![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 11, 2019, 3:00 AM IST
ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಅವರ ಪರ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬುಧವಾರ ಯಲಹಂಕದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಮತಯಾಚಿಸಿದರು.
ಬೆಂಗಳೂರು ದಕ್ಷಿಣ ಕ್ಷೇತ್ರದ ಸೀಟು ಹಂಚಿಕೆ ವಿಚಾರದಲ್ಲಿ ಉಂಟಾಗಿದ್ದ ಗೊಂದಲ ಶಮನಕ್ಕಾಗಿ ಇತ್ತೀಚೆಗಷ್ಟೆ ಬನಶಂಕರಿ ದೇವಸ್ಥಾನದಿಂದ ಸಾರಕ್ಕಿವರೆಗೂ ಅಮಿತ್ ಶಾ ರೋಡ್ ಶೋ ನಡೆಸಿದ್ದರು. ಬುಧವಾರ ಸಂಜೆ ಯಲಹಂಕದ ಓಲ್ಡ್ ಟೌನ್ ಸುತ್ತಮುತ್ತಲಿನ ಪ್ರದೇಶದಲ್ಲಿ ರೋಡ್ ಶೋ ನಡೆಸಿ, ಬಿಜೆಪಿ ಕಾರ್ಯರ್ತರನ್ನು ಹುರಿದುಂಬಿಸಿದರು.
ಸೇಬು ಹಣ್ಣಿನ ಹಾರದ ಸ್ವಾಗತ: ಮೋದಿ ಮತ್ತೂಮ್ಮೆ ಎಂಬ ಸಂದೇಶವಿರುವ ವಿಶೇಷ ವಿನ್ಯಾಸದ ಕೇಸರಿ ಬಣ್ಣದ ವಾಹನವನ್ನು ಹೂಗಳಿಂದ ಸಿಂಗರಿಸಲಾಗಿತ್ತು. ಯಲಹಂಕ ಓಲ್ಡ್ ಟೌನ್‌ನ ಕಾಮಾಕ್ಷಮ್ಮ ಬಡವಾಣೆಯಿಂದ ಸಂಜೆ 5 ಗಂಟೆಗೆ ಆರಂಭವಾಗಬೇಕಿದ್ದ ರೋಡ್ ಶೋ ಸಂಜೆ 6.20ರ ಸುಮಾರಿಗೆ ಶುರುವಾಯಿತು.
ಸುಮಾರು 300 ಕೆ.ಜಿ. ಸೇಬುಹಣ್ಣುಗಳನ್ನು ಬಳಸಿ ನಿರ್ಮಿಸಿದ್ದ ಬೃಹತ್ ಹಾರವನ್ನು ವಾಹನದ ಮುಂಭಾಗದಲ್ಲಿ ಇರಿಸಲಾಗಿತ್ತು. ಅಮಿತ್ ಶಾ, ಅಭ್ಯರ್ಥಿ ಬಚ್ಚೇಗೌಡ ಹಾಗೂ ಶಾಸಕ ಎಸ್.ಆರ್.ವಿಶ್ವನಾಥ್ ವಾಹನ ಏರುತ್ತಿದ್ದಂತೆ ಕ್ರೇನ್ ನೆರವಿನೊಂದಿಗೆ ಸೇಬು ಹಣ್ಣಿನ ಹಾರವನ್ನು ವಾಹನದ ಹತ್ತಿರ ಕೊಂಡೊಯ್ಡು, ನಂತರ ವಾಪಾಸ್ ತೆಗೆಯಲಾಯಿತು.
ಅಲ್ಲಿಂದ ಆರಂಭಗೊಂಡ ರೋಡ್ ಶೋ ಯಲಹಂಕದ ಟಿಎಂಸಿ ರಸ್ತೆ, ಬಿಎಂಟಿಸಿ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ ರಸ್ತೆ ಮಾರ್ಗವಾಗಿ ನಾಡಪ್ರಭುಕೆಂಪೇಗೌಡ ವೃತ್ತದ ಬಳಿ ಬರುತ್ತಿದ್ದಂತೆ ಅಮಿತ್ ಶಾ ಅವರು ಅಲ್ಲಿ ತೆರೆದ ವಾಹನ ಇಳಿದು ಹೊರಟರು. ಬಳಿಕ ಬಚ್ಚೇಗೌಡ, ವಿಶ್ವನಾಥ್ ಇತರರು ರ್ಯಾಲಿಯನ್ನು ಯಲಹಂಕ ನ್ಯೂಟೌನ್‌ವರೆಗೂ ಮುಂದುವರಿಸಿದರು.
ದಾರಿಯೂದ್ದಕ್ಕೂ ಪುಷ್ಪಾರ್ಚನೆ: ರೋಡ್ ಶೋ ಸಾಗಿರುತ್ತಿದ್ದ ದಾರಿಯೂದ್ದಕ್ಕೂ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ರಸ್ತೆಯ ಎರಡೂ ಬದಿಗಳಲ್ಲಿನ ಮನೆ, ಕಟ್ಟಡ, ಮಳಿಗೆಗಳ ಮೇಲ್ಭಾಗದಿಂದ ಅಮಿತ್ ಶಾ ಸೇರಿದಂತೆ ಮುಖಂಡರಿಗೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದ ದೃಶ್ಯ ಸಾಮಾನ್ಯವಾಗಿತ್ತು.
ರಾಜಾಜಿಸಿದ ಬಿಜೆಪಿ ಬಾವುಟ: ಅಮಿತ್ ಶಾ ರೋಡ್ ಶೋ ಸಾಗಿಬಂದ ಮಾರ್ಗವನ್ನು ಸಂಪೂರ್ಣವಾಗಿ ಬಿಜೆಪಿ ಬಾವುಟ, ಬಂಟಿಂಗ್ಸ್‌ನಿಂದ ಅಲಂಕರಿಸಲಾಗಿತ್ತು. ಬಹುತೇಕರು ಬಿಜೆಪಿ ಬಾವುಟ ಹಿಡಿದು ಸಾಗಿದರು. ಒಂದು ಕಡೆ ಬಿಜೆಪಿ, ಇನ್ನೊಂದು ಭಾಗದಲ್ಲಿ ಮೋದಿ ಮತ್ತೂಮ್ಮೆ ಎಂದು ಬರೆದಿರುವ ಕೇಸರಿ ಬಣ್ಣದ ಟೋಪಿ ಧರಿಸಿದ್ದ ಕಾರ್ಯಕರ್ತರು ಟಮಟೆ ವಾದ್ಯಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಮೋದಿ ಅಗೈನ್, ನಾನೂ ಚೌಕಿದಾರ್, ನೇಷನ್ ಫಸ್ಟ್ ಮೊದಲಾದ ವಾಕ್ಯಗಳನ್ನು ಬರೆದಿರುವ ಟೀ-ಶರ್ಟ್‌ಗಳನ್ನು ಕಾರ್ಯಕರ್ತರು ಧರಿಸಿದ್ದರು. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆಳೇತ್ತರದ ಕಟೌಟ್‌ಗಳನ್ನು ಕಾರ್ಯಕರ್ತರು ರ್ಯಾಲಿಯುದ್ದಕ್ಕೂ ಹಿಡಿದು ಸಾಗಿದರು.
ಕಾಣದ ರಾಜ್ಯ ಮಟ್ಟದ ನಾಯಕರು: ಅಮಿತ್ ಶಾ ರೋಡ್ ಶೋ ನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಹಾಗೂ ಶಾಸಕ ವಿಶ್ವನಾಥ್ ಹೊರತುಪಡಿಸಿ ರಾಜ್ಯಮಟ್ಟದ ಅಥವಾ ಬೆಂಗಳೂರು ಮಹಾನಗರದ ಬಿಜೆಪಿ ನಾಯಕರ್ಯಾರು ಇರಲಿಲ್ಲ. ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ, ಅರವಿಂದ ಲಿಂಬಾವಳಿ ಭಾಗವಹಿಸಲಿದ್ದಾರೆ ಎಂದು ಮೊದಲು ಬಿಜೆಪಿ ಪ್ರಕಟಿಸಿತ್ತು. ಆದರೆ ರೋಡ್ ಶೋನಲ್ಲಿ ರಾಜ್ಯಮಟ್ಟದ ನಾಯಕರು ಕಾಣಲಿಲ್ಲ.
You seem to have an Ad Blocker on.
To continue reading, please turn it off or whitelist Udayavani.