ಸಿಆರ್‌ಝಡ್ ಸಮಸ್ಯೆ ಬಗೆಹರಿಸಿ ಕರಾವಳಿ ಅಭಿವೃದ್ಧಿ ಪಡಿಸುವೆ; ಅಭ್ಯುದಯ ಸಂವಾದ
ಅಭ್ಯರ್ಥಿಗಳೊಂದಿಗೆ ಅಭ್ಯುದಯ ಸಂವಾದ
Team Udayavani, Apr 11, 2019, 6:00 AM IST
ಐವತ್ತರ ಸಂಭ್ರಮದಲ್ಲಿರುವ ಉದಯವಾಣಿ ತನ್ನ ಕೇಂದ್ರ ಕಚೇರಿ ಮಣಿಪಾಲದಲ್ಲಿ ಬುಧವಾರ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಗಳೊಂದಿಗೆ ಸಂವಾದ ಆಯೋಜಿಸಿತ್ತು. ಬಿಜೆಪಿಯ ಶೋಭಾ ಕರಂದ್ಲಾಜೆ ಸಂಪಾದಕೀಯ ಮಂಡಳಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದರು. ಅದರ ಆಯ್ದ ಭಾಗ ಇಲ್ಲಿದೆ.
ಹಿಂದಿನ ಬಾರಿ ಇಎಸ್‌ಐ ಆಸ್ಪತ್ರೆ ಭರವಸೆ ನೀಡಿದಿರಿ. ಆದರೆ ಅದು ಸಾಧ್ಯವಾಗಲಿಲ್ಲ. ರಾಷ್ಟ್ರೀಯ ಹೆದ್ದಾರಿ 66 ಕಾಮಗಾರಿ ಪೂರ್ಣಗೊಂಡಿಲ್ಲವಲ್ಲ?
ಇಎಸ್‌ಐ ಆಸ್ಪತ್ರೆ ಮಂಜೂರಾಗಲು ರಾಜ್ಯದ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಸಂಖ್ಯಾ ಪಟ್ಟಿ ಅಗತ್ಯ. ನಾನು ಹಲವು ಬಾರಿ ಇಲಾಖೆ ಕಾರ್ಯದರ್ಶಿಯವರಲ್ಲಿ ಮಾತನಾಡಿದರೂ ಸಿಗಲಿಲ್ಲ. ಅದು ದೊರೆತ ಬಳಿಕ ಆಸ್ಪತ್ರೆ ಸ್ಥಾಪನೆ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಚಿಕ್ಕಮಗಳೂರಿನಲ್ಲಿ ಇಎಸ್‌ಐ ಚಿಕಿತ್ಸಾಲಯ ಮತ್ತು ವಿಭಾಗೀಯ ಕಚೇರಿ ಆರಂಭವಾಗಿದೆ. ರಾ. ಹೆ. 66 ಕಾಮಗಾರಿಯನ್ನು ಯುಪಿಎ ಸರಕಾರವು ಕಪ್ಪುಪಟ್ಟಿಗೆ ಸೇರಬೇಕಾದ ನವಯುಗ ಕಂಪೆನಿಗೆ ಟೆಂಡರ್ ಕೊಟ್ಟಿತ್ತು. ಹೀಗಾಗಿ ಅಗತ್ಯವಿರುವಲ್ಲಿ ಸರ್ವಿಸ್ ರಸ್ತೆ, ಓವರ್ ಬ್ರಿಜ್- ಅಂಡರ್ ಪಾಸ್ ಯಾವುದೂ ಪೂರ್ಣವಾಗಿಲ್ಲ. ನಾನು ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಜತೆ ಮಾತನಾಡಿದ ಬಳಿಕ ಹಣಕಾಸು ಖಾತ್ರಿ ಕೊಟ್ಟು ಕೆಲಸ ಮುಂದುವರಿಯುವಂತೆ ಮಾಡಿದರು. ಇತ್ತೀಚಿನ ದಿಶಾ ಸಭೆಯಲ್ಲಿಯೂ ಶೀಘ್ರ ಕೆಲಸ ಮುಗಿಸುವುದಾಗಿ ಹೇಳಿದ್ದಾರೆ.
ನಿಮ್ಮನ್ನು ಜನರು ಏಕಾಗಿ ಪುನರಾಯ್ಕೆಗೊಳಿಸ ಬೇಕು? ಸಚಿವೆಯಾಗಿ ಮಾಡಿದ ಕಾರ್ಯದಕ್ಷತೆ ಸಂಸದೆಯಾಗಿ ಕಾಣಲಿಲ್ಲವೆಂಬ ಟೀಕೆ ಇದೆಯಲ್ಲ?
ಬ್ರಹ್ಮಾವರದಲ್ಲಿ ಪಾಸ್‌ಪೋರ್ಟ್ ಕಚೇರಿ, ರಾಜ್ಯಕ್ಕೆ ಸಿಕ್ಕ ಏಕೈಕ ಸಖೀ ಕೇಂದ್ರ ಉಡುಪಿಗೆ ಮಂಜೂರು, ಚಿನ್ನಾಭರಣ ತಯಾರಿ ತರಬೇತಿ ಕೇಂದ್ರ, ಕೊಂಕಣ ರೈಲ್ವೇಯಿಂದ ರಾಮಕೃಷ್ಣ ಹೆಗಡೆ ಕೌಶಲಾಭಿವೃದ್ಧಿ ಕೇಂದ್ರ, ಕೇಂದ್ರೀಯ ವಿದ್ಯಾಲಯ ಆರಂಭ ಇತ್ಯಾದಿ ಕೆಲಸಗಳನ್ನು ಮಾಡಿರುವೆ. ಉಪ್ಪೂರಿನಲ್ಲಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಕಟ್ಟಡದ ಕೆಲಸ ನಡೆಯುತ್ತಿದ್ದು, ಈ ವರ್ಷ ತರಗತಿ ನಡೆಯಲಿದೆ. ಕೇಂದ್ರೀಯ ವಿದ್ಯಾಲಯದ ಸ್ವಂತ ಕಟ್ಟಡವೂ ಎರಡು ವರ್ಷದೊಳಗೆ ಅಲೆವೂರಿನ 10 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದೆ. ಕೇಂದ್ರೀಯ ರಸ್ತೆ ನಿಧಿಯಿಂದ 569 ಕೋ.ರೂ. ಬಂದಿದ್ದು, ಉಡುಪಿ ಜಿಲ್ಲೆಗೆ 285 ಕೋ.ರೂ. ದೊರೆತಿದೆ. ಅಲ್ಲದೇ ಕೇಂದ್ರ ಸರಕಾರದ ಉಜ್ವಲ, ಆಯುಷ್ಮಾನ್ ಭಾರತ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಮಲ್ಪೆ – ತೀರ್ಥಹಳ್ಳಿ ರಸ್ತೆಯ ಅಭಿವೃದ್ಧಿ ಆಗುತ್ತಿದೆ. ಕೇಂದ್ರದ ಯೋಜನೆಗಳ ಜಾರಿಗೆ ರಾಜ್ಯ ಸರಕಾರದ ಸಹಕಾರ ಸಿಗುತ್ತಿಲ್ಲ.
ಉದ್ಯೋಗ ಸೃಷ್ಟಿ, ಸರಕಾರಿ ನೇಮಕಾತಿ, ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸ್ಪಷ್ಟ ಯೋಚನೆಗಳಿವೆಯೇ?
ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಸರಕಾರಿ ನೇಮಕಾತಿಗಳಿಗೆ ತಡೆ ಹಾಕಿಸಿ ಸುತ್ತೋಲೆ ಹೊರಡಿಸಿದ ಸ್ಯಾಮ್ ಪಿತ್ರೋಡಾ ಅವರು ಈಗ ರಾಹುಲ್ ಗಾಂಧಿಯವರಿಗೆ ಸಲಹೆ ಗಾರರಾಗಿ 22 ಲಕ್ಷ ಉದ್ಯೋಗ ಸೃಷ್ಟಿ ಮಾಡು ವುದಾಗಿ ಹೇಳುತ್ತಿದ್ದಾರೆ. ಹಿಂದಿನ ಯುಪಿಎ ಸರಕಾರವಿರುವಾಗ ಉದ್ಯೋಗ ಸೃಷ್ಟಿ ಏಕೆ ಆಗಲಿಲ್ಲ? ನಮ್ಮ ಸರಕಾರ ಮುದ್ರಾದಂತಹ ಅನೇಕ ಯೋಜನೆಗಳ ಮೂಲಕ ಇದನ್ನು ಸಾಧ್ಯ ಗೊಳಿಸುತ್ತಿದೆ. ಕೈಗಾರಿಕೆಗಳು ಬರಬೇಕು. ಜತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಉಡುಪಿ ಜಿಲ್ಲೆಗೆ 25 ಕೋ.ರೂ. ಮಂಜೂರಾದರೂ ಸಿಆರ್‌ಝಡ್ ನಿಯಮದ ಕಾರಣದಿಂದ ಪೂರ್ಣ ಬಳಕೆಯಾಗಲಿಲ್ಲ. ಒಳನಾಡಿನಲ್ಲಿ, ಹಿನ್ನೀರ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ನಿತಿನ್ ಗಡ್ಕರಿಯವರಲ್ಲಿ ವಿನಂತಿಸಿದ್ದೇನೆ.
ಅಡಿಕೆ, ಕಾಳುಮೆಣಸು ಸಮಸ್ಯೆ ಕುರಿತು ಯೋಚಿಸಿದ್ದೀರಾ?
ಅಡಿಕೆ ಖರೀದಿಗೆ ವಾಣಿಜ್ಯ ಸಚಿವೆಯಾಗಿದ್ದಾಗ ನಿರ್ಮಲಾ ಸೀತಾರಾಮನ್ ಮೂಲಕ ಆಮದು ಸುಂಕವನ್ನು ಶೇ.140 ಹೆಚ್ಚಿಸಿದ ಪರಿಣಾಮ ಅನುಕೂಲವಾಯಿತು. ಕಾಳುಮೆಣಸಿಗೆ ಆಮದು ಸುಂಕ ಜಾಸ್ತಿ ಮಾಡುವಾಗ ಕೇರಳದಿಂದ ಒಬ್ಬರು ತಡೆಯಾಜ್ಞೆ ತಂದರು. ಈಗ ಕಳ್ಳಸಾಗಣೆ ಮೂಲಕ ಬರುತ್ತಿರುವ ಕರಿಮೆಣಸು ತಡೆಯುವಂತೆ ಕೇಂದ್ರ ಗೃಹ ಸಚಿವರಲ್ಲಿ ವಿನಂತಿಸಿದ್ದೇನೆ. ಇಂಡೋನೇಶ್ಯಾ ದಂಥ ದೇಶಗಳಿಂದ ಸಾರ್ಕ್ ದೇಶಗಳ ಮೂಲಕ ಆಗುತ್ತಿದ್ದ ಆಮದನ್ನು ತಡೆ ಹಿಡಿದಿದ್ದೇವೆ.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಏನು ಮಾಡಿದ್ದೀರಿ? ಏನು ಮಾಡುತ್ತೀರಿ?
ಅಮೃತ್ ಯೋಜನೆಯ ಮೂಲಕ ವಾರಾಹಿ ನೀರನ್ನು ಉಡುಪಿಗೆ ತರುವ ಪ್ರಯತ್ನ ನಡೆದಿದೆ. ರಾಜ್ಯ ಸರಕಾರ ಅವೈಜ್ಞಾನಿಕವಾಗಿ ಟೆಂಡರ್ ಕರೆದು ಸಮಸ್ಯೆ ಮಾಡಿದೆ. ಅದನ್ನು ಸರಿಪಡಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವೆ.
ಟೋಲ್ ಸಂಗ್ರಹದಿಂದ ಸ್ಥಳೀಯರಿಗೆ ಸಮಸ್ಯೆ ಯಾಗುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ?
ಟೋಲ್ ಸಂಗ್ರಹವನ್ನು ರಾಷ್ಟ್ರೀಯ ನೀತಿ ಪ್ರಕಾರ ಜಾರಿಗೊಳಿಸಲಾಗುತ್ತಿದೆ. ಒಂದು ಬಾರಿ ತೆರಿಗೆ ಪಾವತಿಸಿದ ಬಳಿಕ ಮತ್ತೆ ಟೋಲ್ ಸಂಗ್ರಹಿಸುವುದು ಸರಿಯಲ್ಲ. ದೇಶದ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಿಸಿದ 8-10 ರಸ್ತೆಗಳಿಗೆ ಟೋಲ್‌ನಿಂದ ಮುಕ್ತಿಗೊಳಿಸಲಾಗಿದೆ. ಇದೇ ಕ್ರಮವನ್ನು ನಮ್ಮಲ್ಲೂ ಅನ್ವಯಿಸುವಂತೆ ಕೇಂದ್ರ ಸಚಿವರಲ್ಲಿ ವಿನಂತಿಸಿರುವೆ. ಟೋಲ್ ಕುರಿತು ಮರು ಚಿಂತನೆ ನಡೆಸಬೇಕಿದೆ, ಆ ಬಗ್ಗೆ ಕ್ರಿಯಾಶೀಲವಾಗುವೆ.
ಕಸ್ತೂರಿರಂಗನ್ ವರದಿ ಪ್ರಕಾರ ಒಕ್ಕಲೆಬ್ಬಿಸುವ ಭಯ ಇದೆಯಲ್ಲ?
ಸರ್ವೋಚ್ಚ ನ್ಯಾಯಾಲಯ ಕೊಟ್ಟ ಅವಧಿ ಯೊಳಗೆ ಪ್ರತಿ ರಾಜ್ಯ ಸರಕಾರಗಳು ನೈಸರ್ಗಿಕ ಮತ್ತು ಸಾಂಸ್ಕೃತಿಕ ಸಮೀಕ್ಷೆಯನ್ನು ಮಾಡಬೇಕಿತ್ತು. ಆದರೆ ಕೇರಳ ಮಾತ್ರ ಪೂರೈಸಿತು. ನಮ್ಮ ರಾಜ್ಯ ಸರಕಾರ ಮಾಡಲೇ ಇಲ್ಲ. ಆದರೂ ನಾವು ಪ್ರಧಾನಿಯವರನ್ನು ಭೇಟಿ ಮಾಡಿ ನ್ಯಾಯವಾದಿಗಳನ್ನು ನೇಮಿಸಿ ವಾದ ಮಂಡಿಸುವಂತೆ ಮಾಡಿದೆವು. ಇದರ ಪರಿಣಾಮ ರೆಡ್‌ಝೋನ್‌ನಲ್ಲಿ 2 ಲ. ಚದರಡಿ ಕಟ್ಟಡವನ್ನು ಕಟ್ಟಬಾರದು, ಗಣಿಗಾರಿಕೆ ಮಾಡಬಾರದು ಎಂದು ಸೂಚಿಸಿದೆ. ಇದರಿಂದ ಕೃಷಿಗೆ ತೊಂದರೆ ಇಲ್ಲ.
ಮರಳು ಸಮಸ್ಯೆ ಜಿಲ್ಲೆಯ ಆರ್ಥಿಕತೆಗೆ ಹೊಡೆತ ಕೊಟ್ಟಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ನಿಮ್ಮ ಬದ್ಧತೆ ಏನು?
ಮರಳುಗಾರಿಕೆ ನಡೆಯದಂತೆ ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಿದವರು ಯಾರು? ಲಕ್ಷಾಂತರ ರೂ. ವಕೀಲರಿಗೆ ಕೊಟ್ಟು ಪ್ರಕರಣ ದಾಖಲಿಸಲು ಇವರಿಗೆ ಸಾಧ್ಯವೆ? ಇದರ ಹಿಂದಿರುವ ಕಾಣದ ಕೈ ಯಾರದು ಎಂಬುದು ಸ್ಪಷ್ಟವಾದರೆ ಸಮಸ್ಯೆ ಬಗೆಹರಿಯಲಿದೆ. ಈಗಿನ ಮತ್ತು ಹಿಂದಿನ ಡಿಸಿಯವರಲ್ಲಿ ಏಳು ಸದಸ್ಯರ ಸಭೆ ಕರೆಯಲು ಹೇಳಿದ್ದೆವು. ಸಾಧ್ಯವಾಗಿಲ್ಲ. ಎ. 18ರ ಚುನಾವಣೆ ಬಳಿಕ ಹತ್ತು ದಿನದೊಳಗೆ ಇತ್ಯರ್ಥಗೊಳಿಸಬೇಕು. ಇಲ್ಲವಾದರೆ ಮುಂದಿನ ಹಾದಿ ನಿರ್ಧರಿಸುತ್ತೇವೆ.
ಮಲ್ಪೆ ಬಂದರು ಅರ್ಧಕ್ಕೇ ನಿಂತಿದೆಯಲ್ಲ?
ಮಲ್ಪೆಯಲ್ಲಿ ಮೀನುಗಾರಿಕೆ ದೋಣಿಗಳ ಒತ್ತಡ ಹೆಚ್ಚುತ್ತಿದ್ದು ಇದರ ಪರಿಹಾರಕ್ಕೆ ಹೆಜಮಾಡಿ ಬಂದರು ಮತ್ತು ಕೋಡಿಕನ್ಯಾನ ಬಂದರು ಅಭಿವೃದ್ಧಿಪಡಿಸಬೇಕು. ಹೆಜಮಾಡಿಗೆ 13.5 ಕೋ.ರೂ. ಕೋಡಿ ಕನ್ಯಾನಕ್ಕೆ 6.5 ಕೋ.ರೂ. ಮಂಜೂರಾಗಿದೆ. ಮಲ್ಪೆ ಬಂದರಿನ ವಿಸ್ತರಣೆಗೆ ಟೆಂಡರ್ ಕರೆಯಬೇಕಾಗಿದೆ.
ಮೀನುಗಾರರ ನಾಪತ್ತೆ ಪ್ರಕರಣ ಬದಿಗೆ ಸರಿಯಿತೇ?
ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆ ಯಾದ ಪ್ರಕರಣ ತಿಳಿದ ಕೂಡಲೇ ನಮ್ಮೆಲ್ಲ ಶಕ್ತಿ ಹಾಕಿ ಪತ್ತೆಗೆ ಪ್ರಯತ್ನಿಸಿದೆವು. ಇತ್ತೀಚೆಗೆ ರಕ್ಷಣಾ ಸಚಿವೆ ಮಲ್ಪೆಗೆ ಹೋದಾಗ ನೌಕಾ ಪಡೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿಸುವುದಾಗಿ ಹೇಳಿದರು. ಮೀನುಗಾರರು ದಿಲ್ಲಿಗೆ ಹೋಗಿ ನೌಕಾ ಪಡೆ ಮತ್ತು ಮೀನುಗಾರ ತಜ್ಞರ ಜಂಟಿ ಸಮೀಕ್ಷೆಯ ಬೇಡಿಕೆ ಇರಿಸಿದ್ದಾರೆ. ಇದಕ್ಕೆ ನೌಕಾ ಪಡೆ ಹಿರಿಯ ಅಧಿಕಾರಿಗಳು ಒಪ್ಪಿದ್ದಾರೆ. ಜಂಟಿ ಸರ್ವೇಕ್ಷಣೆಗೆ ದಿನ ನಿಗದಿಪಡಿಸಲಾಗುವುದು.
ಮಲ್ಪೆ ಸೈಂಟ್ ಮೇರೀಸ್ ದ್ವೀಪದಲ್ಲಿ ಜೆಟ್ಟಿ ನಿರ್ಮಾಣ ಬೇಡಿಕೆ ಹಾಗೇ ಇದೆ?
ಮಲ್ಪೆ ಸೈಂಟ್ ಮೇರೀಸ್ ದ್ವೀಪದಲ್ಲಿ ಫ್ಲೋಟಿಂಗ್ ಜೆಟ್ಟಿ ನಿರ್ಮಿಸಲು ಪ್ರಸ್ತಾವನೆಯನ್ನು ಕಳುಹಿಸಿಕೊಡಲು ಡಾ| ವಿಶಾಲ್ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಹೇಳಿದ್ದೆ. ಇದು ರಾಜ್ಯ ಸರಕಾರ ಮಾಡಬೇಕಾದ ಕೆಲಸ. ಅದು ಆಸಕ್ತಿ ತಳೆಯಬೇಕಿದೆ. ಈ ರಾಜ್ಯ ಸರಕಾರದ ಆದ್ಯತೆಗಳೇ ತಿಳಿಯುತ್ತಿಲ್ಲ. ಮತ್ತೆ ಈ ನಿಟ್ಟಿನಲ್ಲಿ ಕಾರ್ಯನಿರತವಾಗುವೆ.
ಮುಂದಿನ ಐದು ವರ್ಷಗಳಲ್ಲಿ ನಿಮ್ಮ ಆದ್ಯತೆಗಳೇನು?
ಜಾರ್ಜ್ ಫೆರ್ನಾಂಡಿಸ್ ಆರಂಭಿಸಿದ ಕೊಂಕಣ ರೈಲ್ವೇ ದ್ವಿಪಥಕ್ಕೆ ಪ್ರಯತ್ನಿಸುವೆ. ಮಾರ್ಗ ವಿದ್ಯುದೀಕರಣ ನಡೆಯುತ್ತಿದೆ. ಬ್ರಹ್ಮಾವರದಲ್ಲಿ ತೆರೆಯಲಾದ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಪೂರ್ಣಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡುವೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದರೂ ಪರಿಸರ ಮತ್ತು ಸಿಆರ್‌ಝಡ್ ನಿಯಮದಿಂದ ತೊಂದರೆಯಾಗುತ್ತಿದೆ. ಈ ಸಂಬಂಧ ಪರಿಹಾರಕ್ಕಾಗಿ ಕಾರ್ಯೋನ್ಮುಖ ವಾಗುವೆ. ಚಿಕ್ಕಮಗಳೂರಿನಲ್ಲಿ ಸ್ಪೈಸ್ ಪಾರ್ಕ್ ಮಾಡಬೇಕೆಂದಿದ್ದೆ. ಆದರೆ ಜನರು ಪೆಪ್ಪರ್ ಪಾರ್ಕ್‌ನ ಬೇಡಿಕೆ ಇಟ್ಟಿದ್ದು, ಸೂಕ್ತವಾದುದನ್ನು ಜಾರಿಗೊಳಿಸುವೆ.
ಪ್ರವಾಸೋದ್ಯಮ ಅಭಿವೃದ್ಧಿಗೆ ಉಡುಪಿ ಜಿಲ್ಲೆಗೆ 25 ಕೋ.ರೂ. ಮಂಜೂರಾದರೂ ಸಿಆರ್‌ಝಡ್ ನಿಯಮದ ಕಾರಣದಿಂದ ಪೂರ್ಣ ಬಳಕೆಯಾಗಲಿಲ್ಲ. ಒಳನಾಡಿನಲ್ಲಿ, ಹಿನ್ನೀರ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ನಿತಿನ್ ಗಡ್ಕರಿಯವರಲ್ಲಿ
ವಿನಂತಿಸಿದ್ದೇನೆ.
– ಶೋಭಾ ಕರಂದ್ಲಾಜೆ, ಅಭ್ಯರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.