ದೇಶದ ಶತ್ರು ನಿಗ್ರಹ ದಾರಿಯಲ್ಲಿ ಎತ್ತರದ ಸಾಧನೆ
Team Udayavani, Mar 28, 2019, 6:00 AM IST
ನಾವೇನೂ ಯಾರ ಮೇಲೂ ವಿನಾಕಾರಣ ಜಗಳಕ್ಕೆ ಹೋಗುವುದಿಲ್ಲ. ಬೇರೆಯವರ ಸಾಮರ್ಥ್ಯಕ್ಕೆ ತಕ್ಕಂತೆ ನಮ್ಮನ್ನು ಅಪ್‌ಡೇಟ್ ಮಾಡಿಕೊಳ್ಳುವುದಷ್ಟೆ ನಮ್ಮ ಕೆಲಸ – ಎಂಬ ಸಂದೇಶ ಭಾರತದಿಂದ ಬಂದಿದೆ. ಮಂಗಳಯಾನ ಮಾಡಿದ ಮೇಲೆ ಜಗತ್ತಿನ ಎಲ್ಲ ದೇಶಗಳೂ ತಂತಮ್ಮ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಹಾರಿಸಲು ಇಸ್ರೋ ನಂಬಿಕಸ್ಥ ಸಂಸ್ಥೆ ಎಂಬ ನಿರ್ಣಯಕ್ಕೆ ಬಂದವು.
ಮಾರ್ಚ್ 27, 2019. ಮುಂಜಾನೆ 9ರ ಹೊತ್ತಿಗೆಲ್ಲ ನಮ್ಮ ದೇಶದ ಪ್ರಧಾನಿ, ಇಂದು 11:45ರಿಂದ 12ಗಂಟೆಯ ನಡುವೆ ದೇಶವನ್ನುದ್ದೇಶಿಸಿ ಮಾತಾಡಲಿದ್ದೇನೆ; ಅತಿ ಮಹತ್ವದ ಸಂಗತಿಯೊಂದನ್ನು ಹೇಳಲಿಕ್ಕಿದೆ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಾಗ ಜನರಿಗೆ ನೆನಪಾದದ್ದು ನವೆಂಬರ್ 8! ಮತ್ತೆ ಯಾವ ಗಂಡಾಂತರ ಕಾದಿದೆಯೋ ಎಂದು ದೇಶದ ಕಾಳಧನಿಕರೆಲ್ಲ ಕೌಂಟ್‌ಡೌನ್ ಮಾಡತೊಡಗಿದರು. ಹೇಳಿದ ಸಮಯಕ್ಕೆ ಸರಿಯಾಗಿ ದೇಶದ ಜನತೆಯ ಮುಂದೆ ಕಾಣಿಸಿಕೊಂಡ ಪ್ರಧಾನಿಗಳು, ನಾವೀಗ ಉಪಗ್ರಹ ನಿಗ್ರಹ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದ್ದೇವೆ; ಅಂಥ ತಂತ್ರಜ್ಞಾನವಿರುವ ಅಮೆರಿಕ, ರಷ್ಯ, ಚೀನಗಳ ಜೊತೆಗೆ ನಾಲ್ಕನೇ ದೇಶವಾಗಿ ನಾವೂ ಸೇರಿದ್ದೇವೆ ಎಂದು ಹೇಳಿದರು. ಇದು ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡಬೇಕಾದ ಸಂಗತಿ ಎಂಬ ಮಾತನ್ನು ಸೇರಿಸಲು ಮರೆಯಲಿಲ್ಲ.
ಉಪಗ್ರಹ ನಿಗ್ರಹ ಎಂಬುದನ್ನು ಭಾರತದ ಜನಸಾಮಾನ್ಯರು ಕೇಳುತ್ತಿರುವುದು ಇದೇ ಮೊದಲು. ನಮ್ಮಲ್ಲಿ ಯುದ್ಧವಾದರೆ ಕ್ಷಿಪಣಿಗಳು ಗಾಳಿಯಲ್ಲಿ ಹೊಡೆದಾಡಿಕೊಳ್ಳುತ್ತವೆ; ಬಾಂಬುಗಳು ನೆಲ ಬಗೆಯುತ್ತವೆ; ಸಬ್‌ಮೆರಿನ್‌ಗಳು ಅಥವಾ ಜಲಾಂತರ್ಗಾಮಿ ನೌಕೆಗಳು ಸಾಗರದಲ್ಲಿ ಧೂಳೆಬ್ಬಿಸುತ್ತವೆ. ಇವೆಲ್ಲ ಸರಿ, ಆದರೆ ಅಂತರಿಕ್ಷಯುದ್ಧ? ಅಂಥವನ್ನು ನಾವಿದುವರೆಗೆ ಕೇಳಿರಲಿಲ್ಲ; ನೋಡುವುದಂತೂ ದೂರದ ಮಾತು ಬಿಡಿ! ನಮ್ಮ ಜಗತ್ತಿನ ಬಹುತೇಕ ವ್ಯವಹಾರಗಳು ನೆಲಮಟ್ಟದಿಂದ ಹತ್ತಿಪ್ಪತ್ತು ಮೈಲಿಯೊಳಗೇ ನಡೆಯುವಾಗ ಅಂತರಿಕ್ಷದ ಮಾತೇಕೆ? ಅಷ್ಟು ದೂರಕ್ಕೆ, ಅಷ್ಟು ಎತ್ತರಕ್ಕೆ ಹೋಗಿ ಯುದ್ಧ ಮಾಡುವ ದರ್ದಾದರೂ ಏನು? ಪ್ರಶ್ನೆ ಉದ್ಭವಿಸುವುದು ಸಹಜ. ಪ್ರಧಾನಿಗಳು ತಮ್ಮ ಭಾಷಣದಲ್ಲಿ ಪದೇ ಪದೇ ಉಲ್ಲೇಖೀಸಿದ ಉಪಗ್ರಹ ನಿಗ್ರಹ ಕಾರ್ಯಾಚರಣೆಯ ಆಳ-ಅಗಲಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಸ್ವಲ್ಪ ಇತಿಹಾಸ, ವಿಜ್ಞಾನ, ತಂತ್ರಜ್ಞಾನ ಮತ್ತು ಅಂತಾರಾಷ್ಟ್ರೀಯ ರಾಜಕೀಯದ ಬಗ್ಗೆಯೂ ತಿಳಿಯಬೇಕಾಗುತ್ತದೆ.
ಆಕಾಶದಲ್ಲಿ ಗಡಿಬೇಲಿ: 1960ರ ದಶಕ. ಅಮೆರಿಕ ಮತ್ತು ಸೋವಿಯೆಟ್ ಒಕ್ಕೂಟಗಳ ನಡುವೆ ಶೀತಲ ಸಮರದ ಬಿಸಿಯೇರಿದ್ದ ಸಮಯ. ಸೋವಿಯೆಟ್ ಒಕ್ಕೂಟ 1957ರಲ್ಲಿ ಸ್ಪುಟ್ನಿಕ್ ಹೆಸರಿನ ಮೊಟ್ಟಮೊದಲ ಉಪಗ್ರಹವನ್ನು ಅಂತರಿಕ್ಷಕ್ಕೆ ಹಾರಿಬಿಟ್ಟಾಗ ಮತ್ತು ಆ ಉಪಗ್ರಹ ತಾಸಿಗೆ 29,000 ಕಿಮೀ ವೇಗದಲ್ಲಿ ದೌಡಾಯಿಸಿ ನಿಯಮಿತವಾಗಿ ರೇಡಿಯೋ ಸಂಕೇತಗಳನ್ನು ರವಾನಿಸುತ್ತ ಭೂಮಿಗೆ ಪ್ರದಕ್ಷಿಣೆ ಹಾಕುತ್ತಿದ್ದಾಗ ಅಮೆರಿಕ ಕಂಗಾಲಾಯಿತು. ನೆಲಮಟ್ಟದಿಂದ ನೂರಾರು ಮೈಲಿಗಳಷ್ಟು ಎತ್ತರದಲ್ಲಿರುವ ಅಂತರಿಕ್ಷಕ್ಕೆ ಉಪಗ್ರಹವನ್ನು ಹಾರಿಬಿಡುವ ಸಾಮರ್ಥ್ಯ ಗಳಿಸಿರುವ ಕೆಂಪಂಗಿಗಳು ತಮ್ಮ ಕ್ಷಿಪಣಿಗಳನ್ನು ಅಡ್ಡವಾಗಿಟ್ಟು ಸಾವಿರ ಮೈಲಿ ಈಚೆ ಹಾರಿಸಿ ಅಮೆರಿಕದಲ್ಲಿ ಹೊಗೆ ಎಬ್ಬಿಸಲಾರರೆ ಎಂಬ ಪ್ರಶ್ನೆ ಅಮೆರಿಕದ್ಯಂತ ಹಬ್ಬಿ ಜನರನ್ನು ಗಾಬರಿಯಲ್ಲಿ ಮುಳುಗಿಸಿತು. ಆಗ ಅಮೆರಿಕದ ಕಡೆಯಿಂದ ಶುರುವಾದದ್ದು ಖಂಡಾಂತರ ಕ್ಷಿಪಣಿಗಳನ್ನು ಗಡಿಯಾಚೆಯೇ ತಡೆದು ಹೊಡೆದುರುಳಿಸುವ ಯೋಜನೆ. ಅದಕ್ಕವರು ಆಂಟಿ ಬ್ಯಾಲಿಸ್ಟಿಕ್ ಮಿಸೈಲ್ ಪ್ರಾಜೆಕ್ಟ್ (ಖಂಡಾಂತರ ಕ್ಷಿಪಣಿ ನಿಗ್ರಹ ಯೋಜನೆ) ಎಂದು ಹೆಸರು ಕೊಟ್ಟರು. ಅಮೆರಿಕದ ಬತ್ತಳಿಕೆಯಲ್ಲಿ ಸ್ಪಾರ್ಟನ್, ನೈಕ್, ಸ್ಪ್ರಿಂಟ್, ಸೆಂಟಿನಲ್ ಎಂದೂ ರಷ್ಯದ ಕಡೆಯಲ್ಲಿ ಗ್ರಿಫಿನ್, ಗ್ಯಾಲೋಷ್, ಗ್ಯಾಜೆಲ್, ಗಾರ್ಗೋನ್ ಎಂದೂ ಬಗೆ ಬಗೆಯ ಖಂಡಾಂತರ ಕ್ಷಿಪಣಿಗಳಿದ್ದುದರಿಂದ ಈ ಯೋಜನೆಗೆ ಆಗ ದೊಡ್ಡ ಮಹತ್ವವೇ ಸಿಕ್ಕಿತೆನ್ನೋಣ.
ಆದರೆ 70ರ ದಶಕದ ಹೊತ್ತಿಗೆ ಇವೆರಡೂ ದೇಶಗಳು ತಮ್ಮ ಗಮನವನ್ನು ಉಪಗ್ರಹ ಉಡಾವಣೆಯತ್ತ ತಿರುಗಿಸಿದ್ದವು. ಉಪಗ್ರಹಗಳು ಹೆಚ್ಚಾಗಿ ಭೂಮಿಯ ಭಿತ್ತಿಯಿಂದ 600 ಕಿಲೋಮೀಟರ್ ಎತ್ತರದಲ್ಲಿದ್ದು ಪ್ರದಕ್ಷಿಣೆ ಹಾಕುತ್ತವೆ. ನಮ್ಮ ವಿಮಾನಗಳು, ಫೈಟರ್ ಜೆಟ್‌ಗಳೂ ಸೇರಿದಂತೆ, ಹಾರಾಡುವುದು ಸಮುದ್ರಮಟ್ಟದಿಂದ ಮೇಲಕ್ಕೆ 30 ಕಿಲೋಮೀಟರ್ ಒಳಗಿನ ವಾತಾವರಣದಲ್ಲಿ. ಶತ್ರುದೇಶದ ವಿಮಾನವೊಂದು ನಮ್ಮ ದೇಶದ ಗಡಿ ದಾಟಿ ಒಳಬಂದು ಬೇಹುಕೆಲಸ ನಡೆಸತೊಡಗಿದರೆ ನಾವು ಮತ್ತೂಂದು ಯುದ್ಧವಿಮಾನ ಕಳಿಸಿ ಅದನ್ನು ಕ್ಷಣಮಾತ್ರದಲ್ಲಿ ಹೊಡೆದುರುಳಿಸಬಹುದು. ಅಲ್ಲದೆ, ಅಪ್ಪಣೆಯಿಲ್ಲದೆ ವಿಮಾನ ನುಗ್ಗಿಸಿದ ತಪ್ಪಿಗೆ ಶತ್ರುದೇಶವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಎಳೆದು ಕೊರಳಪಟ್ಟಿ ಹಿಡಿದು ವಿಚಾರಣೆಗೊಡ್ಡಬಹುದು. ಆದರೆ, ಶತ್ರುದೇಶ ಉಪಗ್ರಹವೊಂದನ್ನು ಅಂತರಿಕ್ಷಕ್ಕೆ ಹಾರಿಸಿ, ಅಲ್ಲಿಂದಲೇ ಬೇಹುಗಾರಿಕೆ ಶುರುಮಾಡಿ, ನಮ್ಮ ದೇಶದ ರಹಸ್ಯತಮ ಸಂಗತಿಗಳನ್ನೆಲ್ಲ ಕದ್ದುತೆಗೆಯಲು ನೋಡಿದರೆ ಮಾಡುವುದೇನು? ಅಂಥ ಕಳವಿನ ಯತ್ನಗಳಿಗೆ ಕಡಿವಾಣ ಹಾಕಲೆಂದೇ ಅಮೆರಿಕ 70ರ ದಶಕದಲ್ಲಿ ಹಮ್ಮಿಕೊಂಡದ್ದು ಉಪಗ್ರಹ ನಿಗ್ರಹ ಯೋಜನೆಯನ್ನು.
(ಕು)ತಂತ್ರನಿಸ್ಸೀಮ ಚೀನ: ಕಾಲ ಕಳೆದಂತೆ ಪ್ರತಿ ದೇಶವೂ ಉಪಗ್ರಹಗಳನ್ನು ಹೆಚ್ಚುಹೆಚ್ಚಾಗಿ ನೆಚ್ಚಿಕೊಂಡಿದೆ. ಇಂದು ನಮ್ಮ ಕೋಟ್ಯಂತರ ಮೊಬೈಲ್ ಫೋನ್‌ಗಳು ಕೆಲಸ ಮಾಡಲು ಕೃತಕ ಉಪಗ್ರಹಗಳ ನೆರವು ಬೇಕು. ರಕ್ಷಣೆ, ಕೃಷಿ, ನಿಕ್ಷೇಪ ಪತ್ತೆ, ಜಲಮೂಲ ಪತ್ತೆ, ಆರೋಗ್ಯ, ವಾಯು-ರೈಲು-ಬಸ್ಸು-ಕ್ಯಾಬುಗಳ ಸಂಚಾರ, ಅಂತರ್ಜಾಲ, ಹವಾಮಾನ ಮುನ್ಸೂಚನೆ ಮುಂತಾದ ಪ್ರತಿ ಕ್ಷೇತ್ರದಲ್ಲೂ ಉಪಗ್ರಹಗಳದ್ದು ಅವಿನಾಭಾವ ಸಂಬಂಧ. ಅವುಗಳಿಲ್ಲದೆ ಆಧುನಿಕ ಜಗತ್ತು ಒಂದಂಗುಲ ಚಲಿಸುವುದಕ್ಕೂ ಸಾಧ್ಯವಿಲ್ಲವೆಂಬ ಸ್ಥಿತಿ ಏರ್ಪಟ್ಟಿದೆ. ಆದ್ದರಿಂದ ಎರಡು ದೇಶಗಳ ನಡುವೆ ಯುದ್ಧ ಎಂದರೆ ಒಬ್ಬರು ಇನ್ನೊಬ್ಬರ ಮೇಲೆ ಬಾಂಬೆಸೆಯುವುದು ಈಗ ಔಟ್‌ಡೇಟೆಡ್! ಹೊಚ್ಚಹೊಸ ತಂತ್ರ ಎಂದರೆ ಒಬ್ಬರು ಮತ್ತೂಬ್ಬರ ಉಪಗ್ರಹಗಳನ್ನು ನಿಷ್ಕ್ರಿಯಗೊಳಿಸುವುದು! ಆ ಮೂಲಕ, ಶತ್ರುಗಳು ಕೈ ಕಟ್ ಬಾಯುಚ್ ಸ್ಥಿತಿಗೆ ಬರುವಂತೆ ಮಾಡುವುದು!
ರಷ್ಯದ ಮೇಲೆ ಇಂಥ ವ್ಯೋಮಾಚಾರದ ಪ್ರಯೋಗ ಮಾಡಲು ಅಮೆರಿಕ 1980ರಲ್ಲೇ ತಯಾರಾಗಿಬಿಟ್ಟಿತ್ತು. ಎರಡು ಹಂತಗಳಲ್ಲಿ ಇಂಧನ ಉರಿಯುವ ರಾಕೆಟ್ ಅನ್ನು ಭೂನೆಲೆಯಿಂದ ಹಾರಿಸುವುದು; ರಾಕೆಟ್ಟಿನ ತುದಿಯಲ್ಲಿ ಮಿನಿಯೇಚರ್ ಹೋಮಿಂಗ್ ವೆಹಿಕಲ್ (ಪುಟ್ಟ ಗಮ್ಯಗಾಮೀ ವಾಹನ) ಎಂಬ ಮಿಸೈಲ್ ಕಟ್ಟಿ ಅದು ಕೊನೆಗೆ ಯೋಜಿತ ಗುರಿಗೆ ಢೀ ಹೊಡೆಯುವಂತೆ ಮಾಡುವುದು – ಇದು ಆಗ ಅಮೆರಿಕ ರೂಪಿಸಿದ್ದ ಉಪಗ್ರಹ ನಿಗ್ರಹ ಯೋಜನೆಯ ನೀಲನಕ್ಷೆ. ಇದರ ಮೊದಲ ಹಂತವಾಗಿ 1985ರ ಹೊತ್ತಿಗೆ ಅಮೆರಿಕ ಕನಿಷ್ಠ ಐದು ಅಂಥ ವಾಹನಗಳನ್ನು ನಿರ್ಮಿಸಿತ್ತು ಮತ್ತು ಆ ವರ್ಷದ ಸೆಪ್ಟೆಂಬರ್‌ನಲ್ಲಿ ಪ್ರಯೋಗಾರ್ಥವಾಗಿ ನಾಸಾದ ಒಂದು ಉಪಗ್ರಹವನ್ನು ನಾಶ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವೆಂಬಂತೆ ರಷ್ಯ ನೆಲದಿಂದ 2000 ಕಿಮೀ ಎತ್ತರಕ್ಕೆ ಜಿಗಿಯಬಲ್ಲ ಹಾಗೂ ಒಂದಲ್ಲ ಹಲವು ಉಪಗ್ರಹಗಳನ್ನು ಹೊಡೆದುರುಳಿಸುತ್ತಾ ಹೋಗಬಲ್ಲ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿತು.
ಇವರಿಬ್ಬರ ನಡುವೆ ತಾನೇನು ಕಡಿಮೆ ಎಂದು ಎದ್ದುನಿಂತಿತು ಚೀನ. ಉಪಗ್ರಹ ನಿಗ್ರಹದ ಆಖಾಡಕ್ಕೆ ಚೀನ ಇಳಿದ ಮೇಲೆ ಅದೀಗ ವ್ಯವಸ್ಥಿತ ಯುದ್ಧವಾಗಿ ಮಾರ್ಪಟ್ಟಿದೆ. ಈಗ ನಾವು ಉಪಗ್ರಹ ನಿಗ್ರಹದಲ್ಲಿ ಮೂರು ಬಗೆಯನ್ನು ಗುರುತಿಸಬಹುದು. ಒಂದು – ನೇರದಾಳಿ. ಅಂದರೆ ಉಪಗ್ರಹವೊಂದನ್ನು ಮೊದಲೇ ಟಾರ್ಗೆಟ್ ಮಾಡಿಕೊಂಡು ಅದಕ್ಕೆ ನೇರವಾಗಿ ಒಂದು ದಾಳಿವಾಹನವನ್ನು ಗುದ್ದಿಸುವ ಸೂಸೈಡ್ ಬಾಂಬರ್ ಮಾದರಿ ಇದು (2007ರ ಜನವರಿಯಲ್ಲಿ ಚೀನ, ಎಫ್ವೈ-1ಸಿ ಎಂಬ ಮುದಿ ಉಪಗ್ರಹವನ್ನು ಎಸ್‌ಸಿ-19 ಹೆಸರಿನ ಕ್ಷಿಪಣಿಯಿಂದ ಹೊಡೆಸಿ ನಾಶಪಡಿಸಿತು). ಎರಡು – ಸೌಮ್ಯ ಕೊಲೆ. ಅಂದರೆ ಉಪಗ್ರಹಕ್ಕೆ ಭೌತಿಕವಾಗಿ ಏನೂ ಹಾನಿ ಮಾಡದೆ ದೂರದಿಂದಲೇ ಅದರ ಸಂಕೇತಗಳನ್ನು ಹಾಳುಗೆಡವುವುದು; ಭೂಮಿಯ ಜೊತೆಗೆ ಅದರ ಸಂಪರ್ಕ ತಪ್ಪಿಸುವುದು; ಉಪಗ್ರಹದ ವ್ಯವಸ್ಥೆ ಕುಸಿದು ಅದು ಅನುಪಯುಕ್ತವಾಗುವಂತೆ ಮಾಡುವುದು. ಲಿಫ್ಟ್ನಲ್ಲಿ ಜನರಿದ್ದಾಗ ಉದ್ದೇಶಪೂರ್ವಕವಾಗಿ ವಿದ್ಯುತ್ ನಿಲ್ಲಿಸುವಂಥ ಪುಂಡಾಟಿಕೆ ಇದು (2006ರಲ್ಲಿ ಚೀನ ಈ ಪವರ್ ತೋರಿಸಿ ಅಮೆರಿಕದ ಉಪಗ್ರಹಗಳನ್ನೇ ಕೆಲ ತಾಸುಗಳ ಮಟ್ಟಿಗೆ ಕಂಗಾಲು ಮಾಡಿತ್ತು). ಇನ್ನು, ಮೂರನೆಯದ್ದು – ಉಪಗ್ರಹದ ಹತ್ತಿರಕ್ಕೆ ಬೇರೆ ಒಂದಷ್ಟು ಉಪಗ್ರಹಗಳನ್ನೋ (ಮೈಕ್ರೋ ಸ್ಯಾಟಲೈಟ್ಸ್) ನಾಶಕ ಉಪಕರಣಗಳನ್ನೋ ಹಾಯಿಸಿ ಅಪಘಾತ ಸಂಭವಿಸುವಂತೆ ನೋಡಿಕೊಳ್ಳುವುದು. ವಿಮಾನದ ದಿಕ್ಕಲ್ಲಿ ಹಕ್ಕಿಗಳ ಹಿಂಡನ್ನು ಹಾರಿಬಿಡುವಂಥ ದುಷ್ಕೃತ್ಯ ಇದು! (2008ರಲ್ಲಿ ಚೀನದ ಶೆಂಜೌ 7 ಹೆಸರಿನ ಗಗನನೌಕೆಯಲ್ಲಿದ್ದ ಇಬ್ಬರು ಗಗನಯಾತ್ರಿಗಳು ಅಂತಾರಾಷ್ಟ್ರೀಯ ಅಂತರಿಕ್ಷ ನಿಲ್ದಾಣ (ಐಎಸ್‌ಎಸ್) ಹಾದುಹೋಗುವ ದಾರಿಯಲ್ಲಿ ಉದ್ದೇಶಪೂರ್ವಕ ಒಂದು ಮೈಕ್ರೋ ಸ್ಯಾಟಲೈಟ್ ಅನ್ನು ಹಾರಿಬಿಟ್ಟಿದ್ದರು. ಅದು ಗಂಟೆಗೆ 17,000 ಮೈಲಿಗಳ ವೇಗದಲ್ಲಿ ಧಾವಿಸುತ್ತ ಐಎಸ್‌ಎಸ್‌ನ ತೀರ ಸಮೀಪದಲ್ಲಿ ಹಾರಿ ಆತಂಕ ಮೂಡಿಸಿತ್ತು).
ಸ್ಯಾಟಲೈಟ್ ವಾರ್‌ಗಳ ಕಾಲ: ಜಗತ್ತಿನಲ್ಲಿ ಮುಂದಿನ ದಿನಗಳಲ್ಲಿ ಯುದ್ಧ ನೆಲ, ಜಲ, ಆಕಾಶದಲ್ಲಿ ನಡೆಯುವುದಿಲ್ಲ; ಅವು ಅಂತರಿಕ್ಷದಲ್ಲಿ ನಡೆಯುತ್ತವೆ – ಎಂಬ ಭವಿಷ್ಯವಾಣಿಯನ್ನು ಹಲವು ದಶಕಗಳಷ್ಟು ಹಿಂದೆಯೇ ಹೇಳಿಬಿಟ್ಟಿದ್ದರು ವಿಜ್ಞಾನ ಲೇಖಕ ಐಸಾಕ್ ಅಸಿಮೋವ್. ಸದ್ಯದ ಬೆಳವಣಿಗೆಗಳನ್ನು, ತಂತ್ರಜ್ಞಾನದ ಹೈಜಂಪ್‌ಗ್ಳನ್ನು ಕಂಡರೆ ಆ ಮಾತು ಸತ್ಯ ಎನಿಸದಿರದು. ಇಂದು ಯಾವುದಾದರೂ ಎರಡು ಬಲಾಡ್ಯ ದೇಶಗಳಿಗೆ ಕಾಳಗ ಪ್ರಾರಂಭವಾದರೆ ಅದರ ನೇರ ಪರಿಣಾಮ ಗೋಚರಿಸುವುದು ಅಂತರಿಕ್ಷದಲ್ಲಿ. ಯಾಕೆಂದರೆ ಇಂದು ದೇಶಗಳಲ್ಲಿರುವ ಹೆಚ್ಚಿನೆಲ್ಲ ಯುದ್ದೋಪಕರಣಗಳು ನಡೆಯುವುದಕ್ಕೂ ಉಪಗ್ರಹ ತಂತ್ರಜ್ಞಾನ ಬೇಕೇ ಬೇಕು. ಶತ್ರುಗಳ ನೆಲದೊಳಕ್ಕೆ ನುಗ್ಗುವ ಯುದ್ಧವಿಮಾನಗಳಿರಬಹುದು, ಖಂಡಾಂತರ ಹಾರಿ ಗಂಡಾಂತರ ಸೃಷ್ಟಿಸುವ ಮಿಸೈಲುಗಳಿರಬಹುದು, ಗೂಢಚಾರಿಕೆ ಮಾಡಲು ಕಳಿಸಿದ ಡ್ರೋನ್‌ಗಳಿರಬಹುದು – ಅವೆಲ್ಲವೂ ಕೆಲಸ ಮಾಡುವುದು ಜಿಪಿಎಸ್ ತಂತ್ರಜ್ಞಾನ ಬಳಸಿಕೊಂಡು. ಮಹಾಭಾರತ ಕಾಲದಲ್ಲಿ ಮಂತ್ರಶಕ್ತಿಯಿಂದ ಕೆಲಸ ಮಾಡುತ್ತಿದ್ದ ಅಸ್ತ್ರಗಳಿದ್ದಂತೆ ಈಗ ಉಪಗ್ರಹ ಬಳಸಿಕೊಂಡು ಕೊಟ್ಟ ಆದೇಶಗಳನ್ನು ಶಿರಸಾವಹಿಸಿ ಕಾರ್ಯಾಚರಿಸುವ ಅಸ್ತ್ರಗಳಿವೆ. ಹಾಗಾಗಿ ಶತ್ರುಗಳ ಅಸ್ತ್ರಗಳನ್ನು ಕಟ್ಟಿಹಾಕಬೇಕಾದರೆ ಮೊದಲು ಆ ದೇಶದ ಉಪಗ್ರಹಗಳನ್ನು ನಿಷ್ಕ್ರಿಯಗೊಳಿಸುವುದು ಮುಖ್ಯ. ಬಗಲಲ್ಲಿ ರಷ್ಯ, ಚೀನ, ಪಾಕಿಸ್ಥಾನದಂಥ ಪ್ರಳಯಾಂತಕರನ್ನು ನೆರೆಹೊರೆಯಾಗಿ ಕಟ್ಟಿಕೊಂಡಿರುವ ಭಾರತ ಅಂಥ ತಂತ್ರಜ್ಞಾನವನ್ನು ತನ್ನದಾಗಿಸಿಕೊಳ್ಳದೆ ಸುಮ್ಮನಿರಲು ಸಾಧ್ಯವೆ?
ಹಾಗಂತ ನಾವೇನೂ ಯಾರ ಮೇಲೂ ವಿನಾಕಾರಣ ಜಗಳಕ್ಕೆ ಹೋಗುವುದಿಲ್ಲ. ಅನವಶ್ಯಕವಾಗಿ ಯಾರೊಬ್ಬರ ಮೇಲೆ ಆಕ್ರಮಣ ಮಾಡುವುದಿಲ್ಲ. ಬೇರೆಯವರ ಸಾಮರ್ಥ್ಯಕ್ಕೆ ತಕ್ಕಂತೆ ನಮ್ಮನ್ನು ಅಪ್‌ಡೇಟ್ ಮಾಡಿಕೊಳ್ಳುವುದಷ್ಟೆ ನಮ್ಮ ಕೆಲಸ – ಎಂಬ ಸಂದೇಶ ಭಾರತದಿಂದ ಬಂದಿದೆ. ಮಂಗಳಯಾನ ಮಾಡಿದ ಮೇಲೆ ಜಗತ್ತಿನ ಎಲ್ಲ ದೇಶಗಳೂ ತಂತಮ್ಮ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಹಾರಿಸಲು ಇಸ್ರೋ ನಂಬಿಕಸ್ಥ ಸಂಸ್ಥೆ ಎಂಬ ನಿರ್ಣಯಕ್ಕೆ ಬಂದವು. ಉಪಗ್ರಹಗಳ ಉಡಾವಣೆ ಸೇವೆಯನ್ನು ಹಲವು ದೇಶಗಳಿಗೆ ಕೊಡುವ ಮೂಲಕ ಇಸ್ರೋ ನೂರಾರು ಕೋಟಿ ರುಪಾಯಿಗಳ ಲಾಭ ಗಳಿಸಿತು.
ಇದೀಗ ಉಪಗ್ರಹ ನಿಗ್ರಹ ತಂತ್ರವೂ ನಮ್ಮ ಬಳಿ ಇದೆ ಎಂದ ಮೇಲೆ ಆ ಸೇವೆ ಪಡೆಯುವುದಕ್ಕೂ ಸಾಲುಗಟ್ಟಿ ನಿಲ್ಲುವ ದೇಶಗಳಿರುತ್ತವೆ! ಆ ಮೂಲಕ ಈ ಸಲ ಡಿಆರ್‌ಡಿಓ ಕೂಡ ಮತ್ತಷ್ಟು ಕೋಟಿಗಳ ಲಾಭ ಪಡೆಯಲು ಅವಕಾಶ ಉಂಟು. ಎಲ್ಲಕ್ಕಿಂತ ಮುಖ್ಯವಾಗಿ, ಜಗತ್ತೆಂಬುದು ಎರಡು ಸೂಪರ್ ಪವರ್‌ಗಳ ಆಡುಂಬೊಲವಲ್ಲ; ಇಲ್ಲೀಗ ನಾನೂ ಒಂದು ಸೂಪರ್ ಪವರ್; ನನ್ನನ್ನು ಕಡೆಗಣಿಸಬೇಡಿ ಎಂದು ಭಾರತ ಬೇಡುತ್ತ ಅಲ್ಲ, ಗರ್ವದಿಂದ ಹೇಳುವ ಹಂತಕ್ಕೆ ಬೆಳೆದುನಿಂತಿದೆ ಎಂಬುದನ್ನು ಗಮನಿಸಬೇಕು. ಇದೇ ವೇಗದಲ್ಲಿ ಬೆಳೆದರೆ ಭಾರತ ಕೆಲವೇ ದಶಕಗಳಲ್ಲಿ ವಿಶ್ವಗುರುವಾಗುವುದರಲ್ಲಿ ಅನುಮಾನವಿಲ್ಲ.
ರೋಹಿತ್ ಚಕ್ರತೀರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.