ನೀರಿನ ಸಂಪು ನಿರ್ಮಾಣಕ್ಕೆ ತುಕ್ಕು ಹಿಡಿದ ಕಬ್ಬಿಣ ಬಳಕೆ
Team Udayavani, Apr 4, 2019, 3:00 AM IST
ದೇವನಹಳ್ಳಿ: ನಗರದ ಸರ್ಕಾರಿ ಕಾಲೇಜು ಆಟದ ಮೈದಾನದ ಆವರಣದಲ್ಲಿ ನಿರ್ಮಿಸುತ್ತಿರುವ ನೀರಿನ ಸಂಪು ನಿರ್ಮಾಣ ಕಾಮಗಾರಿಗೆ ತುಕ್ಕು ಹಿಡಿದ ಕಬ್ಬಿಣವನ್ನು ಬಳಕೆ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಆಟದ ಮೈದಾನದಲ್ಲಿ ಇತ್ತೀಚೆಗಷ್ಟೇ 200 ಮೀಟರ್ ಟ್ರ್ಯಾಕ್ ಕಳಪೆ ಕಾಮಗಾರಿಯಾಗಿತ್ತು. ಅದರ ಬೆನ್ನಲ್ಲೇ ಮತ್ತೂಂದು ಸಂಪು ನಿರ್ಮಾಣಕ್ಕೆ ಗುಜರಿ ಕಬ್ಬಿಣದ ಕಂಬಿಗಳನ್ನು ಅಳವಡಿಸುತ್ತಿದ್ದಾರೆಂದು ನಾಗರಿಕರು ಆರೋಪಿಸುತ್ತಿದ್ದಾರೆ.
ಅವೈಜ್ಞಾನಿಕ ಕಾಮಗಾರಿ: ಈ ಬಗ್ಗೆ ಮಾತನಾಡಿದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಮಾಜಿ ಅಧ್ಯಕ್ಷ ಶಶಿಧರ್, ಸಂಪು ನಿರ್ಮಾಣ ಕಾಮಗಾರಿಯನ್ನು ತಗ್ಗು ಪ್ರದೇಶದಲ್ಲಿ ನಡೆಸುವುದು ಸರಿಯಲ್ಲ. ಮಳೆಗಾಲದಲ್ಲಿ ನೀರು ಹರಿದು ಬರುವುದರಿಂದ ಸಂಪು ಸಂಪೂರ್ಣವಾಗಿ ಮುಳುಗಡೆಯಾಗಲಿದೆ.
ಈ ಕಾಮಗಾರಿ ಅವೈಜ್ಞಾನಿಕವಾಗಿದೆ. ಒಬ್ಬ ಇಂಜಿನಿಯರ್ ಆಗಿ ಗುತ್ತಿಗೆದಾರರನ್ನು ಬೆಂಬಲಿಸಿದರೆ ಹೇಗೆ ಎಂದು ಸ್ಥಳದಲ್ಲಿದ್ದ ಇಂಜಿನಿಯರ್‌ರನ್ನು ಸಾರ್ವಜನಿಕರು ತೀವ್ರ ತರಾಟೆಗೆ ತೆಗೆದುಕೊಂಡರು. ಕ್ರೀಡಾಪಟು ಪ್ರಸನ್ನಹಳ್ಳಿ ನಟರಾಜ್ ಮಾತನಾಡಿ, ಮೊದಲು ಡಾ.ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗಿತ್ತು.
ಈ ಭವನವನ್ನು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿದ ನಂತರ ಭವನದ ಒಳಭಾಗದಲ್ಲಿ ಆಸಕ್ತರಿಗೆ ಜಿಮ್ ಕಸರತ್ತು ನಡೆಸಲು ಜಿಮ್ ಪರಿಕರ ದಾಸ್ತಾನು ಮಾಡಲಾಗಿದೆ. ಈ ಕುರಿತು ತನಿಖೆ ನಡೆದಿಲ್ಲ. ಇಷ್ಟೆಲ್ಲಾ ದೂರುಗಳು ಇದ್ದರೂ ಮತ್ತೆ ಕಳಪೆ ಕಂಬಿಗಳನ್ನು ಗುಜರಿಯಿಂದ ತರಿಸಿ ಕಾಮಗಾರಿ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಎಸಿಬಿಗೆ ದೂರು, ಎಚ್ಚರಿಕೆ: ಇಲ್ಲಿ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಆಟವಾಡಲು ಬರುತ್ತಾರೆ. ಏನಾದರೂ ಕುಸಿದು ಬಿದ್ದರೆ ಮುಂದೆ ಆಗುವ ಅನಾಹುತಕ್ಕೆ ಯಾರು ಹೊಣೆಗಾರರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೂಲ ಸೌಲಭ್ಯದಲ್ಲಿ ಒಂದಾಗಿರುವ ನೀರನ್ನು ಶೌಚಾಲಯಕ್ಕೆ ಮತ್ತು ಸ್ನಾನಕ್ಕೆ ಬಳಸಿಕೊಳ್ಳಲು ಸಂಪು ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
200 ಮೀಟರ್ ಟ್ರ್ಯಾಕ್ ಕಳಪೆಯಾಗಿದೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಇಲ್ಲಿ ನಡೆಯುತ್ತಿರುವ ಪ್ರತಿಯೊಂದು ಕಾಮಗಾರಿಯ ಸಂಪೂರ್ಣ ಮಾಹಿತಿಯೊಂದಿಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೂ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇಂಜಿನಿಯರ್ ಹೇಳಿಕೆ: ಕಳಪೆ ಕಬ್ಬಿಣದ ಕಂಬಿ ಬಗ್ಗೆ ನನ್ನ ಸಹಮತ ಇರುವುದಿಲ್ಲ. ಗುಣಮಟ್ಟದ ಕಂಬಿಗಳನ್ನು ಬಳಸಿಕೊಂಡು ಕಾಮಗಾರಿ ನಡೆಸಲಾಗುವುದು. ಇದನ್ನು ತೆಗೆದು ಹಾಕಿ ನೂತನ ಗುಣಮಟ್ಟದ ಕಂಬಿ ಬಳಕೆ ಮಾಡಲಾಗುತ್ತದೆ ಎಂದು ಜಿಪಂ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಇಂಜಿನಿಯರ್ ಪೂಜಿತಾ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.