ಧ್ರುವನಾರಾಯಣ ಜತೆ ಒಳ ಒಪ್ಪಂದ ಇಲ್ಲ
Team Udayavani, Mar 18, 2019, 7:15 AM IST
ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮಹೇಶಣ್ಣ, ಕಾಂಗ್ರೆಸ್ ಅಭ್ಯರ್ಥಿ ಆರ್. ಧ್ರುವನಾರಾಯಣ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಮಾತಾಡುತ್ತಾರೆ. ಹೀಗೆ ಮಾತಾಡುವವರು ಅನ್ಯಾಯಕಾರರು. ಕಾಂಗ್ರೆಸ್ ಜೊತೆ ಒಪ್ಪಂದವೇ? ಈ ಗುಮಾನಿ ನಂಬಬೇಡಿ. ಬಿಎಸ್‌ಪಿ ಚಳವಳಿಗೆ ದ್ರೋಹ ಮಾಡೋದು ಒಂದೇ. ನನ್ನ ತಾಯಿಗೆ ದ್ರೋಹ ಮಾಡೋದು ಒಂದೇ ಎಂದು ಶಾಸಕ ಎನ್. ಮಹೇಶ್ ಹೇಳಿದರು.
ನಗರದ ತಾಲೂಕು ಕಚೇರಿ ಪಕ್ಕದ ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಬಿಎಸ್‌ಪಿ ಕಾರ್ಯಕರ್ತರ ಸಮಾವೇಶ ಹಾಗೂ ಕಾನ್ಶಿರಾಂ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ಏನೇನೋ ಬರೆದುಕೊಳ್ಳುತ್ತಾರೆ, ಬರೆದುಕೊಳ್ಳಲಿ. ಆನೆ ಮುಂದೆ ಹೋಗುತ್ತಿದ್ದರೆ ನಾಯಿ ಬೊಗಳುತ್ತದೆ.
ಬೊಗಳಿಕೊಳ್ಳಲಿ ಎಂದು ಅವರು ಕಿಡಿಕಾರಿದರು. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸುತ್ತೇವೆ. ಅವರನ್ನು ಗೆಲ್ಲಿಸುವ ಕೆಲಸ ಮಾಡೋಣ. ಕೊಳ್ಳೇಗಾಲ ವಿಧಾನಸಭೆಯಲ್ಲಿ ಗೆಲ್ಲಿಸಿದಂತೆ ಲೋಕಸಭಾ ಕ್ಷೇತ್ರದಲ್ಲೂ ಬಿಎಸ್‌ಪಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್‌ಗಿಂತ ಹೆಚ್ಚು ಸ್ಥಾನ: ಕಾಂಗ್ರೆಸ್‌ಗಿಂತ 5 ಜನ ಹೆಚ್ಚು ಎಂಪಿಗಳು ಬಿಎಸ್‌ಪಿಯಿಂದ ಗೆಲ್ಲುತ್ತಾರೆ. ಈ ಬಾರಿ ಕಾಂಗ್ರೆಸ್ 60 ಸ್ಥಾನ ದಾಟಲ್ಲ. ಬಿಎಸ್‌ಪಿ 65 ಎಂಪಿ ಸ್ಥಾನ ಗೆಲ್ಲುತ್ತೇವೆ. ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರ ಎಂಪಿಗಳನ್ನು ಗೆಲ್ಲಿಸುತ್ತೇವೆ. ಮೈಸೂರು-ಹಾಸನವನ್ನೂ ಗೆಲ್ಲಿಸಲು ಯತ್ನಿಸುತ್ತಿದ್ದೇವೆ. ಒಳೇಟು ನೀಡುತ್ತೇವೆ ಎಂದು ಮಹೇಶ್ ತಿಳಿಸಿದರು.
ನಮಗೆ 37 ಲಕ್ಷ ರೂ. ಸಾಕು: ಚುನಾವಣಾ ಆಯೋಗ, ಒಬ್ಬ ಲೋಕಸಭಾ ಅಭ್ಯರ್ಥಿ 70 ಲಕ್ಷ ರೂ. ಖರ್ಚು ಮಾಡಬಹುದು ಎಂದು ಹೇಳಿದೆ. ಆದರೆ ಬಿಎಸ್‌ಪಿ ಅಭ್ಯರ್ಥಿಗೆ ಬೇಕಾಗಿರುವುದು 37 ಲಕ್ಷ ರೂ. ಮಾತ್ರ ಎಂದು ಶಾಸಕ ಎನ್. ಮಹೇಶ್ ಹೇಳಿ ಪಕ್ಷದ ಖರ್ಚಿನ ವಿವರ ನೀಡಿದರು.
18.50 ಲಕ್ಷ ರೂ. ಬೂತ್ ಖರ್ಚು. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ 1852 ಬೂತ್‌ಗಳಿವೆ. ಒಂದೊಂದು ಬೂತ್‌ಗೆ ಖರ್ಚಿಗಾಗಿ ಕಾರ್ಯಕರ್ತರಿಗೆ 1 ಸಾವಿರ ಕೊಡುತ್ತೇವೆ. ಇನ್ನುಳಿದ 18.50 ಲಕ್ಷ ರೂ. ಕಾರು, ಬಾವುಟ, ಇತ್ಯಾದಿ ಪ್ರಚಾರಕ್ಕೆ ಬಳಸಲಾಗುವುದು. 37 ಲಕ್ಷ ರೂ.ಗಳಲ್ಲಿ ನಾವು ಚುನಾವಣೆ ಗೆಲ್ಲಬಹುದು ಎಂದು ಮಹೇಶ್ ಕಾರ್ಯಕರ್ತರಿಗೆ ಹೇಳಿದರು.
ಕಿಸಾನ್ ಸಮ್ಮಾನ್ ಮೋಸದ ಯೋಜನೆ: ಕಿಸಾನ್ ಸಮ್ಮಾನ್ ಎಂಬುದು ಮೋಸದ ಯೋಜನೆಯಾಗಿದೆ. ಈ ಯೋಜನೆಯಲ್ಲಿ ವರ್ಷಕ್ಕೆ 6 ಸಾವಿರ ರೂ. ಕೊಡುತ್ತಾರಂತೆ. ಮೂರು ಕಂತಿನಲ್ಲಿ 2 ಸಾವಿರ ರೂ. ನೀಡಲಾಗುತ್ತದಂತೆ. ನರೇಂದ್ರಮೋದಿಯವರಿಗೆ ಇದನ್ನು ಹೇಳಿಕೊಟ್ಟವರು ಕಾಂಗ್ರೆಸ್‌ನವರು.
ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆ ಸಂದರ್ಭದಲ್ಲಿ ಸರ್ಕಾರದ ಅಭಿವೃದ್ಧಿ ನಿಗಮಗಳನ್ನು ಬಳಸಿಕೊಂಡು 15 ಸಾವಿರದಿಂದ 30 ಸಾವಿರ ರೂ. ಸಾಲವನ್ನು ಮತದಾರರಿಗೆ ಕೊಡಿಸಿದರು. ಒಂದು ಮನೆಗೆ 30 ಸಾವಿರ ರೂ. ನೀಡಿದರೆ ಅವರು ಓಟು ಯಾರಿಗೆ ಹಾಕ್ತಾರೆ?
ಇದನ್ನು ನೋಡಿಕೊಂಡು ಮೋದಿಯವರು ಚುನಾವಣೆ ಸಂದರ್ಭದಲ್ಲಿ ರೈತರ ಖಾತೆಗೆ 2 ಸಾವಿರ ರೂ. ಹಾಕುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಣ ಕೊಟ್ಟರೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತದೆ. ಹೀಗೆ ಯೋಜನೆಯ ಹೆಸರಿನಲ್ಲಿ ಹಣ ಹಾಕಿದರೆ ಸಮಸ್ಯೆಯಿಲ್ಲ ಎಂಬ ಕಾರಣಕ್ಕೆ ರೈತರ ಖಾತೆಗೆ 2 ಸಾವಿರ ರೂ. ಹಾಕುತ್ತಿದ್ದಾರೆ ಎಂದು ಮಹೇಶ್ ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.