ಪಾಂಡೇಶ್ವರ: ಏಳು ಕುಟುಂಬಗಳನ್ನು ಸಂತ್ರಸ್ತರನ್ನಾಗಿಸಿದ ಬೆಂಕಿ ದುರಂತ
ಪಾಂಡೇಶ್ವರದಲ್ಲಿ ಬೆಂಕಿ ಆಕಸ್ಮಿಕ
Team Udayavani, Mar 25, 2019, 11:18 AM IST
ಪಾಂಡೇಶ್ವರದಲ್ಲಿ ಶನಿವಾರ ನಡೆದ ಬೆಂಕಿ ದುರಂತದಲ್ಲಿ ಆಹುತಿಯಾದ ಮನೆ.
ಮಹಾನಗರ: ಪಾಂಡೇಶ್ವರದ ಧೂಮಪ್ಪ ಕಾಂಪೌಂಡ್ ನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಅಗ್ನಿ ದುರಂತ ಏಳು ಕುಟುಂಬಗಳನ್ನು ಸಂತ್ರಸ್ತರನ್ನಾಗಿ ಮಾಡಿದೆ.
ಶೇಖರ ಆಚಾರ್ಯ, ಕಾರ್ತಿಕೇಯನ್, ಸುದೈವನ್, ಹರೀಶ್ ಗೋವಿಂದ್, ಶ್ರೀನಿವಾಸ್, ಪ್ರಕಾಶ್ ಆಚಾರ್ಯ, ಗಣೇಶ್ ಆಚಾರ್ಯ ಅವರ ಮನೆಗಳು ಬೆಂಕಿಗಾಹುತಿಯಾಗಿದ್ದು, ಈ ಎಲ್ಲ ಮನೆಗಳ ಮಂದಿ ಇದೀಗ ತಾತ್ಕಾಲಿಕವಾಗಿ ತಮ್ಮ ವಾಸ್ತವ್ಯಕ್ಕೆ ಸಂಬಂಧಿಕರ ಮನೆಗಳನ್ನು ಆಶ್ರಯಿಸಿದ್ದಾರೆ. ರವಿವಾರ ಬೆಳಗ್ಗೆ ಈ ಎಲ್ಲ ಮನೆಗಳ ಜನರು ಬೆಂಕಿ ದುರಂತದಿಂದ ಅಳಿದುಳಿದ ಸರಕು ಸರಂಜಾಮುಗಳೊಂದಿಗೆ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ.
ಅವರಿಗೆ ಸ್ಥಳಾಂತರಗೊಳ್ಳಲು ಆಸುಪಾಸಿನ ಜನರು ಸಹಕರಿಸಿದರು. ಗಂಗಾಧರ್ ಅವರು ತಮ್ಮ ವಾಹನವನ್ನು ಒದಗಿಸಿ ಸಾಮಗ್ರಿ ಸಾಗಿಸಲು ನೆರವಾದರು. ಮಾಜಿ ಕಾರ್ಪೊರೇಟರ್ ದಿವಾಕರ್ ಕೂಡಾ ಸಾಥ್ ನೀಡಿದರು. ಧೂಮಪ್ಪ ಕಾಂಪೌಂಡ್‌ನಲ್ಲಿ ಒಂದು ಮನೆಯ ಛಾವಣಿಯಲ್ಲಿ ಕಾಣಿಸಿಕೊಂಡ ಬೆಂಕಿ ಕ್ರಮೇಣ ಪಕ್ಕದ ಮನೆಗಳಿಗೆ ವ್ಯಾಪಿಸಿ ಒಟ್ಟು 6 ಮನೆಗಳನ್ನು ಆಹುತಿ ತೆಗೆದುಕೊಂಡಿದೆ. ಅಗ್ನಿ ಶಾಮಕ ದಳದ ಅಧಿಕಾರಿಗಳು ಮತ್ತು ಸಿಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿ ಮತ್ತಷ್ಟು ಮನೆಗಳಿಗೆ ಹರಡದಂತೆ ನಿಯಂತ್ರಣಕ್ಕೆ ತಂದಿದ್ದರು. ಶನಿವಾರ ರಾತ್ರಿ 8.15ರಿಂದ 11 ಗಂಟೆ ತನಕ ಸುಮಾರು 3 ಗಂಟೆಗಳ ಕಾಲ ಅಗ್ನಿ ಶಾಮಕ ದಳದವರು ಕಾರ್ಯಾಚರಣೆ ನಡೆಸಿದ್ದರು.
ರವಿವಾರ ಬೆಳಗ್ಗೆ ಒಂದು ಭಾಗದಲ್ಲಿ ಬೆಂಕಿ ಆರದೆ ಇರುವುದನ್ನು ಗಮನಿಸಿ ಜನರು ಕರೆ ಮಾಡಿದ್ದರಿಂದ ಪುನಃ ಅಗ್ನಿ ಶಾಮಕ ದಳದವರು ವಾಹನದೊಂದಿಗೆ ತೆರಳಿ ಬೆಂಕಿಯನ್ನು ನಂದಿಸಿದ್ದರು.
ನಿರಾಶ್ರಿತರಾದ ಕುಟುಂಬಗಳು
ಮನೆಗೆ ಬೆಂಕಿ ತಗುಲಿ ನಿರಾಶ್ರಿತರಾದ ಎಲ್ಲ ಕುಟುಂಬದವರು ಬಡವರು. ಕೆಲವರು ವಯೋ ವೃದ್ಧರು. ಹೆಚ್ಚಿನವರು ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ಅವರು ವಾಸವಾಗಿದ್ದ ಮನೆ ಸುಮಾರು 15 ವರ್ಷಗಳಷ್ಟು ಹಳೆಯದಾಗಿದ್ದು, ದುರಸ್ತಿ ಮಾಡಿ ನವೀಕರಿಸಿದ್ದರು. ಇದೀಗ ಆಕಸ್ಮಿಕ ಬೆಂಕಿಯಿಂದಾಗಿ ಮನೆ ಹಾನಿಯಾಗಿದ್ದು, ಸರಕಾರದಿಂದ ಪರಿಹಾರವನ್ನು ನಿರೀಕ್ಷಿಸುತ್ತಿದ್ದಾರೆ.
ಶೇಖರ ಆಚಾರ್ಯ ಅವರ ಮನೆಯಲ್ಲಿ ಅವರು ಮತ್ತು ಪತ್ನಿ ಗೀತಾ ಆಚಾರ್ಯ ಮಾತ್ರ ವಾಸ್ತವ್ಯ ಇದ್ದಾರೆ. ಶೇಖರ ಅವರು ಖಾಸಗಿ ಸಂಸ್ಥೆಯ ನಿವೃತ್ತ ಉದ್ಯೋಗಿ ಆಗಿದ್ದು ಪತ್ನಿ ಗೀತಾ ಟೈಲರಿಂಗ್ ನಡೆಸುತ್ತಿದ್ದಾರೆ.
ಕಾರ್ತಿಕೇಯನ್ ಮತ್ತು ಸುದೈವನ್ ಅಣ್ಣ ತಮ್ಮಂದಿರಾಗಿದ್ದು, ಒಂದೇ ಮನೆಯಲ್ಲಿ ಬೇರೆ ಬೇರೆಯಾಗಿ ಕುಟುಂಬ ಸಮೇತ ವಾಸವಾಗಿದ್ದರು. ಈ ಮನೆಯಲ್ಲಿ ಒಟ್ಟು 6 ಮಂದಿ ಇದ್ದರು. ಹರೀಶ್ ಗೋವಿಂದ್ ಅವರು ತಮ್ಮ ಮನೆಯನ್ನು ಬೇರೆಯವರಿಗೆ ಬಾಡಿಗೆಗೆ ನೀಡಿದ್ದರು. ಖಾಸಗಿ ಸಂಸ್ಥೆಯ ನಿವೃತ್ತ ಉದ್ಯೋಗಿ ಶ್ರೀನಿವಾಸ್ ಅವರ ಮನೆಯಲ್ಲಿ ಪತ್ನಿ ಸವಿತಾ ಮತ್ತು ಇಬ್ಬರು ಮಕ್ಕಳು, ತಾಯಿ ಸುಶೀಲಾ ಸಹಿತ ಒಟ್ಟು 6 ಮಂದಿ ಇದ್ದರು. ಪ್ರಕಾಶ್ ಆಚಾರ್ಯ ಅವರು ಪತ್ನಿ ದೀಪಾ ಮತ್ತು ಇಬ್ಬರು ಮಕ್ಕಳ ಜತೆ ಇಲ್ಲಿನ ಮನೆಯಲ್ಲಿ ವಾಸಿಸುತ್ತಿದ್ದರು. ಪ್ರಕಾಶ್ ಅವರು ಈ ಹಿಂದೆ ಖಾಸಗಿ ಸಂಸ್ಥೆಯಲ್ಲಿ ಕೆಲಸದಲ್ಲಿದ್ದು ನಿವೃತ್ತರಾದವರು. ಗಣೇಶ್ ಆಚಾರ್ಯ ಅವರು ಕೂಲಿ ಕೆಲಸ ಮಾಡುತ್ತಿದ್ದು, ಪತ್ನಿ ಶಾಲಿನಿ ಮತ್ತು ಇಬ್ಬರು ಮಕ್ಕಳ ಜತೆ ವಾಸ್ತವ್ಯವಿದ್ದರು.
ತಹಶೀಲ್ದಾರ್ ಭೇಟಿ
ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಗ್ರಾಮ ಸಹಾಯಕ ಅವಿನಾಶ್ ಅವರು ರವಿವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶನಿವಾರ ರಾತ್ರಿ ಕೂಡ ಅವರು ಭೇಟಿ ನೀಡಿದ್ದರು.
6 ಮನೆಗಳಿಗೆ ಹಾನಿ
ಧೂಮಪ್ಪ ಕಾಂಪೌಂಡ್‌ನಲ್ಲಿ ಒಂದೇ ಸಾಲಿನಲ್ಲಿ 9 ಮನೆಗಳಿದ್ದು, ಈ ಪೈಕಿ 6 ಮನೆ ಗಳಿಗೆ ಹಾನಿಯಾಗಿದೆ. ಒಂದು ಮನೆ ಛಾವಣಿಯಲ್ಲಿ ಕಾಣಿಸಿಕೊಂಡ ಬೆಂಕಿ ವ್ಯಾಪಿಸಿ 6 ಮನೆಗಳನ್ನು ಆಹುತಿ ತೆಗೆದುಕೊಂಡಿದೆ.
ತಾತ್ಕಾಲಿಕ ವ್ಯವಸ್ಥೆ
ರವಿವಾರ ರಾತ್ರಿ ಸಂತ್ರಸ್ತ ಮನೆ ಮಂದಿಗೆ ತಾತ್ಕಾಲಿಕ ವಾಸ್ತವ್ಯಕ್ಕೆ ಪುರಭವನದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅಲ್ಲಿ ವಾಸ್ತವ್ಯಕ್ಕೆ ಯಾರೂ ಬಂದಿರಲಿಲ್ಲ. ಕೆಲವರು ಸಂಬಂಧಿಕರ ಮನೆಗೆ, ಒಂದೆರಡು ಮನೆಯವರು
ಅಲ್ಲಿಯೇ ಸಮೀಪ ಖಾಲಿ ಇದ್ದ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದರು. ರವಿವಾರ ಎಲ್ಲ ಸಂತ್ರಸ್ತರು ಅವರ ಸಂಬಂಧಿಕ ಮನೆಗಳಿಗೆ ತೆರಳಿದ್ದಾರೆ. ಆಸ್ತಿ ಪಾಸ್ತಿ ಮತ್ತು ಮನೆ ಹಾನಿಯ ನಷ್ಟದ ಬಗ್ಗೆ ಲಿಖಿತವಾಗಿ ಮನವಿ ಸಲ್ಲಿಸುವಂತೆ ಸಂತ್ರಸ್ತರಿಗೆ ತಿಳಿಸಲಾಗಿದೆ. ರವಿವಾರ ಸಂಬಂಧಿಕರ ಮನೆಗೆ ಸ್ಥಳಾಂತರದ ತವಕದಲ್ಲಿದ್ದ ಕಾರಣ ಮನವಿಗಳನ್ನು ತಯಾರಿಸಿ ಸ್ವೀಕರಿಸಲು ಸಾಧ್ಯವಾಗಿಲ್ಲ. ಸೋಮವಾರ ಲಿಖೀತ ಮನವಿ ಬಂದ ಬಳಿಕ ನಷ್ಟದ ಅಂದಾಜು ಮಾಡಲಾಗುವುದು. ಗ್ರಾಮ ಲೆಕ್ಕಿಗ ಅವಿನಾಶ್ ಅವರೂ ಸೋಮವಾರ ಮಹಜರು ನಡೆಸಲಿದ್ದಾರೆ.
– ಗುರು ಪ್ರಸಾದ್,
ತಹಶೀಲ್ದಾರ್
ತಂದೆಯನ್ನು ಎಳೆದುಕೊಂಡೆ ಹೊರಬಂದೆ
ನನ್ನ ತಂದೆ ವಯೋ ವೃದ್ಧರಾಗಿದ್ದು, ಬೆಂಕಿ ದುರಂತ ಸಂಭವಿಸಿದ ವೇಳೆ ಅವರು ಮಲಗಿದ್ದರು. ಅವರು ಬೇಗನೆ ಎದ್ದು ಓಡಾಡುವಷ್ಟು ಸಶಕ್ತರಾಗಿಲ್ಲ. ಮನೆಗೆ ಬೆಂಕಿ ತಗುಲಿದೆ ಎಂದು ಗೊತ್ತಾದಾಗ ನಾನು ತಂದೆಯವನ್ನು ಹಿಡಿದು ಅವಸರವಸರವಾಗಿ ಎಳೆದುಕೊಂಡು ಹೊರಗೆ ಬಂದೆ.
– ಅನುಷಾ
– ಅನುಷಾ
(ಪ್ರಕಾಶ್ ಆಚಾರ್ಯ ಅವರ ಪುತ್ರಿ).
ಶೀಘ್ರ ಪರಿಹಾರ ನೀಡಿ
ನಮಗೆ ಪರಿಹಾರ ಅತಿ ಶೀಘ್ರದಲ್ಲಿ ನೀಡಿದರೆ ಒಳ್ಳೆಯದು. ಸಂಬಂಧಿಕರ ಮನೆಯಲ್ಲಿ ಅಥವಾ ಬೇರೆ ಎಲ್ಲಾದರೂ ಹೆಚ್ಚು ಸಮಯ ಆಶ್ರಯ ಪಡೆಯಲು ಸಾಧ್ಯವಾಗದು. ನಮ್ಮ ಮನೆಯನ್ನು ರೀಪೇರಿ ಮಾಡಬೇಕು. ಬೇಗ ಪರಿಹಾರ ಸಿಕ್ಕಿದರೆ ಬೇಗ ಮಾಡಿಸಬಹುದು.
- ಪ್ರಕಾಶ್ ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.