ಬ್ಯಾಂಕಿಂಗ್ ಭೂಪಟದಿಂದ ಮರೆಯಾಗಲಿದೆ ವಿಜಯ ಬ್ಯಾಂಕ್
ಕರ್ನಾಟಕದ ಇನ್ನೂ ಎರಡು ಮೂರು ಬ್ಯಾಂಕುಗಳು ಇದೇ ರೀತಿ ಕಣ್ಮರೆಯಾಗುವ ಪಟ್ಟಿಯಲ್ಲಿವೆ
Team Udayavani, Mar 31, 2019, 6:00 AM IST
ಯಾರಿಗೂ ಉದ್ಯೋಗ ನಷ್ಟವಾಗುವುದಿಲ್ಲ. ಅದರೆ ನೇಮಕಾತಿ ಕಡಿಮೆಯಾಗಬಹುದು. ಬ್ಯಾಂಕ್ ಸಿಬ್ಬಂದಿಯಲ್ಲಿ ಭಾವನಾತ್ಮಕ, ಸಾಂಸ್ಕೃತಿಕ ಮತ್ತು ಭಾಷಾ ಸಾಮರಸ್ಯ ಕೆಲಕಾಲ ತೊಡಕಾಗುತ್ತದೆ. ವಿಲೀನವಾದ ಬ್ಯಾಂಕುಗಳ ಸಿಬ್ಬಂದಿಯನ್ನು ಎರಡನೇ ದರ್ಜೆ ಸಿಬ್ಬಂದಿಯಂತೆ ನೋಡುತ್ತಾರೆ ಎನ್ನುವ ಅಪವಾದ ಕೇಳಬಹುದು.
ಎರಡು ವರ್ಷಗಳ ಹಿಂದೆ ಏಪ್ರಿಲ್ 1, 2017ರಂದು ಕನ್ನಡಿಗರ ಮತ್ತು ಕರ್ನಾಟಕದ ಹೆಮ್ಮೆಯ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕಿನ ಇತರ ಸಹವರ್ತಿ ಬ್ಯಾಂಕುಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನವಾಗಿ ತನ್ನ 104 ವರ್ಷಗಳ ಅಸ್ತಿತ್ವವನ್ನು ಕಳೆದುಕೊಂಡಿತು. ಈಗ ಸರಿಯಾಗಿ ಎರಡು ವರ್ಷದ ಮೇಲೆ, ಏಪ್ರಿಲ್ ಒಂದು 2019ರಂದು, ಕರ್ನಾಟಕದ ಇನ್ನೊಂದು ಹೆಮ್ಮೆಯ ಬ್ಯಾಂಕ್, ವಿಜಯ ಬ್ಯಾಂಕ್ ಇತಿಹಾಸದ ಪುಟ ಸೇರುತ್ತಿದೆ. ದೇಶದ ಬ್ಯಾಂಕಿಂಗ್ ಉದ್ಯಮದಲ್ಲಿ ತನ್ನ ವಿಶಿಷ್ಟ ಮತ್ತು ಅಪ್ರತಿಮ ಜನಸ್ನೇಹಿ ಸೇವಾ ವೈಖರಿಗಾಗಿ ಮನೆ ಮಾತಾಗಿದ್ದ, ಕರ್ನಾಟಕದ ಕರಾವಳಿ ಮೂಲದ ವಿಜಯ ಬ್ಯಾಂಕ್, ಅಂದು “ಬ್ಯಾಂಕ್ ಆಫ್ ಬರೋಡಾ’ದಲ್ಲಿ ವಿಲೀನವಾಗಿ, ದೇಶದ ಬ್ಯಾಂಕಿಂಗ್ ಭೂಪಟದಿಂದ ಕಣ್ಮರೆಯಾಗುತ್ತಿದ್ದು, ಇನ್ನು ವಿಜಯ ಬ್ಯಾಂಕ್ ಎನ್ನುವ ಹೆಸರು ಕೇವಲ ನೆನಪು ಮಾತ್ರ. ನಗುನಗುತ್ತಾ, ತಲೆಬಗ್ಗಿಸಿ, ಕೈಮುಗಿದು ನಮ್ರತೆಯಿಂದ ಒಳಗೆ ಬನ್ನಿ ಎಂದು ಕರೆಯುತ್ತಿರುವಂತಿರುವ ದೇಶಾದ್ಯಂತ ಮನೆಮಾತಾಗಿರುವ ಅವರ ಈ ಲಾಂಛನ ಇತಿಹಾಸದ ಗರ್ಭ ಸೇರುತ್ತಿದೆ.
ವಿಜಯ ದಶಮಿಯಂದು ಕಾರ್ಯಾರಂಭ
1931ರಲ್ಲಿ, ಆಗಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬೆರಳೆಣಿಕೆಯಷ್ಟು ಸಣ್ಣ ರೈತರಿಂದ, ರೈತರ ಶ್ರೇಯೋಭಿವೃದ್ಧಿಗಾಗಿ ಈ ಬ್ಯಾಂಕ್ ಸ್ಥಾಪಿತವಾಗಿತ್ತು. ವಿಜಯ ದಶಮಿಯ ಶುಭದಿನದಿಂದ ಕಾರ್ಯ ಅರಂಭ ಮಾಡಿದ್ದರಿಂದ ಈ ಬ್ಯಾಂಕಿಗೆ ವಿಜಯ ಬ್ಯಾಂಕ್ ಎಂದು ಹೆಸರಿಸಲಾಗಿತ್ತು. ಬ್ಯಾಂಕ್ ಸ್ಥಾಪಿತವಾಗಿ ಎರಡು ದಶಕಗಳಲ್ಲಿ ತನ್ನ ದೃಢ ಬೆಳವಣಿಗೆಯಿಂದಾಗಿ 1958ರಲ್ಲಿ ಶೆಡ್ನೂಲ್ಡ್ ಬ್ಯಾಂಕ್ ಆಗಿ ಪರಿವರ್ತಿತವಾಗಿತ್ತು. 1960-69ರ ಅವಧಿಯಲ್ಲಿ ಇದು 9 ಸಣ್ಣ -ಸಣ್ಣ ಬ್ಯಾಂಕುಗಳನ್ನು ತನ್ನೊಳಗೆ ವಿಲೀನಗೊಳಿಸಿಕೊಂಡು ದೊಡ್ಡಬ್ಯಾಂಕುಗಳ ಪಟ್ಟಿಗೆ ಸೇರಲು ದಾಪುಗಾಲು ಇಡತೊಡಗಿತು. ಈವರೆಗೆ ಅದು 14 ಬ್ಯಾಂಕುಗಳನ್ನು ತನ್ನೊಳಗೆ ವಿಲೀನ ಮಾಡಿಕೊಂಡಿದೆ ಮತ್ತು ಒಂದೇ ದಿನ 27 ಶಾಖೆಗಳನ್ನು ದೇಶಾದ್ಯಂತ ತೆರೆದ ಹೆಗ್ಗಳಿಕೆ ಹೊಂದಿದೆ.
– ತನ್ನ ಅಸ್ತಿತ್ವವನ್ನು, ತನ್ನತನವನ್ನು ತೋರ್ಪಡಿಸಿಕೊಳ್ಳಲು 1965ರಲ್ಲಿ ತನ್ನದೇ ಲಾಂಛನವನ್ನು (Logo) ಪಡೆದುಕೊಂಡಿತು.
– ತನ್ನ ಮುಖ್ಯಕಚೇರಿಯನ್ನು 1969ರಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಸ್ಥಳಾಂತರಿಸಿ ಪ್ರಾಂತೀಯ, ಪ್ರಾದೇಶಿಕ ಬ್ಯಾಂಕ್ ಎನ್ನುವ ಇಮೇಜ್ ಕಳಚಿಕೊಂಡು ರಾಷ್ಟ್ರೀಯ ಬ್ಯಾಂಕ್ ಆಗುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇರಿಸಿತು.
– 1969ರಲ್ಲಿ, ಬ್ಯಾಂಕ್ ರಾಷ್ಟ್ರೀಕರಣದ ಮೊದಲ ಅವೃತ್ತಿಯಲ್ಲಿ ತಪ್ಪಿಸಿಕೊಂಡರೂ, 1980ರಲ್ಲಿ ಬ್ಯಾಂಕ್ ರಾಷ್ಟ್ರೀಕರಣದ 2ನೇ ಅವೃತ್ತಿ ಅನಾವರಣಗೊಂಡಾಗ ಸರ್ಕಾರದ ತೆಕ್ಕೆಗೆ ಬಂದಿತು.
ಅತ್ತಾವರ ಬಾಲಕೃಷ್ಣ ಶೆಟ್ಟಿಯವರಿಂದ ಪ್ರಾರಂಭಿಸಲ್ಪಟ್ಟ ಈ ಬ್ಯಾಂಕ್, ಮುಂದೆ ಮುಲ್ಕಿ ಸುಂದರರಾಮ ಶೆಟ್ಟಿಯವರ ನೇತೃತ್ವದಲ್ಲಿ, ಸರ್ಕಾರ, ಹಣಕಾಸು ಸಚಿವಾಲಯ, ರಿಸರ್ವ್ ಬ್ಯಾಂಕ್, ಮಾಧ್ಯಮ, ಜನತೆ, ಅರ್ಥಿಕ ತಜ್ಞರು, ಬ್ಯಾಂಕಿಂಗ್ ವಲಯ ಮತ್ತು ಗ್ರಾಹಕರು ನಿಬ್ಬೆರಗಾಗುವಂತೆ, ಹುಬ್ಬೇರಿಸುವಂತೆ ಅತಿ ಸಣ್ಣ ಅವಧಿಯಲ್ಲಿ ದೇಶಾದ್ಯಂತ ರಾಷ್ಟ್ರಮಟ್ಟ ದ ಬ್ಯಾಂಕಾಗಿ ವಿಸ್ತರಿಸಿತು. ಇತರ ದೊಡ್ಡ- ದೊಡ್ಡ ಬ್ಯಾಂಕುಗಳು ಮೀನ ಮೇಷ ಎಣಿಸುವಾಗ, ಹಿಂದೇಟು ಹಾಕುವಾಗ ಜಮ್ಮು ಕಾಶ್ಮೀರ ಮತ್ತು ಈಶಾನ್ಯ ಭಾರತದಲ್ಲಿ ಕೂಡಾ ಶಾಖೆಗಳನ್ನು ತೆರೆದಿತ್ತು. ಇಂದು ಈ ಬ್ಯಾಂಕ್ ದೇಶಾದ್ಯಂತ 2129 ಶಾಖೆಗಳನ್ನು ಹೊಂದಿದ್ದು, ಕರ್ನಾಟಕದಲ್ಲಿಯೇ 583 ಶಾಖೆಗಳಿವೆ. 15874 ಸಿಬ್ಬಂದಿ ಮೂಲಕ 2.79 ಲಕ್ಷ ಕೋಟಿ ವ್ಯವಹಾರ ಮಾಡುತ್ತದೆ. ಕಳೆದ ಹಣಕಾಸು ವರ್ಷದಲ್ಲಿ 727 ಕೋಟಿ ಲಾಭ ಗಳಿಸಿದೆ. ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ ಲಾಭಗಳಿಸಿದ ಏಕಮೇವ ಬ್ಯಾಂಕ್ ಎನ್ನುವ ಗೌರವ ಪಡೆದಿದೆ. ಸದ್ಯದಲ್ಲಿಯೇ ವಿದೇಶಗಳಲ್ಲೂ ಕೂಡಾ ಶಾಖೆಗಳನ್ನು ತೆರೆಯವ ಯೋಜನೆಯಲ್ಲಿತ್ತು.
ವಿಲೀನ ದಿಢೀರ್ ಬೆಳವಣಿಗೆಯಲ್ಲ:
ವಿಲೀನ ದಿಢೀರ್ ಬೆಳವಣಿಗೆಯಲ್ಲ. ವಿತ್ತ ಮಂತ್ರಿಗಳು ಹೇಳುವ Size, but not the number should matter in banking industry ಈ ವಿಲೀನದ ಮೂಲ ಮಂತ್ರ ಎನ್ನಬಹುದು. 1993 ಮತ್ತು 1998ರಲ್ಲಿ ನರಸಿಂಹನ್ ಸಮಿತಿ ಬ್ಯಾಂಕುಗಳ ವಿಲೀನದ ಬಗೆಗೆ ವಿಸ್ತೃತ ವರದಿ ನೀಡಿದ ಮೇಲೆ, ಇಂದಲ್ಲದಿದ್ದರೆ ನಾಳೆಯಾದರೂ ಬ್ಯಾಂಕುಗಳ ವಿಲೀನ ಖಚಿತ ಎನ್ನುವ ಅಭಿಪ್ರಾಯ ಬ್ಯಾಂಕಿಂಗ್ ವಲಯದಲ್ಲಿ ಚಾಲ್ತಿಯಲ್ಲಿತ್ತು. ಇದರ ಹಿಂದೆ ವಿಶ್ವ ಬ್ಯಾಂಕ್‌ನ ಒತ್ತಾಸೆಯೂ ಇತ್ತು. ಈ ವರದಿಯ ಮೇಲೆ ಅಧಿಕಾರದಲ್ಲಿರುವ ಸರ್ಕಾರಗಳು ಯಾವ ಕ್ರಮವನ್ನೂ ತೆಗೆದು ಕೊಳ್ಳಲಿಲ್ಲ ಎನ್ನುವ ಟೀಕೆಯೂ ಸಾಕಷ್ಟು ಕೇಳಿ ಬರುತ್ತಿತ್ತು. ಅಂತಾರಾ ಷ್ಟ್ರೀಯ ಹಣಕಾಸು ವ್ಯವಹಾರಗಳಿಗೆ ಹೆಚ್ಚು ಶಾಖೆಗಳನ್ನು ಮತ್ತು ಬಂಡವಾಳವನ್ನು(ಕ್ಯಾಪಿಟಲ್) ಹೊಂದಿರುವ ಸಣ್ಣ ಬ್ಯಾಂಕುಗಳಿಗಿಂತ ಹೆಚ್ಚು ಬಂಡವಾಳ ಹೊಂದಿರುವ ದೊಡ್ಡ ಬ್ಯಾಂಕುಗಳು ಅನಿವಾರ್ಯ ಎನ್ನುವ ಮತ್ತು ಬ್ಯಾಂಕುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿರಬೇಕು ಎನ್ನುವ ಹಣಕಾಸು ಮಂತ್ರಾಲಯದ ಚಿಂತನೆಗೆ ಅನುಗುಣವಾಗಿ, ಬ್ಯಾಂಕುಗಳ ವಿಲೀನದ ಮೊದಲ ಹೆಜ್ಜೆಯಾಗಿ 2017 ಏಪ್ರಿಲ್ ಒಂದರಂದು, ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಅದರ ಸಹವರ್ತಿ ಬ್ಯಾಂಕುಗಳನ್ನು ವಿಲೀನಗೊಳಿಸಲಾಯಿತು. ಈ ವಿಲೀನ ಪ್ರಕ್ರಿಯೆ ಯಾವುದೇ ಅಡೆತಡೆ ಇಲ್ಲದೇ, ಎಲ್ಲವೂ ನಿರಿಕ್ಷಿಸಿದಂತೆ ನಡೆದಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಎರಡನೇ ಹೆಜ್ಜೆ ಇಟ್ಟಿದೆ. ಈ ಪ್ರಕ್ರಿಯೆ ಹೀಗೆಯೇ ಮುಂದುವರೆದು ಮುಂದಿನ ದಿನಗಳಲ್ಲಿ ಸಾರ್ವಜನಿಕ ರಂಗದ ಬ್ಯಾಂಕುಗಳ ಸಂಖ್ಯೆ 21ರಿಂದ 4-5ಕ್ಕೆ ಇಳಿಯುವ ಸಾಧ್ಯತೆ ಇದೆ. ಇದು ಬ್ಯಾಂಕಿಂಗ್ ನಿರ್ವಹಣಾ ವೆಚ್ಚವನ್ನು ಗಮನಾರ್ಹವಾಗಿ ತಗ್ಗಿಸುವುದರಲ್ಲಿ ಸಂದೇಹವಿಲ್ಲ.
ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕುಗಳು, ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನವಾದ ನಂತರ, ಬ್ಯಾಂಕ್ ಆಫ್ ಬರೋಡಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಐಸಿಐಸಿಐ ಬ್ಯಾಂಕುಗಳ ನಂತರ ದೇಶದ ಮೂರನೇ ಅತಿದೊಡ್ಡ ಬ್ಯಾಂಕ್ ಆಗುತ್ತದೆ.
ತಾರತಮ್ಯ ಎದುರಾಗುವುದೇ?
ಈ ವಿಲೀನದಿಂದ ಗ್ರಾಹಕರಿಗೆ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಬ್ಯಾಂಕ್ ದಾಖಲೆಗಳಲ್ಲಿ, ಪಾಸ್‌ಬುಕ್, ಚೆಕ್‌ಬುಕ್‌ಗಳಲ್ಲಿ ಹೆಸರು ಬದಲಾವಣೆಯಾಗುತ್ತದೆ. ಕೆಲವು ಸಂದರ್ಭದಲ್ಲಿ ಬ್ಯಾಂಕ್ ಸ್ಥಳ (premise) ಬದಲಾಗಬಹುದು. ಸಿಬ್ಬಂದಿಯಲ್ಲಿ ಹೊಸ ಮುಖಗಳ ದರ್ಶನವಾಗಬಹುದು. ಸೇವಾ ವೈಖರಿಯಲ್ಲಿ ಕೊಂಚ ಬದಲಾವಣೆಯನ್ನು ನಿರೀಕ್ಷಿಸಬಹುದು. ನೀಡುವ ಮತ್ತು ಪಡೆಯುವ ಬಡ್ಡಿದರದಲ್ಲಿ ಬದಲಾವಣೆ ಇರುವುದಿಲ್ಲ. ಬ್ಯಾಂಕ್ ಸಿಬ್ಬಂದಿಯಲ್ಲಿ ಭಾವನಾತ್ಮಕ, ಸಾಂಸ್ಕೃತಿಕ ಮತ್ತು ಭಾಷಾ ಸಾಮರಸ್ಯ ಕೆಲಕಾಲ ತೊಡಕಾಗುತ್ತದೆ. ವಿಲೀನವಾದ ಬ್ಯಾಂಕುಗಳ ಸಿಬ್ಬಂದಿಯನ್ನು ಎರಡನೇ ದರ್ಜೆ ಸಿಬ್ಬಂದಿಯಂತೆ ನೋಡು ತ್ತಾರೆ ಎನ್ನುವ ಅಪವಾದ ಕೇಳಬಹುದು. ವಿಜಯ ಬ್ಯಾಂಕ್‌ನ ಶೇರುದಾರರು ತಮ್ಮಲ್ಲಿರುವ 1000 ಶೇರುಗಳಿಗೆ ಬ್ಯಾಂಕ್ ಆಫ್ ಬರೋಡಾದ 402 ಇಕ್ವಿಟಿ ಶೇರುಗಳನ್ನು ಪಡೆಯುತ್ತಾರೆ. ಬೆಂಗಳೂರಿನಲ್ಲಿ ಇರುವ ವಿಜಯ ಬ್ಯಾಂಕ್‌ನ ಮುಖ್ಯ ಕಾರ್ಯಾಲ ಯವನ್ನು “ವಿಜಯ ಬಿಲ್ಡಿಂಗ್’ ಹೆಸರಿನಲ್ಲಿ ಉಳಿಸಿಕೊಳ್ಳಲಾಗುವುದು. ಬಡ್ತಿ, ವರ್ಗಾವರ್ಗಿ ವಿಷಯಗಳಲ್ಲಿ ತಾರತಮ್ಯದ ಮಾತು ಕೇಳಬಹುದು. ಯಾರಿಗೂ ಉದ್ಯೋಗ ನಷ್ಟವಾಗುವುದಿಲ್ಲ. ಅದರೆ ನೇಮಕಾತಿ ಕಡಿಮೆ ಆಗಬಹುದು. ಬ್ಯಾಂಕಿನ ಹೆಸರಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದವರು (ಈಗ ಕಡಿಮೆ) ಕೆಲವು ದಿನ ಭಾವುಕರಾಗಿ ಅತ್ಮೀಯರಲ್ಲಿ ಹೇಳಿಕೊಂಡು ಹೃದಯವನ್ನು ಹಗುರ ಮಾಡಿಕೊಳ್ಳುತ್ತಾರೆ. ಬ್ಯಾಂಕ್ ಶಾಖೆಗಳ ದಟ್ಟಣೆ, ಸಾಕಷ್ಟು ವ್ಯವಹಾರ ಇಲ್ಲದಿರುವುದು, ಏರುತ್ತಿರುವ ನಿರ್ವಹಣಾ ವೆಚ್ಚ ಮತ್ತು ಸುಸ್ತಿ ಸಾಲ, ಸರ್ಕಾರವನ್ನು ಇಂಥ ಹೆಜ್ಜೆ ಇಡಲು ಪ್ರೇರೇಪಿಸಿದೆ ಎನ್ನುವುದರಲ್ಲಿ ಅರ್ಥವಿಲ್ಲದಿಲ್ಲ. ಹಾಗೆಯೇ ವಿಲೀನಕ್ಕಿಂತ ಸುಸ್ತಿ ಸಾಲ ವಸೂಲಿ ಅದ್ಯತೆಯಾಗಬೇಕಾಗಿತ್ತು ಎನ್ನುವ ಬ್ಯಾಂಕ್ ಕಾರ್ಮಿಕ ಸಂಘಗಳ ವಾದದಲ್ಲಿಯೂ ಹುರುಳಿಲ್ಲದಿಲ್ಲ.
ಈ ವಿಲೀನದಿಂದಾಗುವ ಬ್ಯಾಂಕುಗಳ ಮುಚ್ಚುವಿಕೆ ಸಾಧ್ಯತೆ, ಗ್ರಾಮೀಣ ಜನರು ಬ್ಯಾಂಕಿಂಗ್ ಸೇವೆಯಿಂದ ವಂಚಿತಾಗುವ ವದಂತಿ ತಳ್ಳಿಹಾಕುವಂತಿಲ್ಲ. ಹಾಗೆಯೇ ನೇಮಕಾತಿ ಕಡಿಮೆಯಾಗು ವುದರಿಂದ ಹಲವರಿಗೆ ಉದ್ಯೋಗದ ಹೆಬ್ಟಾಗಿಲು ಮುಚ್ಚುತ್ತದೆ. ಪರಿಣಾಮ ಏನೇ ಇರಲಿ, ಕರ್ನಾಟಕದ ಒಂದು ಹೆಮ್ಮೆಯ ಬ್ಯಾಂಕ್ ಮುಚ್ಚುತ್ತಿದ್ದರೂ ರಾಜ್ಯದಲ್ಲಿ ಪ್ರತಿರೋಧ ಕಾಣದಿರುವುದು ತೀರಾ ಆಶ್ಚರ್ಯ. ಹೊಸ ಸಂಸ್ಥೆಗಳು, ಉದ್ಯಮಗಳು ರಾಜ್ಯಕ್ಕೆ ಬರದಿರುವುದು ಬೇರೆ ಮಾತು. ಇರುವ ಉದ್ಯಮಗಳನ್ನು ಒಂದೊಂದಾಗಿ ಕಳೆದು ಕೊಳ್ಳುತ್ತಿ ರುವುದು ವಿಷಾದನೀಯ. ವರ್ಷಗಳ ಕಾಲ ಕನ್ನಡಿಗರಿಗೆ ಉದ್ಯೋಗ ನೀಡಿದ ಎನ್.ಜಿ.ಇ.ಪ್, ಎಚ್.ಎಮ….ಟಿ, ಮೈಸೂರು ಲ್ಯಾಂಪ್ಸ್, ಬಿ.ಪಿ.ಎಲ್, ಮೈಸೂರು ಬ್ಯಾಂಕ್‌ನ್ನು ಕಳೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಇನ್ನೂ ಎರಡು ಮೂರು ಬ್ಯಾಂಕುಗಳು ಇದೇ ರೀತಿ ಕಣ್ಮರೆಯಾಗುವ ಪಟ್ಟಿಯಲ್ಲಿವೆ.
ಗ್ರಾಹಕರ ಮೇಲೇನು ಪರಿಣಾಮ?
ಈ ವಿಲೀನದಿಂದಾಗಿ ಗ್ರಾಹಕರ ಮೇಲೂ ಪರಿಣಾಮ ಉಂಟಾಗಲಿದೆ. ಆದರೆ ಅದಕ್ಕಾಗಿ ಗಾಬರಿಯಾಗಬೇಕಿಲ್ಲ. ಬ್ಯಾಂಕ್ ಬದಲಾದರೂ ನಿಮ್ಮ ಹಣವಂತೂ ಸುರಕ್ಷಿತವಾಗಿ ಇರಲಿದೆ. ಚಿಕ್ಕ ಪುಟ್ಟ ಬದಲಾವಣೆಗಳಷ್ಟೇ ಎದುರಾಗಲಿವೆ…
ಏನು ಬದಲಾಗುತ್ತದೆ?-
– ನಿಮ್ಮ ಖಾತೆ ವಿಜಯ ಅಥವಾ ದೇನಾ ಬ್ಯಾಂಕ್‌ನಲ್ಲಿ ಇದ್ದರೆ ವಿಲೀನದ ನಂತರ ನಿಮಗೆ ಹೊಸ ಅಕೌಂಟ್ ನಂಬರ್/ ಐಎಫ್ಎಸ್‌ಸಿ ಕೋಡ್ ಸಿಗುತ್ತದೆ. ಹಳೆಯ ಖಾತೆಯಲ್ಲಿ ನಿಮ್ಮ ಈಗಿನ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಇದೆಯೇ? ಇದೆ ಎಂದಾದರೆ ವಿಲೀನದ ಬಗ್ಗೆ ನಿಮಗೆ ಈಗಾಗಲೇ ಸಂದೇಶ ಬಂದಿರಬಹುದು/ ಬರಬಹುದು. ಒಂದು ವೇಳೆ ನಿಮ್ಮ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಅಪ್ಡೆàಟ್ ಇಲ್ಲವೆಂದರೆ ಆ್ಯಪ್‌ನಲ್ಲಿ/ ಬ್ಯಾಂಕಿಗೆ ಹೋಗಿ ಬದಲಿಸಿ.
– ಹೊಸ ಚೆಕ್‌ಬುಕ್, ಪಾಸ್‌ಬುಕ್, ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ನಿಮಗೆ ಒದಗಿಸಲಾಗುತ್ತದೆ. ಕಸ್ಟಮರ್ ಐಡಿ ಕೂಡ ಬದಲಾಗಬಹುದು. ಈ ಬಗ್ಗೆ ಬ್ಯಾಂಕ್‌ನಿಂದಲೇ ನಿಮಗೆ ನೋಟಿಫಿಕೇಷನ್ ಸಿಗಬಹುದು, ನಿಮ್ಮ ಫೋನ್ ನಂಬರ್ ಅಪ್ಡೆàಟ್ ಇಲ್ಲದಿದ್ದರೆ, ನೀವೇ ಬ್ಯಾಂಕಿಗೆ ಹೋಗಿ ಈ ಬಗ್ಗೆ ಮಾಹಿತಿ ಪಡೆಯುವುದು ಒಳಿತು.
– ಆದಾಯ ತೆರಿಗೆ ಇಲಾಖೆ, ಮ್ಯೂಚುವಲ್ ಫಂಡ್ಸ್, ವಿಮಾ ಕಂಪನಿಗಳು, ಎನ್‌ಪಿಎಸ್ ಸೇರಿದಂತೆ ಇತರೆ ವಿಭಾಗಗಳಲ್ಲಿ ಗ್ರಾಹಕರು ತಮ್ಮ ಹೊಸ ಖಾತೆ ಸಂಖ್ಯೆ ಹಾಗೂ ಐಎಫ್ಎಸ್‌ಸಿ ಕೋಡ್ ಅನ್ನು ಅಪ್ಡೆàಟ್ ಮಾಡಿಸಬೇಕಾಗುತ್ತದೆ.
– ಹೊಸ ಅಕೌಂಟ್ ನಂಬರ್/ ಐಎಫ್ಎಸ್‌ಸಿ ಕೋಡ್ ಸಿಕ್ಕ ನಂತರ ಗ್ರಾಹಕರು ಆನ್‌ಲೈನ್ ಪೇಮೆಂಟ್ ಮಾಡುವಾಗ ಅಥವಾ ಸ್ವೀಕರಿಸುವಾಗ ಜನರಿಗೆ ಹೊಸ ಖಾತೆ ಸಂಖ್ಯೆ ಮತ್ತು ಐಎಫ್ಎಸ್‌ಸಿ ನಂಬರ್ ಅನ್ನು ಒದಗಿಸಬೇಕಾಗುತ್ತದೆ.
– ವಿಲೀನದ ನಂತರ ಕೆಲವು ಶಾಖೆಗಳು ಬಾಗಿಲು ಹಾಕಲೂಬಹುದು. ಅಲ್ಲಿಯ ಗ್ರಾಹಕರಿಗೆ ಬ್ಯಾಂಕ್ ಆಫ್ ಬರೋಡಾದ ಹೊಸ ಶಾಖೆಗೆ ಸ್ಥಳಾಂತರಿಸಲಾಗುತ್ತದೆ.
ಏನು ಬದಲಾಗುವುದಿಲ್ಲ?
– ಗೃಹ ಸಾಲ, ವಾಹನ ಸಾಲ, ಶೈಕ್ಷಣಿಕ ಸಾಲ, ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರ ಬದಲಾಗುವುದಿಲ್ಲÉ.
– ಫಿಕ್ಸ್‌ಡ್ ಡಿಪಾಸಿಟ್(ಎಫ್ಡಿ) ಮತ್ತು ರೆಕರಿಂಗ್ ಡೆಪಾಸಿಟ್(ಆರ್‌ಡಿ) ಮೇಲಿನ ಬಡ್ಡಿ ದರ ಯಥಾರೀತಿ ಮುಂದುವರಿಯುತ್ತದೆ.
ಬೆಂಗಳೂರಿನ ವಿಜಯ ಬ್ಯಾಂಕ್‌ನ ಮುಖ್ಯ ಕಾರ್ಯಾಲಯ “ವಿಜಯ ಬಿಲ್ಡಿಂಗ್’ ಹೆಸರಿನಲ್ಲಿ ಉಳಿಯಲಿದೆ.
– ರಮಾನಂದ ಶರ್ಮಾ ನಿವೃತ್ತ ಬ್ಯಾಂಕ್ ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.