ಮನದೊಳಗೆ ಕಲುಕಿದ ಮನೆಯೊಳಗಿನ ತಾಳಮದ್ದಳೆ
Team Udayavani, Mar 22, 2019, 12:30 AM IST
ಒಂದು ವಿಶಿಷ್ಟ ಪ್ರಯೋಗ ಮಾಡಹೊರಟಿದ್ದರು ಮದೆಗಾರ್ ಕೃಷ್ಣಪ್ರಕಾಶ ಉಳಿತ್ತಾಯರು. ಈಶಾವಾಸ್ಯ ಪ್ರತಿಷ್ಠಾನದ ಮೂಲಕ ತಾಳಮದ್ದಳೆ ಕಲಿಕಾಸಕ್ತ ಅಭ್ಯಾಸಿಗಳಿಗಾಗಿ ಒಂದು ವೇದಿಕೆ ಸೃಷ್ಟಿ. ಹಾಗಂತ ಎಲ್ಲರೂ ಅಭ್ಯಾಸಿಗಳೇ ಆಗಿಬಿಟ್ಟರೆ ಅದು ಅದಕ್ಕೊಂದು ತೂಕಬರಬೇಕೆ. ಪ್ರತಿಷ್ಠಿತರ ಜತೆಗೆ ಅರ್ಥ ಹೇಳಿದರೆ ಭಯವೂ ತೊಲಗಿ ಕೂಟವೂ ಪೂರ್ಣವಾಗುತ್ತದೆ. ಹಾಗಾಗಿ ಹೆಸರುವಾಸಿಗಳೂ ಅರ್ಥ, ಭಾಗವತಿಕೆಗೆ ಇದ್ದರು. ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಅರ್ಥ ಕೇಳಿ ಅದರ ಸರಿತಪ್ಪುಗಳನ್ನು ವಿಶ್ಲೇಷಿಸಲು ಅರ್ಥಧಾರಿ, ಸಂಯೋಜಕ ಹರೀಶ್ ಬೊಳಂತಿಮೊಗರು ಗುರುಪೀಠದಲ್ಲಿದ್ದರು.
ವಾಮಂಜೂರಿನ ಉಳಾಯಿ ಬೆಟ್ಟಿನಲ್ಲಿ ಉಳಿತ್ತಾಯರ ಈಶಾವಾಸ್ಯ ಮನೆಯಲ್ಲಿ ನಡೆದ ಸತ್ಯಪದ ಎಂಬ ಅನ್ವರ್ಥನಾಮದ ಶ್ರೀರಾಮ ಪಟ್ಟಾಭಿಷೇಕ, ವನಾಭಿಗಮನ ತಾಳಮದ್ದಳೆಯಲ್ಲಿ ದಶರಥನ ಪಾತ್ರ ಮಾಡಿದ ವಾಸುದೇವರಂಗಾ ಭಟ್ ಹಾಗೂ ಶ್ರೀರಾಮನ ಪಾತ್ರ ಮಾಡಿದ ಅವಿನಾಶ್ ಶೆಟ್ಟಿ ಉಬರಡ್ಕ ಅವರು ಸೇರಿದ್ದ ಎಲ್ಲರ ಮನಕಲುಕುವಂತೆ ಭಾವಪರವಶರಾಗಿ ಸಂವಾದ ನಡೆಸಿಕೊಟ್ಟರು. ದಶರಥ ಪಾತ್ರಧಾರಿಯ ಭಾವಪೂರ್ಣತೆಗೆ ಭಂಗ ತರಲು ಕೈಕೇಯಿ ಪಾತ್ರ ಮಾಡಿದ್ದ ವಿ| ಸುಮಂಗಲಾ ರತ್ನಾಕರ್ ಅವರಿಗೂ ಸಾಧ್ಯವಾಗಲಿಲ್ಲ. ಮಾತಿಗೆ ಮಾತು ಬೆಳೆಸಿ, ಪಾತ್ರವನ್ನು ಬೆಳೆಸಿ, ದಶರಥನ ವಾದವನ್ನು ಕುಗ್ಗಿಸಬೇಕಾಗಿದ್ದ ಅವರು ಭಾವನೆಗೆ ಬೆಲೆ ಕೊಟ್ಟು , ದಶರಥನ ಮಾತಿನ ಓಘಕ್ಕೆ ಕಡಿವಾಣ ಹಾಕದೇ ಶ್ರೋತೃಗಳಿಗೆ ಭಾವಭಿತ್ತಿಯಲ್ಲಿ ಚಿತ್ತಾರ ಬಿಡಿಸಿ, ನೋಟಕರ ಕಣ್ಣಂಚಲ್ಲಿ ನೀರು ಜಿನುಗಿ, ಅರಿಯದೇ ಕಣ್ಣಹನಿ ಕೆನ್ನೆಮೇಲೆ ಬೀಳುವಂತೆ ಮಾಡಲು ಪೂರಕ ವಾತಾವರಣದ ಅವಕಾಶ ಮಾಡಿಕೊಟ್ಟು ರಸಭಂಗವಾಗದಂತೆ ಮಾಡಿಬಿಟ್ಟರು. ರಾಮನನ್ನು ದಶರಥ ಎತ್ತರಿದ ಪರಿ, ರಾಮ ಸಂವಾದಿಯಾಗಿ ಅದಕ್ಕುತ್ತರಿಸಿದ ಪರಿ ಅನನ್ಯ. ರಾಮನ ಅಗಲುವಿಕೆ, ರಾಮನೇ ತಾನಾಗುವಿಕೆ, ತಾನೇ ರಾಮನಾಗುವಿಕೆಯನ್ನು ದಶರಥನಾಗಿ ಬಿಚ್ಚಿಟ್ಟು ತಂದೆ ಮಗನ ವಾತ್ಸಲ್ಯಮೀರಿದ ಪ್ರೇಮವನ್ನು ಪ್ರಕಟೀಕರಿಸುವಲ್ಲಿ ರಂಗಾಭಟ್ಟರು ಯಶ ಸಾಧಿಸಿದರು. ಪೂರ್ಣ ಸಂವಾದ ಮುಗಿದ ಬಳಿಕ 60 ಸಂವತ್ಸರದ ಯಕ್ಷಗಾನ ಅನುಭವ ಹೊಂದಿದ ಲಕ್ಷ್ಮೀಶ ಅಮ್ಮಣ್ಣಾಯರೇ ಹೇಳಿದರು; ಪಟ್ಟಾಭಿಷೇಕದಲ್ಲಿ ಇಷ್ಟು ಚಂದದ ದಶರಥನ ಅರ್ಥ ಕೇಳಿರಲಿಲ್ಲ ಎಂದು.
ಮೊದಲ ಭಾಗದ ದಶರಥನನ್ನು ದಿನೇಶ್ ಶರ್ಮಾ ಕೊಯ್ಯೂರು ನಿಭಾಯಿಸಿದರು. ಅವರಿಗೆ ಯುಧಾಜಿತ್ ಆಗಿ ರಂಜನ್ ಹೊಳ್ಳ ಸುರತ್ಕಲ್ ಅವರು ಸಂವಾದ ನಡೆಸಿದರು. ಸುಮಂಗಲಾ ರತ್ನಾಕರ್ ಅವರ ಕೈಕೇಯಿಯ ಮನ ಪರಿವರ್ತನೆ ಮಾಡಲು ಮಂಥರೆಯಾದದ್ದು ಸಚ್ಚಿದಾನಂದ ನಾಯಕ್ ಬೆಲ್ಪತ್ರೆ ಮಣಿಪಾಲ ಅವರು. ಇಬ್ಬರ ಸಂಭಾಷಣೆ ರಸಗವಳ ದಂತಿತ್ತು. ಮಹಿಳೆಯರಿಬ್ಬರ ಆಗುಹೋಗಿನ ಸೋಗಿನ ಮಾತುಕತೆಯಂತಿರದೇ, ಬರಿಯ ಮತ್ಸರಗಳೇ ಮೂಡಿ ಬರದೇ ರಾಕ್ಷಸರೂಪಿನಿಂದ ಕೈಕೇಯಿಯ ಮನದೊಳಗೆ ಹೊಕ್ಕಂತೆ ವಿವರಿಸಿದರು ಸಚ್ಚಿದಾನಂದ ನಾಯಕರು. ಇದಕ್ಕೆ ಸಮತೂಕದಿಂದ ಪಾತ್ರಮಂಡನೆ ನಡೆಸಿಕೊಟ್ಟದ್ದು ಸುಮಂಗಲಾ ಅವರ ಹೆಗ್ಗಳಿಕೆ. ಸೀತೆಯಾಗಿ ದೀಪ್ತಿ ಭಟ್, ಸುಮಿತ್ರೆಯಾಗಿ ಸಾವಿತ್ರೀ ಶಾಸ್ತ್ರೀ, ಲಕ್ಷ್ಮಣನಾಗಿ ವಿದ್ಯಾಪ್ರಸಾದ್ ಮತ್ತು ಬಾಲಕೃಷ್ಣ ಭಟ್, ಗುಹನಾಗಿ ಜಯಂತಿ ಹೊಳ್ಳ ಸುರತ್ಕಲ್, ವಸಿಷ್ಠನಾಗಿ ಆದಿತ್ಯ ಶರ್ಮ, ಕೌಸಲೆÂಯಾಗಿ ಸುಧಾಕರ ಜೈನ್ ಹೊಸಬೆಟ್ಟುಗುತ್ತು ಚೆನ್ನಾಗಿ ನಿಭಾಯಿಸಿದರು. ಕೊನೆಗೆ ಮಂಗಳಪೂರ್ವದಲ್ಲಿ ಇದಕ್ಕೆಲ್ಲ ತಪ್ಪು ಒಪ್ಪುಗಳ ಚುಕ್ಕೆಯಿಟ್ಟವರು ಗುರುಪೀಠದಲ್ಲಿದ್ದ ಹರೀಶ್ ಬೊಳಂತಿಮೊಗರು ಅವರು. ಯಾವ ರೀತಿ ನಿಭಾಯಿಸಬಹುದು ಎಂಬ ಸೂಕ್ಷ್ಮಗಳನ್ನು ತಿಳಿಸಿದರು.
ಛಾಂದಸ ಭಾಗವತ ಅಂಡಾಲ ದೇವಿಪ್ರಸಾದ್, ಭವ್ಯಶ್ರೀ ಕುಲ್ಕುಂದ, ಪೃಥ್ವಿರಾಜ್ ಕವತ್ತಾರು, ಹರಿಕೃಷ್ಣ ಪೆಜತ್ತಾಯ ಅವರು ಭಾಗವತಿಕೆಗೆ, ಲಕ್ಷ್ಮೀಶ ಅಮ್ಮಣ್ಣಾಯ, ಕೃಷ್ಣ ಪ್ರಕಾಶ ಉಳಿತ್ತಾಯ, ಮುರಳಿ ರಾಯರಮನೆ, ಪೂರ್ಣೇಶ್ ಆಚಾರ್ಯ ಹಿಮ್ಮೆಳದಲ್ಲಿ ಜತೆಯಾದರು.
– ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.