲಿ ವಾಸ ಮಾಡುತ್ತಿದ್ದರು. ನಿಲೇಕಣಿ ಮಾತ್ರವಲ್ಲದೆ, ಬಾಂಬೆ ಐಐಟಿಯಲ್ಲಿ ತಮ್ಮೊಂದಿಗೆ ಓದಿದ ಅನೇಕ ಸಹಪಾಠಿಗಳೊಂದಿಗೆ ಪರ್ರಿಕರ್ ಸ್ನೇಹ ಹೊಂದಿದ್ದರು.
ಪರ್ರಿಕರ್‌ರ ಕೆಲವು ಜನಪ್ರಿಯ ಯೋಜನೆಗಳು: 2012ರ ಚುನಾವಣೆ ವೇಳೆ ಜನಪ್ರಿಯ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ಅವರು, ಆನಂತರ ಅಧಿಕಾರಕ್ಕೆ ಬಂದ ಮೇಲೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ನು 11 ರೂ.ಗಳಷ್ಟು ಕಡಿತ ಮಾಡಿದರು. ಇದು ಜನಮೆಚ್ಚುಗೆಗೆ ಪಾತ್ರವಾಗಿತ್ತು. ಗೃಹಿಣಿಯರಿಗೆ ಮಾಸಾಶನ ನೀಡಿದ ಹೆಗ್ಗಳಿಕೆ ಇವರ ಸರಕಾರದ್ದು. ಜತೆಗೆ, ಹೆಣ್ಣು ಮಕ್ಕಳ ವಿವಾಹದ ವೇಳೆ ಆರ್ಥಿಕ ಸಹಾಯ ನೀಡುವ ಲಾಡ್ಲಿ ಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದರು.
ಕಷ್ಟ ಸಹಿಷ್ಣು, ಸರಳ ವ್ಯಕ್ತಿತ್ವ
2000ರಲ್ಲಿ ಮೊದಲ ಬಾರಿ ಸಿಎಂ ಆದ ಕೆಲವೇ ತಿಂಗಳಲ್ಲಿ ಪ್ರೀತಿಸಿ ಮದುವೆಯಾಗಿದ್ದ ಮೇಧಾ ಪರ್ರಿಕರ್ (2001)° ಕ್ಯಾನ್ಸರ್‌ಗೆ ಬಲಿಯಾದರು. ಆದರೆ, ಈ ನೋವು ತಮ್ಮ ಕೆಲಸ ಕಾರ್ಯಗಳಲ್ಲಿ ಎಂದಿಗೂ ಅವರು ತೋರಿಸಿಕೊಳ್ಳಲಿಲ್ಲ. ಆಗ, ಹದಿಹರೆಯದವರಾಗಿದ್ದ ತಮ್ಮ ಮಕ್ಕಳಾದ ಉತ್ಪಾಲ್ ಪರ್ರಿಕರ್, ಅಭಿಜಾತ್ ಪರ್ರಿಕರ್‌ರನ್ನು ಏಕಾಂಗಿಯಾಗಿ ಬೆಳೆಸಿದರು.
ಮೂರು ಬಾರಿ ಸಿಎಂ ಆದರೂ, ಕೇಂದ್ರ ಸಚಿವರಾದರೂ ತಮ್ಮ ಮನೆಯನ್ನು ಎಂದಿಗೂ ನವೀಕರಣಗೊಳಿಸಲಿಲ್ಲ. ಪ್ರತಿಷ್ಠಿತ ಹುದ್ದೆಯಲ್ಲಿದ್ದರೂ ವಿಮಾನಗಳಲ್ಲಿ ಪ್ರಯಾಣಿಸುತ್ತಿ ದ್ದುದು ಎಕಾನಮಿ ಕ್ಲಾಸ್‌ನಲ್ಲೇ. ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳಿಗೆ ಎಂದಿಗೂ ಸರ್ಕಾರಿ ವಾಹನ ಬಳಸಲಿಲ್ಲ. ತಮ್ಮ ವೈಯಕ್ತಿಕ ಖರ್ಚು ಗಳನ್ನು ಜೇಬಿನಿಂದಲೇ ಖರ್ಚು ಮಾಡುತ್ತಿದ್ದರು. ಎಷ್ಟೋ ಬಾರಿ, ಆಟೋ ರಿಕ್ಷಾ, ಸ್ಕೂಟರ್, ಸಾರ್ವಜನಿಕ ವಾಹನಗಳಲ್ಲಿ ಓಡಾಡಿದ ಉದಾಹರಣೆಗಳಿವೆ. ನಿಯಮಗೆಟ್ಟ ಅನೇಕ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿದ್ದರು. ಅವರಿಗೆ ರಾಜಕೀಯ ವಲಯದಲ್ಲಿ “ಮಿಸ್ಟರ್ ಕ್ಲೀನ್’ ಎಂದೇ ಹೆಸರುವಾಸಿಯಾಗಿದ್ದರು.
ಇಂದು ಸಂಜೆ 5ಕ್ಕೆ ಅಂತ್ಯಕ್ರಿಯೆ
ಗೋವಾ ಸಿಎಂ ಪರ್ರಿಕರ್ ನಿಧನದ ಹಿನ್ನೆಲೆಯಲ್ಲಿ ಸೋಮವಾರ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ. ರಾಷ್ಟ್ರ ರಾಜಧಾನಿ, ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯಗಳ ರಾಜಧಾನಿಗಳಲ್ಲಿ ತ್ರಿವರ್ಣ ಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗುತ್ತದೆ ಎಂದು ಕೇಂದ್ರ ಗೃಹ ಇಲಾಖೆ ವಕ್ತಾರರು ತಿಳಿಸಿದ್ದಾರೆ. ಇದೇ ವೇಳೆ, ಸೋಮವಾರ ಬೆಳಗ್ಗೆ 10 ಗಂಟೆಗೆ ಕೇಂದ್ರ ಸಂಪುಟ ಸಭೆಯನ್ನೂ ಕರೆಯಲಾಗಿದೆ.
ಬೆಳಗ್ಗೆ 9.30ರಿಂದ 10.30ರವರೆಗೆ ಪಣಜಿಯಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ
10.30ಕ್ಕೆ ಪರ್ರಿಕರ್ ಅವರ ಪಾರ್ಥಿವ ಶರೀರವನ್ನು ಪಣಜಿಯ ಕಲಾ ಅಕಾಡೆಮಿಗೆ ರವಾನೆ
11ರಿಂದ ಸಂಜೆ 4ರವರೆಗೆ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ
ಸಂಜೆ 4 ಗಂಟೆಗೆ ಕಂಪಾಲ್‌ನ ಎಸ್‌ಎಜಿ ಮೈದಾನದವರೆಗೆ ಪಾರ್ಥಿವ ಶರೀರದ ಮೆರವಣಿಗೆ
4.30ಕ್ಕೆ ಅಂತಿಮ ವಿಧಿ ವಿಧಾನ, ಸಂಜೆ 5ಕ್ಕೆ ಅಂತ್ಯಕ್ರಿಯೆ
ಮನೋಹರ್ ಪರ್ರಿಕರ್ ತಮ್ಮ ಸರಳತೆ, ಸಜ್ಜನಿಕೆಯಿಂದ ಜನಪ್ರಿಯರಾಗಿದ್ದ ಅಪರೂಪದ ರಾಜಕಾರಣಿಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರ ನಿಧನದ ಸುದ್ದಿ ಆಘಾತ ನೀಡಿದೆ. ಮೃತರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಒಂದು ವರ್ಷದಿಂದಲೂ ಅನಾರೋಗ್ಯದ ವಿರುದ್ಧ ಹೋರಾಡುತ್ತಿದ್ದ ಗೋವಾ ಸಿಎಂ ಮನೋಹರ್ ಪರ್ರಿಕರ್ ನಿಧನ ಸುದ್ದಿ ಕೇಳಿ ಖೇದವಾಯಿತು. ಎಲ್ಲ ಪಕ್ಷದವರ ಪ್ರೀತಿಯನ್ನೂ ಗಳಿಸಿದ ಅವರು ಗೋವಾದ ಮೆಚ್ಚಿನ ಮಗನಾಗಿದ್ದರು.
– ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
ರಾಜಕೀಯದ ಆರಂಭದ ದಿನಗಳಿಂದಲೂ ಅವರು ನನ್ನ ಜೊತೆಗಿದ್ದರು. ನನಗೆ ಒಳ್ಳೆಯ ಸ್ನೇಹಿತರೂ ಆಗಿದ್ದರು. ಗೋವಾದ ವಿಕಾಸಕ್ಕಾಗಿ ಕೊನೆಯ ಕ್ಷಣದವರೆಗೂ ಅವರು ಶ್ರಮಿಸಿದರು. ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ.
– ನಿತಿನ್ ಗಡ್ಕರಿ, ಕೇಂದ್ರ ಸಚಿವ
ಪರ್ರಿಕರ್ ಸರಳ ವ್ಯಕ್ತಿಯಾಗಿದ್ದರು. ಅವರಿಂದ ನಾನು ತುಂಬಾ ಕಲಿತಿದ್ದೇನೆ. ರಕ್ಷಣಾ ಸಚಿವರಾಗಿ ಸೇನೆಯ ಆಧುನೀಕರಣಕ್ಕೆ ಅವರು ಹೆಚ್ಚಿನ ಒತ್ತು ನೀಡಿದ್ದ ನ್ನು ಎಂದಿಗೂ ಮರೆಯಲಾಗದು.
ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವೆ
ಪರ್ರಿಕರ್ ಮಾನವೀಯ ವ್ಯಕ್ತಿಯಾಗಿದ್ದರು. ಒಬ್ಬ ಒಳ್ಳೆಯ ರಾಜಕಾರಣಿಯನ್ನು ನಾವು ಕಳೆದುಕೊಂಡಿದ್ದೇವೆ. ಅವರ ನಿಧನಕ್ಕೆ ಸಂತಾಪ ಸೂಚಿಸುತ್ತೇನೆ.
ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್ ನಾಯಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.