Team Udayavani, Mar 28, 2019, 3:54 PM IST
ಸೇಡಂ: ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡ
ಬಹುತೇಕ ನಾಯಕರು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ, ಮಾಜಿ ಪ್ರಧಾನಿ ದೇವೇಗೌಡ ಮಕ್ಕಳು, ಮರಿ ಮೊಮ್ಮಕ್ಕಳು ಮತ್ತು ಸೊಸೆಯಂದಿರ ಪಕ್ಷ ಕಟ್ಟುತ್ತಿದ್ದಾರೆ. ಇನ್ನು 20ರಿಂದ 30 ಜನ ಇದ್ದಿದ್ರೆ ಎಲ್ಲರಿಗೂ ಟಿಕೆಟ್ ನೀಡುತ್ತಿದ್ದರು ಎಂದು ವ್ಯಂಗ್ಯವಾಡಿದರು.
ಕಲಬರುಗಿಯಲ್ಲಿ ಅಪ್ಪ-ಮಕ್ಕಳ ರಾಜಕೀಯ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ನಾಯಕರು ಟಿಕೆಟ್‌ಗಾಗಿ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಿದ್ದಾರೆ. ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಸ್ವಾರ್ಥ ರಾಜಕಾರಣಿಯಾಗಿದ್ದು, ಪುತ್ರ ವ್ಯಾಮೋಹವೇ ಅವರಿಗೆ ಕಂಟಕ ತಂದೊಡ್ಡಲಿದೆ. ಈ ಬಾರಿ 10 ಸಾವಿರ ಹೆಚ್ಚುವರಿ ಮತಗಳನ್ನು ಅಫಜಲಪುರದಿಂದ ಕೊಡಿಸುವೆ ಎಂದರು.
ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಮಾತನಾಡಿ, ಬಾಬುರಾವ್ ಮತ್ತು ಮಾಲೀಕಯ್ಯ ಜೋಡೆತ್ತುಗಳಿದ್ದಂತೆ. ಮಲ್ಲಿಕಾರ್ಜುನ ಖರ್ಗೆ ಪಾಪದ ಕೊಡ ತುಂಬಿದೆ. ಖರ್ಗೆ ಹಳೆ ಪರ್ವತ ಇದ್ದ ಹಾಗೆ, ಈಗ ತನ್ನಿಂತಾನೆ ಬೀಳತೊಡಗಿದೆ.
ತಮ್ಮ 50 ವರ್ಷ ರಾಜಕೀಯದಲ್ಲಿ ಒಂದು ಬಾರಿಯೂ ಕೋಲಿ ಸಮಾಜದ ಹೆಸರು ತಗೊಂಡಿಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ ಸಮಾಜವನ್ನು ಎಸ್ಟಿಗೆ ಸೇರಿಸುವ ಭರವಸೆ ಕೊಟ್ಟಿದ್ದಾರೆ ಎಂದು ಹೇಳಿದರು. ಈ ಬಾರಿ ಗುತ್ತೇದಾರ ಮತ್ತು ನಾನು ಜೋಡೆತ್ತುಗಳಂತೆ ದುಡಿದು ಖರ್ಗೆಯನ್ನು ಮನೆಗೆ ಕಳುಹಿಸುವವರೆಗೂ ನಿದ್ರೆ ಮಾಡುವುದಿಲ್ಲ ಎಂದು ಶಪಥ ಮಾಡಿದರು.
ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ ಮಾತನಾಡಿ, ರಫೇಲ್ ಹೆಸರಲ್ಲಿ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಸುಪ್ರಿಂಕೋರ್ಟ್ ಆದೇಶ ನೋಡಬೇಕು. ಸುಪ್ರಿಂಕೋರ್ಟ್ ರಫೇಲ್ ಹಗರಣ ನಡೆದಿಲ್ಲ ಎಂದು ತೀರ್ಪು ನೀಡಿದೆ. ಪ್ರಧಾನಿಯವರಿಗೆ ಕಣ್ಣು ಹೊಡೆಯುವ ರಾಹುಲ್ ಗಾಂಧಿ ಗೆ ಸಾಮಾನ್ಯ ಜ್ಞಾನವೂ ಇಲ್ಲ. ಸೈನ್ಯಕ್ಕೆ ನೀಡುವ ಟ್ರಕ್‌ಗಳ ಹೆಸರಲ್ಲೂ ನೆಹರು ಭ್ರಷ್ಟಾಚಾರ ನಡೆಸಿದ್ದರು ಎಂದು ಆರೋಪಿಸಿದರು.
ಮಾಜಿ ಉಪ ಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಬಿ.ಜಿ. ಪಾಟೀಲ, ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಶರಣಪ್ಪ ತಳವಾರ, ಪರ್ವತರೆಡ್ಡಿ ಪಾಟೀಲ ನಾಮವಾರ, ಶಿವಲಿಂಗರೆಡ್ಡಿ ಬೆನಕನಹಳ್ಳಿ, ವಿಜಯಕುಮಾರ ಆಡಕಿ, ಬಸವರಾಜ ರೇವಗೊಂಡ, ಶ್ರೀನಾಥ ಪಿಲ್ಲಿ ಇನ್ನಿತರ
ಮುಖಂಡರು ಇದ್ದರು.
ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಓಂಪ್ರಕಾಶ ಪಾಟೀಲ ನಿರೂಪಿಸಿದರು, ತಾಲೂಕು ಅಧ್ಯಕ್ಷ ನಾಗಪ್ಪ ಕೊಳ್ಳಿ, ಸ್ವಾಗತಿಸಿದರು.