ಹಾಲಿನ ಡೇರಿಗಳಿಗೂ ನೀತಿಸಂಹಿತೆ ಬಿಸಿ
Team Udayavani, Apr 3, 2019, 3:00 AM IST
ಚನ್ನಪಟ್ಟಣ: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಕಟ್ಟುನಿಟ್ಟಿನ ಅನುಷ್ಠಾನ ಬಿಸಿ ಹಾಲಿನ ಡೇರಿಗಳಿಗೂ ತಟ್ಟಿದೆ. ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಹಾಲಿನ ಡೇರಿಗಳಿಗೆ ಹಾಲು ಸರಬರಾಜು ಮಾಡಲು ಆಗಮಿಸುವ ಡೇರಿ ಸದಸ್ಯರನ್ನು ಹಾಲು ನೀಡಿದ ಕೂಡಲೇ ಸ್ಥಳದಿಂದ ಹೋಗಲು ಸಹಕಾರ ಇಲಾಖೆ ನೋಟಿಸ್ ಜಾರಿ ಮಾಡಿದೆ.
ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಆಡಳಿತ ಮಂಡಳಿಗಳಿಗೆ ಸಹಕಾರ ಸಂಘಗಳ ಉಪನಿಬಂಧಕರು ಸುತ್ತೋಲೆ ಹೊರಡಿಸಿದ್ದು, ಸಂಘದ ಆವರಣದಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ ಸದಸ್ಯರು ಗುಂಪಾಗಿ ನಿಲ್ಲದಂತೆ, ಯಾವುದೇ ರಾಜಕೀಯ ಚರ್ಚೆ ನಡೆಸದಂತೆ ನಿಗಾ ವಹಿಸಲು ಸಂಘದ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿದ್ದಾರೆ.
ಮಾದರಿ ನೀತಿ ಸಂಹಿತೆ ಪಾಲಿಸಲು ಆದೇಶ: ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಡೇರಿಗಳಲ್ಲಿ ಹಾಲು ಶೇಖರಣೆ ಮಾಡುವುದರಿಂದ ಬಹುತೇಕ ಇಡೀ ಗ್ರಾಮದ ಮಂದಿ ಡೇರಿಗಳತ್ತ ಜಮಾವಣೆಯಾಗುತ್ತಾರೆ. ಇದರ ಜತೆಗೆ ಹಾಲು ಖರೀದಿಸಲು ಸಹ ಹಲವರು ಆಗಮಿಸುತ್ತಾರೆ.
ಈ ಸಮಯದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಆಗಮಿಸಿ ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ಮಾಡುವ ಸಂಭವವಿದೆ. ಇದು ನೀತಿ ಸಂಹಿತೆಯ ಉಲ್ಲಂಘನೆಯಾಗುವ ಕಾರಣಕ್ಕೆ ಹಾಲು ನೀಡಿದ ತಕ್ಷಣ ಖರೀದಿಸಿದ ತಕ್ಷಣ ಅಲ್ಲಿಂದ ಕಳುಹಿಸಲು ಕ್ರಮ ವಹಿಸುವ ಮೂಲಕ ಮಾದರಿ ನೀತಿ ಸಂಹಿತೆ ಪಾಲಿಸಲು ಆದೇಶ ಹೊರಡಿಸಲಾಗಿದೆ.
ಜನರ ನಿಯಂತ್ರಣ ಕಾರ್ಯದರ್ಶಿ ಜವಾಬ್ದಾರಿ: ಹಾಲಿನ ಡೇರಿಗಳ ಆವರಣ ಹಾಗೂ ಸುತ್ತಮುತ್ತ ಯಾವುದೇ ರಾಜಕಾರಣದ ಚರ್ಚೆ ನಡೆಯದಂತೆ ನೋಡಿಕೊಳ್ಳುವುದು ಸಂಘಗಳ ಕಾರ್ಯದರ್ಶಿ ಹಾಗೂ ಆಡಳಿತ ಮಂಡಳಿ ಜವಾಬ್ದಾರಿಯಾಗಿದೆ. ನೀತಿ ಸಂಹಿತೆ ಉಲ್ಲಂಘನೆಯಾಗಲು ಬಿಟ್ಟಲ್ಲಿ ಅವರೇ ನೇರ ಹೊಣೆಗಾರರಾಗಲಿದ್ದಾರೆ. ಹಾಗೆಯೇ ಗುಂಪಾಗಿ ನಿಲ್ಲದಂತೆ ನಿಯಂತ್ರಿಸುವುದು ಸಹ ಕಾರ್ಯದರ್ಶಿ ಹೆಗಲಿಗೆ ಬಿದ್ದಿದೆ. ಹಾಲು ಶೇಖರಣೆ, ಮಾರಾಟದ ಜತೆಗೆ ಜನರನ್ನು ನಿಯಂತ್ರಿಸುವ ಹೆಚ್ಚುವರಿ ಹೊರೆ ಕಾರ್ಯದರ್ಶಿಗಳದ್ದಾಗಿದೆ.
ಈ ಬಾರಿ ಹೊಸ ನಿಯಮ: ಹಿಂದಿನ ಯಾವುದೇ ಚುನಾವಣೆಗಳ ಸಮಯದಲ್ಲಿ ಇಂತಹ ಯಾವುದೇ ಆದೇಶ ಹಾಲಿನ ಡೇರಿಗಳಿಗೆ ಬಂದಿರಲಿಲ್ಲ. ಆದರೆ, ಹಾಲಿನ ಡೇರಿಗಳ ಬಳಿಯೇ ಹೆಚ್ಚಿನ ರಾಜಕೀಯ ಚರ್ಚೆಗಳು, ಅಭ್ಯರ್ಥಿಗಳ ಪರ ಪ್ರಚಾರವನ್ನು ಸ್ಥಳೀಯ ಜನಪ್ರತಿನಿಧಿಗಳು ನಡೆಸುತ್ತಿರುವುದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ.
ಹೀಗಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯ ವೀಕ್ಷಕರ ಉಲ್ಲೇಖದ ಮೇರೆಗೆ ರಾಮನಗರ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರು ಸುತ್ತೋಲೆ ಜಾರಿ ಮಾಡಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ರಮ ವಹಿಸಲು ಸೂಚನೆ ನೀಡಿದ್ದಾರೆ.
ಮೊದಲ ಬಾರಿಗೆ ಜಾರಿಯಾಗಿರುವ ಈ ನಿಯಮದಿಂದ ಹಾಲು ಸರಬರಾಜು ಮಾಡಲು ಆಗಮಿಸುವ ಮಂದಿ ಹಾಗೂ ಖರೀದಿಸುವವರು ತಮ್ಮ ಕೆಲಸ ಮುಗಿದ ಕೂಡಲೇ ಸಂಘದ ಆವರಣದಿಂದ ಹೊರಗೆ ಹೋಗಬೇಕಿದೆ. ಹಾಗೆಯೇ ಗ್ರಾಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ಯಾವೊಬ್ಬ ಜನಪ್ರತಿನಿಧಿಗಳು ಚುನಾವಣೆ ಸಂಬಂಧಿತ ಪ್ರಚಾರ ಹಾಗೂ ತಮ್ಮ ಅಭ್ಯರ್ಥಿಗಳ ಪರ ಮತದಾರರನ್ನು ಸೆಳೆಯುವ ಕೆಲಸ ಮಾಡದಂತೆ ಸೂಚಿಸಲಾಗಿದೆ.
ಸೂಚನೆ ಪಾಲಿಸದಿದ್ದರೆ ಕಾರ್ಯದರ್ಶಿಗಳೇ ಹೊಣೆ: ಗ್ರಾಮೀಣ ಹಾಗೂ ನಗರ ಭಾಗಗಳ ಹಾಲಿನ ಡೇರಿಗಳ ಬಳಿ ರಾಜಕೀಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯನ್ನೇ ಹೆಚ್ಚು ನಂಬಿಕೊಂಡಿರುವ ರೈತರನ್ನು ಸಂಘಗಳ ಆಡಳಿತ ಮಂಡಳಿಗಳು, ಸಿಬ್ಬಂದಿ ಸೆಳೆಯುತ್ತಾರೆಂಬ ಆರೋಪಗಳಿದ್ದವು.
ಹೀಗಾಗಿಯೇ ಈ ಸಮಯ ಬಳಕೆ ಮಾಡಿಕೊಳ್ಳುವ ರಾಜಕೀಯ ಮುಖಂಡರು ಹಾಗೂ ಜನಪ್ರತಿನಿಧಿಗಳು ಮತದಾರರ ಮನವೊಲಿಸಲು ಈ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಸಾಕಷ್ಟು ಪ್ರಚಾರವನ್ನು ನಡೆಸುವುದು ಚುನಾವಣಾ ವೀಕ್ಷಕರ ಗಮನಕ್ಕೆ ಬಂದಿತ್ತು. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿದ ವೀಕ್ಷಕರು,
ಹಾಲಿನ ಡೇರಿಗಳ ಬಳಿ ನಡೆಯುವ ರಾಜಕಾರಣಕ್ಕೆ ಬ್ರೇಕ್ ಹಾಕಿ, ನೀತಿ ಸಂಹಿತೆ ಕಟ್ಟುನಿಟ್ಟಿನ ಪಾಲನೆಗೆ ಸೂಚನೆ ನೀಡಿದ್ದಾರೆ. ಅಕಸ್ಮಾತ್ ಇದನ್ನು ಪಾಲಿಸದಿದ್ದರೆ ಕಾರ್ಯದರ್ಶಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿದ್ದಾರೆ. ಹೊಸ ಆದೇಶ ಎಷ್ಟರಮಟ್ಟಿಗೆ ಅನುಷ್ಠಾನವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಹಾಲಿನ ಡೇರಿಗಳ ಬಳಿ ರಾಜಕೀಯ ಪಕ್ಷಗಳ ಪ್ರಚಾರ ತಡೆಯಲು ಹಾಗೂ ರಾಜಕೀಯ ಚರ್ಚೆ ನಡೆಸುವ ಮೂಲಕ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತಡೆಗೆ ಸುತ್ತೋಲೆ ಹೊರಡಿಸಲಾಗಿದೆ. ಎಲ್ಲಾ ಆಡಳಿತ ಮಂಡಳಿಗಳು ಹಾಗೂ ಕಾರ್ಯದರ್ಶಿಗಳು ಇದನ್ನು ಪಾಲಿಸಬೇಕು.
-ಶ್ರೀಧರ್, ಬಮೂಲ್ ಉಪ ವ್ಯವಸ್ಥಾಪಕ
ಹಾಲಿನ ಡೇರಿಗಳ ಬಳಿ ತಮ್ಮ ಕೆಲಸವಾದ ನಂತರ ಮನೆಗಳಿಗೆ ತೆರಳಬೇಕು. ರಾಜಕೀಯದ ಬಗ್ಗೆ ಚರ್ಚಿಸುವುದು, ಪ್ರಚಾರ ನಡೆಸುವುದು ನೀತಿ ಸಂಹಿತೆ ಉಲ್ಲಂಘನೆ. ಚುನಾವಣೆ ವೀಕ್ಷಕರು ಈ ಆದೇಶ ನೀಡಿರುವುದು ಒಳ್ಳೆಯ ಬೆಳವಣಿಗೆ, ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಾರ್ಯದರ್ಶಿಗಳು ಕ್ರಮ ವಹಿಸಬೇಕು.
-ಲೋಕೇಶ್, ಹಾಲು ಉತ್ಪಾದಕ
* ಎಂ.ಶಿವಮಾದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.