ಹೆಚ್ಚಲಿದೆ ಗಾಂಧಿನಗರದ ಖದರ್
ಇದುವರೆಗಿನ 14 ಚುನಾವಣೆಗಳಲ್ಲಿ 9 ಬಾರಿ ಗೆದ್ದದ್ದು ಬಿಜೆಪಿ
Team Udayavani, Apr 9, 2019, 6:00 AM IST
ಬಿಜೆಪಿ ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಗುಜರಾತ್‌ನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಹಿರಿಯ ತಲೆಯಾಳು ಲಾಲ್‌ಕೃಷ್ಣ ಅಡ್ವಾಣಿ ಹೆಸರು ಪ್ರಸ್ತಾಪವಾಗದೆ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೆಸರು ಇತ್ತು. 75 ವರ್ಷ ಮೀರಿದ ಹಿರಿಯ ನಾಯಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ಹಲವು ವದಂತಿಗಳು ಇದ್ದವು. ಅದು ನಿಜ ಎನ್ನುವಂತೆ ಬಿಜೆಪಿಯ ಹಲವು ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಇದು ಬಿಜೆಪಿಯ ಒಟ್ಟಾರೆ ಟಿಕೆಟ್ ನೀಡಿಕೆಯ ಸ್ಥಿತಿ. ಇನ್ನು ಗಾಂಧಿನಗರದಿಂದ ಅಮಿತ್ ಶಾಗೆ ಟಿಕೆಟ್ ನೀಡಿದ್ದರ ಹಿನ್ನೆಲೆ ಏನು? ಬಿಜೆಪಿ ಮತ್ತು ಸರ್ಕಾರದಲ್ಲಿ ಅಮಿತ್ ಶಾ ಯಾವ ಪಾತ್ರ ವಹಿಸಲಿದ್ದಾರೆ ಎಂಬ ಬಗ್ಗೆ ಹಲವು ವ್ಯಾಖ್ಯೆಗಳು ಮೂಡಲಾರಂಭಿಸಿವೆ. ಗೆಲುವಿನ ಬಗ್ಗೆ ಬಿಜೆಪಿಗೆ ಯಾವುದೇ ಶಂಕೆ ಬೇಡ ಎಂಬ ವಾದಗಳೇ ಹೆಚ್ಚಾಗಿವೆ. ಗುಜರಾತ್‌ನಲ್ಲಿ ಬಿಜೆಪಿಯದ್ದೇ ಸರ್ಕಾರವಿದೆ. ಇನ್ನು ಕ್ಷೇತ್ರದ ಹಾಲಿ ಸಂಸದರೂ ಹಿರಿಯರಾಗಿರುವ ಅಡ್ವಾಣಿಯವರು.
ಸದ್ಯ ಅಮಿತ್ ಶಾ ರಾಜ್ಯಸಭೆ ಸದಸ್ಯರು. ಮಾ.30ರಂದು ತಮ್ಮ ಮೊದಲ ಲೋಕಸಭೆ ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಎನ್‌ಡಿಎ ಮೈತ್ರಿಕೂಟದ ಶಿವಸೇನೆ, ಅಕಾಲಿದಳ, ಲೋಕಜನ ಶಕ್ತಿ ಪಕ್ಷದ ಪ್ರಮುಖರು, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಸೇರಿದಂತೆ ಬಿಜೆಪಿಯ ಇತರ ಪ್ರಮುಖರು ಇದ್ದರು. ಹೀಗಾಗಿ, ಒಂದು ರೀತಿಯಲ್ಲಿ ಅಮಿತ್ ಶಾ ತಮ್ಮ ಶಕ್ತಿಪ್ರದರ್ಶನವನ್ನೂ ನಡೆಸಿದ್ದಾರೆ. ಬಿಜೆಪಿ ಗೆಲ್ಲುತ್ತದೆ ಎನ್ನುವುದಕ್ಕೆ ಮತ್ತೂಂದು ಕಾರಣವೂ ಇದೆ. ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಶಾಸಕರೇ ಗೆದ್ದಿದ್ದಾರೆ. ಶಾ ಸ್ಪರ್ಧಿಸಿದ್ದಾರೆ ಎಂಬ ಕಾರಣಕ್ಕೆ ಉತ್ತರ ಗುಜರಾತ್ ಭಾಗದಲ್ಲಿ ಕಣಕ್ಕೆ ಇಳಿದಿರುವ ತನ್ನ ಅಭ್ಯರ್ಥಿಗಳಿಗೂ ನೆರವಾಗಲಿದೆ ಎನ್ನುವುದು ಬಿಜೆಪಿಯ ಮತ್ತೂಂದು ಲೆಕ್ಕಾಚಾರ. ಮೇ 23ರ ಬಳಿಕ ಚುನಾವಣೆಯಲ್ಲಿ ಗೆದ್ದ ಬಳಿಕ ನವದೆಹಲಿಯಲ್ಲಿ ಅಮಿತ್ ಶಾ ಯಾವ ರೀತಿಯ ಭೂಮಿಕೆ ವಹಿಸಲಿದ್ದಾರೆ ಎನ್ನುವುದೇ ಈಗ ಚರ್ಚೆಯ ಅಂಶ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅಡ್ವಾಣಿಯವರೇ ಎರಡನೇ ಹಂತದ ಅಗ್ರ ಸ್ಥಾನದಲ್ಲಿದ್ದರು. ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಪ್ರಮುಖ ನಿರ್ಧಾರಗಳಲ್ಲಿ ಅವರದ್ದೇ ಒಪ್ಪಿಗೆಯ ಮುದ್ರೆ ಇರುತ್ತಿತ್ತು. ಅದೇ ರೀತಿಯಲ್ಲಿ ಮೇ 23ರ ನಂತರ ರಚನೆಯಾಗುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಗಳಲ್ಲಿ ಒಂದನ್ನು ಅವರಿಗೆ ನೀಡುವ ಸಾಧ್ಯತೆಯೇ ಹೆಚ್ಚು. ಎಲ್.ಕೆ. ಅಡ್ವಾಣಿಯವರು ಗೃಹ ಸಚಿವರಾಗಿದ್ದರು. ಅಂದರೆ ಇಲ್ಲಿ ಹೇಳಲು ಪ್ರಯತ್ನ ಮಾಡಿರುವುದು ಅಮಿತ್ ಶಾ ಗೃಹ ಸಚಿವರಾಗುತ್ತಾರೆ ಎಂಬುದಂತೂ ಅಲ್ಲ. ಆದರೆ ಅಟಲ್ ಬಿಹಾರಿ ವಾಜಪೇಯಿ ಅವರು ಅಡ್ವಾಣಿಯವರನ್ನು ಅತ್ಯಂತ ನಂಬಿಕಸ್ಥ ಎಂದು ಬಿಂಬಿಸಿದ್ದರು. ಜತೆಗೆ ಪ್ರಧಾನಮಂತ್ರಿಯ ಬಳಿಕ ಅವರೇ ಮತ್ತೂಂದು ಅಧಿಕಾರದ ಕೇಂದ್ರವಾಗಿದ್ದರು. ಅದೇ ಮಾದರಿಯ ಅಧಿಕಾರ ಹಂಚಿಕೆಯ ವ್ಯವಸ್ಥೆಯನ್ನು ಸುಧಾರಿತ ರೂಪದಲ್ಲಿ ಜಾರಿಗೊಳಿಸಲು ಹಾಲಿ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ ಎನ್ನುವುದು ಸ್ಪಷ್ಟ.
ಮತ್ತೂಂದು ಪ್ರಮುಖ ಅಂಶವನ್ನು ಉಲ್ಲೇಖೀಸುವುದಿದ್ದರೆ, ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ದೇಶ ಪ್ರವಾಸ ಕೈಗೊಂಡಷ್ಟು ಬೇರೆ ಯಾರೂ ಮಾಡಿಲ್ಲ. ಹೀಗಾಗಿ, ಯಾವ ರಾಜ್ಯ ಏನು, ಎಷ್ಟು, ಯಾವ ರಾಜ್ಯದಲ್ಲಿ ಏನು ಮಾಡಬೇಕು ಎಂಬ ರಾಜಕೀಯ ದೂರದೃಷ್ಟಿಯೂ ಇಬ್ಬರಲ್ಲಿಯೂ ಇದೆ. ಹೀಗಾಗಿ, ಅವರು ಕೇಂದ್ರ ಸರ್ಕಾರದಲ್ಲಿ ಎರಡನೇ ಪ್ರಧಾನಸೂತ್ರವಾಗಲಿದ್ದಾರೆ.ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ 1989ರ ಚುನಾವಣೆಯಿಂದ ಬಿಜೆಪಿ ಜಯಸಾಧಿಸಲು ಶುರು ಮಾಡಿತ್ತು. ಈಗ ಜನವಿಕಲ್ಪ ಮೋರ್ಚಾ ಎಂಬ ಸಂಘಟನೆ ರಚಿಸಿಕೊಂಡಿರುವ ಶಂಕರ್ ಸಿಂಗ್ ವಘೇಲಾ ಈ ಗೆಲುವಿನ ಕಾರಣಕರ್ತರು. 1996-1998ರ ವರೆಗೆ ದಿ.ಅಟಲ್ ಬಿಹಾರಿ ವಾಜಪೇಯಿ ಸಂಸದರಾಗಿದ್ದರು. 1998ರ ಚುನಾವಣೆಯಿಂದ 2014ರ ವರೆಗೆ ಎಲ್.ಕೆ.ಅಡ್ವಾಣಿಯವರೇ ಗೆದ್ದಿದ್ದರು. 1967ರಲ್ಲಿ ಈ ಕ್ಷೇತ್ರಕ್ಕೆ ನಡೆದಿದ್ದ ಮೊದಲ ಚುನಾವಣೆಯಲ್ಲಿ ಗೆದ್ದದ್ದು ಕಾಂಗ್ರೆಸ್‌ನ ಸೋಮ್‌ಚಂದ್ ಭಾಯ್ ಸೋಲಂಕಿ 1,56, 148 ಮತ ಪಡೆದು ಗೆದ್ದಿದ್ದರು. ಒಟ್ಟು 14 ಚುನಾವಣೆಗಳಲ್ಲಿ ಬಿಜೆಪಿಯೇ ಒಂಭತ್ತು ಬಾರಿ ಗೆದ್ದಿದೆ. ಹೀಗಾಗಿ, ಈ ಕ್ಷೇತ್ರ ದೇಶದ ಗಮನ ಸಹಜವಾಗಿಯೇ ಸೆಳೆದಿದೆ.
2014ರ ಫಲಿತಾಂಶ ಎಲ್.ಕೆ.ಅಡ್ವಾಣಿ 7,73,539 (ಬಿಜೆಪಿ)
ಕೀರ್ತಿ ಭಾಯ್ ಈಶ್ವರ್ ಭಾಯ್ ಪಟೇಲ್ 2,90, 419 (ಕಾಂಗ್ರೆಸ್)
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಸಂವಿಧಾನದ 370, 35ಎ ವಿಧಿ ರದ್ದು ಮಾಡುವ ಬಗ್ಗೆ ಘೋಷಣೆ ಮಾಡಿದೆ. ಇದು ನಿಜಕ್ಕೂ ಕಳವಳಕಾರಿ ವಿಚಾರ. ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಾಗಲೇ ಪರಿಸ್ಥಿತಿ ಕೈಮೀರಿ ಹೋಗಿದೆ.
ಮೆಹಬೂಬಾ ಮುಫ್ತಿ, ಪಿಡಿಪಿ ನಾಯಕಿ
ಮಾರಕವಾಗಿರುವ ಆ ಎರಡು ವಿಧಿಗಳನ್ನು ರದ್ದು ಮಾಡದೆ ಬೇರೆ ದಾರಿಯೇ ಇಲ್ಲ. ಏಕೆಂದರೆ ಕೆಲವರು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಮಂತ್ರಿ ಇರಬೇಕೆಂದು ವಾದ ಮಂಡಿಸುತ್ತಾರೆ.
ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ
ಮನವೊಲಿಸಿದರೆ ಮಾರ್ಕು
ಮತದಾನ ಪ್ರಮಾಣ ಹೆಚ್ಚಾಗುವಂತೆ ಮಾಡಲು ಇನ್ನಿಲ್ಲದ ಪ್ರಯತ್ನ ಮಾಡಲಾಗುತ್ತಿದೆ. ನಾಟಕ, ಸಿನಿಮಾ ಹೀಗೆ ಏನೇನೋ ಕಸರತ್ತುಗಳು. ಲಕ್ನೋದ ಕ್ರೈಸ್ಟ್ ಚರ್ಚ್ ಕಾಲೇಜಿನಲ್ಲಿ ಮತದಾನ ಮಾಡಬೇಕೆಂದು ಹೆತ್ತವರ ಮನವೊಲಿಸಿ ಹಕ್ಕು ಚಲಾವಣೆ ಮಾಡಿಸಿದರೆ ಅಂಥ ವಿದ್ಯಾರ್ಥಿಗೆ 10 ಅಂಕ ಕೊಡಲಾಗುತ್ತದೆ. ಹೀಗೆಂದು ಪ್ರಾಂಶುಪಾಲ ಆರ್.ಕೆ.ಚಟರ್ಜಿ ಹೇಳಿದ್ದಾರೆ. ಲಕ್ನೋದಲ್ಲಿ ಮೇ 6ಕ್ಕೆ ಮತದಾನ ನಡೆಯಲಿದೆ. ಅದಕ್ಕಾಗಿ ಕಾಲೇಜಿನ ಮುಂಭಾಗದಲ್ಲಿ ಬ್ಯಾನರ್ ಹಾಕಲಾಗಿದೆ.
ಟೈಲರ್‌ಗಳಿಗೆ ಬಿಡುವೇ ಇಲ್ಲ
ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೋ ಸೋಲುತ್ತಾರೋ ಗೊತ್ತಿಲ್ಲ. ಕೆಲವೊಂದು ಟ್ರೆಂಡ್‌ಗಳಿಂದಾಗಿ ಟೈಲರ್‌ಗಳಿಗೆ ಬಿಡುವಿಲ್ಲದ ಕೆಲಸ. ಪಂಜಾಬ್ ಮತ್ತು ಇತರ ಉತ್ತರ ಭಾರತದ ರಾಜ್ಯಗಳಲ್ಲಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಶೈಲಿಯ ಕುರ್ತಾಗಳಿಗೆ ಭಾರಿ ಬೇಡಿಕೆ ಕುದುರಿದೆ. 2014ರ ಲೋಕಸಭೆ, 2017ರ ವಿಧಾನಸಭೆ ಚುನಾವಣೆಗಿಂತ ಈ ಬಾರಿ ವ್ಯಾಪಾರ ಜೋರಾಗಿದೆಯಂತೆ. 2,500 ರೂ.ಗಳಿಂದ ಶುರುವಾಗಿ 18 ಸಾವಿರ ರೂ. ವರೆಗಿನ ಕುರ್ತಾಗಳನ್ನು ಹೊಲಿಸಿಕೊಳ್ಳುತ್ತಿದ್ದಾರಂತೆ ಜನರು.
ಮೈತ್ರಿ ಆಗುತ್ತಾ ಇಲ್ಲವಾ?
ನವದೆಹಲಿಯಲ್ಲಿ ಮತದಾನ ನಡೆಯಲು ಇನ್ನೂ ಒಂದು ತಿಂಗಳು ಇದೆ. 7 ಕ್ಷೇತ್ರಗಳನ್ನು ಹೊಂದಿರುವಲ್ಲಿ ಆಪ್, ಕಾಂಗ್ರೆಸ್ ಮೈತ್ರಿ ಉಂಟಾಗಬೇಕೋ ಬೇಡವೋ ಎಂಬ ಬಗ್ಗೆ ಇನ್ನು ತೀರ್ಮಾನವಾಗಿಲ್ಲ. ಆಪ್‌ನ ಹಿರಿಯ ನಾಯಕರೊಬ್ಬರ ಪ್ರಕಾರ ಕಾಂಗ್ರೆಸ್ ಜತೆಗೆ ಮೈತ್ರಿ ನಡೆಸಲು ಎಲ್ಲವೂ ಅಂತಿಮವಾಗಿದೆ ಎಂದಿದ್ದರು. ಕಾಂಗ್ರೆಸ್ ಪ್ರಕಾರ ಅಂಥಾದ್ದು ಏನೂ ಇಲ್ಲವಂತೆ. ಹೀಗಾಗಿ, ಮೈತ್ರಿ ಮಾಡಿಕೊಳ್ಳಬೇಕೋ ಬೇಡವೋ ಎಂಬ ಬಗ್ಗೆ ಯಾರಿಗೂ ಏನೂ ಗೊತ್ತಾಗುತ್ತಿಲ್ಲ.
ನರೇಂದ್ರ ಮೋದಿಯವರು ತಮ್ಮ 5 ವರ್ಷಗಳ ವೈಫಲ್ಯವನ್ನು ಅಯೋಧ್ಯೆಯ ಪುಣ್ಯಭೂಮಿಯಲ್ಲಿ ಹೂತಿಟ್ಟು, ಅಲ್ಲಿ ನೆಮ್ಮದಿಯಾಗಿದ್ದ ರಾಮನನ್ನು ಕರೆದುಕೊಂಡು ಚುನಾವಣ ಪ್ರಚಾರಕ್ಕೆ ಹೊರಟಿದ್ದಾರೆ. ನರೇಂದ್ರ ಮೋದಿ ಅವರೇ, ಇನ್ನೆಷ್ಟು ಕಾಲ ಜನರ ಭಾವನೆಗಳನ್ನೇ
ಬಂಡವಾಳ ಮಾಡಿಕೊಂಡು ಮೋಸ ಮಾಡುತ್ತೀರಾ? 5 ವರ್ಷಗಳಲ್ಲಿ ಒಮ್ಮೆಯಾದರೂ ಮಂದಿರ ನೆನಪಾಗಿರಲಿಲ್ಲವೇ?
ಸಿದ್ದರಾಮಯ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.