ಎ.1ರಿಂದ ವಿಜಯ ಬ್ಯಾಂಕ್ ನೆನಪು
ವಿಲೀನದ ಬಗ್ಗೆ ಗ್ರಾಹಕರಿಗೆ ಅಧಿಕೃತ ಸಂದೇಶ ರವಾನೆ
Team Udayavani, Mar 29, 2019, 6:00 AM IST
ಮಂಗಳೂರು: ಸಾಕಷ್ಟು ಹೋರಾಟಗಳ ನಡುವೆಯೂ ದಕ್ಷಿಣ ಕನ್ನಡ ಮೂಲದ ವಿಜಯ ಬ್ಯಾಂಕ್ ಕೊನೆಗೂ ಬ್ಯಾಂಕ್ ಆಫ್ ಬರೋಡ ಜತೆ ವಿಲೀನಗೊಳಿಸುವ ಸಂಬಂಧ ಇದೀಗ ಅಧಿಕೃತವಾಗಿ ಗ್ರಾಹಕರಿಗೆ ಸಂದೇಶ ರವಾನೆಯಾಗಿದೆ. ಹೀಗಾಗಿ, ಎಪ್ರಿಲ್ 1ರಿಂದ ವಿಜಯ ಬ್ಯಾಂಕ್‌ನ ಅಸ್ತಿತ್ವ ಕಣ್ಮರೆಯಾಗಿ ಅದು ಇತಿಹಾಸದ ಪುಟ ಸೇರಲಿದೆ.
ಕರಾವಳಿಯ ಹೆಮ್ಮೆಯ ವಿಜಯ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡ ಜತೆಗೆ ವಿಲೀನಗೊಳಿಸುವ ನಿರ್ಧಾರ ಘೋಷಣೆಯಾಗುತ್ತಿದ್ದಂತೆ ಕರಾವಳಿ ಭಾಗದಲ್ಲಿ ಅದರಲ್ಲಿಯೂ ದ.ಕ., ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ವಿರೋಧ-ಪ್ರತಿಭಟನೆಗಳು ನಡೆದಿ ದ್ದವು. ಆದರೆ, ಅಸ್ತಿತ್ವ ಉಳಿಸುವ ಸಂಬಂಧ ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿಗಳು, ಅಭಿಮಾನಿಗಳ ಹೋರಾಟದ ನಡುವೆಯೂ ವಿಲೀನಗೊಳಿಸುವ ಪ್ರಕ್ರಿಯೆಗಳು ನಡೆದಿತ್ತು. ಕೊನೆಯ ಹಂತದಲ್ಲಿಯಾದರೂ ಲಾಭದಲ್ಲಿರುವ ವಿಜಯ ಬ್ಯಾಂಕ್ ಅನ್ನು ವಿಲೀನ ಪ್ರಕ್ರಿಯೆ ಯಿಂದ ಕೈಬಿಡಬಹುದು ಎನ್ನುವ ನಿರೀಕ್ಷೆ ಹೋರಾಟಗಾರರಲ್ಲಿ, ಕರಾವಳಿಗರಲ್ಲಿ ಇತ್ತು. ಆ ನಿರೀಕ್ಷೆ ಈಗ ಹುಸಿಯಾಗಿದ್ದು, ಎ. 1ರಿಂದ ವಿಜಯ ಬ್ಯಾಂಕ್‌ನ ವ್ಯವಹಾರಗಳು ಬ್ಯಾಂಕ್ ಆಫ್ ಬರೋಡ, ದೇನಾ ಬ್ಯಾಂಕ್ ಜತೆ ವಿಲೀನ ಗೊಳ್ಳುವ ಮೂಲಕ ಎಲ್ಲ ಸೇವೆಗಳು ಯಥಾ ಪ್ರಕಾರ ಮುಂದುವರಿಯಲಿವೆ ಎನ್ನುವ ಅಧಿಕೃತ ಎಸ್‌ಎಂಎಸ್ ಸಂದೇಶ ಗುರುವಾರ ಎಲ್ಲ ವಿಜಯ ಬ್ಯಾಂಕ್ ಗ್ರಾಹಕರಿಗೆ ರವಾನೆಯಾಗಿದೆ.
ಗ್ರಾಹಕರಿಗೆ ಕಳುಹಿಸಿರುವ ಎಸ್‌ಎಂಎಸ್: ವಿಜಯ ಬ್ಯಾಂಕ್ ಗುರುವಾರ ಗ್ರಾಹಕರಿಗೆ ಕಳುಹಿಸಿರುವ ಸಂದೇಶ ಹೀಗಿದೆ- “2019 ಎ. 1ರಿಂದ ಬ್ಯಾಂಕ್ ಆಫ್ ಬರೋಡ, ವಿಜಯ ಬ್ಯಾಂಕ್. ದೇನಾ ಬ್ಯಾಂಕುಗಳು ಪರಸ್ಪರ ವಿಲೀನಗೊಳ್ಳಲಿವೆ. ಇನ್ನು ಮುಂದಿನ ದಿನಗಳಲ್ಲಿ ನೀವು ದೇಶದ 3ನೇ ಅತಿ ದೊಡ್ಡ ಬ್ಯಾಂಕ್ ನೆಟ್‌ವರ್ಕ್ ಜತೆ ವ್ಯವಹಾರ ನಡೆಸಲಿದ್ದೀರಿ. ನಿಮ್ಮ ಈಗಿರುವ ಖಾತೆ ಸಂಖ್ಯೆ, ಡೆಬಿಟ್/ ಕ್ರೆಡಿಟ್ ಕಾರ್ಡ್, ಮೊಬೈಲ್ ಮತ್ತು ನೆಟ್ ಬ್ಯಾಂಕಿಂಗ್ ಸೌಲಭ್ಯಗಳೊಂದಿಗೆ ಸೇವೆಗಳು ಯಥಾಸ್ಥಿತಿ ಮುಂದುವರಿಯಲಿವೆ. ವಿವರಗಳಿಗೆ ನಿಮ್ಮ ಈಗಿರುವ ವಿಜಯ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬಹುದು.’
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.