ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಸಂಕಲ್ಪ ಬಲದ ಅಸಾಮಾನ್ಯತೆ
Team Udayavani, Mar 31, 2019, 6:00 AM IST
ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ.
ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ನನ್ನ ಬದುಕಿನ ನಿರ್ಣಾಯಕ ಘಟ್ಟದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದವರು. ನಾನದನ್ನು ಯಾವಾಗಲೂ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತ ಇರುತ್ತೇನೆ. 1971ನೇ ಇಸವಿ. ನಾನು ಮಲ್ಲಾಡಿಹಳ್ಳಿಯ ಹೈಸ್ಕೂಲಿನಲ್ಲಿ ಟೆಕ್ನಿಕಲ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತ ಇದ್ದೆ. ಮದುವೆಯಾಗಿ ಇಬ್ಬರು ಮಕ್ಕಳೂ ಇದ್ದರು.
ಬಾಹ್ಯವಿದ್ಯಾರ್ಥಿಯಾಗಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಎ ಮಾಡಿದ್ದೆ. ಎಂಎ ಮಾಡಬೇಕು, ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಬೇಕು ಎಂಬ ಹುಚ್ಚು ತಾನಾಗಿಯೇ ನನ್ನ ತಲೆಗೆ ಹತ್ತಿತ್ತೋ ಅಥವಾ ಬೇರೆ ಯಾರಾದರೂ ಹತ್ತಿಸಿದ್ದರೋ ಸ್ಪಷ್ಟವಿಲ್ಲ. ಮನೆಮಂದಿಯೆಲ್ಲ ಬೇಡ ಎಂದರೂ ಕೇಳದೆ ಎಂಎ ಸೀಟಿಗಾಗಿ ಮೈಸೂರು ವಿಶ್ವವಿದ್ಯಾಲಯಕ್ಕೆ ಅರ್ಜಿ ಗುಜರಾಯಿಸಿಬಿಟ್ಟೆ. ತಿಂಗಳು ಕಳೆಯಿತು.
ವಿಶ್ವವಿದ್ಯಾಲಯದಿಂದ ಯಾವ ಸುದ್ದಿಯೂ ಇಲ್ಲ. ನನ್ನ ಗೆಳೆಯನೊಬ್ಬ ಆಗ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂಎ ಓದುತ್ತ ಇದ್ದ. ನಾನು ಅವನನ್ನು ವಿಚಾರಿಸಿದಾಗ, ಸೀಟು ಪ್ರಕಟವಾಗಿರುವುದನ್ನೂ, ನಾನು ಆ ಪಟ್ಟಿಯಲ್ಲಿ ಇಲ್ಲವೆಂಬುದನ್ನೂ ಬೇಸರದಿಂದ ಬರೆದು ತಿಳಿಸಿದ್ದ! ನಾನು ಎಂಎ ಓದುವುದು ಕನಸಿನ ಮಾತೇ ಸರಿ ಎಂದುಕೊಂಡು ನಾನು ಮಾನಸಿಕವಾಗಿ ಕುಸಿದ ಸಮಯ. ನನ್ನ ಮಲ್ಲಾಡಿಹಳ್ಳಿಯ ಸಹೋದ್ಯೋಗಿಗಳಾದ ರಾಮಪ್ಪಮತ್ತು ವಿಠೊಬಣ್ಣ ಅದೇಕೋ ಬೆಂಗಳೂರಿಗೆ ಹೋದವರು ಆಕಸ್ಮಾತ್ ಲಕ್ಷ್ಮೀನಾರಾಯಣ ಭಟ್ಟರನ್ನು ಭೆಟ್ಟಿ ಮಾಡಿದ್ದಾರೆ. ಆ ವೇಳೆ ಗಾಗಲೇ ನನ್ನ ಪರಿವೃತ್ತ ಎಂಬ ಸಂಗ್ರಹ ಪ್ರಕಟವಾಗಿತ್ತು. ನಾನದನ್ನು ಭಟ್ಟರಿಗೆ ಕೊಟ್ಟೂ ಇದ್ದೆ. ಅವರು ಸಂಗ್ರಹದ ಬಗ್ಗೆ ಸದಭಿಪ್ರಾಯ ವ್ಯಕ್ತಪಡಿಸಿದ್ದರು.
ರಾಮಪ್ಪಮಾತಾಡುವಾಗ ನನಗೆ ಎಂಎ ಮಾಡಬೇಕೆಂಬ ಹಂಬಲವಿರು ವುದನ್ನೂ, ಮೈಸೂರಲ್ಲಿ ನನಗೆ ಸೀಟು ದೊರಕದೇ ಹೋದದ್ದನ್ನೂ ಪ್ರಾಸಂಗಿಕವಾಗಿ ಭಟ್ಟರೆದುರು ಪ್ರಸ್ತಾಪಿಸಿದ್ದಾರೆ.
ಎರಡೇ ದಿನ. ಭಟ್ಟರಿಂದ ನನಗೊಂದು ಪೋಸ್ಟ್ ಕಾರ್ಡ್ ಬಂತು. “ಕೇವಲ ಮೆರಿಟ್ಟಿನ ಬಗ್ಗೆ ಮಾತ್ರ ಯೋಚಿಸಬೇಡಿ. ನಿಮಗೆ ಬೇರೆ ಯೋಗ್ಯತೆ ಇದೆ. ಈ ಕಾಗದ ತಲಪಿದ ಕೂಡಲೆ ಬೆಂಗಳೂರಿಗೆ ಬನ್ನಿ. ನಿಮಗೆ ಕನ್ನಡ ಎಂಎಯಲ್ಲಿ ಸೀಟು ಕೊಡಿಸಲು ಪ್ರಯತ್ನಿಸೋಣ!’. ನಾನು ಬೆಂಗಳೂರಿಗೆ ಧಾವಿಸಿ ಭಟ್ಟರನ್ನು ಕಂಡೆ. ಅವರು ಜಿ. ಎಸ್. ಶಿವರುದ್ರಪ್ಪರವರ ಬಳಿ ನನ್ನನ್ನು ಕರೆದುಕೊಂಡು ಹೋದರು. ಜಿಎಸ್‌ಎಸ್ ಆಗ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರು. ಭಟ್ಟರು ನನ್ನನ್ನು ಅವರಿಗೆ ಪರಿಚಯಿಸಿ, “ಚೆನ್ನಾಗಿ ಕವಿತೆ ಬರೀತಾರೆ. ನಿಮ್ಮ ಕಾವ್ಯದ ಪ್ರಭಾವ ತುಂಬ ಇದೆ. ಆಸೆಯಿಂದ ಎಂಎ ಮಾಡಲು ಬಯಸುತ್ತಿದ್ದಾರೆ’ ಎಂದಾಗ ಜಿಎಸ್‌ಎಸ್ ನನ್ನನ್ನು ನಖಶಿಖಾಂತ ನೋಡಿ, ಸಣ್ಣಗೆ ತುಟಿಯಂಚಲ್ಲೇ ನಕ್ಕು, “ಬನ್ನಿ… ನಿಮಗೆ ಸೀಟ್ ಕೊಡೋಣ’ ಎಂದರು. ಆವತ್ತೇ ನನ್ನ ಜೀವನ ಪಥ ಬಹುದೊಡ್ಡ ಯೂ ಟರ್ನ್ ತೆಗೆದುಕೊಂಡಿತು.
ಇನ್ನೊಬ್ಬರಿಗೆ ಸಹಾಯ ಮಾಡೋದರಲ್ಲಿ ಭಟ್ಟರು ಯಾವಾಗಲೂ ಮುಂದು. ಶಿವಮೊಗ್ಗ ಸುಬ್ಬಣ್ಣ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದದ್ದು ಭಟ್ಟರ ಪ್ರೇರಣೆಯಿಂದ. ಅವರು ಚಂದ್ರಶೇಖರ ಕಂಬಾರರ ಸಿನಿಮಾದಲ್ಲಿ ಹಾಡುವಂತಾದುದೂ ಭಟ್ಟರ ಪ್ರಭಾವದಿಂದ. ಈಗ ಸುಬ್ಬಣ್ಣ ಕರ್ನಾಟಕದ ದೊಡ್ಡ ಹೆಸರು. ಹೀಗೆ ಅದೆಷ್ಟು ಜನರ ಜೀವನದಲ್ಲಿ ನಿರ್ಣಾಯಕ ಪಾತ್ರವನ್ನು ಭಟ್ಟರು ವಹಿಸಿದ್ದಾರೋ ಕಾಣೆ. ಗೆಳೆಯ ಬಿ. ಆರ್. ಲಕ್ಷ್ಮಣರಾವ್ ಅವರಿಗೆ ಹೆಣ್ಣು ತೋರಿಸಿ ಹಸೆಮಣೆ ಏರಿಸಿದ್ದೂ ಭಟ್ಟರೇ ಎಂದು ಕೇಳಿದ್ದೇನೆ !
ನನ್ನ ಮತ್ತು ಭಟ್ಟರ ಸಾಹಿತ್ಯಕ ಸಂಬಂಧ ನಿಕಟವಾದದ್ದು. ನಾವು ಪರಸ್ಪರ ಓದುತ್ತ ವಿಮರ್ಶಿಸುತ್ತ ಕಾವ್ಯವ್ಯವಸಾಯದಲ್ಲಿ ಬಹುಕಾಲದಿಂದ ತೊಡಗಿಕೊಂಡಿದ್ದೇವೆ. ತಮ್ಮ ಅರುಣಗೀತೆಗೆ ಮುನ್ನುಡಿ ಬರೆಯುವ ಅವಕಾಶವನ್ನೂ ಭಟ್ಟರು ನನಗೆ ಕಲ್ಪಿಸಿದ್ದಾರೆ. (ಅರುಣಗೀತ, ಮಗನಿಗೊಂದು ಪತ್ರ ಆ ಸಂಗ್ರಹದ ಮಹತ್ವದ ಕವಿತೆಗಳು). ಅದಕ್ಕಿಂತ ಸ್ವಾರಸ್ಯಕರವಾದ ನೆನಪು- “ಸುಚಿತ್ರ’ ಸಭಾಂಗಣದಲ್ಲಿ ಭಟ್ಟರನ್ನು ಕುರಿತ ಒಂದು ಕಾರ್ಯಕ್ರಮದ್ದು. ಎಸ್. ಎಲ್. ಭೈರಪ್ಪನವರು ಆವತ್ತಿನ ಮುಖ್ಯ ಅತಿಥಿ. ಆದರೆ, ಅನಾರೋಗ್ಯದ ಕಾರಣ ಕೊನೆಗಳಿಗೆಯಲ್ಲಿ ಅವರು ಕಾರ್ಯಕ್ರಮಕ್ಕೆ ಬರುವುದಿಲ್ಲವೆಂದು ತಿಳಿದು, ಭಟ್ಟರು ನನ್ನನ್ನು ಸಂಪರ್ಕಿಸಿದರು. “ಭೈರಪ್ಪನವರು ತಮ್ಮ ಮಾತಿನ ಬರಹ ರೂಪ ಕಳಿಸಿದ್ದಾರೆ. ಅನಾರೋಗ್ಯದಿಂದ ಅವರಿಗೆ ಕಾರ್ಯಕ್ರಮಕ್ಕೆ ಖುದ್ದಾಗಿ ಬರಲಿಕ್ಕಾಗುತ್ತಿಲ್ಲ. ಈಗ ನೀವೇ ನನ್ನ ಬಗ್ಗೆ ಮಾತಾಡಬೇಕು’ ಎಂದರು. ಆವತ್ತಿನ ನನ್ನ ಭಾಷಣವೂ ಚೆನ್ನಾಗಿ ಬಂದಿತೆಂದು ಸ್ನೇಹಿತರ ಅಭಿಪ್ರಾಯ.
ನಾನು ತ್ಯಾಗರಾಜನಗರದಲ್ಲಿ ಬಾಡಿಗೆ ಮನೆಯಲ್ಲಿ ಇದ್ದೆ. ಒಕ್ಕೋಣೆಯ ಸಣ್ಣ ಮನೆ. ದೊಡ್ಡ ಸಂಸಾರ ನನ್ನದು. ನನಗೆ ಬರೆಯಲಿಕ್ಕೆ ಕೋಣೆಯಲ್ಲಿ ಸ್ಥಳಾಭಾವ. ಹಾಗಾಗಿ, ಮನೆಯ ಹೊರಗೆ ಕಾಂಪೌಂಡಲ್ಲಿ ಕೂತು ಒಂದು ಬೆಳಗ್ಗೆ ಕಡ್ಡಿ ಚಾಪೆಯಮೇಲೆ ಬರೆಯುತ್ತ ಕೂತಿದ್ದೇನೆ. ಭಟ್ಟರು ಡಿಪಾರ್ಟ್ ಮೆಂಟಿಗೆ ಹೋಗುವ ಮುನ್ನ ನಮ್ಮ ಮನೆಗೆ ಬಂದರು. ಕಾಫಿ ಇತ್ಯಾದಿ ಮುಗಿದ ಮೇಲೆ “ಏನೋ ಬರೆಯುತ್ತ¤ ಇದ್ದೀರಿ’ ಎಂದರು.
“ಕಾಳಿದಾಸನ ಋತುಸಂಹಾರ ಅನುವಾದ ಮಾಡುತ್ತ ಇದ್ದೇನೆ. ಕೊನೆಯ ಕೆಲವು ಪದ್ಯಗಳ ಮೇಲೆ ಕೆಲಸ ಆಗುತ್ತ¤ ಇದೆ’. ಭಟ್ಟರು ಹಸ್ತಪ್ರತಿ ಇಸಿದುಕೊಂಡು ಋತುಸಂಹಾರದ ಅನುವಾದ ಓದಲು ತೊಡಗಿದರು. ಅರ್ಧ ಗಂಟೆ ಆಯಿತು. ಒಂದು ಗಂಟೆಯೇ ಆಯಿತು. “ಸರ್… ನಿಮಗೆ ಕಾಲೇಜಿಗೆ ಹೊತ್ತಾಗಲಿಲ್ಲವೇ?’ ಎಂದೆ ಸಂಕೋಚದಿಂದ. “ಎಷ್ಟು ಸೊಗಸಾದ ಅನುವಾದ. ಇದನ್ನು ಪೂರ್ತಿ ಓದದೆ ನಾನು ಹೋಗುವುದಿಲ್ಲ! ಕಾಲೇಜಿಗೆ ಇವತ್ತು ರಜಾ ಹಾಕುತ್ತೇನೆ’ ಎಂದರು ಕಾವ್ಯರಸಿಕರಾದ ಎನ್‌ಎಸ್‌ಎಲ್ ಸಾಲು ಸಾಲುಗಳನ್ನು ಚಪ್ಪರಿಸಿ ಆವತ್ತು ಭಟ್ಟರು ಸಂತೋಷಪಟ್ಟಿದ್ದು ನನ್ನ ಕಣ್ಣಿಗೆ ಕಟ್ಟಿದೆ. ಅಷ್ಟರಲ್ಲಿ ನನ್ನ ಪತ್ನಿ ಉಪಾಹಾರವನ್ನೂ ಸಿದ್ಧಪಡಿಸಿದಳು. ಊಟದ ವೇಳೆಯ ತನಕ ನಮ್ಮ ಕಾವ್ಯಸಲ್ಲಾಪ ಮುಂದುವರೆಯಿತು.
ಋತುವಿಲಾಸದ ಹಸ್ತಪ್ರತಿ ಸಿದ್ಧವಾದ ಮೇಲೆ ಅದನ್ನು ಸುವಿದ್ಯಾ ಪ್ರಕಾಶನದಿಂದ ಹೊರಬರುವಂತೆ ಮಾಡಿದವರೂ ಭಟ್ಟರೇ! ಮೊದಲ ಮುದ್ರಣಕ್ಕೆ ಹಾಕಿದ್ದು ಸಾವಿರವಲ್ಲ, ಎರಡು ಸಾವಿರ ಪ್ರತಿ! ಅದು ಭಟ್ಟರ ಕಾವ್ಯೋತ್ಸಾಹದ ಫಲ.
ಯಾವುದಾದರೂ ಕೆಲಸ ಕೈಗೆ ತೆಗೆದುಕೊಂಡರೆ ಪಟ್ಟು ಹಿಡಿದು ಅದನ್ನು ಮುಗಿಸುವ ಸ್ವಭಾವ ಭಟ್ಟರದ್ದು. ಅವರು ಡಬ್ಲ್ಯು.ಬಿ. ಯೇಟ್ಸನ ಕವಿತೆಗಳನ್ನು ಅನುವಾದ ಮಾಡುವ ಕಾಲದಲ್ಲಿ ಹೇಗೆ ಯೇಟ್ಸನ ಕಾವ್ಯ ಮತ್ತು ವಿಮಶಾìಲೋಕದಲ್ಲಿ ಮುಳುಗಿ ಹೋಗಿದ್ದರು ಎಂಬುದನ್ನು ನಾನು ಬಲ್ಲೆ. ಆ ದಿನಗಳಲ್ಲಿ ಅವರ ಮನೆಗೆ ಹೋದರೆ ಅವರ ಮಾತುಕತೆಯೆಲ್ಲ ಯೇಟ್ಸ್Õನ ಬಗ್ಗೆಯೇ. ಇಂಗ್ಲಿಷ್ ಪ್ರಾಧ್ಯಾಪಕರುಗಳು “ಭೇಷ್’ ಎನ್ನುವಂತೆ ಭಟ್ಟರು ಯೇಟ್ಸನ ಅನುವಾದ ಮಾಡಿಮುಗಿಸಿದರು. ಮುಂದೆ ಟಿ. ಎಸ್. ಎಲಿಯಟ್ ಕಾವ್ಯವನ್ನು ಅನುವಾದಕ್ಕೆ ತೆಗೆದುಕೊಂಡರು. ಅನುವಾದಕ್ಕೆ ಬಹಳ ಜಟಿಲವಾದ ಕಾವ್ಯ ಎಲಿಯಟ್‌ನದು. ಕೀರ್ತಿನಾಥ ಕುರ್ತಕೋಟಿ, ಕೆ. ನರಸಿಂಹಮೂರ್ತಿ, ಅನಂತಮೂರ್ತಿ, ಗೋಪಾಲಕೃಷ್ಣ ಅಡಿಗರು ಇವರೆಲ್ಲರ ಮೆಚ್ಚುಗೆಯನ್ನೂ ಪ್ರಶಂಸೆಯನ್ನೂ ಭಟ್ಟರ ಅನುವಾದಗಳು ಪಡೆದವು. ಅವರ ಷೇಕ್ಸ್‌ಪಿಯರನ ಸಾನೆಟ್ಟುಗಳ ಅನುವಾದ, ಯೇಟ್ಸನ ಕವಿತೆಗಳ ಅನುವಾದ ನನಗೆ ತುಂಬ ಇಷ್ಟ.
ಭಟ್ಟರದ್ದು ಒಂದು ರೀತಿ ಪಟ್ಟು ಹಿಡಿದು ಮಾತಾಡುವ ಸ್ವಭಾವ. ಸೂಕ್ಷ್ಮ ಸಂವೇದನೆ ನಿಷ್ಠುರ ನಿಲುವು ಅವರ ವಿಮರ್ಶೆಯ ಎರಡು ಮುಖ್ಯ ಲಕ್ಷಣಗಳು. ಕೆಲವು ಬಾರಿ ಮಾತುಕತೆ ವಾಗ್ವಾದದ ನೆಲೆಗೂ ಹೋಗುವುದುಂಟು. ಆಧಾರ ಸಮೇತ ತಮ್ಮ ವಾದವನ್ನು ಖಡಕ್ಕಾಗಿ ಮಂಡಿಸುವುದು ಭಟ್ಟರ ಶೈಲಿ. ಈ ವಾಗ್ವಾದಗಳಿಂದ ಅನೇಕ ಗೆಳೆಯರ ಅಸಮಾಧಾನಕ್ಕೂ ಭಟ್ಟರು ಪಾತ್ರರಾದುದುಂಟು. ಸುಗಮ ಸಂಗೀತದ ಬಗ್ಗೆ ಬಿ. ಸಿ. ರಾಮಚಂದ್ರ ಶರ್ಮ ಮತ್ತು ಎಲ್‌ಎಸ್‌ಎಲ್ ಅವರ ಭಿನ್ನಾಭಿಪ್ರಾಯ ಕನ್ನಡ ಕಾವ್ಯ ಜಗತ್ತಿನ ಬಹು ದೊಡ್ಡ ವಾಗ್ವಾದಗಳಲ್ಲಿ ಒಂದು. ತಮ್ಮ ತಮ್ಮ ನಿಲುವುಗಳಿಗೆ ಅಂಟಿಕೊಂಡು ಇಬ್ಬರೂ ಮಾತಾಡುವ ಜನ. ಆ ಜಗಳ ಕೊನೆಗೂ ಬಗೆಹರಿಯಲಿಲ್ಲ. ಪರಸ್ಪರ ಒಪ್ಪದಿರಲು ಒಪ್ಪೋಣ ಎನ್ನುವುದೇ ಇಂಥ ಕಡೆ ಸೂಕ್ತ ನಿಲುವೇನೋ!
ಭಟ್ಟರ ಮನೆಗೆ ಹೋದವರು ಯಾವತ್ತೂ ಬರಿಹೊಟ್ಟೆಯಲ್ಲಿ ಹಿಂದಿರುಗುವುದಕ್ಕಾಗದು. ಅವರ ಮನೆಯ ಆತಿಥ್ಯ ಆ ಪರಿಯದು. ಆ ಅಭಿಮಾನದ ಫಲಾನುಭವಿಗಳಲ್ಲಿ ನಾನೂ ಒಬ್ಬ. ಭಟ್ಟರ ಮನೆಗೆ ಹೋದವರು ಅವರ ಶ್ರೀಮತಿಯವರು ಕೊಡುವ ತಿಂಡಿ ಕಾಫಿ, ಊಟದ ಹೊತ್ತಾದರೆ ಊಟ ಸವಿಯದೆ ಹೊರಬರುವಂತೆಯೇ ಇಲ್ಲ!
ಭಟ್ಟರು ತಮ್ಮ ಬರವಣಿಗೆ ಮತ್ತು ಉಪನ್ಯಾಸಗಳಿಂದ ಕರ್ನಾಟಕದಲ್ಲಿ ಮಾತ್ರವಲ್ಲ ಕರ್ನಾಟಕ ಹೊರಗೂ ಖ್ಯಾತರು. ಈಚೆಗಷ್ಟೇ ಅವರ ಓಡಾಟ ಕಡಿಮೆಯಾಗಿದೆ. ಮನೆಯಿಂದ ಹೊರಗೆ ಬರುವುದು ಕಮ್ಮಿ. “ಸುಚಿತ್ರಾ’ದಲ್ಲಿ ನಾನು ನಿರ್ದೇಶಿಸಿದ ಹಸಿರು ರಿಬ್ಬನ್ ಚಿತ್ರದ ಟೀಜರ್ ಬಿಡುಗಡೆ ಇತ್ತು. ಹತ್ತಿರದಲ್ಲೇ ಭಟ್ಟರ ಮನೆ. “ನೀವು ಬರಲೇಬೇಕು’ ಎಂಬ ಪ್ರೀತಿಯ ಒತ್ತಾಯ ನನ್ನದು. ಅಪ್ಪನನ್ನು ಕರೆತರುವುದಾಗಿ ಮಗಳು ಕ್ಷಮಾ ಮಾತುಕೊಟ್ಟಳು. ಸಂಜೆಯ ಸಭೆಗೆ ಭಟ್ಟರು ಬಂದದ್ದು ನನಗೆ ಅನೇಕ ಹಳೆಯ ಸಿಹಿನೆನಪುಗಳನ್ನು ಕೆದಕುತ್ತ ಹೃದಯ ತುಂಬಿ ಬರುವಂತೆ ಮಾಡಿತು.
ಸಭೆಯಲ್ಲಿ ಭಟ್ಟರು ನನ್ನ ಬಗ್ಗೆ ಕೆಲವು ಅಭಿಮಾನದ ಮಾತುಗಳನ್ನು ಆಡಿ ಅಭಿನಂದನೆ ಹೇಳಿದರು. ಭಟ್ಟರೊಂದಿಗೆ ಕೆಲವು ಅಹಿತಕಾರಿ ಪ್ರಸಂಗ ಗಳು ನಡೆದಿವೆಯಾದರೂ ಅವರ ಪ್ರೀತಿ ಅವೆಲ್ಲವನ್ನೂ ಮರೆಸುವಂಥಾದ್ದು. ನನ್ನ ಕವಿತೆಗಳ ಬಗ್ಗೆ ಬಹಳ ಅಭಿಮಾನದಿಂದ ಮಾತಾಡಿದವರು ಅವರು. ಆದರೆ, ವಿಮರ್ಶೆಯ ನಿಷ್ಠುರತೆಯನ್ನು ಯಾವತ್ತೂ ಕಳೆದುಕೊಂಡವರಲ್ಲ.
ಈಚೆಗೆ ಶಿವಮೊಗ್ಗದ ಕರ್ನಾಟಕ ಸಂಘ ಅವರಿಗೆ ಸಂಘದ ಗೌರವ ಸದಸ್ಯತ್ವವನ್ನು ಪ್ರದಾನಮಾಡಿತು. ಆವತ್ತು ನಾನು ಭಟ್ಟರ ಬಗ್ಗೆ ಮಾತಾಡ ಬೇಕೆಂದು ಕರ್ನಾಟಕ ಸಂಘದ ಗೆಳೆಯರು ಹೇಳಿದರು. ನನ್ನ ಮಾತುಗಳನ್ನು ಭಟ್ಟರು ಪ್ರೀತಿಯಿಂದ ಒಪ್ಪಿಕೊಂಡರು. “ತುಂಬ ಚೆನ್ನಾಗಿ ಮಾತಾಡಿದಿರಿ’ ಎಂದು ಕೈಹಿಡಿದು ಮೃದುವಾಗಿ ಒತ್ತಿದರು.
ಭಟ್ಟರದ್ದು ಕನ್ನಡ ಕಾವ್ಯಕ್ಷೇತ್ರದ ವರ್ಣಮಯ ವ್ಯಕ್ತಿತ್ವ. ಅರುಣಗೀತೆ ಯಲ್ಲಿ ಅನೇಕ ಸೊಗಸಾದ ಕವಿತೆಗಳಿವೆ. ಇನ್ನು ಅವರ ಗೀತೆಗಳಂತೂ ಕನ್ನಡ ರಸಿಕರ ಮನಸ್ಸು ಸೂರೆಮಾಡಿವೆ. ಎಲ್ಲಿ ಜಾರಿತೋ, ತೊರೆದು ಹೋಗದಿರು ಜೋಗಿ, ನನ್ನ ಇನಿಯನ ನೀನು ಬಲ್ಲೆಯೇನೆ, ಆ ಬಾನು ಈ ಚುಕ್ಕಿ, ಬಾರೆ ನನ್ನ ದೀಪಿಕಾ, ಹಿಂದೆ ಹೇಗೆ ಚಿಮ್ಮುತ್ತಿತ್ತು, ದೇವ ನಿನ್ನ ಬೇಡುವೆ, ಎಂಥಾ ಮರುಳಯ್ಯ- ಮೊದಲಾದ ನೂರಾರು ಗೀತೆಗಳು ಈಗಲೂ ನನ್ನ ಕಿವಿಯಲ್ಲಿ ಅನುರಣಿಸುತ್ತ ಇವೆ.
ಹಾಡಿಗೆ ವಿಮುಖರಾದವರು ಅವನ್ನು ಕೇಳದಿರಲು ನಿಶ್ಚಯಿಸಿದರೆ ಭಟ್ಟರ ಯೇಟ್ಸ್ , ಎಲಿಯಟ್, ಷೇಕ್ಸ್‌ಪಿಯರನ ಸಾನೆಟ್ಟುಗಳ ಅನುವಾದಗಳು ಕನ್ನಡ ಕಾವ್ಯಕ್ಷೇತ್ರದ ಗಟ್ಟಿ ಕಾಳುಗಳೆಂಬುದನ್ನು ಎಂಥವರೂ ಮಾನ್ಯ ಮಾಡಲೇಬೇಕು. ಭಟ್ಟರ ಅಸ್ಖಲಿತ ಉಪನ್ಯಾಸದ ಶೈಲಿ, ಕಾವ್ಯದ ಸೂಕ್ಷ್ಮಗಳನ್ನು ಥಟ್ಟನೆ ಗುರುತಿಸಿ ಮಾತನಾಡುವ ಅವರ ಸಂವೇದನೆಯ ಪಕ್ವತೆ, ವಿಸ್ತಾರವಾದ ಓದು, ಜೊತೆಗೆ ಆಳವಾದ ಪಾಂಡಿತ್ಯ, ಕನ್ನಡ್ಕ-ಸಂಸ್ಕೃತ-ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯಗಳ ಮೇಲಿನ ಪ್ರಭುತ್ವ, ಕಿರಿಯರನ್ನು ತಿದ್ದಿತೀಡಿ ಬೆಳೆಸುವ ವಾತ್ಸಲ್ಯ ಅವರ ನಿಕಟ ಸಂಪರ್ಕಕ್ಕೆ ಬಂದವರಿಗೆ ಯಾವತ್ತೂ ಪ್ರಿಯವಾದುದು.
ಅದೇನು ಕಾರಣವೋ ಕಾಣೆ, ಸೀಮಂತಿನಿ ಎಂಬ ಅವರ ಕವಿತೆ ನನಗೆ ಮತ್ತೆ ಮತ್ತೆ ನೆನಪಾಗುತ್ತದೆ. ನಲ್ಲೆಯಾಗಿದ್ದ ಹೆಣ್ಣು ತಾಯಿಯಾಗುವ ಸಂಕ್ರಮಣ ಕಾಲದ ಸೂಕ್ಷ್ಮಗ್ರಹಿಕೆಯಿಂದ ಈ ಕವಿತೆ ಓದುಗರ ಎದೆಗೆ ಹತ್ತಿರವಾಗುವಂಥದ್ದು. ಅದರಲ್ಲಿ ತನ್ಮಯತೆಯಿದೆ. ತಮಾಷೆಯಿದೆ. ಬೆರಗು ಇದೆ. ವಿಸ್ಮಯವೇ ಈ ಕವಿತೆಯ ಗರ್ಭಗುಣ. ಮುಗ್ಧ ಮನಸ್ಸಿನ ಪತ್ನಿ ತಾಯ್ತನದ ಘನತೆಯನ್ನು ಸಹಜವಾಗಿ ಪಡೆದು, ಪತಿಯ ಎಣೆಯಿಲ್ಲದ ಗೌರವಕ್ಕೆ ಪಾತ್ರಳಾಗುವ ಚಿತ್ರ ಅಪ್ರಯತ್ನಕವಾದ ಸಹಜ ಕಾವ್ಯವಿಲಾಸದ ಫಲವಾಗಿದೆ.
ಯಾರಿವಳು?
ಇದ್ದಕ್ಕಿದ್ದಂತೆ ಪಕ್ಕದಲೆ ಬದಲಾದವಳು?
ಗಂಡನೆಂಬವನನ್ನು ಕಂಡ ಕಂಡಂತೆಯೇ
ಕಂದ ಎಂಬಂತೆ ಮಮತೆಯಲಿ ಮಾತಾಡುವಳು!
-ಹೀಗೆ ಬೆರಗಿನೊಂದಿಗೇ ಕವಿತೆ ಪ್ರಾರಂಭವಾಗುತ್ತದೆ. ಮುಂದೆ, ಹಿಂದೆ ಆಕೆ ಹೇಗಿದ್ದಳು ಎನ್ನುವುದನ್ನು, ಹರೆಯದ ಮುಗ್ಧ ಚಿನ್ನಾಟ, ಕೆಣಕುವ ತಮಾಷೆಯೊಂದಿಗೆ ವಿವರಿಸುತ್ತ ಒಮ್ಮೆಗೇ,ಬೇಸಿಗೆಯ ಉರಿಗಣ್ಣ ಬೆಳದಿಂಗಳಲಿ ತೊಳೆದು ಗರ್ಭಗುಡಿ ಹಣತೆಯನು ಹಚ್ಚಿರುವಳು ಮೊನ್ನೆ ಸೀಮಂತದಲಿ ಹಸೆಯೇರಿದಾಗಿಂದ ಜಗದಂಬೆ ಭಾವಕ್ಕೆ ಸಂದಿರುವಳು- ಎಂದು ಘನವಾದ ರೂಪಕವನ್ನು ಕಟ್ಟಿಕೊಡುತ್ತದೆ.
ಮುಂದೆ ಈ ತಾಯ್ತನದ ಅವಸ್ಥೆ ಆಕೆಯಲ್ಲಿ ಉಂಟು ಮಾಡಿರುವ ಪರಿವರ್ತನೆಯ ಚಿತ್ರವತ್ತಾದ ವರ್ಣನೆ!ಹಾಲ ಪಾತ್ರೆಗೆ ಬಿದ್ದ ಇರುವೆಗಳ ಮೇಲೆತ್ತಿ ನೆಲಕಿಳಿಸಿ ಹರಿಯಬಿಡುತ್ತಿದ್ದಾಳೆ ಒಂದೊಂದೆ! ಈ ಬದಲಾವಣೆಯ ಶೃಂಗ ಗಟ್ಟಿ ಸ್ವಾರ್ಥಕೆ ಈಗ ಮಳೆಬಿದ್ದು ಮೈಯೊಡೆದು ಉಸಿರಾಡುತಿದೆ ಮಣ್ಣ ತೇವ
ಎಂಬ ಅರ್ಥಗರ್ಭಿತ ಸಾಲುಗಳು.
ಗರ್ಭಾಂಕುರದಂತೆ ಕಾವ್ಯಾಂಕುರವೂ ಒಂದು ನಿಗೂಢ ವಿಸ್ಮಯವಲ್ಲವೆ! ಈ ಸೂಕ್ಷ್ಮವನ್ನು ಒಮ್ಮೆಗೇ ಅನುಭವಗ್ರಾಹ್ಯಗೊಳಿಸುವಂತಿದೆ ಭಟ್ಟರ ಈ ಮನೋಹರ ಪದ್ಯ.
ಎಚ್. ಎಸ್. ವೆಂಕಟೇಶಮೂರ್ತಿ
ಫೊಟೊ : ಎ. ಎನ್. ಮುಕುಂದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.