ಟ್ಯಾಂಕ್‌ಗೆ ಬಿದ್ದು ಮೂವರು ಮಕ್ಕಳು ದುರ್ಮರಣ
ಮೂವರೂ ಮಕ್ಕಳು ಒಂದೇ ಮನೆಯವರು
Team Udayavani, Apr 4, 2019, 9:59 AM IST
ಪುತ್ತೂರು: ಗ್ರಾಮ ಪಂಚಾಯತ್‌ಗೆ ಸೇರಿದ ನೀರಿನ ಟ್ಯಾಂಕ್‌ಗೆ ಬಿದ್ದು ಒಂದೇ ಮನೆಯ ಮೂವರು ಮಕ್ಕಳು ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ಬೆಟ್ಟಂಪಾಡಿ ಸಮೀಪದ ಮಿತ್ತಡ್ಕ ಉಡ್ಡಂಗಳ ಸಮೀಪ ಸಂಭವಿಸಿದೆ.
ಉಡ್ಡಂಗಳ ನಿವಾಸಿ ರವಿಕುಲಾಲ್ ಅವರ ಪುತ್ರ 7ನೇ ತರಗತಿಯ ಜಿತೇಶ್ (12) ಹಾಗೂ ಸಹೋದರ ಹರೀಶ್ ಕುಲಾಲ್ ಪುತ್ರಿಯರಾದ 7ನೇ ತರಗತಿಯ ವಿಶ್ಮಿತಾ (13) ಮತ್ತು 4ನೇ ತರಗತಿಯ ಚೈತ್ರಾ (10) ಮೃತಪಟ್ಟವರು. ಮೂವರೂ ಮಿತ್ತಡ್ಕ ಸರಕಾರಿ ಶಾಲೆಯ ವಿದ್ಯಾರ್ಥಿಗಳು.
ಘಟನೆಯ ವಿವರ
ಪರೀಕ್ಷೆಗಳು ಮುಗಿದಿರುವ ಹಿನ್ನೆಲೆಯಲ್ಲಿ ಬುಧವಾರ ಶಾಲೆಗೆ ಹೋಗದೆ ರಜೆ ಮಾಡಿದ್ದ ಈ ಮೂರು ಮಂದಿ ಮಕ್ಕಳು ಅಪರಾಹ್ನ ಮನೆಯಿಂದ ತೆರಳಿದ್ದು, ಆಟವಾಡುತ್ತ ಸುಮಾರು ಅರ್ಧ ಕಿ.ಮೀ. ದೂರದ ನೀರಿನ ಟ್ಯಾಂಕ್ ಬಳಿಗೆ ಹೋಗಿದ್ದಾರೆ. ಟ್ಯಾಂಕ್‌ಗೆ ಹೊರಭಾಗದಿಂದ ಇರಿಸಲಾಗಿದ್ದ ಏಣಿ ಯನ್ನು ಏರಿ ಲಾಕ್ ಮಾಡಿರದ ಮುಚ್ಚಳ ತೆರೆದು ಒಳಭಾಗದಲ್ಲಿದ್ದ ಏಣಿಯ ಮೂಲಕ
ಇಳಿಯುವಾಗ ಒಂದು ಮಗು ಕಾಲು ಜಾರಿ ನೀರಿಗೆ ಬಿದ್ದಿರಬಹುದು; ರಕ್ಷಿಸಲೆಂದು ಇಳಿದ ಉಳಿದಿಬ್ಬರೂ ಮುಳುಗಿರುವ ಸಾಧ್ಯತೆ ಇದೆ. ಮಧ್ಯಾಹ್ನ ತೆರಳಿದ್ದ ಮಕ್ಕಳು ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಮನೆಯವರು
ಹುಡುಕಾಡಿದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ. ಮಧ್ಯಾಹ್ನದ ವೇಳೆಯಾದ್ದರಿಂದ ಪರಿಸರದಲ್ಲಿ ಯಾರೂ ಇರದ ಕಾರಣ ಘಟನೆ ಯಾರ ಗಮನಕ್ಕೂ ಬಂದಿರಲಿಲ್ಲ.
ಹೊಸ ಟ್ಯಾಂಕ್
ಸ್ಥಳೀಯ ಬೆಟ್ಟಂಪಾಡಿ ಗ್ರಾ.ಪಂ.ನಿಂದ ಸಾರ್ವಜನಿಕ ನೀರಿನ ಸಂಪರ್ಕದ ಅನುಕೂಲತೆಗಾಗಿ ಟ್ಯಾಂಕ್ ನಿರ್ಮಿಸಲಾಗಿದ್ದು, ಪೈಪ್ ಲೈನ್ ಇನ್ನಷ್ಟೇ ಅಳವಡಿಸಬೇಕಿದೆ. ಆದರೆ ಟ್ಯಾಂಕ್ ನಿರ್ಮಾಣ ಕಾರ್ಯ ಪೂರ್ಣಗೊಂಡು ಕ್ಯೂರಿಂಗ್‌ನ ಉದ್ದೇಶದಿಂದ ನೀರು ತುಂಬಿಸಲಾಗಿತ್ತು. ಮಕ್ಕಳು ಮೃತಪಟ್ಟಿರುವ ವಿಚಾರ ಘಟನೆ ಸಂಜೆಯ ಸಮಯಕ್ಕೆ ಬೆಳಕಿಗೆ ಬಂದಿತು. ಬಳಿಕ ಟ್ಯಾಂಕ್‌ನ ನೀರು ಖಾಲಿ ಮಾಡಿ ಮೃತದೇಹಗಳನ್ನು ಹೊರತೆಗೆಯಲಾಯಿತು.
ಬಡ ಕುಟುಂಬಕ್ಕೆ ಎರಗಿತು ದುರಂತ
ಮರದ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರವಿ ಕುಲಾಲ್ ಅವರಿಗೆ ಹೆಣ್ಣು ಹಾಗೂ ಗಂಡು ಮಕ್ಕಳಿದ್ದು, ಕಿರಿಯ ಪುತ್ರ ಘಟನೆಯಲ್ಲಿ ಸಾವನ್ನಪ್ಪಿದ್ದಾನೆ. ಕೂಲಿ ಕೆಲಸ ಮಾಡುತ್ತಿರುವ ಸಹೋದರ ಹರೀಶ್ ಕುಲಾಲ್ ಅವರ ಇಬ್ಬರು ಪುತ್ರಿಯರೂ ಘಟನೆಯಲ್ಲಿ ಮೃತಪಟ್ಟಿದ್ದಾರೆ.
ಅಕ್ಕಪಕ್ಕದಲ್ಲಿ ಮನೆಯನ್ನು ಹೊಂದಿರುವ ಸಹೋದರರು ಆರ್ಥಿಕವಾಗಿ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮಕ್ಕಳ ತಾಯಂದಿರು ಬೀಡಿ ಕಟ್ಟಿ ಕುಟುಂಬಕ್ಕೆ ನೆರವಾಗುತ್ತಿದ್ದಾರೆ. ಈಗ ಒಂದೇ ಕುಟುಂಬದ ಮೂವರು ಮಕ್ಕಳು ಮೃತಪಟ್ಟಿರುವುದು ಬರಸಿಡಿಲಿನಂತಾಗಿದೆ.
ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ. ಪುತ್ತೂರು ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ, ತಹಶೀಲ್ದಾರ್ ಡಾ| ಪ್ರದೀಪ್ ಕುಮಾರ್, ಗ್ರಾ.ಪಂ. ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿದ್ದಾರೆ.
ಮಾಸದ ಘಟನೆ
2018ರ ಡಿಸೆಂಬರ್ 15ರಂದು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಮೂಲೆತ್ತಡ್ಕದಲ್ಲಿ ಆಟವಾಡುತ್ತಾ ತೆರಳಿದ ಇಬ್ಬರು ಮಕ್ಕಳು ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದ್ದರು.ಕೆಲವೇ ತಿಂಗಳ ಅಂತರದಲ್ಲಿ ಪುತ್ತೂರು ತಾಲೂಕಿನಲ್ಲಿ ಎರಡನೇ ಘಟನೆ ಸಂಭವಿಸಿದೆ.
ಮಕ್ಕಳಲ್ಲಿ ಜಾಗೃತಿ ಅಗತ್ಯ
ಮಕ್ಕಳಿಗೆ ಬೇಸಗೆ ರಜೆ ಸಿಕ್ಕಿದ್ದು ಓರಗೆಯವರೊಂದಿಗೆ ಸೇರಿ ಗುಡ್ಡ, ಬೆಟ್ಟ, ನದಿ,
ಕೆರೆಗಳತ್ತ ತಿರುಗಾಡುವುದು ಸಾಮಾನ್ಯ. ಈ ಸಂದರ್ಭ ಅಜಾಗ್ರತೆಯಿಂದಲೋ ಕುತೂಹಲದಿಂದಲೋ ಅಪಾಯಕ್ಕೆ ಸಿಲುಕುವುದೂ ಇದೆ. ಕುಟುಂಬ, ಸಮಾಜಕ್ಕೆ ಬೆಳಗಬೇಕಾದ ಕಂದಮ್ಮಗಳು ದುರ್ಘಟನೆಗಳಿಗೆ ಸಿಲುಕದಂತೆ ಹೆತ್ತವರು ಎಚ್ಚರ ವಹಿಸುವುದಲ್ಲದೆ ಅಪಾಯಕಾರಿ ಸಾಹಸಗಳನ್ನು ಮಾಡದಂತೆ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಮಕ್ಕಳೇ ಸ್ವನಿಯಂತ್ರಣ ಹೇರಿಕೊಳ್ಳುವುದೂ ಉತ್ತಮ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.