ನಾನ್ಹೆಗೆ ಪಬ್‌ಜಿ ತೊರೆದೆ?
ಪಬ್‌ಜಿ ಗುಂಗಿನ ಹುಡುಗ ಹೇಳಿದ ಕತೆ
Team Udayavani, Mar 26, 2019, 6:00 AM IST
ಪಬ್‌ಜಿ ಎಂಬ ಆನ್‌ಲೈನ್ ಗೇಮ್‌ನ ಆಕ್ಟೋಪಸ್ ಇಂದು ಯುವಮನಸ್ಸುಗಳನ್ನು ಬಿಗಿಯಾಗಿ ಬಂಧಿಸುತ್ತಿದೆ. ಅದರ ಅಮಲು, ಚಡಪಡಿಕೆಯನ್ನು ಅನುಭವಿಸಿದ ಹುಡುಗನೊಬ್ಬ ಇಲ್ಲಿ ತನ್ನ ಅಂತರಾಳವನ್ನು ಹೇಳಿಕೊಂಡಿದ್ದಾನೆ. ಪಬ್‌ಜಿಯ ಗುಂಗಿನಲ್ಲಿರುವ ಮನಸ್ಸುಗಳಿಗೆ ಈತನ ಮಾತುಗಳೇ ಚಿಕಿತ್ಸೆಯಾಗಲಿ…
ಅದು ಪೀಟಿ ಮಾಸ್ತರರ ಪೀರಿಯಡ್. ಗೆಳೆಯರೊಟ್ಟಿಗೆ ಕ್ರಿಕೆಟ್ ಆಡುತ್ತಿದ್ದೆ. ನಮ್ಮ ತಂಡಕ್ಕೆ ಇನ್ನೂ ಐವತ್ತಮೂರು ರನ್ ಬೇಕಿತ್ತು. ನಾನು ಹೊಡೆಯುತ್ತಿದ್ದೆ. ಇನ್ನು ಹದಿಮೂರು ರನ್ ಬಾಕಿ ಇರುವಾಗ, ನಾನು ರನೌಟ್ ಆದೆ. ಇನ್ನೊಂದು ಕ್ರೀಸ್‌ನಲ್ಲಿದ್ದ ನನ್ನ ಜತೆಗಾರ ಓಡಿಬಂದಿರಲಿಲ್ಲ. ನನ್ನ ಶ್ರಮವೆಲ್ಲಾ ವ್ಯರ್ಥವಾಗಿ ನನಗೆ ಸಿಟ್ಟು ಬಂತು. ಬ್ಯಾಟಿನಿಂದ ಅವನಿಗೆ ಬೀಸಿದೆ, ಏಟು ಬಿತ್ತು. ಇನ್ನೊಂದೆರಡು ಬೀಸುತ್ತಿದ್ದೆ ಅಷ್ಟರಲ್ಲಿ ಬೇರೆ ಹುಡುಗರು ಅವನನ್ನು ರಕ್ಷಿಸಿಬಿಟ್ಟರು. ನನಗೇ ಗೊತ್ತಿರಲಿಲ್ಲ, ನಾನು ಅವನಿಗೆ ಹೊಡೆಯುವಾಗ, “ಐ ಶೂಟ್ ಯೂ, ಐ ಶೂಟ್ ಯೂ’ ಎಂದು ಚೀರುತ್ತಿದ್ದೆನಂತೆ.
ನಿಜಕ್ಕೂ ಆಗ ನಾನು ಪಬ್‌ಜಿ ಆಟದ ಗುಂಗಿನಲ್ಲಿದ್ದೆ. ಕೇವಲ ಇದೊಂದು ಘಟನೆಯಲ್ಲ, ಆ ದಿನಗಳಲ್ಲಿ ನನಗೆ ಬಹಳ ಕೋಪ ಇರುತ್ತಿತ್ತು. ಸಿಟ್ಟು ಇಳಿದ ಮೇಲೆ ನಾನ್ಯಾಕೆ ಹಾಗೆ ಆಡಿದೆ ಅಂತ ದುಃಖ ಆಗುತ್ತಿತ್ತು. ಯಾರೋ ನನ್ನೊಳಗೆ ಕುಳಿತು, ಸುತ್ತಮುತ್ತಲಿನವರನ್ನು “ಢಗಢಗ’ ಅಂತ ಶೂಟ್ ಮಾಡುತ್ತಿದ್ದಾನೆ ಅಂತನ್ನಿಸುತ್ತಿತ್ತು. ಪಕ್ಕದಲ್ಲಿ ಕುಳಿತವನು ದುರುಗುಟ್ಟಿ ನೋಡಿದಾಗ, ಮೇಷ್ಟ್ರು ನನ್ನನ್ನು ಎದ್ದುನಿಲ್ಲಿಸಿ ಪ್ರಶ್ನೆ ಕೇಳಿದಾಗ, ಬಸ್ಸಿನಲ್ಲಿ- ರಸ್ತೆಯಲ್ಲಿ “ಈ ಅಡ್ರೆಸ್ ಎಲ್ಲಿ ಬರುತ್ತೆ?’ ಅಂತ ಕೇಳಿದಾಗಲೂ, ಒಳಗಿದ್ದವ “ಢಗಢಗ’ ಎನ್ನುತ್ತಿದ್ದ. ಅಷ್ಟರ ಮಟ್ಟಿಗೆ ನನ್ನೊಳಗೊಬ್ಬ ಟೆರರ್ ಇರುತ್ತಿದ್ದ.
ಪರೀಕ್ಷೆಗಳು ಬಂದರೆ, ಓದಲು ಏಕಾಗ್ರತೆ ಇರಲಿಲ್ಲ. ಟೇಬಲ್ ಕುಟ್ಟಿ ಹಾಕೋಣ ಎನ್ನುವಷ್ಟು ಕೋಪ. ಯಾರಾದರೂ ಬಾ ಎಂದು ಕರೆದರೆ, ಕಂಪ್ಯೂಟರ್ ಗೇಮ್ ಆಡಲು ಕರೆದಂತೆ ಅನ್ನಿಸುತ್ತಿತ್ತು. ಮನೆಯಲ್ಲಿ ಐದು ನಿಮಿಷ ಬಿಡುವು ಸಿಕ್ಕರೂ, ಪಬ್‌ಜಿ ಗೇಮ್ ಆಡಬೇಕೆನಿಸುತ್ತಿತ್ತು. ಆಡದೇ ಇದ್ದರೆ ಕಳವಳವಾಗಿ, ತಲೆ ಚಿಟ್ಟು ಹಿಡಿಯುತ್ತಿತ್ತು.
ಆ ಆಟದಲ್ಲಿ ನಾನು ಸೃಷ್ಟಿಸಿದ್ದ, ಹೀರೋ “ಖಲಿ’ ಗೆಲ್ಲುತ್ತಾ ಹೋಗುತ್ತಿದ್ದ. ಆದರೆ, ನಾನು ನನ್ನ ಬದುಕಿನಲ್ಲಿ ಕ್ಷಣಕ್ಷಣಕ್ಕೂ ಸೋಲುತ್ತಿದ್ದೆ. ಅಂಕಗಳು ತೀರಾ ಕಡಿಮೆ ಆಗುತ್ತಿದ್ದವು. ಪ್ರಿನ್ಸಿಪಾಲ್, ನನ್ನ ತಂದೆ- ತಾಯಿಯನ್ನು ಕರೆದು, ನನ್ನ ಸ್ಥಿತಿಯ ಬಗ್ಗೆ ಹೇಳಿಯೇಬಿಟ್ಟರು. ನಾನು ಪಬ್‌ಜಿಗೆ ಅಡಿಕ್ಟ್ ಆಗಿರೋ ಸಮಾಚಾರ, ನನ್ನ ಅಪ್ಪನಿಂದ ಪ್ರಿನ್ಸಿಪಾಲರ ಕಿವಿಗೂ ಬಿತ್ತು. ಅವರ ಗಂಭೀರವಾದ ಎಚ್ಚರಿಕೆಯನ್ನು ಅತ್ಯಂತ ಸಂಯಮದಿಂದ ಸ್ವೀಕರಿಸಿದ್ದು ನನಗೆ ಹಿತ ಎನಿಸಿತು. ಅಪ್ಪ- ಅಮ್ಮನನ್ನು ತಬ್ಬಿಕೊಂಡು ನಾನು ಅತ್ತುಬಿಟ್ಟೆ. ಪಬ್‌ಜಿ ಚಟದಿಂದ ಹೊರಬರಬೇಕು ಅಂತ ನಿಶ್ಚಯಿಸಿಬಿಟ್ಟೆ.
ಆದರೆ, ಪಬ್‌ಜಿಯೆಂಬ ಚಕ್ರವ್ಯೂಹದಿಂದ ಏಕ್‌ದಂ ಹೊರಗೆ ಬರಲು ಯಾರಿಂದಲೂ ಸಾಧ್ಯವಿಲ್ಲ. ಪ್ರಿನ್ಸಿಪಾಲರ ಸಲಹೆಯಂತೆ, ಮೊದಲು ಮೊಬೈಲಿನಲ್ಲಿದ್ದ ಪಬ್‌ಜಿ ಆ್ಯಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿದೆ. ಏಕಾಏಕಿ ಹೀಗೆ ಮಾಡಿದ್ದರಿಂದ ಅವತ್ತು ರಾತ್ರಿ ತಲೆನೋವು ಬಂದಿತ್ತು. ಅಮ್ಮ ನರರೋಗ ತಜ್ಞರ ಬಳಿ ನನ್ನನ್ನು ಕರೆದೊಯ್ದಳು. ಅಲ್ಲಿಂದ ಮನೋವೈದ್ಯರಲ್ಲಿಗೆ ಹೋದೆವು. ಆಗ ಮನೋವೈದ್ಯರು ಆನ್‌ಲೈನ್ ಗೇಮ್ ಆಡುವಾಗ, “ಡೊಪಮೈನ್’ ಎಂಬ ರಾಸಾಯನಿಕ ಬಿಡುಗಡೆಯಾದ ಪರಿಣಾಮದಿಂದ ಆಟ ಹೇಗೆ ಕಿಕ್ ಕೊಡುತ್ತದೆ ಎಂದು ವಿವರಿಸಿದರು. ಡೊಪಮೈನ್ ಉತ್ಪತ್ತಿ ಆದಾಗ, ಮನಸ್ಸು ಉದ್ದೀಪನಗೊಳ್ಳುತ್ತಿರುತ್ತದೆ. ಆದರೆ, ನಮ್ಮ ವ್ಯಕ್ತಿತ್ವ ಇದರಿಂದ ನಿಷ್ಕ್ರಿಯಗೊಳ್ಳುತ್ತದೆ. ಏಕಾಏಕಿ ಆಟ ಆಡುವುದನ್ನು ಬಿಟ್ಟರೆ ಖನ್ನತೆಯುಂಟಾಗುವುದರಿಂದ ಅದಕ್ಕೆ ತಕ್ಕ ಖನ್ನತೆ ನಿರೋಧಕ ಮಾತ್ರೆಗಳನ್ನು ಬರೆದುಕೊಟ್ಟರು.
ಶಾಲೆಯಲ್ಲಿ ಪೀಟಿ ಮಾಸ್ತರರಿಗೆ ನನ್ನ ಸಂಕಷ್ಟ ಹೇಳಿಕೊಂಡೆ. ಆಟೋಟಗಳಲ್ಲಿ ಆಸಕ್ತಿ ಮೂಡಿಸುವಂತೆ ಕೇಳಿಕೊಂಡೆ. ಅವರು ನನ್ನ ಬೆಂಬಲಕ್ಕೆ ನಿಂತರು. 400 ಮೀಟರ್ ರಿಲೇ ರೇಸ್ ಸ್ಪರ್ಧೆಗೆ ಸೇರಿಸಿಕೊಂಡರು. ದಿನಾ ಬೆಳಗ್ಗೆ ಜಾಗಿಂಗ್ ಶುರುಮಾಡಿದೆ. ಮನೆಯ ಅಕ್ಕಪಕ್ಕದ ಗೆಳೆಯರೊಂದಿಗೆ ಸೇರಿಕೊಂಡು, ಸೂರ್ಯನ ಚೆಂಡು ಆಡತೊಡಗಿದೆ. ಈ ವೇಳೆ ಬಹಳ ಖುಷಿ ಉಕ್ಕುತ್ತಿತ್ತು. ಖುಷಿ ಸಹಜ ರೀತಿಯಲ್ಲಿ ಉತ್ಪತ್ತಿಯಾದರೆ ಒಳ್ಳೆಯದೆಂದು ನನ್ನ ಚಿಕಿತ್ಸಾ ಮನೋವಿಜ್ಞಾನಿಗಳು ಹೇಳಿದ್ದರು. ಈ ಮಧ್ಯೆ ಏಕಾಗ್ರತೆಯನ್ನು ಹೆಚ್ಚಿಸಲು, ಟೇಬಲ…- ಟೆನ್ನಿಸ್ ಆಟವನ್ನು ಆಡುವ ಕೋಚಿಂಗ್ ಸೆಂಟರ್‌ಗೆ ಸೇರಿದೆ.
ಕೆಲ ದಿನಗಳಲ್ಲೇ ನಾನು ಮೊದಲಿನಂತಾಗಿದ್ದೆ. ಏಕಾಗ್ರತೆ ನನ್ನಲ್ಲೇ ಇತ್ತು. ಪ್ರಯತ್ನವೂ ನನ್ನಲ್ಲೇ ಇತ್ತು. ಹತ್ತನೇ ತರಗತಿಯ ಮೊದಲ ಟೆಸ್ಟ್‌ನಲ್ಲಿ ನನಗೆ ಹೆಚ್ಚು ಅಂಕಗಳು ಬಂದವು. ಆಗ, ನನಗಾದ ಖುಷಿ ಅಷ್ಟಿಷ್ಟಲ್ಲ. ತಂತ್ರಜ್ಞಾನ ನಮ್ಮ ಜೀವನಕ್ಕೆ ಬೇಕೇಬೇಕು. ಆದರೆ, ಎಷ್ಟು ಬೇಕು ಅನ್ನುವುದನ್ನು ನಮ್ಮ ಪ್ರಜ್ಞೆ ನಿರ್ಧರಿಸಿದರೆ ಯಾವ ದುಷ್ಪರಿಣಾಮವೂ ಇರುವುದಿಲ್ಲ.
ಪ್ರಾಮಾಣಿಕ ಪ್ರಯತ್ನ ಮಾಡಿದರೆ, ಪಬ್‌ಜಿ ಗುಂಗಿನಿಂದ ಬೇಗನೆ ಹೊರಬರಬಹುದು. ಅದು ದುಡ್ಡು ಕೊಡುತ್ತೆ ಎನ್ನುವ ವ್ಯಾಮೋಹ ಬಿಟ್ಟುಬಿಡಬೇಕು. ತಂದೆ- ತಾಯಿ, ಮನೋವೈದ್ಯರು, ಸ್ನೇಹಿತರ ನೆರವನ್ನು ಪಡೆಯಿರಿ. ಶಾರೀರಿಕ ಆಟೋಟಗಳಲ್ಲಿ ಸಕ್ರಿಯರಾಗಿ. ಮಿಲಿಯಗಟ್ಟಲೆ ಜನರು ಇದನ್ನು ಆಡುವುದರಿಂದ ಈ ಆಟ ಆಡಲು ಯೋಗ್ಯ ಎಂಬ ಭಾವನೆಗೆ ಪುಷ್ಠಿ ನೀಡಬೇಡಿ.
ಶುಭಾ ಮಧುಸೂದನ್, ಮನೋಚಿಕಿತ್ಸಾ ವಿಜ್ಞಾನಿ
“ಪಬ್‌ಜಿ’ ಅಂದ್ರೆ ಏನ್‌ಜಿ?
ಐರ್ಲೆಂಡ್‌ನ ಗೇಮ್ ಸೃಷ್ಟಿಕರ್ತ ಬ್ರೆಂಡನ್ ಗ್ರೀನೆಯ ವಿನ್ಯಾಸಿಸಿದ, ಅಮಾನವೀಯ ಆನ್‌ಲೈನ್ ಆಟ ಪಬ್‌ಜಿ. ವಿಶ್ವದಾದ್ಯಂತ ಬಹುಬೇಗನೆ ಪ್ರಚಾರಕ್ಕೆ ಬಂತು. ಇದರ ವಿಸ್ತೃತ ರೂಪ- PLAYER UNKNOWN’S BATTLE GROUNDS ಎಂದು. ಒಂದು ನಿರ್ದಿಷ್ಟ ಪ್ರದೇಶದಲ್ಲಿ ಒಂದಿಷ್ಟು ಜನರ ತಂಡವನ್ನು ಇಳಿಸಲಾಗುತ್ತದೆ. ಇಲ್ಲಿ ಎದುರಾಳಿಗಳನ್ನು ಹುಡುಕಾಡಿ, ಮನಬಂದಂತೆ ಶೂಟ್ ಮಾಡುವುದು- ಈ ಆಟದ ತಿರುಳು. ಇಂದು ಬಂದೂಕು ಬಳಕೆಯ ಅಮಲನ್ನು ತಲೆಗೆ ತುಂಬಿ, ಆಟಗಾರರಲ್ಲಿ ಯುದ್ಧದಾಹಿ, ಆಕ್ರಮಣಕಾರಿ ವ್ಯಕ್ತಿತ್ವ ರೂಪಿಸುತ್ತದೆ.
ರಾಕೇಶ್ ರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.