Team Udayavani, Mar 29, 2019, 2:37 PM IST
ಮೊಳಕಾಲ್ಮೂರು: ನವ ಭಾರತ ನಿರ್ಮಾಣಕ್ಕಾಗಿ ನುಡಿದಂತೆ ನಡೆಯುವ ನರೇಂದ್ರ ಮೋದಿಯವರನ್ನು ಮತ್ತೂಮ್ಮೆ
ದೇಶದ ಪ್ರಧಾನಿಯನ್ನಾಗಿಸಲು ಪಣ ತೊಡಬೇಕು ಎಂದು ಬಿಜೆಪಿ ಪ್ರಬುದ್ಧ ಗೋಷ್ಠಿಯ ರಾಜ್ಯಾಧ್ಯಕ್ಷ ಡಾ| ಜಿ. ಗಿರಿಧರ ಉಪಾಧ್ಯಾಯ ಕರೆ ನೀಡಿದರು.
ಪಟ್ಟಣದ ಪಾಂಡುರಂಗಸ್ವಾಮಿ ದೇವಸ್ಥಾನದ ಸಭಾಂಗಣದಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ “ಪ್ರಬುದ್ಧರೊಂದಿಗೆ
ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಕಾರ್ಯಕರ್ತರು ತಲೆ ಎತ್ತಿ ಪಕ್ಷಕ್ಕೆ ಮತ ಕೇಳುವಂತಹ ಕೆಲಸ ಮಾಡುತ್ತೇನೆಂದು ಭರವಸೆ ನೀಡಿದ್ದಾರೆ. ಅವರೊಬ್ಬ ರಾಜಕೀಯ ಮುತ್ಸದ್ಧಿಯಾಗಿದ್ದಾರೆ. ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡುವ ಜೊತೆಗೆ ಹೊಸ ಭಾರತ ಕಟ್ಟಲುಸಂಕಲ್ಪ ಮಾಡಬೇಕಿದೆ ಎಂದರು. ಬಿಜೆಪಿ ಒಬ್ಬ ವ್ಯಕ್ತಿಯ ಪರವಾಗಿರದೆ ಭಾರತ ಮಾತೆಯನ್ನು ವಿಶ್ವ ಮಾತೆಯಾಗಿಸುವ ಗುರಿಯನ್ನು ಹೊಂದಲಾಗಿದೆ. ಪ್ರಧಾನಿ ಮೋದಿಯವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಯಾವುದೇ ಫಲಾಪೇಕ್ಷೆಯಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಐದು ವರ್ಷಗಳ ಆಡಳಿತದಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡಿಲ್ಲ. ವಿರೋಧ ಪಕ್ಷಗಳು ಮೋದಿ ಮತ್ತೆ ಅಧಿ ಕಾರಕ್ಕೆ ಬಾರದಂತೆ ಮಾಡಲು ವಂಶ ಪಾರಂಪರ್ಯ ಆಡಳಿತಕ್ಕೆ ಮುಂದಾಗಿವೆ ಎಂದು ಆರೋಪಿಸಿದರು.
ಮೋದಿಯವರು ಬಡಜನತೆಗಾಗಿ ಆಯುಷ್ಮಾನ್ ಭಾರತ್, ಮುದ್ರಾ ಯೋಜನೆ, ಜೆನರಿಕ್ ಔಷ ಧ, ವಸತಿ ನಿರ್ಮಾಣದಲ್ಲಿ ಬಡ್ಡಿ ಇಳಿಕೆ ಹಾಗೂ ಸಬ್ಸಿಡಿ, ಸಂಕಷ್ಟದಲ್ಲಿರುವ ರೈತರಿಗೆ ಬೆಂಬಲ ಬೆಲೆ ಮತ್ತು ಅವರ ಖಾತೆಗೆ ವಾರ್ಷಿಕ 6 ಸಾವಿರ ರೂ. ಜಮಾ
ಮಾಡುವ ಯೋಜನೆ, ಶೌಚಾಲಯ ನಿರ್ಮಾಣ ಹಾಗೂ ನಾನಾ ಯೋಜನೆಗಳ ಮೂಲಕ ಪ್ರತಿಯೊಂದು ಖಾತೆಗೆ 15
ಲಕ್ಷ ರೂ.ಗಿಂತಲೂ ಹೆಚ್ಚು ಹಣವನ್ನು ಪರ್ಯಾಯವಾಗಿ ನೀಡಿದ್ದಾರೆ. ಆದರೆ ಯುಪಿಎ ಸರ್ಕಾರ ಲೂಟಿ ಮಾಡಿದ
ಕಂದಕಗಳನ್ನು ಮುಚ್ಚುವ ಕೆಲಸ ಮಾಡಿದ್ದಾರೆ. ಆದ್ದರಿಂದ ದೇಶಪ್ರೇಮಿ ನರೇಂದ್ರ ಮೋದಿಯವರಿಗೆ ಮತ್ತೂಮ್ಮೆ ದೇಶದ
ಚುಕ್ಕಾಣಿ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಡಾ| ಬಿ.ಜಿ. ಜ್ಞಾನದೇವ್, ಡಾ| ಪಿ.ಎಂ. ಮಂಜುನಾಥ, ಡಿ.ಎಂ. ಈಶ್ವರಪ್ಪ, ಪಿ.ಎಂ. ಚಂದ್ರಶೇಖರ್,
ಟಿ.ಟಿ. ರವಿಕುಮಾರ್. ವಿನಯ್‌ಕುಮಾರ್, ಶಾಂತಾರಾಂ ಬಸಾಪತಿ, ಡಿಶ್ ರಾಜು, ಕೆ.ಪಿ. ಗೋಪಾಲ್ ಇದ್ದರು.
15 ಲಕ್ಷ ನೀಡೋದಾಗಿ ಮೋದಿ ಹೇಳಿಲ್ಲ ಮೋದಿಯವರು ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಅಗತ್ಯ ಸವಲತ್ತುಗಳನ್ನು ನೀಡಿದ್ದಾರೆ. ಕಳೆದ ಚುನಾವಣೆಯಲ್ಲಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ನೀಡುವುದಾಗಿ ಎಲ್ಲಿಯೂ ಹೇಳಿಲ್ಲ. ದೇಶದಲ್ಲಿರುವ
ಲೂಟಿಕೋರರು ಲೂಟಿ ಮಾಡಿದ ಹಣವನ್ನೆಲ್ಲಾ ಶೇಖರಿಸಿದರೆ ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕಬಹುದು ಎಂದಷ್ಟೇ ಹೇಳಿದ್ದಾರೆ. ಆದರೆ ವಿರೋಧ ಪಕ್ಷದವರು ಈ ವಿಷಯದಲ್ಲಿ ವಿನಾಕಾರಣ ಆರೋಪ ಮಾಡುತ್ತಿವೆ ಎಂದು ಉಪಾಧ್ಯಾಯ ಆಕ್ಷೇಪಿಸಿದರು.