ದೋಸ್ತಿ ಸರಕಾರ ಶೀಘ್ರ ಪತನ : ಪ್ರಧಾನಿ ಮೋದಿ
Team Udayavani, Apr 10, 2019, 6:30 AM IST
ಚಿತ್ರದುರ್ಗ/ಮೈಸೂರು: ಲೋಕಸಭೆ ಚುನಾವಣೆ ಕಣ ರಂಗೇರಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಎರಡು ಕಡೆಗಳಲ್ಲಿ ಚುನಾವಣ ರ್ಯಾಲಿ ನಡೆಸಿದ್ದು, ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದರು. ಕರ್ನಾಟಕದಲ್ಲಿ ಸೋತ ಎರಡು ಪಕ್ಷಗಳು ಕೇವಲ ಅಧಿಕಾರದ ಆಸೆಗಾಗಿ ಒಂದಾಗಿವೆ. ಈ ಸರಕಾರ ಶೀಘ್ರವೇ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಮಂಗಳವಾರ ಚಿತ್ರದುರ್ಗ ಮತ್ತು ಮೈಸೂರಿನಲ್ಲಿ ವಿಜಯ ಸಂಕಲ್ಪ ರ್ಯಾಲಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಜನರಿಂದ ತಿರಸ್ಕರಿಸಲ್ಪಟ್ಟು ಸೋತ ಎರಡು ಪಕ್ಷಗಳು ಕೇವಲ ಅಧಿಕಾರದ ಆಸೆಗಾಗಿ ಒಂದಾಗಿವೆ. ಈ ಎರಡೂ ಪಕ್ಷಗಳಿಗೆ ದೇಶದ ಕುರಿತು ಯಾವುದೇ ಚಿಂತನೆ ಇಲ್ಲ. ಜನರ ಸಮಸ್ಯೆ ಬಗ್ಗೆ ಚಿಂತೆ ಇಲ್ಲ. ಕೇವಲ ಕುರ್ಚಿ ಉಳಿಸಿಕೊಳ್ಳುವುದೇ ಎರಡೂ ಪಕ್ಷಗಳ ಕಾಯಕ ವಾಗಿದೆ. ಕರ್ನಾಟಕದಲ್ಲಿ ಸದ್ಯ ಇರುವುದು “ಮಹಾಮಿಲಾವಟ್’ ಸರಕಾರ. ಈ ಸರಕಾರವನ್ನು ನಿಯಂತ್ರಿಸುತ್ತಿರುವವರು ಬೇರೆಯವರು. ಈ ಸರಕಾರದ ರಿಮೋಟ್ ಕಂಟ್ರೋಲ್ ದಿಲ್ಲಿಯಲ್ಲಿದೆ. ಒಂದು ದಿನ ದೋಸ್ತಿ ಸರಕಾರದ ಒಬ್ಬ ಅಲ್ಲಿಗೆ ಓಡುತ್ತಾನೆ. ಮಾರನೇ ದಿನ ಮತ್ತೂಬ್ಬ ಮತ್ತೂಂದು ಕಡೆ ಓಡುತ್ತಾನೆ.
ಹೀಗೆ ಓಡುವವರನ್ನು ಹಿಡಿದಿಟ್ಟುಕೊಳ್ಳುವುದೇ ಎರಡೂ ಪಕ್ಷಗಳ ಮುಖಂಡರಿಗೆ ದೊಡ್ಡ ಕೆಲಸ ವಾಗಿದೆ. ಅಧಿಕಾರಕ್ಕಾಗಿ ಜನಹಿತ ಮರೆತಿರುವ ಈ ಎರಡೂ ಪಕ್ಷದವರು ಒಂದು ರಾತ್ರಿ ವಿರುದ್ಧ ದಿಕ್ಕಿನಲ್ಲಿ ಓಡಿ ಹೋಗಲಿದ್ದಾರೆ. ಇವರನ್ನು ಓಡಿಸುವ ಕಾಲ ಸನ್ನಿಹಿತವಾಗಿದೆ ಎಂದರು.
ಕೇಂದ್ರದ ಬಿಜೆಪಿ ಸರಕಾರ ಹೇಳಿದ್ದನ್ನು ಮಾಡಿ ತೋರಿಸಿದೆ. ರೈತರ ನೆರವಿಗಾಗಿ ಧನಸಹಾಯ ನೀಡುವ ಯೋಜನೆ ಜಾರಿಗೆ ತಂದು 3 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ಮೊದಲ ಕಂತಿನ ಹಣ ಹಾಕಲಾಗಿದೆ. 1.5 ಕೋಟಿ ರೈತರಿಗೆ ಎರಡನೇ ಕಂತೂ ಪಾವತಿಯಾಗಿದೆ. ಆದರೆ ದೋಸ್ತಿ ಸರಕಾರದ ಸಾಲಮನ್ನಾ ಯೋಜನೆ ಇನ್ನೂ ಸರಿಯಾಗಿ ಜಾರಿಯಾಗಲೇ ಇಲ್ಲ. ರೈತರ ಖಾತೆಗೆ ಹಣ ಬಂದಿಲ್ಲ.
ಬದಲಾಗಿ ಬ್ಯಾಂಕ್‌ನಿಂದ ವಾರಂಟ್ ಜಾರಿಯಾಗುತ್ತಿದೆ. ಇದು ರಾಜ್ಯ ಸರಕಾರದ ಕಾರ್ಯವೈಖರಿಗೆ ಸಾಕ್ಷಿ ಎಂದು ಮೋದಿ ರಾಜ್ಯ ಸರಕಾರಕ್ಕೆ ತಿರುಗೇಟು ನೀಡಿದರು.
ಜಾತಿ ವಿಭಜನೆಯ ಷಡ್ಯಂತ್ರ
ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಜಾತಿ ವಿಘಟನೆಯಲ್ಲಿ ತೊಡಗಿವೆ. ಕಳೆದ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಲಿಂಗಾಯತ ಸಮುದಾಯವನ್ನು ವಿಭಜಿಸಲು ಮುಂದಾದರು. ಕಾಂಗ್ರೆಸ್ ಜಾತಿ ಮುಂದಿಟ್ಟು ಹೇಗೆ ಆಟ ಆಡಬೇಕು ಎಂಬ ಆಲೋಚನೆಯಲ್ಲೇ ಇರುತ್ತದೆ.
ಕಾಂಗ್ರೆಸ್, ಜೆಡಿಎಸ್‌ಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಚಿತ್ರದುರ್ಗದ ವೀರಮದಕರಿ ನಾಯಕ, ಒನಕೆ ಓಬವ್ವ ಶತ್ರುಗಳ ಆಕ್ರಮಣವನ್ನು ಎದುರಿಸಿ ನಾಡನ್ನು ಹೇಗೆ ರಕ್ಷಿಸಿದರೋ ಹಾಗೆಯೇ ಎಲ್ಲ ಚೌಕಿದಾರರು ಸೇರಿ ಕಾಂಗ್ರೆಸ್, ಮತ್ತು ಜೆಡಿಎಸ್‌ನಿಂದ ದೇಶ, ರಾಜ್ಯವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್‌ನಿಂದ ಪೀಡನೆಗೊಳಗಾದ ದೇಶಕ್ಕೆ ಈಗ ನ್ಯಾಯ ಸಿಗಬೇಕಿದೆ. ನ್ಯಾಯ ಕೊಡಿಸಲು ದೇಶದ ಚೌಕಿದಾರ ಬದ್ಧನಾಗಿದ್ದು, ನ್ಯಾಶನಲ್ ಹೆರಾಲ್ಡ್, ಕಾಮನ್‌ವೆಲ್ತ್ ಹಗರಣ, 2ಜಿ ಸ್ಪೆಕ್ಟÅಂ ಮೊದಲಾದ ಹಗರಣ ಮಾಡಿದವರಿಗೆ, ಸಿಖ್ ದಂಗೆ ಮಾಡಿಸಿದವರಿಗೆ ಶಿಕ್ಷೆ ಕೊಡಿಸದೆ ಬಿಡುವುದಿಲ್ಲ. ಕುಟುಂಬಕ್ಕಾಗಿ ಇಷ್ಟೆಲ್ಲ ಮಾಡಿದವರಿಗೆ ತಕ್ಕ ಶಾಸ್ತಿ ಆಗಲೇಬೇಕಿದೆ. ಇವರಿಗಾಗಿ ಜೈಲಿನ ಬಾಗಿಲು ಈಗಾಗಲೇ ತೆರೆದಿದೆ ಎಂದರು.
ರಾಹುಲ್‌ಗೆ ಜೆಡಿಎಸ್ ಹೆದರಿಕೆ
ಮೈಸೂರಿನ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಕರ್ನಾಟಕದಲ್ಲೇ ಒಂದು ಸುರಕ್ಷಿತ ಕ್ಷೇತ್ರ ಆರಿಸಿಕೊಳ್ಳಬಹುದಿತ್ತು. ಆದರೆ ಅವರಿಗೆ ಜೆಡಿಎಸ್ ಮೇಲೆ ನಂಬಿಕೆ ಇಲ್ಲ. ಜತೆಗೆ ಇಲ್ಲಿನ ಜನರ ಮನಸ್ಸನ್ನು ಅರಿತ ಅವರು ಕೇರಳಕ್ಕೆ ಹೋಗಿದ್ದಾರೆ. ದೇವೇಗೌಡರು ಸೇಡು ತೀರಿಸಿಕೊಳ್ಳುವರೆಂಬ ಭಯದಿಂದಲೇ ರಾಹುಲ್ ಕೇರಳಕ್ಕೆ ಹೋಗಿದ್ದಾರೆ ಎಂದು ಲೇವಡಿ ಮಾಡಿದರು.
ಪ್ರಧಾನಿ ಟೀಕೆಗೆ ಸಿಎಂ ಗರಂ
ಬೆಂಗಳೂರು: ಕರ್ನಾಟಕದಲ್ಲಿ ಎರಡು ಸೋತ ಪಕ್ಷಗಳು ಅಧಿಕಾರ ನಡೆಸುತ್ತಿವೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಕಿಡಿಕಾರಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಕರ್ನಾಟಕದಲ್ಲಿ ಬಿಜೆಪಿ ಗೆದ್ದಿದೆಯಾ? ಬಿಜೆಪಿಗೆ ಬಹುಮತ ಇದೆಯಾ? ಎಂದು ಪ್ರಶ್ನಿಸಿದ್ದಾರೆ. ಕರ್ನಾಟಕದಲ್ಲಿ ನಾನು ಏನೂ ಮಾಡಿಯೇ ಇಲ್ಲವೇ? ರೈತರ ಸಾಲ ಮನ್ನಾ ಆಗಿಲ್ಲವೇ? ಅಂಕಿ-ಅಂಶ ಗೊತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಪದೇ ಪದೆ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ದೂರಿದರು. ನಾನು ಬದುಕಿರುವುದು ಕರ್ನಾಟಕದಲ್ಲಿ. ನಾನೂ ಭಾರತೀಯ, ನಾನು ಹೇಗೆ ಇರಬೇಕು ಎಂಬುದನ್ನು ನರೇಂದ್ರ ಮೋದಿ ಅವರಿಂದ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು.
ನಿಮ್ಮ ಓಟ್ ಬ್ಯಾಂಕ್ ಎಲ್ಲಿ ?
ಚಿತ್ರದುರ್ಗ: ನಾವು ಪಾಕಿಸ್ಥಾನದ ಮೇಲೆ ಸರ್ಜಿಕಲ್ ಸ್ಟ್ರೆ „ಕ್ ಮಾಡಿದರೆ ಪಾಕ್‌ಗೆ ನೋವಾಗಬೇಕು. ಆದರೆ ವಿಚಿತ್ರ ಎಂದರೆ ಈ ದಾಳಿಯಿಂದ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ ಕಣ್ಣೀರು ಬರುತ್ತಿದೆ ಎಂದು ಮೋದಿ ಲೇವಡಿ ಮಾಡಿದರು.
ಪಾಕ್ ಬೆಂಬಲಿತ ಉಗ್ರರು ನಮ್ಮ ದೇಶದ ಮೇಲೆ ದಾಳಿ ನಡೆಸಿ ದಾಗ ಹಿಂದಿನ ಸರಕಾರಗಳು ಹೆದರಿ ಕೂರುತ್ತಿದ್ದವು. ಆದರೆ ನಮ್ಮ ಸರಕಾರ ಉಗ್ರರಿಗೆ ತಕ್ಕ ಪಾಠ ಕಲಿಸಿದೆ. ಪಾಕ್‌ಗೆ ಕನಸಿನಲ್ಲೂ ಭಾರತದ ಸೈನಿಕರು ಕಾಣುತ್ತಿದ್ದಾರೆ. ಆದರೆ ಭಾರತದ ಕೆಲವರಿಗೆ ಇದರಿಂದ ನೋವಾಗುತ್ತಿದೆ. ಇದೇ ಅಚ್ಚರಿಯ ಸಂಗತಿ ಎಂದರು.
ಉಗ್ರರ ಮೇಲೆ ದಾಳಿ ನಡೆಸಿದ್ದನ್ನು ಎಲ್ಲಿಯೂ ಮುಕ್ತವಾಗಿ ಹೇಳಬಾರದು. ಇದರಿಂದ ಒಂದು ಸಮುದಾಯಕ್ಕೆ ನೋವಾಗಲಿದೆ ಎಂದು ಇಲ್ಲಿನ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಉಗ್ರರ ಸಂಹಾರ ಮಾಡಿದರೆ ಇವರಿಗ್ಯಾಕೆ ನೋವಾಗಬೇಕು ಎಂಬುದು ತಿಳಿಯುತ್ತಿಲ್ಲ. ಇವರ ಓಟ್ ಬ್ಯಾಂಕ್ ಈ ದೇಶದಲ್ಲಿದೆಯೋ ಅಥವಾ ಪಾಕಿಸ್ಥಾನದಲ್ಲಿದೆಯೋ ಎಂದು ವ್ಯಂಗ್ಯವಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.