ಪರಿಣಿತ ರವಿ ಎಡನಾಡು ಅವರ ಕೃತಿ ಅನಾವರಣ ಸಮಾರಂಭ
Team Udayavani, Apr 8, 2019, 12:48 PM IST
ಬದಿಯಡ್ಕ: ಬಾಗಿಲ ಹೊಸ್ತಿಲು ಒಳ-ಹೊರ ಜಗತ್ತಿನ ಸೇತುವೆಯಾಗಿದ್ದು, ಆ ಬಗ್ಗೆ ಭಾವನೆಗಳ ಬಂಧನ ಅಗತ್ಯವಿಲ್ಲ. ಹೆಣ್ಮಕ್ಕಳು ಹೊಸ್ತಿಲಲ್ಲಿ ನಿಲ್ಲ ಬಾರದೆಂಬ ಕಟ್ಟುಪಾಡುಗಳು ಖಂಡಿತಾ ಸಹ್ಯವಲ್ಲ. ಹೊಸ್ತಿಲಲ್ಲಿ ನಿಂತಿರುವುದರಿಂದ ಜಗತ್ತನ್ನೇ ಗೆಲ್ಲುವ, ಒಳ-ಹೊರಗನ್ನು ಅರ್ಥೈಸುವ ಸಾಮರ್ಥ್ಯ ಬೆಳೆಯುತ್ತದೆ ಎಂದು ಮಂಗಳೂರು ವಿವಿ ಕಾಲೇಜಿನ ಆಂಗ್ಲ ಸಾಹಿತ್ಯ ವಿಭಾಗದ ಮುಖ್ಯಸ್ಥೆ ಡಾ.ರಾಜಲಕ್ಷ್ಮಿ ಎನ್.ಕೆ. ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡು ಕುಂಬಳೆಯ ಸಿಂಪರ ಪ್ರಕಾಶನವು ಭಾನುವಾರ ಬದಿಯಡ್ಕದ ರಾಮಲೀಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಹಿತಿ, ಕವಯಿತ್ರಿ, ಭಾಷಾ ಸಂಶೋಧಕಿ ಪರಿಣಿತ ರವಿ ಎಡನಾಡು ಅವರ ಚೊಚ್ಚಲ ಎರಡು ಕೃತಿಗಳ ಅನಾವರಣ ಸಮಾರಂಭವನ್ನು ಉದ್ಘಾಟಿಸಿ, ಕಥಾ ಸಂಕಲನವಾದ ವಾತ್ಸಲ್ಯ ಸಿಂಧು ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಥೆಗಳ ಮೂಲಕ ಕುಟುಂಬ, ಸಮಾಜಗಳ ಸಂಬಂಧಗಳ ಬಗ್ಗೆ ಮಾತನಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದ ಅವರು ಕೃತಿಕರ್ತೆ ಪರಿಣಿತ ರವಿ ಅವರ ಕಾಲೇಜು ಸಂದರ್ಭದ ಜ್ಞಾನ ದಾಹದ ಬಗ್ಗೆ ಬೆಳಕು ಚೆಲ್ಲಿ ಸಾಧನೆಯ ಹೆಮ್ಮೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಸಂಬಂಧಗಳೊಂದಿಗೆ ಬದುಕನ್ನು ಕಟ್ಟಿನಿಲ್ಲಿಸುವ ಹೆಣ್ಣಿನ ಓಲಾಡುವ ದೋಣಿಯಂತಹ ಬದಕನ್ನು ದಡ ಮುಟ್ಟಿಸುವಲ್ಲಿ ಹೆಣಗುವ, ಕೆಲವೊಮ್ಮೆ ಹೋರಾಡಬೇಕಾದ ಅನಿವಾರ್ಯತೆಗಳೇ ಮೊದಲಾದ ನಿಲುವುಗಳನ್ನು ಪ್ರತಿಬಿಂಬಿಸುವ ವಾತ್ಸಲ್ಯ ಸಿಂಧು ಕೃತಿ ವರ್ತಮಾನದ ಬದುಕಿಗೆ ಕನ್ನಡಿ ಎಂದು ಅವರು ತಿಳಿಸಿದರು.
ಪರಿಣಿತ ರವಿ ಅವರ ಕವನ ಸಂಕಲನ ಸುಪ್ತ ಸಿಂಚನ ಕೃತಿಯನ್ನು ಈ ಸಂದರ್ಭ ನಿವೃತ್ತ ಪ್ರಾಂಶುಪಾಲೆ, ಸಾಹಿತಿ ಚಂದ್ರಕಲಾ ನಂದಾವರ ಅವರು ಬಿಡುಗಡೆಗೊಳಿಸಿದರು. ಅವರು ಮಾತನಾಡಿ, ಸಾಹಿತ್ಯದಿಂದ ಹಿತ ಉಂಟಾಗಬೇಕಾದುದು ಹೌದಾದರೂ, ಒಮ್ಮೊಮ್ಮೆ ಪ್ರತಿಭಟನೆಯ ದಾರಿಯನ್ನೂ ಹುಡುಕುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು.
ಸಾಹಿತ್ಯವು ಸಾಮಾಜಿಕ ಉತ್ಪನ್ನವಾಗಿದ್ದು, ಬರೆಯುತ್ತಾ ಅಭ್ಯಾಸವಾದಂತೆ ಅದು ಬದುಕಿನ ಬದ್ದತೆಯಾಗುತ್ತದೆ. ಕುಟುಂಬ, ಸಮಾಜವಿಲ್ಲದೆ ಸಾಹಿತ್ಯ ಗಟ್ಟಿಗೊಳ್ಳಲು ಸಾಧ್ಯವಿಲ್ಲ. ಯುವ ಸಮೂಹವನ್ನು ಓದಲು ಪ್ರೇರೇಪಿಸುವ, ಸಹ್ಯ ಸಾಹಿತ್ಯಗಳ ರಚನೆ ಆಗಬೇಕು ಎಂದು ತಿಳಿಸಿದರು. ಅಂತಃಕರಣದ ತುಮುಲಗಳಿಂದ ಬಿಡುಗಡೆ ಅಸಾಧ್ಯವಾದಾಗ ಸಂಬಂಧಗಳನ್ನು ಸ್ಥಿರತೆಯಲ್ಲಿ ಕೊಂಡೊಯ್ಯಲು ಬಿಡುಗಡೆಯ ರೂಪಕದ ಮೂಲಕ ಪರಿಣಿತ ರವಿ ಅವರು ತಮ್ಮ ಕವಿತೆಗಳಲ್ಲಿ ಮೂಡಿಸಿರುವ ಕಲ್ಪನೆಗಳು ಅದ್ಬುತವಾಗಿವೆ ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ಕಥಾ ಸಂಕಲನ ವಾತ್ಸಲ್ಯ ಸಿಂಧು ಕೃತಿಯ ಬಗ್ಗೆ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಹಾಗೂ ಕವನ ಸಂಕಲನ ಸುಪ್ತ ಸಿಂಚನ ಕೃತಿಯ ಬಗ್ಗೆ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಕೃತಿಪರಿಚಯ ನೀಡಿ ಮಾತನಾಡಿದರು.
ಸಾಹಿತಿ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ , ಮಾತನಾಡಿ, ಸಾಹಿತ್ಯವು ಅಗಾಧ ಸಾಧ್ಯತೆಗಳ ಸಾಗರವಾಗಿದ್ದು, ನಮ್ಮ ಮಿತಿಗೊಳಗೆ ಹೆಕ್ಕಿಕೊಳ್ಳುವ ಮೂಲಕ ಮುತ್ತುಗಳನ್ನು ಪೋಣಿಸಬಹುದಾಗಿದೆ. ವಿಚಾರಗಳನ್ನು ಸಂಗ್ರಹಿಸಿ ಜೀವನಾನುಭಗಳಿಂದ ಕಟ್ಟಿಕೊಡುವ ಅಕ್ಷರ ರೂಪಕಗಳಿಂದ ವ್ಯವಸ್ಥೆಗಳ ಸುಲಲಿತ ವ್ಯವಸ್ಥೆ ಸಾಧ್ಯವಾಗಿ ಸುಂದರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಶಿಕ್ಷಕಿಯಾಗಿ ವೈವಿಧ್ಯ ಅನುಭವಗಳನ್ನು ಹೊಂದಿರುವ ಪರಿಣಿತ ರವಿಯವರ ಅಗಾಧ ವಿಷಯ ಸಂಗ್ರಹಿಸುವಿಕೆ ಮಾದರಿಯಾಗಿದ್ದು ಇನ್ನಷ್ಟು ಕೃತಿಗಳು ಮೂಡಿಬರಲಿ ಎಂದು ಆಶಿಸಿದರು.
ವೇದಿಕೆಯಲ್ಲಿ ಸಿಂಪರ ಪ್ರಕಾಶನದ ರವೀಂದ್ರನಾಥ ಹೊಳ್ಳ ಉಪಸ್ಥಿತರಿದ್ದರು. ಕವಯಿತ್ರಿ ಪರಿಣಿತ ರವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬಿ.ಕೆ.ರಾವ್. ನಂದಾವರ ವಂದಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯುವ ಕವಿ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.ಸುಗಮ ಸಂಗೀತ ಗಾಯಕಿ ಜಯಶ್ರೀ ಶ್ರೀಕೃಷ್ಣಯ್ಯ ಅನಂತಪುರ ಅವರಿಂದ ಕವನಗಳ ಗಾಯನ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.