ಕಡಬ ಪರಿಸರದಲ್ಲಿ ಬಿಗಡಾಯಿಸಿದ ವಿದ್ಯುತ್ ಸಮಸ್ಯೆ
Team Udayavani, Mar 23, 2019, 5:55 AM IST
ಕಡಬ : ಬಿಗಡಾಯಿಸಿರುವ ವಿದ್ಯುತ್ ಸಮಸ್ಯೆಯಿಂದಾಗಿ ಕಡಬ ಪರಿಸರದಲ್ಲಿ ಅಡಿಕೆ ತೋಟಗಳು ನೀರಿಲ್ಲದೆ ಕೆಂಬಣ್ಣಕ್ಕೆ ತಿರುಗಿವೆ. ಲೋ ವೋಲ್ಟೇಜ್ ನಿಂದಾಗಿ ನೀರಾವರಿ ಪಂಪ್ ಗಳು ಚಾಲೂ ಆಗದೇ ಕೃಷಿಕರು ಕೃಷಿ ತೋಟಗಳಿಗೆ ನೀರುಣಿಸಲಾಗದೆ ಕಂಗಾಲಾಗಿದ್ದಾರೆ. ಪರೀಕ್ಷೆಯ ಸಂದರ್ಭವಾಗಿರುವುದರಿಂದ ವಿದ್ಯಾರ್ಥಿಗಳು ಕೂಡ ವಿದ್ಯುತ್ ಸಮಸ್ಯೆಯಿಂದಾಗಿ ತೀವ್ರ ತೊಂದರೆ ಎದುರಿಸುವಂತಾಗಿದೆ.
ಈ ಹಿಂದಿಗಿಂತಲೂ ಈ ಬಾರಿ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಕೃಷಿ ಭೂಮಿಗೆ ಎಂದಿಗಿಂತಲೂ ಹೆಚ್ಚು ನೀರಣಿಸಬೇಕಾದ ಅಗತ್ಯವಿದೆ. ಆದರೆ ಬಿಗಡಾಯಿಸಿರುವ ವಿದ್ಯುತ್ ಸಮಸ್ಯೆ ಕೃಷಿಕರನ್ನು ಕಂಗಾಲಾಗಿಸಿದೆ. ನೀರಿನ ಕೊರತೆಯಿಂದಾಗಿ ಹಚ್ಚ ಹಸುರಾಗಿದ್ದ ಕೃಷಿ ತೋಟಗಳು ಕೆಂಬಣ್ಣಕ್ಕೆ ತಿರುಗಿವೆ. ಮೊದಲೇ ಧಾರಣೆ ಕುಸಿತ, ಕಾರ್ಮಿಕರ ಸಮಸ್ಯೆಯಿಂದಾಗಿ ಕಂಗೆಟ್ಟಿರುವ ಕೃಷಿಕ ವಿದ್ಯುತ್ ಸಮಸ್ಯೆಯ ಹೊಡೆತಕ್ಕೆ ಬಸವಳಿದು ಕುಳಿತಿದ್ದಾನೆ.
ರಾತ್ರಿ ಇಡೀ ನಿದ್ದೆಗೆಟ್ಟು ಕುಳಿತರೂ ಲೋ ವೋಲ್ಟೇಜ್‌ನಿಂದಾಗಿ ನೀರಾವರಿ ಪಂಪ್ ಗಳು ಚಾಲೂ ಆಗುತ್ತಿಲ್ಲ. ತ್ರಿ ಫೇಸ್‌ನಲ್ಲೂ ಪಂಪ್ ಗಳು ಪದೇ ಪದೇ ಆಫ್ ಆಗುವ ಮೂಲಕ ಕೃಷಿಕನ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿವೆ.
ಸಾಮರ್ಥ್ಯಕ್ಕಿಂತ ಹೆಚ್ಚು ಹೊರೆ
1995ರಲ್ಲಿ ಆರಂಭಗೊಂಡಿರುವ ಕಡಬ ವಿದ್ಯುತ್ ಸಬ್‌ಸ್ಟೇಶನ್ ಮೇಲ್ದರ್ಜೆಗೇರಿದ ಮೇಲೆ ಸಮಸ್ಯೆಗಳು ಒಂದಷ್ಟು ಪರಿಹಾರಗೊಳ್ಳಲಿವೆ. ಸಬ್‌ಸ್ಟೇಶನ್‌ನ ಸಾಮರ್ಥ್ಯಕ್ಕಿಂತ ಹೆಚ್ಚು ಬಳಕೆದಾರರು ಇರುವುದು ಸಮಸ್ಯೆಗಳಿಗೆ ಕಾರಣವಾಗಿದೆ. ಕಡಬ, ಆಲಂಕಾರು, ಬಿಳಿನೆಲೆ ಹಾಗೂ ನೆಲ್ಯಾಡಿ ಶಾಖಾ ಕಚೇರಿಗಳ ಒಟ್ಟು 22 ಗ್ರಾಮಗಳ ವ್ಯಾಪ್ತಿಯನ್ನು ಕಡಬ ಮೆಸ್ಕಾಂ ಉಪ ವಿಭಾಗವು ಹೊಂದಿದೆ. ಕಡಬ ಹಾಗೂ ನೆಲ್ಯಾಡಿ ವಿದ್ಯುತ್ ಸಬ್‌ಸ್ಟೇಶನ್‌ಗಳು ಇದರ ವ್ಯಾಪ್ತಿಯಲ್ಲಿವೆ. ಉಪ ವಿಭಾಗದ ವ್ಯಾಪ್ತಿಯಲ್ಲಿ ಎಚ್‌ಟಿ-5, ಭಾಗ್ಯಜ್ಯೋತಿ-1,951, ಮನೆ-16,444, ವಾಣಿಜ್ಯ-1,781, ಕೃಷಿ-7,288, ಕೈಗಾರಿಕೆ-228, ಕುಡಿಯುವ ನೀರಿನ ಸ್ಥಾವರ-240, ಬೀದಿದೀಪ-120 ಹೀಗೆ ಒಟ್ಟು 30ಕ್ಕೂ ಹೆಚ್ಚು ಸಾವಿರ ವಿದ್ಯುತ್ ಬಳಕೆದಾರ ಸಂಪರ್ಕಗಳಿವೆ.
ಕಡಬ ಮೆಸ್ಕಾಂ ಸಬ್‌ಸ್ಟೇಶನ್‌ನಲ್ಲಿ 4.5 ಕೋಟಿ ರೂ. ವೆಚ್ಚದಲ್ಲಿ 12.5 ಎಂವಿಎ ಸಾಮರ್ಥ್ಯದ ಹೆಚ್ಚುವರಿ ಪರಿವರ್ತಕ ಅಳವಡಿಕೆಗೆ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಸಲಕರಣೆಗಳು ಬಂದಿದ್ದು, 4 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಕಾಮಗಾರಿ ಮುಗಿದ ಬಳಿಕ ಸಬ್‌ಸ್ಟೇಶನ್ ನ ಸಾಮರ್ಥ್ಯ ವೃದ್ಧಿಯಾಗಲಿದ್ದು, ಬಹುತೇಕ ಸಮಸ್ಯೆಗಳು ಪರಿಹಾರಗೊಳ್ಳಲಿವೆ. ಉಪ ವಿಭಾಗದ ವ್ಯಾಪ್ತಿಯ 24×7 ತುರ್ತು ಸೇವೆಗಳಿಗಾಗಿ ಇಲ್ಲಿ ಸೇವಾ ಕೇಂದ್ರ (ಸರ್ವೀಸ್ ಸ್ಟೇಶನ್) ಕೆಲಸ ಮಾಡುತ್ತಿದೆ. ಆದರೆ ವಾಹನ ಮಂಜೂರುಗೊಂಡಿರುವುದು ಬಿಟ್ಟರೆ ಸೇವಾ ಕೇಂದ್ರಕ್ಕಾಗಿ ಹೆಚ್ಚುವರಿ ಸಿಬಂದಿ ಸಿಕ್ಕಿಲ್ಲ. ಉಪ ವಿಭಾಗದ ಬಹುತೇಕ ವಿದ್ಯುತ್ ಲೈನ್‌ಗಳು ಅರಣ್ಯ ಪ್ರದೇಶದಲ್ಲಿಯೇ ಇರುವುದರಿಂದ ಪದೇ ಪದೇ ಸಮಸ್ಯೆಗಳು ಎದುರಾಗುವುದು ಇಲ್ಲಿ ಸಾಮಾನ್ಯ.
ಮಳೆಗಾಲದಲ್ಲಂತೂ ಹೇಳತೀರದು
ಆನೆ ಹಾವಳಿ ಹಾಗೂ ನಕ್ಸಲ್ ಬಾಧಿತ ಅರಣ್ಯ ಭಾಗಗಳೂ ಈ ವ್ಯಾಪ್ತಿಯಲ್ಲಿರುವುದರಿಂದ ಉಪ ವಿಭಾಗಕ್ಕೆ ಪೂರ್ಣ ಪ್ರಮಾಣದ ಸೇವಾ ಕೇಂದ್ರ ಸಿಗಬೇಕೆನ್ನುವುದು ಸ್ಥಳೀಯ ಬಳಕೆದಾರರ ಬೇಡಿಕೆಯಾಗಿದೆ.
ಕಣ್ಣೆದುರೇ ಕರಟುತ್ತಿವೆ
ಬೇಸಗೆಯಲ್ಲಿ ಕೃಷಿ ತೋಟಕ್ಕೆ ನೀರುಣಿಸಲು ವಿದ್ಯುತ್ ಸಮಸ್ಯೆ. ಕೃಷಿಕರ ಬಗ್ಗೆ ಇಷ್ಟೆಲ್ಲ ಮಾತನಾಡುವ ಸರಕಾರಗಳು ಕೃಷಿಕನಿಗೆ ಅಗತ್ಯ ಸಮಯದಲ್ಲಿ ಗುಣಮಟ್ಟದ ವಿದ್ಯುತ್ ನೀಡುವಲ್ಲಿ ಏಕೆ ವಿಫಲವಾಗುತ್ತಿವೆ ಎನ್ನುವುದೇ ದೊಡ್ಡ ಪ್ರಶ್ನೆ. ಕಣ್ಣೆದುರೇ ಕೃಷಿ ತೋಟಗಳು ನೀರಿಲ್ಲದೆ ಕರಟಿ ಹೋಗುತ್ತಿರುವುದನ್ನು ನೋಡಿ ಹೇಗೆ ತಾನೇ ಕೃಷಿಕ ತಡೆದುಕೊಳ್ಳಲು ಸಾಧ್ಯ?
– ಅಚ್ಯುತ ಪ್ರಭು ನಡುಕಯ್ಯೊಳೆ
ಹಿರಿಯ ಕೃಷಿಕ, ಕಡಬ
ಪರೀಕ್ಷೆ ಮುಗಿದ ಮೇಲೆ
ಪರೀಕ್ಷಾ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು 3 ಫೇಸ್ ಅವಧಿಯನ್ನು ಸ್ವಲ್ಪ ಕಡಿಮೆ ಮಾಡಿದ್ದೇವೆ. ಇದು ಕೃಷಿಕರಿಗೆ ಸ್ವಲ್ಪ ಸಮಸ್ಯೆಯಾಗುತ್ತಿದೆ. ಎ. 4ರ ಬಳಿಕ ಪರೀಕ್ಷೆಗಳು ಮುಗಿಯುವುದರಿಂದ ಮತ್ತೆ ಎಂದಿನಂತೆ 3 ಫೇಸ್ ನೀಡಲಾಗುವುದು. ಹೆಚ್ಚುವರಿ ಪರಿವರ್ತಕ ಅಳವಡಿಕೆ ಆದ ಬಳಿಕ ವಿದ್ಯುತ್ ಪೂರೈಕೆಯಲ್ಲಿ ಹೆಚ್ಚಿನ ಸಮಸ್ಯೆಗಳು ನಿವಾರಣೆಯಾಗಲಿವೆ.
– ಸಜಿಕುಮಾರ್
ಎಇಇ, ಕಡಬ ಮೆಸ್ಕಾಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.