ನಿಮ್ಮ ಮುಖ ಓದುವ”ಜೇನ್’ ಮಾಸ್ಟರ್!
Team Udayavani, Mar 23, 2019, 12:30 AM IST
ಮನುಷ್ಯನ ಮುಖ, ಎಂದಿಗೂ ಸುಳ್ಳು ಹೇಳದು’ ಅಂತಾರೆ ಬೆಂಗಳೂರಿನಲ್ಲಿ ನೆಲೆಸಿರುವ, ಭಾರತದ ಏಕೈಕ ಗ್ರ್ಯಾಂಡ್ ಮಾಸ್ಟರ್ ಫೇಸ್‌ರೀಡರ್. ಸ್ಕಾಟ್ಲೆಂಡ್ ಮೂಲದ ಜೇನ್, 60 ವರುಷಗಳಿಂದ ಮನುಷ್ಯನ ಸಹಸ್ರಾರು ಮುಖಗಳ ಎದುರು ಕುಳಿತು, ಅವುಗಳ ವೃತ್ತಾಂತ ಶೋಧಿಸುತ್ತಿರುವ ಚತುರ. ಹಣೆಬರಹ ಓದುತ್ತಾ, ಕಣ್ಣಿನಿಂದಲೇ ವ್ಯಕ್ತಿತ್ವ ಹೇಳುತ್ತಾ, ಮುಖ ಚರ್ಯೆಯಲ್ಲೇ ಮುಂದಿನ ಕನಸು ಫಲಿಸುತ್ತವೋ, ಇಲ್ಲವೋ ಎಂಬುದನ್ನು ಥಟ್ಟನೆ ಹೇಳುವ “ಫೇಸ್ ಸೈಂಟಿಸ್ಟ್’. “ಉದಯವಾಣಿ’ ಜತೆಗಿನ ವಿಶೇಷ ಮಾತುಕತೆಯಲ್ಲಿ ಮನುಷ್ಯನ ಮುಖದ ರಹಸ್ಯ ಬಿಚ್ಚಿಟ್ಟರು…
ಒಂದು ಪುಟ್ಟ ಪ್ರಸಂಗದಲ್ಲಿ ಜೇನ್ ಕಕ್ಸ್‌ಟನ್‌ರ ನೆನಪು ಪಾಕಿಸ್ತಾನಕ್ಕೆ ಜಾರಿತ್ತು. “2010ರ ಸುಮಾರು. ಭಾರತೀಯ ವಿದೇಶಾಂಗ ಕಾರ್ಯದರ್ಶಿ ಆಗಿದ್ದ ನಿರುಪಮಾ ರಾವ್, ರಾಜತಾಂತ್ರಿಕ ಸಭೆಗಾಗಿ ರಾವಲ್ಪಿಂಡಿಯ ಏರ್‌ಪೋರ್ಟ್‌ನಲ್ಲಿ ಇಳಿದಿದ್ದರು. ಅವರಿಗೆ ಬೊಕೆ ಕೊಟ್ಟು, ಸ್ವಾಗತಿಸಬೇಕಾಗಿದ್ದ ಪಾಕ್ ಮೇಲಧಿಕಾರಿಯೇ ಬೇರೆ. ಆದರೆ, ಕುತಂತ್ರಿ ಪಾಕ್ ಹಾಗೆ ಮಾಡಿರಲಿಲ್ಲ; ಅಫ್ರಾಸಿಯಾಬ್ ಮೆಹಿª ಹಶ್ಮಿ ಎಂಬ ಅಧಿಕಾರಿಯ ಕೈಗೆ ಬೊಕೆಯನ್ನಿಟ್ಟು, ನಿರುಪಮಾ ಅವರ ಮುಂದೆ ನಿಲ್ಲಿಸಿತ್ತು. ಮೆಹಿª ಹಶ್ಮಿ, ಪಾಕಿಸ್ತಾನದ ಚಾಣಾಕ್ಷ ಫೇಸ್ ರೀಡರ್. ನಿರುಪಮಾ ಅವರ ಮುಖದಲ್ಲಿ ಪಾಕ್ ಕುರಿತ ಆಲೋಚನೆಗಳೇನು? ಭಾರತ ರಾಜತಾಂತ್ರಿಕವಾಗಿ ಯಾವ ಹೆಜ್ಜೆಗಳನ್ನು ಇಡಬಹುದು? ಎಂಬುದನ್ನು ಗ್ರಹಿಸಿ, ಕೆಲವೇ ನಿಮಿಷಗಳಲ್ಲಿ ಆ ರಹಸ್ಯವನ್ನು ಪಾಕ್ ಸರ್ಕಾರದ ಮುಂದಿಟ್ಟಿದ್ದ. ನಿರುಪಮಾ ಅವರಿಗೆ ಅದು ಗೊತ್ತೇ ಇದ್ದಿರಲಿಲ್ಲ!
“ಪಾಕ್‌ನ ಆ ಫೇಸ್ ರೀಡರ್ ಮುಂದೆ ಬಂದು ನಿಂತರೆ, ಕ್ಷಣಾರ್ಧದಲ್ಲಿ ಮಣಿಸಬಲ್ಲೆ’ ಎಂದು ಚಿಟಿಕೆ ಹೊಡೆದು, ಸವಾಲೆಸೆದರು ಜೇನ್. ಭಾರತದ ಏಕೈಕ “ಗ್ರ್ಯಾಂಡ್ ಮಾಸ್ಟರ್’ ಖ್ಯಾತಿಯ ಫೇಸ್ ರೀಡರ್ ಜೇನ್ ಕಕ್ಸ್‌ಟನ್, ಬೆಂಗಳೂರಿನ ಲಿಂಗರಾಜಪುರ ವಾಸಿ. ಸ್ಕಾಟ್ಲೆಂಡ್ ಮೂಲದವರು. 60 ವರುಷಗಳಿಂದ ಮನುಷ್ಯನ ಸಹಸ್ರಾರು ಮುಖಗಳ ಎದುರು ಕುಳಿತು, ಅವುಗಳ ವೃತ್ತಾಂತ ಶೋಧಿಸುತ್ತಿರುವ ಚತುರ. ಹಣೆಬರಹ ಓದುತ್ತಾ, ಕಣ್ಣಿನಿಂದಲೇ ವ್ಯಕ್ತಿತ್ವ ಹೇಳುತ್ತಾ, ಮುಖ ಚರ್ಯೆಯಲ್ಲೇ ಮುಂದಿನ ಕನಸು ಫಲಿಸುತ್ತವೋ, ಇಲ್ಲವೋ ಎಂಬುದನ್ನು ಥಟ್ಟನೆ ಹೇಳುವ “ಫೇಸ್ ಸೈಂಟಿಸ್ಟ್’.
“ಮನುಷ್ಯನ ಮುಖ, ಎಂದಿಗೂ ಸುಳ್ಳು ಹೇಳದು. ಮೋರೆಯ ವಿನ್ಯಾಸ, ಬಣ್ಣ, ಗಾತ್ರ ಹಾಗೂ ವಯಸ್ಸು ನೋಡಿ, ವ್ಯಕ್ತಿಯ ನಡೆ- ನುಡಿ ಹೇಳಬಹುದು. ಅಲೆಗ್ಸಾಂಡರ್ ಅಧಿಕಾರ ಸ್ವೀಕರಿಸಿದಾಗ, ಗುರು ಅರಿಸ್ಟಾಟಲ್, ಸೇನೆಯಿಂದ ಹಿಡಿದು, ಆಡಳಿತ ಮಂಡಳಿವರೆಗಿನ ಎಲ್ಲ ಸಿಬ್ಬಂದಿಯನ್ನು ಮುಖ ನೋಡಿಯೇ ನೇಮಿಸಿದ್ದ. ಆ ತಂಡದಿಂದಲೇ ಅಲೆಗ್ಸಾಂಡರ್, ದೇಶ ದೇಶಗಳನ್ನು ಗೆದ್ದ. ಕೊನೆಗೆ ಆತ ಭಾರತಕ್ಕೆ ಹೊರಟು ನಿಂತಾಗ, ಅವನ ಮುಖ ನೋಡಿ, ನೀನು ಭಾರತಕ್ಕೆ ತಲೆಬಾಗಿ ಬರುತ್ತೀ ಎಂದು ಅರಿಸ್ಟಾಟಲ್ ಭವಿಷ್ಯ ನುಡಿದಿದ್ದ’ ಎನ್ನುತ್ತಾ ಚರಿತ್ರೆಯ ಪುಟಗಳನ್ನು ತೆರೆದರು, ಜೇನ್. “ಗ್ರೀಕ್‌ನವರು ಫಿಸಿಯೋನಮಿಯನ್ನು (ಮುಖ ಸಾಮುದ್ರಿಕ ಶಾಸ್ತ್ರ) ಮುಂದಿನ ಪೀಳಿಗೆಗೆ ದಾಟಿಸಲೇ ಇಲ್ಲ. ಚೀನಾದಲ್ಲಿ ಕ್ರಿ.ಪೂ. 2,500 ವರ್ಷಗಳ ಹಿಂದಿನಿಂದಲೇ ಫೇಸ್ ರೀಡಿಂಗ್ ಇದೆಯಾದರೂ, ಅದು ಆ ದೇಶದ ಗೋಡೆ ಜಿಗಿದು ಈಚೆಗೇ ಬರುತ್ತಿಲ್ಲ. ಭಾರತದಲ್ಲಿ ಹಿಂದಿನಿಂದಲೂ ಗುರು ಅತ್ಯಂತ ರಹಸ್ಯವಾಗಿ, ಈ ವಿದ್ಯೆಯನ್ನು ಶಿಷ್ಯನಿಗೆ ಬೋಧಿಸುವ ಪರಂಪರೆಯಿತ್ತು’ ಎಂದು ಫಿಸಿಯೋನಮಿಯ ಹೂತು ಹೋದ ಹೆಜ್ಜೆಗಳನ್ನು ನೆನೆದರು.
ಜಪಾನಿಗರ ಸಣ್ಣ ಕಣ್ಣಿನ ರಹಸ್ಯ
“ಕಣ್ಣಿನ ಬಣ್ಣ, ಗಾತ್ರ, ಕಣ್ಣು ಗುಡ್ಡೆಗಳ ನಡುವಿನ ಅಂತರ ನೋಡಿಯೇ, ಆ ವ್ಯಕ್ತಿಗೆ ಕೈ ಹಿಡಿಯುವ ಕ್ಷೇತ್ರವನ್ನು ಊಹಿಸಬಹುದು. ಜಪಾನಿಗರ ಕಂಗಳನ್ನೇ ನೋಡಿ, ಅವು ತುಂಬಾ ಕಿರಿದು. ಸಣ್ಣ ಕಣ್ಣಿನವರಿಗೆ, ಕೆಲಸದಲ್ಲಿ ಪರಮಶ್ರದ್ಧೆ. ಚಿಕ್ಕ ಚಿಕ್ಕ, ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಯಲ್ಲಿ ಅವರಷ್ಟು ನಿಪುಣರು ಬೇರಾರೂ ಇಲ್ಲ. ಪುಟಾಣಿ ವಸ್ತುಗಳು ಅವರ ಕಣ್ಣಿಗೆ ಅತ್ಯಂತ ಸುಸ್ಪಷ್ಟ. ಜಪಾನಿಯರು ತಯಾರಿಸಿದ ವಸ್ತುವನ್ನೇ ಭಾರತೀಯರು ಸಿದ್ಧಪಡಿಸ ಹೊರಟರೆ, ಅಂಥ ಗುಣಮಟ್ಟವೇ ಸಿಗೋದಿಲ್ಲ’ ಎನ್ನುವುದು ಜೇನ್‌ರ ವೈಜ್ಞಾನಿಕ ವಿಶ್ಲೇಷಣೆ.
ವ್ಯಕ್ತಿಯ ಕಣ್ಣುಗಳನ್ನು ಅಧ್ಯಯನಿಸಿ, ನೂರಾರು ಆತ್ಮಹತ್ಯೆಗಳನ್ನು ತಡೆದ ಮಾನವೀಯ ಕತೆಗಳು ಜೇನ್‌ರ ಜೋಳಿಗೆಯಲ್ಲಿವೆ. ಪೈಲಟ್‌ನ ಮುಖಭಾವ ನೋಡಿಯೂ, ವಿಮಾನ ಅಪಘಾತಗಳನ್ನು ತಪ್ಪಿಸಬಹುದು ಎನ್ನುವ ಸಾಮಾಜಿಕ ಕಳಕಳಿಯೂ ಅವರ ಈ ವಿದ್ಯೆಯ ಹಿಂದಿದೆ.
52 ಮಚ್ಚೆಗಳೇ ಮನುಷ್ಯನ ಭವಿಷ್ಯ
ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯ ಗುಣಲಕ್ಷಣಗಳೂ ಬೇರೆ ಬೇರೆ. ಅವಳಿ ಜವಳಿಯಾಗಿ ಹುಟ್ಟಿದರೂ, ಅವರ ವ್ಯಕ್ತಿತ್ವ ಲಕ್ಷಣಗಳು, ಭವಿಷ್ಯಗಳು ಒಂದೇ ರೀತಿ ಇರದು. ಉದಾ: ಅವಳಿ ಮಕ್ಕಳಲ್ಲಿ ಒಬ್ಬರಿಗೆ ಅಪಘಾತವಾದರೆ, ಇನ್ನೊಬ್ಬರಿಗೆ ಆಗಿರುವುದಿಲ್ಲ. ಅವಳಿ ಜವಳಿಗಳ ದೇಹದಲ್ಲಿನ ಮಚ್ಚೆಗಳೂ ವಿಭಿನ್ನವೇ. ಮನುಷ್ಯನ ದೇಹದಲ್ಲಿ ಒಟ್ಟು 52 ಕಡೆ ಮಚ್ಚೆಗಳಿರುತ್ತವೆ. ಈ ಮಚ್ಚೆಗಳಲ್ಲಿ ಕೆಲವು ಒಳ್ಳೆಯವು, ಮತ್ತೆ ಕೆಲವು ಭವಿಷ್ಯಕ್ಕೆ ಹಾನಿಕಾರಕವೂ ಆಗಿರುತ್ತವೆ. ಫೇಸ್ ರೀಡಿಂಗ್‌ನಿಂದ ಅಂಥ ಅಪಾಯಗಳನ್ನು ಕಂಡುಕೊಂಡರೆ, ಅಪಾಯದಿಂದ ಪಾರಾಗಬಹುದು ಎನ್ನುವ ಜೇನ್, ಅದಕ್ಕೆ ಸೂಚಿಸುವ ಪರಿಹಾರಗಳೂ ಅಡುಗೆಮನೆಯ ಡಬ್ಬಿಗಳಲ್ಲೇ ಇವೆ.
ನಾಳೆ ಏನಾಗುತ್ತೆ, ಹೇಳ್‌ಬಿಡ್ಲಾ…
“ಮುಖದ ಬಣ್ಣ ಹೊಳೆಯುತ್ತಿದ್ದರೆ, ಒಳ್ಳೆಯದು ಘಟಿಸುತ್ತಿದೆ ಎಂದು; ನೈಸರ್ಗಿಕವಾಗಿದ್ದ ಮುಖದ ಬಣ್ಣ ದಿನೇದಿನೇ ಕಪ್ಪೇರುತ್ತಿದ್ದರೆ, ಯಾವುದೋ ಸಮಸ್ಯೆಯಲ್ಲಿ ಸಿಲುಕಿದ್ದೀರಿ ಎನ್ನುತ್ತದೆ ಫಿಸಿಯೋನಮಿ’. ವ್ಯಕ್ತಿಯ ಹಣೆಬರಹ ಓದುತ್ತಾ, ಅವನ ವಿದ್ಯೆ, ವಿವಾಹ, ಬ್ಯುಸಿನೆಸ್, ಆರೋಗ್ಯ… ಎಲ್ಲದರ ಪಟ್ಟಿಯನ್ನೂ ಮುಂದಿಡುತ್ತಾರೆ, ಜೇನ್.
ಮಹಿಳೆಯರ ಭವಿಷ್ಯವನ್ನು ಮುಖದ ಎಡದಿಂದಲೂ, ಪುರುಷರನ್ನು ಬಲ ಬದಿಯಿಂದಲೂ ಓದುತ್ತಾರೆ. ಮುಖದ ರೇಖೆ, ಮಚ್ಚೆಗಳನ್ನಲ್ಲದೇ, ಮುಖದ ಮೇಲಿನ ಕಲೆ, ಮುಖದ ಬಣ್ಣ ಬದಲಾದರೆ… ಹೀಗೆ ಸಣ್ಣ ಸಣ್ಣ ಅಂಶಗಳನ್ನು ಗಮನಿಸಿ, ಎಲ್ಲವನ್ನೂ ಒಗ್ಗೂಡಿಸಿ, ಕರಾರುವಕ್ಕಾಗಿ ಹೇಳುವುದೇ ಫೇಸ್ ರೀಡಿಂಗ್.
ಫೋಟೋಗಳಿಗಿಂತ, ವ್ಯಕ್ತಿ ಎದುರಿನಲ್ಲಿದ್ದರೆ, ನಿಖರವಾಗಿ ಅವನ ಮುಖವನ್ನು ಓದಬಹುದು. ಅವನು ಮಾಮೂಲಿ ಭಾವದಲ್ಲಿದ್ದಾಗ, ನಕ್ಕಾಗ, ಬಾಯೆ¤ರೆದಾಗ… ಹೀಗೆ ಪ್ರತಿ ಹಂತದ ಅಧ್ಯಯನವೂ ಮುಖ್ಯ. ಫೇಸ್‌ರೀಡರ್‌ನ ಕಣ್ಣುಗಳು- ವ್ಯಕ್ತಿಯ ಕಣ್ಣುಗಳು ಸಮಾನಾಂತರವಾಗಿದ್ದಾಗಲಷ್ಟೇ ಸ್ಪಷ್ಟ ಭವಿಷ್ಯ ನುಡಿಯಲು ಸಾಧ್ಯ. ಸೂರ್ಯನ ಬೆಳಕಿನಲ್ಲಿ ಹೇಳುವ ಮುಖಭವಿಷ್ಯವೇ ಶೇ.100 ನಿಜ.
ಮನೆಯೇ ಒಂದು ಮುಖಶಾಲೆ!
ದಿನದ ಇಪ್ಪತ್ನಾಲ್ಕು ತಾಸು, ಮುಖ ರಚನೆಗಳನ್ನೇ ಧ್ಯಾನಿಸುವ ಜೇನ್, ತಮ್ಮ ಮನೆಯಲ್ಲೂ ಇಟ್ಟುಕೊಂಡಿರೋದು ಮನುಷ್ಯನ ಮುಖ ಮಾದರಿಗಳನ್ನೇ. ಹಸಿರು ಬಣ್ಣದ ಜೀಪಿನ ಮುಂದೆ, ಗೋಡೆಯ ಮೇಲಿಂದ, ಬಾಗಿಲ ಆಚೆಗೆ, ಟಿವಿಯ ತಲೆ ಮೇಲಿಂದ, ಹಿಂದಿನಿಂದ- ಮುಂದಿನಿಂದ ಎಲ್ಲೆಲ್ಲೂ ಮನುಷ್ಯನ “ಮುಖ ಮಾದರಿ’ಗಳೇ. ಒಂದು ಮುಖ ಅರಿಸ್ಟಾಟಲ್‌ನಂತೆ, ಮತ್ತೂಂದು ಪ್ಲೇಟೋನಂತೆ ಇದೆ ಅಂತೇನಾದರೂ ಅಂದಾಜಿಸುತ್ತಿದ್ದರೆ, ಮುಂದಿನ ಮುಖದಲ್ಲಿ ನಿಮ್ಮ ಕಣ್ಣು- ತುಟಿಗಳೇ ಇಣುಕುತ್ತವೆ.
ವಿದ್ಯಾಬಾಲನ್‌ರಿಂದ ಹಿಡಿದು ಮೈಸೂರಿನ ಒಡೆಯರ್ ಮನೆತನದ ವರೆಗೂ ತಾರೆಗಳ ನಾಳೆಯ ದಿನಗಳನ್ನು ಹೇಳಿದ್ದಾರೆ. ಯಾರ ಖಾಸಗಿ ವಿಚಾರಗಳ ಗುಟ್ಟನ್ನೂ ರಟ್ಟು ಮಾಡದೆ, ತಮ್ಮ ವಿದ್ಯೆ ಸಾಮಾಜಿಕವಾಗಿ ಸದ್ಬಳಕೆಯಾದರೆ ಸಾಕು ಅಂತಾರೆ ಜೇನ್. “ಫೇಸ್ ರೀಡರ್ಸ್ ಫೌಂಡೇಶನ್ ಆಫ್ ದಿ ವರ್ಲ್x’ ಎನ್ನುವ ಅವರ ಸಂಸ್ಥೆಯಲ್ಲಿ ಅಮರ್, ಜೈದೀಪ್‌ರಂಥ ಬೆಂಗಳೂರಿನ ಶಿಷ್ಯರಿದ್ದಾರೆ. “ಯಾರಿಗೆ ಬೇಕಾದರೂ ಈ ವಿದ್ಯೆಯನ್ನು ಕಲಿಸಲು ತಯಾರಿದ್ದೇವೆ. ಇದಕ್ಕಾಗಿ ಎರಡು ದಿನಗಳ ಬೇಸಿಕ್ ಕೋರ್ಸ್ ಇದೆ. ಅಡ್ವಾನ್ಸ್ ಕೋರ್ಸ್‌ಗಳೂ ಇವೆ. ಆದರೆ, ಇದರಲ್ಲಿ ನಿಪುಣರಾಗಲು 6 ತಿಂಗಳಿಂದ ಎರಡು ವರ್ಷಗಳು ತಗುಲಬಹುದು. ಮುಖ್ಯವಾಗಿ ಕಂಪನಿಗಳ ಎಚ್‌ಆರ್‌ಗಳಿಗೆ ಈ ಕಲೆ ಅತ್ಯವಶ್ಯ’ ಅಂತಾರೆ ಜೇನ್.
ಟ್ವಿಸ್ಟ್ ಕೊಟ್ಟ ಬ್ರೇಕ್‌ಅಪ್
20ನೇ ವಯಸ್ಸಿನಲ್ಲಿರುವಾಗ ಜೇನ್, ಒಬ್ಟಾಕೆಯನ್ನು ಪ್ರೀತಿಸುತ್ತಿದ್ದರಂತೆ. ಆಕೆ ಇನ್ನೇನು ಕೈಕೊಡುತ್ತಾಳೆ ಎನ್ನುವ ಸಂಗತಿ ಅವರಿಗೆ ಅವಳ ಮುಖಭಾವದಿಂದಲೇ ತಿಳಿಯಿತಂತೆ. ಫೇಸ್ ರೀಡಿಂಗ್‌ಗೆ ಅದೇ ಪ್ರೇರಣೆ ಎಂದು ಇಳಿ ವಯಸ್ಸಿನ ನಾಚಿಕೆಯಲ್ಲಿ ಅವರ ಮುಖ ಕೆಂಪಾಗುತ್ತದೆ.
ಕೈದಿಗಳ ಕತೆ ಹೇಳಿದ್ದರು…
ಒಮ್ಮೆ ಕೊಯಮತ್ತೂರಿನಲ್ಲಿದ್ದಾಗ ತಮಿಳುನಾಡು ಪೊಲೀಸರು, ಕೆಲವು ಕೈದಿಗಳ ಹೇಳಿಕೆ ವಿಡಿಯೋ ಕಳುಹಿಸಿದ್ದರಂತೆ. ಕೈದಿಗಳು ಹೇಳಿದ್ದರಲ್ಲಿ ಸತ್ಯ ಯಾವುದು, ಸುಳ್ಳು ಯಾವುದು, ಅವರ ಹಿನ್ನೆಲೆ ಪತ್ತೆ ಹಚ್ಚಿ ಅಂತ. ಎರಡು ದಿನಗಳ ಬಳಿಕ ಜೇನ್ ಕೊಟ್ಟ ಮಾಹಿತಿಗಳು, ಪೊಲೀಸರಿಗೇ ಅಚ್ಚರಿ ತರಿಸಿದ್ದವು. ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳಿಗೂ ಇವರ ತರಬೇತಿ ಸಿಕ್ಕಿದೆ. ಆದರೆ, ಕರ್ನಾಟಕ ಪೊಲೀಸ್ ಈ ವಿಜ್ಞಾನದ ಬಗ್ಗೆ ಅಷ್ಟು ಒಲವು ತೋರುತ್ತಿಲ್ಲ ಅನ್ನೋದು ಅವರ ವಿಷಾದ. ವ್ಯಕ್ತಿಯನ್ನು ಥಳಿಸಿ, ಬಾಯಿ ಬಿಡಿಸುವ ಮೊದಲೇ ಆತ ಮುಗ್ಧನೋ, ಅಪರಾಧಿಯೋ ಎಂಬುದನ್ನು ಗ್ರಹಿಸಬಹುದಂತೆ.
ಫೇಸ್‌ರೀಡಿಂಗ್ ಅತ್ಯಂತ ವೈಜ್ಞಾನಿಕ ಓದು. ವ್ಯಕ್ತಿಯ ಹುಟ್ಟಿನಿಂದ ಪ್ರತಿ ಹಂತವನ್ನೂ ಇಲ್ಲಿ ನಿಖರವಾಗಿ ಗ್ರಹಿಸಬಹುದು. ಯಾವುದೇ ಕಥೆ ಕಟ್ಟಿ ಹೇಳುವ ಪ್ರಸಂಗ ಇಲ್ಲಿರುವುದಿಲ್ಲ.
– ಜೇನ್ ಕಕ್ಸ್‌ಟನ್, ಭಾರತದ ಏಕೈಕ ಗ್ರಾಂಡ್ ಮಾಸ್ಟರ್ ಫೇಸ್ ರೀಡರ್
ದಾಳಿಕೋರರ ಮುಖಭಾವ
– ರೆಪ್ಪೆಗಳು ಅರ್ಧ ಮುಚ್ಚಿರುತ್ತವೆ.
– ಕಂಗಳು ದೊಡ್ಡದಾಗಿ ತೆರೆದು, ಗುಡ್ಡೆಯ ಪಕ್ಕ ಸಂಪೂರ್ಣ ಬಿಳಿ
– ತುಟಿಯಲ್ಲಿ ತಿರಸ್ಕಾರದ ನಗು
– ದಪ್ಪ ಹುಬ್ಬು, ಸುರುಳಿಯಾಗಿದ್ದಾಗ
– ಚೌಕದ ಅಥವಾ ವಿಸ್ತಾರ ಗಲ್ಲದವರು
– ಬಿಗಿದ ದವಡೆ ಹೊಂದಿರುವವರು
ಶ್ರೀದೇವಿ ದೇಶದ ಗಡಿ ದಾಟಬಾರದಿತ್ತೇ?
ಯಾವುದೇ ಸೆಲೆಬ್ರಿಟಿಗಳು ನಿಗೂಢವಾಗಿ ಸಾವನ್ನಪ್ಪಿದಾಗ, ಜೇನ್‌ರ ವಾಟ್ಸಾéಪ್ ಗ್ರೂಪ್‌ನಲ್ಲಿ ಚರ್ಚೆಗಳಾಗುತ್ತವೆ. ಬಾಲಿವುಡ್ ನಟಿ ಶ್ರೀದೇವಿ ಸತ್ತಾಗಲೂ ಆ ದಿನ ರಾತ್ರಿ ಅಂಥ ಸುದೀರ್ಘ ಚರ್ಚೆ ನಡೆದಿತ್ತು. ಶ್ರೀದೇವಿಯ ಇತ್ತೀಚಿನ ಕೆಲವು ಫೋಟೋಗಳನ್ನು ನೋಡಿ, “ಮುಖದ ರೇಖೆಗಳಲ್ಲಿಯೇ ಅವರಿಗೆ ನೀರಿನಲ್ಲಿ ಮರಣವಿದೆ ಎಂಬುದು ಗೊತ್ತಾಗುತ್ತದೆ. ದೇಶದ ಗಡಿ ದಾಟುವುದರಿಂದ ಪ್ರಾಣಹಾನಿ ಎದುರಿಸುತ್ತಾರೆ’ ಅಂತಲೂ ಸ್ನೇಹಿತರೊಂದಿಗೆ ಚರ್ಚಿಸಿದ, ದಾಖಲೆಗಳನ್ನು ನೀಡುತ್ತಾರೆ ಜೇನ್.
ಆ ಮದುವೆ ಬೇಡ…
ಜೇನ್ ಅವರ ಪರಿಚಿತರೊಬ್ಬರ ಮಗಳಿಗೆ ವರನನ್ನು ಹುಡುಕುತ್ತಿದ್ದರಂತೆ. ಹುಡುಗ- ಹುಡುಗಿಯ ವಿವಿಧ ಫೋಟೋ ತಂದು, ಇವರ ಜೋಡಿ ಹೊಂದುತ್ತದೆಯೇ ಎಂದು ವಿಚಾರಿಸಿದ್ದರು. “ಇಬ್ಬರ ತಾರಾಬಲವೂ ಕೂಡಿದೆ. ಜಾತಕ ಚೆನ್ನಾಗಿದೆ ಅಂತ ಜ್ಯೋತಿಷಿಯೂ ಹೇಳಿದ್ದಾರೆ. ನೀವೂ ಒಮ್ಮೆ ನೋಡಿ’ ಎಂದು ವಿನಂತಿಸಿದ್ದರು. ಆದರೆ, ಆ ಜೋಡಿಯನ್ನು ಎದುರಿಗೆ ಕೂರಿಸಿಕೊಂಡಾಗ, ಅಂದು ಫೇಸ್ ರೀಡಿಂಗ್ ಮಾಡಿದ್ದ ಜೇನ್ ಅವರ ಶಿಷ್ಯ ಅಮರ್‌ಗೆ ಶಾಕ್. ಹುಡುಗನಿಗೆ ಆಯುಸ್ಸು ಇದ್ದಿರಲಿಲ್ಲ! ಕೂಡಲೇ ನಿಶ್ಚಯವಾಗಿದ್ದ ಮದುವೆಯನ್ನು ನಿಲ್ಲಿಸಲಾಯಿತಂತೆ. ಎರಡು ವರುಷಗಳ ನಂತರ ಆ ಹುಡುಗ ತೀರಿಕೊಂಡಿದ್ದ!
ಫೇಸ್ ರೀಡಿಂಗ್ ಎಂಬ ಲ್ಯಾಬ್!
ಫೇಸ್ ರೀಡಿಂಗ್ ಸಾಕಷ್ಟು ರೋಗಗಳನ್ನೂ ಪತ್ತೆಹಚ್ಚಬಲ್ಲ ವೈದ್ಯಕಲೆಯೂ ಹೌದು. ಹೃದಯಾಘಾತ, ಕಿಡ್ನಿ ತೊಂದರೆ, ಡಯಾಬಿಟೀಸ್, ಥೈರಾಯx… ಸಮಸ್ಯೆಗಳನ್ನು ಲ್ಯಾಬ್ ಟೆಸ್ಟ್‌ನ ಮುಂಚಿತವೇ ತಿಳಿಯಬಹುದು. ಜೇನ್ ಅವರು ಹೇಳಿದ ರೋಗ, ಲ್ಯಾಬ್‌ನಲ್ಲಿ ನಿಜವಾದ ಸಾಕಷ್ಟು ಉದಾಹರಣೆಗಳೂ ಇವೆ.
ಯಾರಿಗೆ ಫೇಸ್ ರೀಡಿಂಗ್ ಮುಖ್ಯ?
– ವೈಯಕ್ತಿಕ ತಿಳಿವಳಿಕೆಗೆ, ರಕ್ಷಣೆಗೆ
– ಕಂಪನಿಗಳ ಎಚ್‌ಆರ್‌ಗಳಿಗೆ
– ವಿವಾಹ ಆಗುತ್ತಿರುವವರಿಗೆ
– ಮುಖದಲ್ಲಿ ತುಂಬಾ ಕಲೆಗಳು ಇದ್ದವರಿಗೆ
– ಫೈನಾನ್ಸ್ ಮಾಡುತ್ತಿರುವವರಿಗೆ (ಸಾಲ ತೀರಿಸ್ತಾರೋ, ಇಲ್ಲವೋ ಎಂಬುದನ್ನು ತಿಳಿಯಲು)
– ರಿಯಲ್ ಎಸ್ಟೇಟ್‌ನವರಿಗೆ, ಆಸ್ತಿ ಖರೀದಿದಾರರಿಗೆ
– ದೂರದ ಪ್ರವಾಸಕ್ಕೆ ಹೊರಟವರಿಗೆ
ಲಿಂಕನ್ ಅಧ್ಯಕ್ಷರಾಗಿದ್ದೇ ಗಡ್ಡದಿಂದ!
1860ರ ಅಮೆರಿಕ ಚುನಾವಣೆಯ ಕಾಲ. ಸಣಕಲು ದೇಹ, ಸಪೂರ ಮುಖ ಹೊತ್ತ ಅಬ್ರಾಹಂ ಲಿಂಕನ್ ಕೂಡ ಕಣದಲ್ಲಿದ್ದರು. ಜೀವನುದ್ದಕ್ಕೂ ಬರೀ ಸೋಲುಗಳನ್ನೇ ಕಂಡಿದ್ದ ಲಿಂಕನ್‌ಗೆ 11 ವರ್ಷದ ಬಾಲಕಿಯೊಬ್ಬಳು ಪತ್ರ ಬರೆದಿದ್ದಳು. “ಅಂಕಲ್, ನನಗೇನಾದರೂ ವೋಟ್‌ನ ಹಕ್ಕಿದ್ದರೆ ನಿಮಗೇ ಹಾಕುತ್ತಿದ್ದೆ. ನನಗೆ ನಾಲ್ವರು ಅಣ್ಣಂದಿರಿದ್ದು, ನಿಮಗೇ ವೋಟ್ ಹಾಕಲು ಹೇಳುತ್ತೇನೆ. ಆದರೆ, ಒಂದು ಷರತ್ತು… ನಿಮ್ಮ ಮುಖ ತುಂಬಾ ಸಣಕಲು. ಫಿಸಿಯೋನಮಿ ಪ್ರಕಾರ, ನೀವು ಗಡ್ಡ ಬಿಟ್ಟರಷ್ಟೇ ಗೆಲವು ಕಾಣಲು ಸಾಧ್ಯ’ ಎಂದಿದ್ದಳು. ಲಿಂಕನ್ ಆ ಪುಟಾಣಿಗೆ ಉತ್ತರ ಬರೆದು, ಗಡ್ಡವನ್ನೂ ಬಿಟ್ಟಿದ್ದರು. ಅದೇ ವರ್ಷವೇ ಅವರು, ಅಮೆರಿಕ 16ನೇ ಅಧ್ಯಕ್ಷರಾಗಿದ್ದು!
ಇಮೇಲ್: [email protected]
ಮೊ.: 7975233711
ಕೀರ್ತಿ ಕೋಲ್ಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Dakshina Kannada ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು
Mangaluru: ಒನ್ ನೇಶನ್-ಒನ್ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್
HMP: ಮತ್ತಿಬ್ಬರು ಮಕ್ಕಳಲ್ಲಿ ಎಚ್‌ಎಂಪಿ ವೈರಸ್: ದೇಶದಲ್ಲಿ 7ಕ್ಕೇರಿದ ಕೇಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.