ನೆನಪುಗಳ ಮಾತು ಮಧುರ
Team Udayavani, Mar 22, 2019, 12:30 AM IST
ಅಂದು ಜೂನ್ 8, 2016. ಮನೆಯಿಂದ ಗಂಟುಮೂಟೆ ಕಟ್ಟಿಕೊಂಡು ಬಂದು ಸೇರಿದ್ದು “ಧೀಮಹಿ’ ವಸತಿ ನಿಲಯಕ್ಕೆ. ಮೊದಲ ಬಾರಿಗೆ ಹಾಸ್ಟೆಲ್ ಜೀವನ ನಡೆಸಲು ಉತ್ಸುಕಳಾಗಿದ್ದೆ, ಆದರೆ, ಮನೆಯವರನ್ನು ಬಿಟ್ಟು ಮೂರು ವರ್ಷ ಹೇಗೆ ಇರುವುದೆಂಬ ಸಣ್ಣ ತಳಮಳ. ಮೆಸ್ ಊಟ ಸೇರುತ್ತದೋ ಇಲ್ಲವೋ ಎಂಬ ಚಿಂತೆ.
ಮೊಬೈಲ್ ಬಳಸಲು ಇಲ್ಲಿ ಅವಕಾಶವಿಲ್ಲ ಎಂದು ವಾರ್ಡನ್ ಹೇಳಿದಾಗ, ಮೊಬೈಲ್ ಇಲ್ಲದೆ ಹೇಗೆ ದಿನಕಳೆಯುವುದು ಎಂಬ ಚಿಂತೆ. ಮನಸ್ಸಿನಲ್ಲಿ ಪಣ ತೊಟ್ಟೆ, ಎಷ್ಟೇ ಕಷ್ಟಗಳು ಬಂದರೂ ಅದನ್ನು ಎದುರಿಸಿಯೇ ಸಿದ್ಧ ಎಂದು. ಭಾವುಕತೆಯಿಂದ ಅಮ್ಮನಿಗೆ ಟಾಟಾ ಹೇಳಿದೆ. ನನಗೆ ನೀಡಿದ ರೂಂಗೆ ಬಂದು, ರೂಮ್‌ಮೇಟ್ಸ್‌ಗಳ ಪರಿಚಯ ಮಾಡಿಕೊಂಡು, ನನ್ನ ವಸ್ತುಗಳನ್ನು ಜೋಡಿಸುವಷ್ಟರಲ್ಲಿ ಗಂಟೆ ಹತ್ತಾಗಿತ್ತು. ಮರುದಿನ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಓರಿಯಂಟೇಷನ್ ಕಾರ್ಯಕ್ರಮ. ಕಾಲೇಜಿನ ನೀತಿ-ನಿಯಮಗಳನ್ನು ಪ್ರಾಂಶುಪಾಲರು ಹೇಳುತ್ತಿದ್ದರು. ಅವರ ಮಾತುಗಳನ್ನು ಆಲಿಸಿ ನಾನು ಓದಲಿರುವ ಕಾಲೇಜಿನ ಬಗ್ಗೆ ತಿಳಿದುಕೊಂಡು ಹೆಮ್ಮೆಪಟ್ಟೆ.
ಪತ್ರಿಕೋದ್ಯಮ
ಪತ್ರಿಕೋದ್ಯಮವನ್ನು ಅಧ್ಯಯನ ಮಾಡಲೆಂದೇ ನಾನು ಎಸ್‌ಡಿಎಂಗೆ ಬಂದಿಳಿದಿದ್ದೆ. ಅಲ್ಲಿ ನಮ್ಮ ಸೀನಿಯರ್‌ಗಳು ಕೆಮರಾ, ಮೈಕ್ ಹಿಡಿದುಕೊಂಡು ನ್ಯೂಸ್ ಚಾನಲ್‌ನ ವರದಿಗಾರರಂತೆ ಅತ್ತಿಂದಿತ್ತ ಓಡಾಡುತ್ತಿದ್ದರು. ಅವರನ್ನು ನೋಡಿ ನಾನು ಕೂಡ ಅವರಂತೆ ಆಗಬೇಕೆಂದುಕೊಂಡೆ. ಹಾಗೆಯೇ 4-5 ಜನರ ತಂಡ ಸೇರಿಕೊಂಡು ಅವತ್ತಿನ ಕಾರ್ಯಕ್ರಮದ ಫೊಟೊಫೀಚರ್ ಬಿಡುಗಡೆ ಮಾಡಿದ್ದರು. ಅಂದಿನ ದಿನದ ಆಕರ್ಷಕ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿ, ಅವುಗಳಿಗೆ ಶೀರ್ಷಿಕೆಯನ್ನು ನೀಡಿ ಕಲರ್‌ಪ್ರಿಂಟ್ ಹಾಕಿಸಿಕೊಂಡು ಬಂದಿದ್ದರು. ಮೊದಲ ದಿನವೇ ನನ್ನನ್ನು ಸೆಳೆದದ್ದು ಪತ್ರಿಕೋದ್ಯಮ. ನಂತರ ಹಲವು ವಿಭಿನ್ನ ಪ್ರಯೋಗಗಳನ್ನು ಪತ್ರಿಕೋದ್ಯಮದಲ್ಲಿ ಮಾಡುತ್ತ ಬರವಣಿಗೆ, ಮಾತುಗಾರಿಕೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಂಡೆ.
ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳೆಂದರೆ ಎಲ್ಲರೂ ಒಂದು ಬಾರಿ ಹಿಂತಿರುಗಿ ನೋಡುತ್ತಾರೆ. ಸೃಜನಶೀಲತೆ, ಕ್ರಿಯಾಶೀಲತೆಗೆ ಅನ್ವರ್ಥವೆಂಬಂತೆ ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಎಲ್ಲರೂ ಕೊಂಡಾಡುತ್ತಾರೆ. ಕಾಲೇಜಿನಲ್ಲಿ ಯಾವುದೇ ಕಾರ್ಯಕ್ರಮವಿರಲಿ, ಸುದ್ದಿ ತಿಳಿಯುತ್ತಿದ್ದಂತೆ ವರದಿಗಾರಿಕೆಗೆ ನಾವು ಹಾಜರ್. ಹೀಗೆಯೇ ಪತ್ರಿಕೋದ್ಯಮ ನನ್ನ ನೆಚ್ಚಿನ ವಿಷಯವಾಯಿತು. ಆ ವಿಷಯದಲ್ಲಿ ಗರಿಷ್ಟ ಅಂಕಗಳನ್ನು ಪಡೆದುಕೊಂಡೆ. ಆದರೆ, ಪತ್ರಿಕೋದ್ಯಮ ಎಂಬುದು ಅಂಕಗಳನ್ನೂ ಮೀರಿದ್ದು ಎಂದು ನನಗೆ ಅರಿವಾಯಿತು.
ನಲ್ಮೆಯ ಗುರುಗಳ ಮಾಗದರ್ಶನ
ನಮ್ಮ ವಿಭಾಗದ ಮುಖ್ಯಸ್ಥರಾದ ಭಾಸ್ಕರ ಹೆಗಡೆಯವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳು. ವಿದ್ಯಾರ್ಥಿಗಳಿಗೆ ನಿರಂತರ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುತ್ತ, ನಮ್ಮ ಬೇಡಿಕೆಗಳಿಗೆ ಕಿವಿಗೊಟ್ಟು ಅವುಗಳನ್ನು ಪೂರೈಸಲು ತಮ್ಮಿಂದ ಸಾಧ್ಯವಾಗುವಷ್ಟು ಪ್ರಯತ್ನ ಮಾಡುತ್ತಿದ್ದರು. ಫಸ್ಟ್ ಸ್ಪೀಚ್, ವಾರದ ವಿದ್ಯಮಾನಗಳ ವೀಕ್ಲೀ ರೌಂಡ್‌ಅಪ್, “ಚಿಗುರು’ ವಾಲ್ ಮ್ಯಾಗ್‌ಜಿನ್ ಇವೆಲ್ಲ ವಿಭಾಗದ ನಿರಂತರ ಚಟುವಟಿಕೆಗಳು. ಯಾವತ್ತೂ ವಿದ್ಯಾರ್ಥಿಗಳ ಪರ ನಿಂತುಕೊಂಡು ಯಾರ ಮೇಲೂ ಹರಿಹಾಯದೇ ಸ್ಥಿತಪ್ರಜ್ಞರಂತೆ ಇರುತ್ತಾರೆ ನಮ್ಮ ಗುರುಗಳು.
ರಜತ ವರ್ಷದ ಸಂಭ್ರಮ
ಎಸ್‌ಡಿಎಂ ಕಾಲೇಜಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮವೆಂದರೆ ಅದು ಭಾಸ್ಕರ ಹೆಗಡೆಯವರ ವೃತ್ತಿ ಜೀವನದ ರಜತ ವರ್ಷ ಸಂಭ್ರಮ. ಅಂತಿಮ ವರ್ಷದ ವಿದ್ಯಾರ್ಥಿಗಳು ಸೇರಿಕೊಂಡು ಸರ್‌ಗೆ ತಿಳಿಯದಂತೆ ಅವರ ಹಳೆಯ ವಿದ್ಯಾರ್ಥಿಗಳನ್ನು ಆಮಂತ್ರಿಸಿ, ಅವರ ನೆಚ್ಚಿನ ತಿಂಡಿ-ತಿನಿಸುಗಳು, ಒಡನಾಡಿಗಳನ್ನು ಕರೆಯಿಸಿ “ವೀಕೆಂಡ್ ವಿತ್ ರಮೇಶ್’ ಮಾದರಿಯಲ್ಲಿ ಕಾರ್ಯಕ್ರಮವನ್ನು ಸಂಘಟಿಸಿದ್ದೆವು. ಗುರುಗಳ ಸಂತಸದ ಮೊಗವನ್ನು ಕಂಡು ನಾವೆಲ್ಲರೂ ಸಂಭ್ರಮಪಟ್ಟಿದ್ದೆವು
ನೆನಪುಗಳ ಮಾತು ಮಧುರ ಬಂಕ್ ಹಾಕಿ ಬೆಳ್ತಂಗಡಿ ಥಿಯೇಟರ್‌ನಲ್ಲಿ ಸಿನಿಮಾ ನೋಡಿದ್ದು, ಫಸ್ಟ್ ಬೆಂಚಿನಲ್ಲಿ ಕುಳಿತುಕೊಂಡು ಬಿಸ್ಕೆಟ್ ತಿಂದದ್ದು, ಸಂಸ್ಕೃತ ಕ್ಲಾಸ್‌ನಲ್ಲಿ ಬೈಗುಳ ತಿಂದದ್ದು, ಕಾನ್ಫರೆನ್ಸ್ ಕಾಲ್‌ನಲ್ಲಿ ಗ್ರೂಪ್‌ಸ್ಟಡಿ ಮಾಡಿದ್ದು, ಸೀನಿಯರ್ಗಳೊಂದಿಗೆ ಮಾಡಿದ ತರೆಲ, ಗೆಳತಿಯೊಂದಿಗೆ ಮುನಿಸಿಕೊಂಡು ಮಾತು ಬಿಟ್ಟದ್ದು, ಚೀಟಿ ಪಾಸ್ ಮಾಡಿ ಸಿಕ್ಕಿಬಿದ್ದದ್ದು, ಕ್ಲಾಸಿನಲ್ಲಿ ನಿದ್ದೆ ಮಾಡಿ ನಗೆಪಾಟಲಿಗೆ ಈಡಾಗಿದ್ದು, ಫೆಸ್ಟ್ ನಲ್ಲಿ ಭಾಗವಹಿಸಿದ್ದು, ಟ್ರಿಪ್ ಹೋಗಿದ್ದು, ಎಲ್ಲವೂ ಕಣ್ಣ ಮುಂದೆ ಫ್ಲ್ಯಾಷ್‌ಬ್ಯಾಕ್‌ನಂತೆ ಬರುತ್ತಿದೆ.
ಅವಕಾಶಗಳ ಸಾಗರ
ಎಸ್‌ಡಿಎಂ ಎಂದರೆ ಅದು ಅವಕಾಶಗಳ ಸಾಗರವಿದ್ದಂತೆ. ನನ್ನಿಂದ ಎಷ್ಟಾಗುತ್ತದೆ ಅಷ್ಟರ ಮಟ್ಟಿಗೆ ನನ್ನನ್ನು ನಾನು ಇಲ್ಲಿ ತೊಡಗಿಸಿಕೊಂಡಿದ್ದೇನೆ. ಬೇವು-ಬೆಲ್ಲ ಜೊತೆಯಾಗಿ ಇರುವಂತೆ ಸಿಹಿ- ಕಹಿ ಕ್ಷಣಗಳನ್ನು ಅನುಭವಿಸಿದ್ದೇನೆ. ಜೀವಮಾನಕ್ಕೆ ಸಾಕಾಗುವಷ್ಟು ಬದುಕಿನ ಪಾಠವನ್ನು ಕಲಿತುಕೊಂಡಿದ್ದೇನೆ. ಮೂರು ವರ್ಷಗಳಲ್ಲಿ ಉಜಿರೆಯ ಜೀವನಕ್ಕೆ ಒಗ್ಗಿಕೊಂಡಿದ್ದೆ. ಮತ್ತೂಂದೆಡೆಗೆ ಹೋಗಿ ಹೊಸ ಜೀವನ ನಡೆಸುವುದೆಂದರೆ ಅದು ಮನಸ್ಸಿಗೆ ತುಸು ಕಷ್ಟವಾಗುವ ವಿಚಾರ. ಕೇವಲ ಭೌತಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಉಜಿರೆ ನೆಲೆ ನೀಡಿತ್ತು. ಕಾರಿಡಾರಿನಲ್ಲಿ ಓಡಾಡುವಾಗಲೆಲ್ಲ ಆ ಕೊನೆಯ ದಿನಗಳು ಬಿಟ್ಟಿರಲಾರದಷ್ಟರ ಮಟ್ಟಿಗೆ ನಮ್ಮನ್ನು ಭಾವಪರವಶರನ್ನಾಗಿ ಮಾಡುತ್ತದೆ. ಮೂರು ವರ್ಷದಲ್ಲಿ ನೂರಾರು ನೆನಪುಗಳನ್ನು ನೀಡಿದ ಕಾಲೇಜಿಗೆ ನನ್ನ ನಮನಗಳನ್ನು ಸಲ್ಲಿಸುತ್ತ ಭಾರವಾದ ಹೆಜ್ಜೆಗಳನ್ನು ಇಟ್ಟು ಇಲ್ಲಿಂದ ಹೊರಡಲು ಸಿದ್ಧಳಾಗುತ್ತಿದ್ದೇನೆ.
– ಪ್ರಜ್ಞಾ ಹೆಬ್ಟಾರ್
ಅಂತಿಮ ಪತ್ರಿಕೋದ್ಯಮ, ಎಸ್‌ಡಿಎಂ ಕಾಲೇಜು, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.