ನನ್ನನ್ನು ಕಣಕ್ಕಿಳಿಸಿ ಎಂದು ವರಿಷ್ಠರಿಗೆ ಹೇಳಿದ್ದೇ ದೇವೇಗೌಡರು
Team Udayavani, Apr 4, 2019, 6:00 AM IST
ಲೋಕಸಭೆ ಚುನಾವಣೆಯಲ್ಲಿ ಅನೀರೀಕ್ಷಿತವಾಗಿ ಕಣಕ್ಕಿಳಿದಿರುವ ಹಾಲಿ ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ತೆರಳುತ್ತಿರುವುದು. ಅಲ್ಲದೇ ದೇವೇಗೌಡರು ಬೆಂಗಳೂರು ಉತ್ತರ ಬಿಟ್ಟು ತುಮಕೂರಿಗೆ ತೆರಳಲು ಕಾರಣವೇನು. ತಮ್ಮ ಸ್ಪರ್ಧೆಯಿಂದ ಭವಿಷ್ಯದಲ್ಲಿ ತಮ್ಮ ರಾಜಕೀಯ ಬೆಳವಣಿಗೆಗಳ ಮೇಲೆ ಆಗುವ ಪರಿಣಾಮಗಳ ಬಗ್ಗೆ ಉದಯವಾಣಿಯೊಂದಿಗೆ ಮನ ಬಿಚ್ಚಿ ಮಾತನಾಡಿದ್ದಾರೆ.
ದೇವೇಗೌಡರು ಬೆಂ.ಉತ್ತರ ಕ್ಷೇತ್ರ ಬಿಟ್ಟುಕೊಟ್ಟು ನೀವು ಸ್ಪರ್ಧೆ ಮಾಡಲು ಕಾರಣವೇನು ?
ನಾನು ಸ್ಪರ್ಧೆ ಮಾಡುವ ಇಚ್ಚೆಯೇ ಇರಲಿಲ್ಲ. ದೇವೇಗೌಡರು ಉತ್ತರ ಕ್ಷೇತ್ರದಲ್ಲಿಯೇ ಸ್ಪರ್ಧೆ ಮಾಡಲು ಅವರಿಗಾಗಿಯೇ ಈ ಕ್ಷೇತ್ರ ಜೆಡಿಎಸ್‌ಗೆ ನೀಡಲಾಗಿತ್ತು. ಆದರೆ, ತುಮಕೂರಿನವರು ದೇವೇಗೌಡರು ಅಲ್ಲಿ ಸ್ಪರ್ಧಿಸಿದರೆ ಮಾತ್ರ ಗೆಲ್ಲಲು ಸಾಧ್ಯ ಬೇರೆಯವರನ್ನು ಕಣಕ್ಕಿಳಿಸಿದರೆ, ಒಗ್ಗಟ್ಟು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದರು. ಆದರೂ, ಎರಡೂ ಕಡೆ ನಾಮಪತ್ರ ಸಲ್ಲಿಸಿ ನಂತರ ತುಮಕೂರಿನಿಂದ ವಾಪಸ್ ಪಡೆದು ಬೆಂ. ಉತ್ತರದಿಂದಲೇ ಸ್ಪರ್ಧಿಸುವ ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ತುಮಕೂರಿನವರು ಅಲ್ಲಿಯೇ ಸ್ಪರ್ಧಿಸುವಂತೆ ಪಟ್ಟು ಹಿಡಿದಿದ್ದರಿಂದ ಅನಿವಾರ್ಯವಾಗಿ ದೇವೇಗೌಡರು ತುಮಕೂರಿನಲ್ಲಿ ಸ್ಪರ್ಧಿಸಿ, ನಾನು ಬೆಂಗಳೂರಿನಲ್ಲಿ ಸ್ಪರ್ಧಿಸುವಂತಾಯಿತು.
ನಿಮಗೆ ಜೆಡಿಎಸ್‌ನಿಂದ ಸ್ಪರ್ಧಿಸುವಂತೆ ಕೇಳಿಕೊಂಡಿದ್ದರಾ ?
ಕೃಷ್ಣಬೈರೇಗೌಡರ ಬಗ್ಗೆ ಕನಿಷ್ಠ ಮಾಹಿತಿ ಇರುವವರು ಆ ರೀತಿಯ ಪ್ರಸ್ತಾವನೆಯನ್ನು ಯಾರೂ ಇಡಲು ಸಾಧ್ಯವಿಲ್ಲ. ಆಲೋಚನೆಯನ್ನೂ ಮಾಡಿರಲಿಕ್ಕಿಲ್ಲ.
ನೀವು ಕ್ಷೇತ್ರದ ಜೊತೆಗೆ ಅಭ್ಯರ್ಥಿಯನ್ನೂ ಬಿಟ್ಟು ಕೊಡುವುದು ನಿಮ್ಮ ಪಕ್ಷಕ್ಕೆ ಧಕ್ಕೆಯಾಗುವುದಿಲ್ಲವೇ ?
ಸ್ವಲ್ಪ ಮಟ್ಟಿಗೆ ಆ ರೀತಿಯ ಸಮಸ್ಯೆಯಾಗುತ್ತದೆ. ಮೈತ್ರಿ ಮಾಡಿಕೊಂಡಾಗ ಆ ರೀತಿಯ ತ್ಯಾಗ ಮಾಡಬೇಕಾದ ಅನಿವಾರ್ಯತೆ ಬರುತ್ತದೆ. ಅವರು ನಮಗೆ ಮೈಸೂರು ಬಿಟ್ಟುಕೊಟ್ಟಿದ್ದಾರೆ. ಅವರಿಗೆ ನಾವು ಗೌರವ ಕೊಡಬೇಕು. ನಮಗೆ ಅವರು ಗೌರವ ಕೊಡುವಂತೆ ನಡೆದುಕೊಂಡಾಗ ಮಾತ್ರ ಮೈತ್ರಿ ಯಶಸ್ವಿಯಾಗುತ್ತದೆ.
ಸದಾನಂದಗೌಡರಿಗೆ ಅನುಕೂಲ ಮಾಡಿಕೊಡಲು ದೇವೇಗೌಡರು ತುಮಕೂರಿಗೆ ಹೋಗಿದ್ದಾರೆ ಎಂಬ ಮಾತಿದೆ ನಿಜಾನಾ ?
ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೃಷ್ಣ ಬೈರೇಗೌಡ ಅವರನ್ನು ಕಣಕ್ಕಿಳಿಸಿ ಎಂದು ದೇವೇಗೌಡರು ನಮ್ಮ ಪಕ್ಷದ ವರಿಷ್ಠರಿಗೆ ಹೇಳಿದ್ದಾರೆ. ಕೃಷ್ಣ ಬೈರೇಗೌಡರನ್ನು ನಿಲ್ಲಿಸಿದರೆ, ನಾನು ನಿಂತು ಗೆಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಎಲ್ಲ ಸಮಯದಲ್ಲಿಯೂ ಸಮುದಾಯವೇ ಪ್ರಾಮುಖ್ಯತೆ ಪಡೆಯುವುದಿಲ್ಲ.
ನಿಮ್ಮ ಪಕ್ಷದ ಕೆಲವು ಶಾಸಕರು ದೇವೇಗೌಡರಿಗೆ ಬೆಂಬಲ ಸೂಚಿಸುವುದಿಲ್ಲ ಎಂಬ ಕಾರಣಕ್ಕೆ ಗೌಡರು ಕ್ಷೇತ್ರ ಬಿಟ್ಟು ಹೋದರು ಅಂತಿದೆ ಹೌದಾ ?
ಆ ಥರಾ ಏನಿಲ್ಲ. ಎಸ್.ಟಿ. ಸೋಮಶೇಖರ್ ಅವರಿಗೆ ಕೆಲವು ಸಮಸ್ಯೆಗಳಿದ್ದವು. ಅವರು ಅದನ್ನು ಪಕ್ಷದ ನಾಯಕರ ಮುಂದೆ ಹೇಳಿದ್ದರು. ಆದರೆ, ಚುನಾವಣೆಗೂ ಅದಕ್ಕೂ ಸಂಬಂಧವಿಲ್ಲ. ವಾಸ್ತವವಾಗಿ ನೋಡಿದರೆ, ದೇವೇಗೌಡರನ್ನು ನಿಲ್ಲಿಸಿ ಅವರನ್ನು ಸೋಲಿಸಿದರೆ, ನಮ್ಮ ರಾಜಕೀಯ ಭವಿಷ್ಯ ಏನಾಗುತ್ತದೆ ಎನ್ನುವ ಬಗ್ಗೆ ಸಾಮಾನ್ಯವಾಗಿ ಎಲ್ಲರೂ ಯೋಚನೆ ಮಾಡಿರುತ್ತಾರೆ.
ನೀವು ಕೇಂದ್ರ ಮತ್ತು ರಾಜ್ಯ ರಾಜಕಾರಣ ಎರಡೂ ದೋಣಿಯ ಮೇಲೆ ಕಾಲಿಡುತ್ತಿದ್ದೀರಲ್ಲಾ ಏಕೆ ?
ರಾಜಕೀಯದಲ್ಲಿ ಗೆರೆ ಎಳೆದು ಹೀಗೇ ಇರಬೇಕು ಎಂದು ಹೇಳಲು ಆಗುವುದಿಲ್ಲ. ದಿನದಿಂದ ದಿನಕ್ಕೆ ತನ್ನದೇ ಆದ ಹಾದಿಯಲ್ಲಿ ಹೋಗುತ್ತದೆ. ಇದರಲ್ಲಿ ಯಾವುದೇ ಫಾರ್ಮೂಲಾ ನಡೆಯುವುದಿಲ್ಲ. ಅದಕ್ಕೆ ನಾವು ಸಿದ್ದರಾಗಿರಬೇಕು. ನಾನು ಐದು ಬಾರಿ ಶಾಸಕನಾಗಿ ಎರಡು ಬಾರಿ ಸಚಿವನಾಗಿ ತಕ್ಕ ಮಟ್ಟಿಗೆ ಅನುಭವ ಪಡೆದುಕೊಂಡಿದ್ದೇನೆ. ಸಂಸತ್ತಿನಲ್ಲಿ ಕೆಲಸ ಮಾಡುವುದು ಬೇರೆಯೇ ಅನುಭವ. ರಾಷ್ಟ್ರ ಮಟ್ಟದ ರಾಜಕಾರಣದ ಅನುಭವ ಆದರೆನೇ ರಾಜಕಾರಣ ಪರಿಪೂರ್ಣ ಆಗುತ್ತದೆ ಎನ್ನುವುದು ನನ್ನ ಅಭಿಪ್ರಾಯ. ದೊಡ್ಡ ಮಟ್ಟದಲ್ಲಿ ಬೆಳೆಯಲು ರಾಷ್ಟ್ರ ರಾಜಕಾರಣ ಅನುಕೂಲವಾಗುತ್ತದೆ. ಅವಕಾಶ ಬಂದಾಗ ಸವಾಲು ಎದುರಿಸಲು ಸಿದ್ದರಾದಾಗ ನಾಯಕತ್ವ ಬೆಳೆಯುತ್ತದೆ.
ನಿಮ್ಮ ಪಕ್ಷದ ಕೆಲವು ನಾಯಕರು ನಿಮ್ಮನ್ನು ಕೇಂದ್ರಕ್ಕೆ ಕಳುಹಿಸುವ ಪ್ರಯತ್ನ ನಡೆದಿದ್ದಾರಂತಲ್ಲಾ ನಿಜಾನಾ ?
ನಿಮಗೆ ಆ ರೀತಿಯ ಗುಮಾನಿ ಇರಬಹುದು. ನನಗೆ ಆ ರೀತಿಯ ಅನುಮಾನ ಇಲ್ಲ. ಚುನಾವಣೆಯಲ್ಲಿ ಕೃಷ್ಣ ಬೈರೇಗೌಡ ನಿಂತರೆ ಗೆಲ್ಲುತ್ತಾರೆ ಎನ್ನುವ ಕಾರಣಕ್ಕೆ ನಿಲ್ಲಿಸಿದ್ದಾರೆ. ರಾಜಕೀಯದಲ್ಲಿ ನನ್ನ ಅಧಿಕಾರವನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ನನಗೆ ಸಿಗದಿರುವುದನ್ನು ನಾನು ಪಡೆದುಕೊಳ್ಳಲೂ ಸಾಧ್ಯವಿಲ್ಲ. ಈ ಅವಕಾಶದಿಂದ ನನಗೆ ಇನ್ನಷ್ಟು ಒಳ್ಳೆಯ ಅವಕಾಶಗಳು ಹುಡುಕಿಕೊಂಡು ಬರಬಹುದು. ನಾನು ಆಗೋದೆಲ್ಲ ಒಳ್ಳೆಯದಕ್ಕೆ ಎಂದುಕೊಂಡಿದ್ದೇನೆ.
ಮಂತ್ರಿಸ್ಥಾನ ಕಳೆದುಕೊಳ್ಳಲು ಇಷ್ಟವಿಲ್ಲದೇ ನೀವು ಗೆಲ್ಲಲು ಬಯಸುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆಯಲ್ಲಾ ?
ಬಿಜೆಪಿಯವರು ಆ ರೀತಿಯ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಚುನಾವಣೆಗೆ ಸೋಲಲು ಸ್ಪರ್ಧಿಸಿದ್ದರೆ, ಅದು ಆತ್ಮವಂಚನೆ ಆಗುತ್ತದೆ. ನನ್ನನ್ನು ನಂಬಿ ಕಾರ್ಯಕರ್ತರು, ಸ್ನೇಹಿತರು, ಪಕ್ಷದ ಮುಂಖಡರಿದ್ದಾರೆ. ಅವರಿಗೆ ಆತ್ಮವಂಚನೆ ಮಾಡಲು ನಾನು ಇಷ್ಟ ಪಡುವುದಿಲ್ಲ. ಬಿಜೆಪಿಯವರಿಗೆ ಆತ್ಮವಂಚನೆ ಎಂದರೆ ಅರ್ಥ ಆಗುವುದಿಲ್ಲ. ಅವರು ಆತ್ಮವಂಚನೆ ಮಾಡಿಕೊಂಡೇ ಬಂದವರು. ಹೀಗಾಗಿ ಸುಳ್ಳು ಸುದ್ದಿ ಹಬ್ಬಿಸುವ ಪ್ರಯತ್ನ ನಡೆಸಿದ್ದಾರೆ. ಮಂತ್ರಿಗಿರಿ ಉಳಿಸಿಕೊಳ್ಳುವ ಹಪಾಹಪಿ ನನಗಿಲ್ಲ. ಗೆಲ್ಲುವುದಕ್ಕೋಸ್ಕರವೇ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಬಿಜೆಪಿಯವರು ಹತಾಶರಾಗಿ ವಾಮಮಾರ್ಗ ಬಳಸಲು ಆರಂಭಿಸಿದ್ದಾರೆ. ಸಂಸತ್ತಿನ ಸದಸ್ಯನಾಗುವುದು ನನಗೆ ದೊಡ್ಡ ಗೌರವ. ಅದನ್ನು ಕಳೆದುಕೊಳ್ಳಲು ನಾನು ಇಷ್ಟ ಪಡುವುದಿಲ್ಲ.
ಹಾಲಿ ಶಾಸಕರು ಸ್ಪರ್ಧಿಸಿರುವುದರಿಂದ ಗೆದ್ದು ಬಂದರೆ, ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯಾಗುವುದಿಲ್ಲವೇ ?
ಹೌದು ಆರಂಭದಲ್ಲಿ ಆ ರೀತಿಯ ಚರ್ಚೆ ಕೂಡ ಆಯಿತು. ಮೊದಲು ಶಾಸಕರನ್ನು ಸ್ಪರ್ಧೆಗೆ ನಿಲ್ಲಿಸಬಾರದು ಎಂಬ ತೀರ್ಮಾನ ಮಾಡಲಾಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಸ್ಪರ್ಧೆಗೆ ಇಳಿಸಲಾಗಿದೆ. ಇದು ಸ್ವಲ್ಪ ಕಷ್ಟದ ಕೆಲಸವೇ. ನಮ್ಮ ಎರಡೂ ಪಕ್ಷಗಳ ನಾಯಕರು ಎಲ್ಲವನ್ನೂ ಗಂಭೀರವಾಗಿ ಯೋಚಿಸಿ, ನಮ್ಮನ್ನು ಸ್ಪರ್ಧೆಗೆ ಇಳಿಸಿದ್ದಾರೆ.
ಮೋದಿ ಅಲೆಯಲ್ಲಿ ನಿಮ್ಮ ಈ ನಿರ್ಧಾರ ರಿಸ್ಕ್ ಅನಿಸುವುದಿಲ್ಲವೇ ?
ರಿಸ್ಕ್ ಇಲ್ಲದೇ ರಾಜಕಾರಣ ಮಾಡಲು ಸಾಧ್ಯವಿಲ್ಲ. ಮೋದಿಯವರ ವಿರೋಧಿ ಅಲೆ ಅಂಡರ್ ಕರೆಂಟ್ ಇದೆ. ದುಡಿಯುವ ವರ್ಗದ ಜನರಲ್ಲಿ ಮೋದಿ ಬಾಯಿಂದ ಬಾಯಿ ತಪ್ಪಿಯೂ ಅಚ್ಚೇದಿನ್ ಎಂಬ ಪದ ಬಳಕೆಯಾಗುತ್ತಿಲ್ಲ ಎಂಬ ಅಸಮಾಧಾನ ಇದೆ. ದುಡಿಯೋ ವರ್ಗದ ಜನರ ಧ್ವನಿ ಯಾವ ಮಾಧ್ಯಮಗಳಲ್ಲಿಯೂ ಬರುವುದಿಲ್ಲ. ಅವರಿಗೆ ಇರುವ ಏಕೈಕ ಅಸ್ತ್ರ ಮತದಾನ. ಅವರಿಗೆ ಮೋದಿಯವರು ವಂಚನೆ ಮಾಡಿದ್ದಾರೆ ಎಂಬ ಭಾವನೆ ಮೂಡಿದೆ. ಅವರು ತಮ್ಮ ಮತಗಳ ಮೂಲಕ ಅದನ್ನು ತೋರಿಸುತ್ತಾರೆ.
ಬಿಜೆಪಿಯವರ ಭಾವನಾತ್ಮಕ ಪ್ರಚಾರ ಮತ್ತೆ ಅವರನ್ನು ಕೈ ಹಿಡಿಯಬಹುದಲ್ಲಾ ?
ಬಿಜೆಪಿಯವರು ಭಾವನಾತ್ಮಕವಾಗಿಯೇ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅದನ್ನು ಮತವಾಗಿ ಪಡೆಯುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಕೆಲವರು ಅವರ ಮಾತಿಗೆ ಮರುಳಾಗಬಹುದು. ಆದರೆ, ಹೊಟ್ಟೆ ಪಾಡಿನ ವಿಚಾರಗಳು ಬಂದಾಗ. ದುಡಿಯುವ ಜನರು ಭಾವನೆ ಹಾಗೂ ಹೊಟ್ಟೆ ಪಾಡಿನ ನಡುವಿನ ವ್ಯತ್ಯಾಸ ತಿಳಿಯುವಷ್ಟು ಬುದ್ದಿವಂತರಿದ್ದಾರೆ. ಭಾರತೀಯರು ಅಷ್ಟೊಂದು ಮೂರ್ಖರಲ್ಲ. ಎಲ್ಲ ಸಮಯದಲ್ಲಿ ಎಲ್ಲ ಜನರನ್ನೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ.
ನಿಮ್ಮ ಕ್ಷೇತ್ರದಲ್ಲಿ ವಲಸಿಗರೇ ಹೆಚ್ಚಾಗಿದ್ದಾರಲ್ಲಾ ಅವರು ನಿಮ್ಮ ಪರವಾಗಿದ್ದಾರಾ ?
ನಮ್ಮ ಕ್ಷೇತ್ರದಲ್ಲಿ ಬೇರೆ ಬೇರೆ ರಾಜ್ಯಗಳ ವಲಸಿಗರಿಗಿಂತ ಅಕ್ಕ ಪಕ್ಕದ ಜಿಲ್ಲೆಗಳ ವಲಸಿಗರೇ ಇದ್ದಾರೆ. ಅವರೆಲ್ಲರೂ ದುಡಿಯುವ ವರ್ಗದವರಾಗಿದ್ದಾರೆ. ಹೀಗಾಗಿ ಬಿಜೆಪಿಯ ಬಗ್ಗೆ ಭ್ರಮನಿರಸನಗೊಂಡಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲದಿರುವುದರಿಂದ ಸಮಸ್ಯೆ ಇಲ್ಲ.
ಸಂದರ್ಶನ – ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.