ಬನ್ನಿ, ಹಬ್ಬ ಮಾಡೋಣ!
Team Udayavani, Apr 6, 2019, 6:00 AM IST
ಮೂರೂವರೆ ಮಹತ್ವದ ಮುಹೂರ್ತಗಳಲ್ಲಿ, ವರ್ಷದ ಮೊದಲ ಶುಭಮುಹೂರ್ತದ ಹಾಗೂ ವಸಂತನ ಶುಭಾಗಮನದ ದಿನವಿದು. ಯುಗಾದಿಯು ವಸಂತ ಮಾಸದಲ್ಲಿ ಆಗಮಿಸುವುದರಿಂದ ಮರ ಗಿಡಗಳಿಗೆ ನವಚೈತನ್ಯ ಮೂಡುತ್ತದೆ. ಹೊಸ ಸೃಷ್ಟಿಗೆ ಹೊಸ ದೃಷ್ಟಿಗೆ ಶ್ರೀಕಾರ ಬರೆಯುವ ಯುಗಾದಿಯಂದು ಹಣ್ಣೆಲೆಗಳೆಲ್ಲಾ ಉದುರಿ, ಹೊಸ ಚಿಗುರು ಮೂಡುತ್ತದೆ. ಹೊಸ ವರುಷಕೆ ಹೊಸ ಹರುಷ ಹೊತ್ತು ತರುವ ಯುಗಾದಿಯ ಸಂಭ್ರಮಕ್ಕೆ ಮಾಡಬಹುದಾದ ಅಡುಗೆಗಳ ವೈವಿಧ್ಯ ಇಲ್ಲಿದೆ…
ಟೊಮೇಟೊಕಾಯಿ ಚಟ್ನಿ
ಬೇಕಾಗಿರುವ ಸಾಮಗ್ರಿ: ಕತ್ತರಿಸಿದ ಟೊಮೇಟೊಕಾಯಿ-2 ಕಪ್, ತೆಂಗಿನಕಾಯಿ ತುರಿ- 1 ಕಪ್, ಹಸಿಮೆಣಸಿನಕಾಯಿ- 4ರಿಂದ 5, ಹುರಿದು ಪುಡಿ ಮಾಡಿದ ಎಳ್ಳು- 2 ಚಮಚ, ಕರಿಬೇವಿನ ಸೊಪ್ಪು-7ರಿಂದ 8 ಎಲೆಗಳು, ಕತ್ತರಿಸಿದ ಕೊತ್ತಂಬರಿ ಸೊಪ್ಪು- 4 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ-3 ಚಮಚ, ಸಾಸಿವೆ- 1 ಚಮಚ, ಇಂಗು- 1/4 ಚಮಚ.
ಮಾಡುವ ವಿಧಾನ:
ಕತ್ತರಿಸಿದ ಟೊಮೇಟೊಕಾಯಿಗಳನ್ನು ಎಣ್ಣೆಯಲ್ಲಿ ಹುರಿದಿಟ್ಟುಕೊಳ್ಳಿ. ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವುಗಳನ್ನೂ ಬೇರೆಬೇರೆಯಾಗಿ ಎಣ್ಣೆಯಲ್ಲಿ ಹುರಿಯಿರಿ. ಹುರಿದ ಟೊಮೇಟೊಕಾಯಿ, ತೆಂಗಿನಕಾಯಿ ತುರಿ, ಹಸಿಮೆಣಸಿನಕಾಯಿ, ಎಳ್ಳುಪುಡಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಉಪ್ಪು ಬೆರೆಸಿ ನುಣ್ಣಗೆ ಅರೆಯಿರಿ. ಅರೆದ ಮಿಶ್ರಣಕ್ಕೆ ಸಾಸಿವೆ, ಇಂಗಿನ ಒಗ್ಗರಣೆ ಕೊಡಿ. ಟೊಮೆಟೊಕಾಯಿ ಚಟ್ನಿ ರೆಡಿ.
ಆಮಿಟಿ ದಾಲ್
ಬೇಕಾಗುವ ಸಾಮಗ್ರಿ:
ತೊಗರಿಬೇಳೆ- 2 ಕಪ್, ಕತ್ತರಿಸಿದ ಟೊಮೇಟೊ ಹಣ್ಣು-1 ಕಪ್, ಕರಿಬೇವಿನ ಎಲೆಗಳು-8, ಕತ್ತರಿಸಿದ ಹಸಿಮೆಣಸಿನಕಾಯಿ-2ರಿಂದ 3, ಕತ್ತರಿಸಿದ ಕೊತ್ತಂಬರಿ ಸೊಪ್ಪು- 1/4 ಕಪ್, ತೆಂಗಿನಕಾಯಿ ತುರಿ- 1/4 ಕಪ್, ಉಪ್ಪು- ರುಚಿಗೆ ತಕ್ಕಷ್ಟು, ತುರಿದ ಬೆಲ್ಲ- 1 ಚಮಚ, ಎಣ್ಣೆ- 4 ಚಮಚ, ಸಾಸಿವೆ- 1 ಚಮಚ, ಇಂಗು- 1/4 ಚಮಚ, ಅರಿಶಿನ-1/4 ಚಮಚ.
ಮಾಡುವ ವಿಧಾನ:
ತೊಗರಿಬೇಳೆಯನ್ನು ಬೇಯಿಸಿ, ಕಡೆದಿರಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಲಿಟ್ಟು ಸಾಸಿವೆ- ಇಂಗು- ಅರಿಶಿನ- ಕರಿಬೇವಿನ ಎಲೆಗಳನ್ನು ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ, ಹಸಿಮೆಣಸಿನಕಾಯಿ, ಟೊಮೇಟೊ ಹೋಳುಗಳನ್ನು ಹಾಕಿ ಬಾಡಿಸಿ. ಈ ಮಿಶ್ರಣಕ್ಕೆ, ಬೇಯಿಸಿದ ತೊಗರಿಬೇಳೆ, ಬೆಲ್ಲ, ಉಪ್ಪು ಹಾಕಿ ಕುದಿಸಿ. ಒಲೆಯಿಂದ ಕೆಳಗಿರಿಸಿ, ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು ಹಾಕಿದರೆ, ಆಮಿಟಿ ದಾಲ್ ರೆಡಿ.
ಸೇಬಿನ ಹಣ್ಣಿನ ಗೊಜ್ಜು
ಬೇಕಾಗುವ ಸಾಮಗ್ರಿ:
ಸೇಬಿನ ಹಣ್ಣಿನ ಹೋಳುಗಳು- 2 ಕಪ್, ಹುಣಸೆ ರಸ- 3 ಚಮಚ, ಬೆಲ್ಲದ ತುರಿ- 3 ಚಮಚ, ಅಚ್ಚ ಖಾರದ ಪುಡಿ- 3 ಚಮಚ ಉಪ್ಪು- ರುಚಿಗೆ ತಕ್ಕಷ್ಟು, ಮೆಂತ್ಯದ ಕಾಳುಗಳ ಪುಡಿ-1 ಚಮಚ, ಎಣ್ಣೆ-4 ಚಮಚ, ಸಾಸಿವೆ-1 ಚಮಚ, ಇಂಗು- 1/4 ಚಮಚ, ತೆಂಗಿನಕಾಯಿ ತುರಿ- 1/4 ಕಪ್, ಕತ್ತರಿಸಿದ ಕೊತ್ತಂಬರಿ ಸೊಪ್ಪು- 3 ಚಮಚ
ಮಾಡುವ ವಿಧಾನ:
ಸೇಬಿನ ಹಣ್ಣಿನ ಹೋಳುಗಳನ್ನು ಬೇಯಿಸಿ ಅರೆದಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ- ಇಂಗಿನ ಒಗ್ಗರಣೆ ಮಾಡಿ.
ಒಗ್ಗರಣೆಗೆ, ಹುಣಸೆ ರಸ, ಬೆಲ್ಲದ ತುರಿ, ಮೆಂತ್ಯದ ಕಾಳುಗಳ ಪುಡಿ, ಅರೆದ ಸೇಬಿನ ಹಣ್ಣು, ಖಾರದ ಪುಡಿ, ಉಪ್ಪು ಇವಿಷ್ಟನ್ನು ಹಾಕಿ ಕುದಿಸಿ. ಒಲೆಯಿಂದ ಕೆಳಗಿಳಿಸಿ, ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ, ಸೇಬಿನ ಹಣ್ಣಿನ ಗೊಜ್ಜು ತಯಾರು.
ಬಾದಾಮ್ ಪೂರಿ
ಬೇಕಾಗುವ ಸಾಮಗ್ರಿ:
ಮೈದಾ ಹಿಟ್ಟು- 1 ಕಪ್, ಚಿರೋಟಿ ರವೆ- 1/2 ಕಪ್, ಅಕ್ಕಿ ಹಿಟ್ಟು- 2 ಚಮಚ, ತುಪ್ಪ-1/2 ಕಪ್, ಸಕ್ಕರೆ- 1 ಕಪ್, ಏಲಕ್ಕಿ ಪುಡಿ- 1/2 ಚಮಚ, ಕೇಸರಿ ಬಣ್ಣ- 1/4 ಚಮಚ, ಜಾಕಾಯಿ ಪುಡಿ- 1/4 ಚಮಚ, ಲವಂಗದ ಪುಡಿ- 1/2 ಚಮಚ
ಮಾಡುವ ವಿಧಾನ:
ಮೈದಾ ಹಿಟ್ಟು, ಚಿರೋಟಿ ರವೆ, ಅಕ್ಕಿ ಹಿಟ್ಟುಗಳಿಗೆ, ಸ್ವಲ್ಪ ತುಪ್ಪ ಹಾಕಿ, ನೀರಿನೊಂದಿಗೆ ಗಟ್ಟಿಯಾಗಿ ಪೂರಿಯ ಹದಕ್ಕೆ ಕಲಿಸಿ, ಅರ್ಧ ಗಂಟೆ ನೆನೆಯಲು ಬಿಡಿ. ಬಾಣಲೆಯಲ್ಲಿ ಸಕ್ಕರೆ, ಅರ್ಧ ಕಪ್ ನೀರು ಹಾಕಿ ಕುದಿಯಲಿರಿಸಿ. ಸಕ್ಕರೆ ಕರಗಿ ಎಳೆ ಪಾಕ ಬರುತ್ತಿದ್ದಂತೆಯೇ, ಕೇಸರಿ ಬಣ್ಣ, ಏಲಕ್ಕಿ ಪುಡಿ, ಜಾಕಾಯಿ ಪುಡಿ, ಲವಂಗದ ಪುಡಿ, ಹಾಕಿ ಕಲಕಿ ಒಲೆಯಿಂದ ಕೆಳಗಿರಿಸಿ. ಕಲಸಿರಿಸಿದ ಹಿಟ್ಟಿನ ಮಿಶ್ರಣದಿಂದ ತೆಳುವಾದ ಪೂರಿಗಳನ್ನು ಲಟ್ಟಿಸಿ, ತ್ರಿಕೋನಾಕಾರ ಬರುವಂತೆ ಮಡಚಿ, ಅಂಚುಗಳನ್ನು ಸಮನಾಗಿ ಒತ್ತಿ. ಕಾಯಿಸಿದ ಎಣ್ಣೆಯಲ್ಲಿ ಕರಿಯಿರಿ. ಡಿನ್ಪೋಸೆಬಲ್ ನ್ಯಾಪ್‌ಕಿನ್ ಮೇಲೆ ಹರಡಿ ಹೆಚ್ಚಾಗಿರುವ ಎಣ್ಣೆಯನ್ನು ತೆಗೆದು, ಸಕ್ಕರೆ ಪಾಕದಲ್ಲಿ ಅದ್ದಿ ತೆಗೆದರೆ, ರುಚಿಯಾದ ಬಾದಾಮ್ ಪೂರಿ ರೆಡಿ.
ಡ್ರೈಪ್ರೂಟ್ಸ್ ಪಾಯಸ
ಬೇಕಾಗುವ ಸಾಮಗ್ರಿ:
ಗೋಡಂಬಿ ತುಂಡುಗಳು-10, ಬಾದಾಮಿ 7ರಿಂದ 8 ತುಂಡುಗಳು, ಅಂಜೂರದ ಹಣ್ಣು- 4, ದ್ರಾಕ್ಷಿ- 8, ತೆಂಗಿನ ತುರಿ-1/4 ಕಪ್, ಹಾಲು- 4 ಕಪ್, ಬೆಲ್ಲದ ಪುಡಿ- 1 ಕಪ್, ಏಲಕ್ಕಿ ಪುಡಿ- 1/2 ಚಮಚ, ಜಾಕಾಯಿ ಪುಡಿ- 1/4 ಚಮಚ, ಪಚ್ಚ ಕರ್ಪೂರ- 1/4 ಚಮಚ, ತುಪ್ಪ- 2 ಚಮಚ, ಕೇಸರಿ ಬಣ್ಣ- 1/4 ಚಮಚ
ಮಾಡುವ ವಿಧಾನ:
ಕೇಸರಿ ಬಣ್ಣವನ್ನು ಅರ್ಧ ಕಪ್ ಹಾಲಿನಲ್ಲಿ ಕಲಸಿಡಿ. ಒಣಹಣ್ಣುಗಳನ್ನು ಬೇರೆಬೇರೆಯಾಗಿ, ತುಪ್ಪದಲ್ಲಿ ಹುರಿದು, ತೆಂಗಿನಕಾಯಿ ತುರಿಯೊಂದಿಗೆ, ನುಣ್ಣಗೆ ಅರೆದಿಡಿ. ಅರೆದ ಮಿಶ್ರಣಕ್ಕೆ, ಎರಡು ಕಪ್ ಹಾಲು, ಬೆಲ್ಲ ಸೇರಿಸಿ ಕುದಿಸಿ. ಏಲಕ್ಕಿ ಪುಡಿ, ಜಾಕಾಯಿ ಪುಡಿ, ಪಚ್ಚ ಕರ್ಪೂರ, ಕರಗಿಸಿದ ಕೇಸರಿ ಬಣ್ಣ ತುಪ್ಪ ಸೇರಿಸಿ ಕಲಕಿ, ಒಲೆಯಿಂದ ಕೆಳಗಿರಿಸಿ. ತಣಿದ ಮೇಲೆ, ಹಾಲು ಬೆರೆಸಿದರೆ, ಪುಷ್ಟಿದಾಯಕ ಒಣಹಣ್ಣುಗಳ ಪಾಯಸ ಸವಿಯಲು ಸಿದ್ಧ.
ಸಕ್ಕರೆ ಹೋಳಿಗೆ
ಬೇಕಾಗುವ ಸಾಮಗ್ರಿ:
ಮೈದಾ ಹಿಟ್ಟು- 2 ಕಪ್, ಚಿರೋಟಿ ರವೆ-1 ಕಪ್, ಅಕ್ಕಿ ಹಿಟ್ಟು- 2 ಚಮಚ, ಸಕ್ಕರೆ ಪುಡಿ- 2 ಕಪ್, ತುರಿದ ಒಣಕೊಬ್ಬರಿ-3/4 ಕಪ್, ಗಸಗಸೆ ಪುಡಿ- 1/4 ಕಪ್, ಏಲಕ್ಕಿ ಪುಡಿ- 1/2 ಚಮಚ, ತುಪ್ಪ- 1 ಕಪ್
ಮಾಡುವ ವಿಧಾನ:
ಮೈದಾ ಹಿಟ್ಟು, ಚಿರೋಟಿ ರವೆ, ಅಕ್ಕಿ ಹಿಟ್ಟುಗಳನ್ನು ಸೇರಿಸಿ, ಸ್ವಲ್ಪ ಎಣ್ಣೆ ಹಾಕಿ ನೀರಿನೊಂದಿಗೆ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ಒಂದು ಗಂಟೆ ನೆನಯಲು ಬಿಡಿ. ಒಂದು ಚಮಚ ಮೈದಾ ಹಿಟ್ಟಿಗೆ, ಗಸಗಸೆ ಪುಡಿ, ಸಕ್ಕರೆ ಪುಡಿ, ಏಲಕ್ಕಿ ಪುಡಿ, ತುರಿದ ಒಣಕೊಬ್ಬರಿ, ಸ್ವಲ್ಪ ತುಪ್ಪ ಸೇರಿಸಿ, ಕಲಸಿ, ಹೂರಣ ತಯಾರಿಸಿಟ್ಟುಕೊಳ್ಳಿ. ಕಲಸಿಟ್ಟ ಕಣಕದಿಂದ ಲಿಂಬೆ ಗಾತ್ರದ ಉಂಡೆಗಳನ್ನು ಮಾಡಿ, ಅಂಗೈಯಲ್ಲಿ ತಟ್ಟಿ ಹೂರಣ ತುಂಬಿಸಿ, ಮೃದುವಾಗಿ ಲಟ್ಟಿಸಿ, ಕಾುಸಿದ ಕಾವಲಿಯ ಮೇಲೆ ಹರಡಿ. ಎರಡೂ ಬದಿಯನ್ನು ಹೊಂಬಣ್ಣ ಬರುವ ವರೆಗೆ ಬೇಯಿಸಿದರೆ ರುಚಿರುಚಿಯಾದ ಸಕ್ಕರೆ ಹೋಳಿಗೆ ರೆಡಿ.
ಮಿಶ್ರ ತರಕಾರಿಗಳ ವಡೆ
ಬೇಕಾಗುವ ಸಾಮಗ್ರಿ:
ಸಿಪ್ಪೆ ತೆಗೆದು ಕತ್ತರಿಸಿದ ಆಲೂಗಡ್ಡೆ- 1/2 ಕಪ್, ಕತ್ತರಿಸಿದ ಬೀನ್ಸ್- 1/4 ಕಪ್, ಕತ್ತರಿಸಿದ ಕ್ಯಾರೆಟ್- 1/4 ಕಪ್, ಕತ್ತರಿಸಿದ ಹಸಿಮೆಣಸಿನಕಾಯಿ- 5ರಿಂದ 6, ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು- 3 ಚಮಚ, ಕತ್ತರಿಸಿದ ಮೆಂತ್ಯದ ಸೊಪ್ಪು- 3 ಚಮಚ, ಅಚ್ಚ ಖಾರದ ಪುಡಿ- 4 ಚಮಚ, ಕಡಲೆ ಹಿಟ್ಟು- 2 ಕಪ್, ಅಕ್ಕಿ ಹಿಟ್ಟು- 3 ಚಮಚ, ಜೀರಿಗೆ ಪುಡಿ- 2 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- ಕರಿಯಲು
ಮಾಡುವ ವಿಧಾನ:
ಕಡಲೆ ಹಿಟ್ಟು, ಅಕ್ಕಿ ಹಿಟ್ಟುಗಳನ್ನು ಸೇರಿಸಿ, ದೋಸೆ ಹಿಟ್ಟಿನ ಹದಕ್ಕೆ ನೀರು ಹಾಕಿ ಕಲಸಿಡಿ. ತರಕಾರಿ ಹೋಳುಗಳನ್ನು ಬೇಯಿಸಿ. ಬಾಣಲೆಯಲ್ಲಿ ಮೂರು ಚಮಚ ಎಣ್ಣೆ ಕಾಯಲಿರಿಸಿ, ಬೇಯಿಸಿದ ತರಕಾರಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಮೆಂತ್ಯದ ಸೊಪ್ಪುಗಳನ್ನು ಹಾಕಿ ಬಾಡಿಸಿ. ಬಾಡಿಸಿದ ಮಿಶ್ರಣವನ್ನು ಒಲೆಯಿಂದ ಕೆಳಗಿರಿಸಿ, ಚೆನ್ನಾಗಿ ಮಸೆದು, ಖಾರದ ಪುಡಿ, ಜೀರಿಗೆ ಪುಡಿ ಉಪ್ಪು ಸೇರಿಸಿ, ಚಿಕ್ಕ ಚಿಕ್ಕ ಉಂಡೆಗಳನ್ನು ತಯಾರಿಸಿಡಿ. ತರಕಾರಿಗಳಿಂದ ತಯಾರಿಸಿದ ಉಂಡೆಗಳನ್ನು ಕಡಲೆಹಿಟ್ಟಿನ ಮಿಶ್ರಣದಲ್ಲದ್ದಿ ಕಾಯಿಸಿದ ಎಣ್ಣೆಯಲ್ಲಿ ಕರಿದರೆ, ರುಚಿರುಚಿಯಾದ ಮಿಶ್ರ ತರಕಾರಿಗಳ ವಡೆ ಸವಿಯಲು ಸಿದ್ಧ.
ಜಯಶ್ರೀ ಕಾಲ್ಕುಂದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.