31ಕ್ಕೆ ಮೈತ್ರಿ ನಾಯಕರ ಜಂಟಿ ಪ್ರಚಾರ
Team Udayavani, Mar 28, 2019, 11:14 AM IST
ಬೆಂಗಳೂರು: ಲೋಕಸಭೆ ಚುನಾವಣೆಗೆ ಮೈತ್ರಿ ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ಮಾ. 31ರಂದು ಬೆಂಗಳೂರಿನ ಮಾದಾವರದಲ್ಲಿರುವ ಬಿಐಇಸಿ ಮೈದಾನದಲ್ಲಿ ಬೃಹತ್ ಜಂಟಿ ಸಮಾವೇಶ ನಡೆಸಲು ಮೈತ್ರಿ ಪಕ್ಷಗಳ ನಾಯಕರು
ತೀರ್ಮಾನಿಸಿದ್ದಾರೆ.
ಈ ಕುರಿತು ಎರಡೂ ಪಕ್ಷಗಳ ನಾಯಕರು ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತು ಪ್ರತ್ಯೇಕ ಸಭೆ ನಡೆಸಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಎಲ್ಲ ರಾಜ್ಯ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಾ. 31 ರ ಸಂಜೆ ನಡೆಯುವ ಬೃಹತ್ ಸಮಾವೇಶದಲ್ಲಿ ಸುಮಾರು 5 ಲಕ್ಷ ಜನರನ್ನು ಸೇರಿಸಲು ನಿರ್ಧರಿಸಲಾಗಿದೆ. ಎರಡೂ ಪಕ್ಷಗಳು ತಮ್ಮ ಕಾರ್ಯಕರ್ತರನ್ನು ಅಂದಿನ ಸಮಾವೇಶಕ್ಕೆಹೆಚ್ಚಿನ ಸಂಖ್ಯೆಯಲ್ಲಿ ಕರೆತರಲು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೇ, ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧೆ ಮಾಡಿರುವುದರಿಂದ ಕೆಲವು ಕ್ಷೇತ್ರಗಳಲ್ಲಿ
ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಹೊಂದಾಣಿಕೆ ಕೊರತೆ ಉಂಟಾಗಿರುವುದರಿಂದ ಜಿಲ್ಲಾ ಮಟ್ಟದಲ್ಲಿಯೂ ಸಮನ್ವಯ ಸಮಿತಿ ರಚನೆ ಮಾಡಲು ಎರಡೂ ಪಕ್ಷಗಳ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಕಾರ್ಯಕರ್ತರು ಜಂಟಿಯಾಗಿ ಪ್ರಚಾರ ಮಾಡದಿದ್ದರೂ, ಮೈತ್ರಿ ಪಕ್ಷದ ಅಭ್ಯರ್ಥಿ ಪರ ಪ್ರತ್ಯೇಕವಾಗಿ ಪ್ರಚಾರ ಮಾಡುವಂತೆ ಸೂಚಿಸಲು
ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟಿಲ್, ಉಪಾಧ್ಯಕ್ಷರಾದ ಬಿ.ಎಲ್. ಶಂಕರ್ ಇತರರು ಪಾಲ್ಗೊಂಡಿದ್ದರು.
ರಾಜ್ಯದಲ್ಲಿ ರಾಹುಲ್ ನಾಲ್ಕೈದು ರ್ಯಾಲಿ
ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರನ್ನು ಕರೆಸಲು ಪ್ರಯತ್ನ ನಡೆಸಲಾಗುತ್ತಿದೆ. ಆದರೆ, ಅವರು ಬರುವ ಬಗ್ಗೆ ಇನ್ನೂ ಭರವಸೆ ಸಿಕ್ಕಿಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್ ಹೇಳಿದರು. ಪದಾಧಿಕಾರಿಗಳ ಚುನಾವಣಾ ಕಾರ್ಯಾಗಾರದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಮಾ. 31ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅದಾದ ನಂತರ ರಾಜ್ಯದಲ್ಲಿ ನಾಲ್ಕೈದು
ಸಮಾವೇಶಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.