ಜಲಮೂಲಗಳು ಬರಿದು; ಜಲಚರಗಳು ವಿಲವಿಲ
ಆಮ್ಲಜನಕದ ಕೊರತೆಯಿಂದ ಮೀನುಗಳ ಜೀವಕ್ಕೆ ಕುತ್ತು
Team Udayavani, Apr 3, 2019, 11:11 AM IST
ನಾಗಪಟ್ಟಣ ಬಳಿಯ ಸೇತುವೆ ಸನಿಹದಲ್ಲಿ ಪಯಸ್ವಿನಿ ಚಿತ್ರಣ.
ಸುಳ್ಯ : ಜಿಲ್ಲೆಯ ನದಿ, ಹೊಳೆಗಳಲ್ಲಿ ಹರಿವು ಕ್ಷೀಣಿಸಿ ಆಮ್ಲಜನಕ ಕೊರತೆ ಆಗಿ ಜಲಚರಗಳಿಗೆ ಕುತ್ತುಬಂದಿದೆ. ಒಂದೆಡೆ ಜನರು ಕುಡಿಯುವ ನೀರಿಗೆ ಪರದಾಡುತ್ತಿದ್ದರೆ, ಇನ್ನೊಂದೆಡೆ ನೀರೇ
ಆವಾಸ ಸ್ಥಾನವಾಗಿರುವ ಜಲಚರಗಳು ಜಲಾಶ್ರಯ ಇಲ್ಲದೆ ಸಾಯುವ ಸ್ಥಿತಿ ತಲುಪಿವೆ. ಕೆಂಡವಾಗಿರುವ ಬೇಸಗೆಯಲ್ಲಿ ನದಿ ಪಾತ್ರಗಳು ಬರಿದಾಗಿ, ಅಮೂಲ್ಯ ಪ್ರಾಕೃತಿಕ ಸಂಪತ್ತಾಗಿರುವ ಜಲಜೀವಿಗಳು ನಾಶದಂಚಿನತ್ತ ತಲುಪಿರುವುದು ಆತಂಕಕಾರಿಯಾಗಿದೆ.
ಜಲಚರಗಳಿಗೆ ಕುತ್ತು
ಜಿಲ್ಲೆಯಲ್ಲಿ ಶೇ. 95ಕ್ಕಿಂತ ಹೆಚ್ಚು ಪ್ರಮಾಣದ ಹೊಳೆ, ಕೆರೆ, ಬಾವಿಗಳು ಜನವರಿಯಲ್ಲಿಯೇ ಬತ್ತಿವೆ. ಅಲ್ಲಿರುವ ಜಲಚರಗಳು ಸಂಪೂರ್ಣವಾಗಿ ನಾಶವಾಗಿವೆ. ನದಿ, ತೋಡು, ಕೆರೆಗಳಲ್ಲಿ ನೀರು ಆರಿ ಹೋದರೂ ಜಲಚರಗಳು ಬದುಕುಳಿಯುವುದು ನೈಸರ್ಗಿಕ ವಿದ್ಯಮಾನ. ಆಳದ ಕೆಸರು, ಅಲ್ಲೂ ಒರತೆ ಕಡಿಮೆ ಆದ ಮೇಲೆ ಮಣ್ಣಿನೊಳಗೆ ಹೂತು ಹೋಗಿ ಮಳೆಗಾಲದಲ್ಲಿ ಮರಳಿ ಬರುವ ವ್ಯವಸ್ಥೆ ಜಲಚರಗಳಲ್ಲಿದೆ. ಆದರೆ ಈಗ ಸಣ್ಣ ಪುಟ್ಟ ತೋಡು, ಹೊಳೆಗಳಲ್ಲಿ ನೀರಿನ ಹರಿವು ಬೇಸಗೆಯ ಮೊದಲೇ ಬತ್ತುವ ಕಾರಣ ಮನುಷ್ಯನ ಬಳಕೆಗಾಗಿ ಯಂತ್ರಗಳ ಮೂಲಕ ಹೊಂಡ ತೋಡಲಾಗುತ್ತದೆ.
ಇದರಿಂದ ಲಭ್ಯ ಎಲ್ಲ ಒರತೆ ಪ್ರದೇಶ ಬತ್ತಿ ಹೋಗಿ ಜಲಚರಗಳಿಗೆ ಸ್ವರಕ್ಷಣೆಯ ಮಾರ್ಗಗಳಿಲ್ಲ. ಪರಿಣಾಮವಾಗಿ ಮೀನು, ಏಡಿ ಮೊದಲಾದವು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ ಎನ್ನುತ್ತಾರೆ ಜಲತಜ್ಞರು.
ನಾಲ್ಕು ವರ್ಷಗಳಲ್ಲೇ ಗರಿಷ್ಠ
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಅಕ್ಟೋಬರ್ ತನಕ ಮಳೆ ಬಂದು ಫೆಬ್ರವರಿಯವರೆಗೆ ನೀರಿನ ಹರಿವು ಇರುತ್ತಿತ್ತು. ಆದರೆ ನಾಲ್ಕು ವರ್ಷಗಳಿಂದ ಪರಿಸ್ಥಿತಿ ಬದಲಾಗಿ ಮಳೆಗಾಲ ಮುಗಿದ ಒಂದೇ ತಿಂಗಳಲ್ಲಿ ನದಿ, ತೋಡಿನಲ್ಲಿ ಹರಿವು ನಿಲ್ಲುತ್ತಿದೆ. ಇದಕ್ಕೆ ಮುಖ್ಯ ಕಾರಣ ಅರಣ್ಯ ನಾಶ, ಕಾಡಿನಲ್ಲಿ ನೀರಿನ ಹರಿವು ವ್ಯಾಪ್ತಿ ಕುಸಿತ ಮತ್ತು ಕಾಡ್ಗಿಚ್ಚು. ಫೆಬ್ರವರಿ ತನಕ ನೀರು ಹರಿಯುತ್ತಿದ್ದ ಸಂದರ್ಭ ಬೇಸಗೆಯ ಕೊನೆಯ ಎರಡು ತಿಂಗಳ ಕಾಲ ಜಲಚರಗಳು ಕೆಸರು ನೀರಿನಲ್ಲಿ ಬದುಕಬಹುದಿತ್ತು. ಆದರೆ ಈಗ ಫೆಬ್ರವರಿ ಹೊತ್ತಿಗೇ ನೀರಾಶ್ರಯಗಳು ಬರಡು ನೆಲವಾಗುವ ಕಾರಣ ಜಲಚರಗಳಿಗೆ ಆಮ್ಲಜನಕ, ಆವಾಸ ಸ್ಥಾನ ಕೊರತೆಯಾಗುತ್ತಿದೆ.
ಆವಾಸದ ಆಳ ಕಣ್ಮರೆ
ಪ್ರಮುಖ ಮೂಲ ನದಿಗಳಲ್ಲಿ ಆಳ ಪ್ರದೇಶ ಕಣ್ಮರೆಯಾಗಿರುವುದು ಆವಾಸಕ್ಕೆ ಇಲ್ಲವಾಗಲು ಮುಖ್ಯ ಕಾರಣ. ಆಳವು ಹೂಳು, ಮರಳು ಮಿಶ್ರಿತ ಮಣ್ಣು ತುಂಬಿ ಕಣ್ಮರೆಯಾಗಿದೆ. ಯಂತ್ರಗಳ ಅಗೆತಕ್ಕೆ ಸಿಲುಕಿ ಸ್ವರೂಪ ಕಳೆದುಕೊಂಡಿದೆ. ಕೊಡಗಿನ ಪ್ರಾಕೃತಿಕ ಅವಘಡದಿಂದ ಹರಿದು ಬಂದ ಅಪಾರ ಮಣ್ಣು ಪಯಸ್ವಿನಿ ನದಿಯ ಆಳವನ್ನು ಮುಚ್ಚಿದೆ. ಪುಟ್ಟ ತೊರೆ, ತೋಡುಗಳನ್ನು ಇಲ್ಲವಾಗಿಸಿದೆ. ಇವೆಲ್ಲವೂ ಜಲಚರಗಳ ಸಂತಾನೋತ್ಪತ್ತಿ, ಸ್ವರಕ್ಷಣೆಗೆ ಅಡ್ಡಿಯಾಗಿವೆ.
ಪ್ರಕೃತಿ ವಿರೋಧಿ ಕೃತ್ಯ
ಹಸುರು ಸಂಪತ್ತಿನ ಮೇಲೆ ನಮ್ಮ ದಬ್ಟಾಳಿಕೆಯ ಫಲವಿದು. ಬದುಕುವ ಎಲ್ಲ ದಾರಿಗಳನ್ನು ನಾವು ಕಸಿದುಕೊಂಡ ಕಾರಣ ಹಲವು ಜಲಚರಗಳು ಅವನತಿ ಹೊಂದಿವೆ. ನದಿ ಪಾತ್ರದಲ್ಲಿ ದೊರೆಯಬಹುದಾದ ಎಲ್ಲ ನೀರನ್ನು ಮೇಲೆತ್ತುತ್ತಿರುವುದರಿಂದ ಜಲಚರಗಳಿಗೆ ಬದುಕಲು ಅಸಾಧ್ಯ ಸ್ಥಿತಿ ಉಂಟಾಗಿದೆ. ಅವುಗಳು ವಾಸಿಸಬಲ್ಲ ಕಟ್ಟಕಡೆಯ ಸೀಮಿತ ಪ್ರದೇಶದಲ್ಲಿಯೂ ನಾವು ಅತಿಯಾಸೆ ಪ್ರದರ್ಶಿಸುವುದರಿಂದ ಅವು ವಿನಾಶದಂಚಿಗೆ ತಲುಪಿವೆ.
-ದಿನೇಶ್ ಹೊಳ್ಳ,
ಪರಿಸರ ಹೋರಾಟಗಾರ
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.