ಮೈತ್ರಿ ಗೆಲುವಿಗೆ ಜಂಟಿ ಕಸರತ್ತು
Team Udayavani, Apr 13, 2019, 3:00 AM IST
ಮೊದಲನೇ ಹಂತದಲ್ಲಿ ಮತದಾನ ನಡೆಯುವ ಹಳೆ ಮೈಸೂರು ಭಾಗದಲ್ಲಿ ಚುನಾವಣಾ ಪ್ರಚಾರದ ಕಾವು ಮುಗಿಲು ಮುಟ್ಟಿದ್ದು, ಮೈತ್ರಿ ಪಕ್ಷದ ನಾಯಕರು ಶುಕ್ರವಾರ ಬಿರುಸಿನ ಪ್ರಚಾರ ನಡೆಸಿದರು. ಮಂಡ್ಯದ ನಾಗಮಂಗಲದಲ್ಲಿ ದೇವೇಗೌಡ, ಸಿದ್ದರಾಮಯ್ಯ ಜಂಟಿ ಪ್ರಚಾರ ನಡೆಸಿದರೆ, ತುಮಕೂರಿನಲ್ಲಿ ಸಿಎಂ ಕುಮಾರಸ್ವಾಮಿ, ತಂದೆ ದೇವೇಗೌಡರ ಪರ ಮತಯಾಚಿಸಿದರು. ಸಚಿವ ಡಿಕೆಶಿ ಸಾಥ್ ನೀಡಿದರು. ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ದೇವೇಗೌಡರವರ ಸೊಸೆ ಡಾ.ಸೌಮ್ಯಾ ರಮೇಶ್, ಮಾವನ ಪರ ಮತಯಾಚಿಸಿದರು.
ಇದೇ ವೇಳೆ ಹಾಸನದ ಚನ್ನರಾಯಪಟ್ಟಣದಲ್ಲಿ ಪ್ರಜ್ವಲ್ ರೇವಣ್ಣ ಅವರು ತಮ್ಮ ಪ್ರಚಾರದ ವೇಳೆ ಬಿಜೆಪಿ ಹಾಗೂ ಬಿಜೆಪಿ ಅಭ್ಯರ್ಥಿ ವಿರುದ್ಧ ಹರಿಹಾಯ್ದರು. ಈ ಮಧ್ಯೆ, ಮಂಡ್ಯದ ಮಳವಳ್ಳಿ, ಕೆಆರ್‌ಪೇಟೆಗಳಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾರ ಪ್ರಚಾರದ ಅಬ್ಬರ ಶುಕ್ರವಾರವೂ ಮುಂದುವರಿದಿತ್ತು. ಅವರಿಗೆ ದರ್ಶನ್ ಸಾಥ್ ನೀಡಿದರು. ಮುಖಂಡರ ಪ್ರಚಾರ ಭಾಷಣದ ಝಲಕ್ ಇಲ್ಲಿದೆ.
ಕಾವೇರಿಗಾಗಿ ಹೋರಾಡುವೆ, ಶಕ್ತಿ ಕೊಡಿ: ದೇವೇಗೌಡ
* ಕಾವೇರಿ ನೀರಿಗಾಗಿ ಸಂಸತ್‌ನಲ್ಲಿ ಕುಡಿಯುವ ನೀರಿನ ಬಾಟಲ್ ಇಟ್ಟುಕೊಂಡು ಹೋರಾಟ ನಡೆಸಿದ್ದೆ. ಈಗಲೂ ನೆಲದ ನೀರಿಗಾಗಿ ಹೋರಾಟ ನಡೆಸಲು ಸಿದ್ಧನಿದ್ದೇನೆ. ನನಗೆ ಶಕ್ತಿ ತುಂಬಿ.
* ತಮಿಳುನಾಡಿಗೆ ಹೆಚ್ಚುವರಿ ನೀರು ದೊರಕಿದಾಗ ಅಂದಿನ ತಮಿಳುನಾಡು ಸಿಎಂ ಜಯಲಲಿತಾ ಇದು ನನ್ನ ಹುಟ್ಟುಹಬ್ಬದ ಕೊಡುಗೆ ಎಂದು ಸಂಭ್ರಮಿಸಿದ್ದರು. ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕಿದರು. ಆಗ ನಾನು ಉಪವಾಸ ಕುಳಿತು, ಹೋರಾಟ ನಡೆಸಿದೆ. ಪರಿಣಾಮ, ಅಂದು ಮೋದಿ ಎಚ್ಚೆತ್ತುಕೊಂಡು ನೀರು ನಿರ್ವಹಣಾ ಮಂಡಳಿ ರಚನೆ ನಿರ್ಧಾರದಿಂದ ಹಿಂದಕ್ಕೆ ಸರಿದರು.
* ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. 16 ಬಜೆಟ್‌ಗಳನ್ನು ಮಂಡಿಸಿದ ಕೀರ್ತಿ ಅವರದ್ದು. ಹಿಂದೆ ನಾವಿಬ್ಬರೂ ಒಟ್ಟಿಗೆ ಇದ್ದೇವು. ನಂತರ, ಬೇರೆ, ಬೇರೆಯಾದೆವು. ಇದೀಗ ಮತ್ತೆ ಇಬ್ಬರೂ ಒಂದಾಗಿದ್ಧೇವೆ.
56 ಇಂಚಿನ ಎದೆ ಇದ್ದರೆ ಪ್ರಯೋಜನವಿಲ್ಲ: ಸಿದ್ದು
* ಬಿಜೆಪಿಯವರು ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ. ಅದಕ್ಕಾಗಿ ಬಿಜೆಪಿಯನ್ನು ಚುನಾವಣೆಯಲ್ಲಿ ಬೆಂಬಲಿಸಬೇಡಿ.
* ಮೋದಿ ಮತ್ತೆ ಈ ದೇಶದ ಪ್ರಧಾನಿಯಾದರೆ ಸರ್ವಾಧಿಕಾರಿಯಾಗುವುದು ಖಚಿತ. ಅವರಿಂದ ರೈತರ ಯಾವುದೇ ಸಮಸ್ಯೆಗೂ ಪರಿಹಾರ ಸಿಗೋಲ್ಲ.
* ನಾನು ಸಿಎಂ ಆಗಿದ್ದಾಗ ರಾಜ್ಯದಲ್ಲಿ ಬರಗಾಲವಿದೆ ಹಣ ಕೊಡಿ ಎಂದರೂ ಕೊಡಲಿಲ್ಲ.
* 56 ಇಂಚಿನ ಎದೆ ಇದ್ದರೆ ಪ್ರಯೋಜನವಿಲ್ಲ, ಬಡವರು, ರೈತರ ಪರ ಹೃದಯವಿರಬೇಕು.
* ಮೋದಿಯದ್ದು ಮಾತೃ ಹೃದಯವಲ್ಲ. ಅವರು ಆರ್‌ಎಸ್‌ಎಸ್‌ನಲ್ಲಿ ಪಳಗಿದವರು. ಪ್ರಜಾತಂತ್ರ ವ್ಯವಸ್ಥೆ ಹಾಗೂ ಸಮ ಸಮಾಜವನ್ನು ಅವರು ಒಪ್ಪುವುದಿಲ್ಲ.
ಚುನಾವಣೆ ನಂತರ ಬಿಜೆಪಿ ಶಿವನ ಪಾದಕ್ಕೆ: ಸಿಎಂ
* ದೇವೇಗೌಡರ ಸ್ವಗ್ರಾಮ, ಹರದನಹಳ್ಳಿಯಲ್ಲಿ ಈಶ್ವರನ ದೇವಸ್ಥಾನ, ದೇವಾಲಯದ ಅರ್ಚಕನ ಮನೆ ಮೇಲೆ ಐಟಿ ದಾಳಿ ನಡೆಸುವ ಮೂಲಕ ದೇವರ ಶಾಪಕ್ಕೆ ಮೋದಿ ಗುರಿಯಾಗಿದ್ದಾರೆ. ಹೀಗಾಗಿ, ಚುನಾವಣೆ ಬಳಿಕ ಬಿಜೆಪಿ ಪಕ್ಷ ಶಿವನ ಪಾದ ಸೇರಲಿದೆ.
* ಮೋದಿಯ ರಾಜಕೀಯ ಅಂತ್ಯ ಪ್ರಾರಂಭವಾಗಿದೆ, ಇದು ಕರ್ನಾಟಕ ರಾಜ್ಯದಿಂದಲೇ ಪ್ರಾರಂಭವಾಗಲಿದೆ.
* ಸೈನಿಕರನ್ನು ರಕ್ಷಿಸುವಲ್ಲಿ ಮೋದಿ ವಿಫಲರಾಗಿದ್ದಾರೆ.
* ದೇವೇಗೌಡರು ತುಮಕೂರಿನಲ್ಲಿ ಸ್ಪರ್ಧಿಸಿರುವುದು ದೇವರ ಆಟ. ಹಾರಂಗಿ, ಯಗಚಿ ಜಲಾಶಯ ನಿರ್ಮಾಣವಾಗುವುದಕ್ಕೆ ದೇವೇಗೌಡರೇ ಕಾರಣ.
* ನಮ್ಮ ಪಕ್ಷ ಎಂದಿಗೂ ಕುಟುಂಬ ರಾಜಕಾರಣ ಮಾಡಿಲ್ಲ. ಜೆಡಿಎಸ್ ಪಕ್ಷದ ಉಳಿವಿಗಾಗಿ ಎಲ್ಲಾ ತ್ಯಾಗಕ್ಕೂ ಸಿದ್ದರಿದ್ದೇವೆ.
ಬಿಎಸ್‌ವೈ ಪುತ್ರನ ಸೋಲು ಖಚಿತ: ಡಿಕೆಶಿ
* ಬಿಜೆಪಿಯನ್ನು ದೂರವಿಟ್ಟು ದೇಶವನ್ನು ರಕ್ಷಿಸಲು ರಾಜ್ಯದಲ್ಲಿ ಸಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ.
* ಈ ಬಾರಿ ಶಿವಮೊಗ್ಗದಲ್ಲಿ ಬಿಎಸ್‌ವೈ ಪುತ್ರ ರಾಘವೇಂದ್ರ ಸೋಲು ಖಚಿತ. ಅಲ್ಲಿ ಮಧು ಬಂಗಾರಪ್ಪ ಗೆಲ್ಲಲಿದ್ದಾರೆ.
ನಾಟಿಕೋಳಿಯ ಸಾರಿಗಾಗಿ ಮಂಜು ಶಂಕುಸ್ಥಾಪನೆ: ಪ್ರಜ್ವಲ್
* ಎ.ಮಂಜು ಸಚಿವರಾಗಿದ್ದಾಗ ನಾಟಿ ಕೋಳಿ ಸಾರಿನ ಊಟದ ಆಸೆಗಾಗಿ ಪ್ರತಿ ಹೋಬಳಿಯಲ್ಲಿ ಕಾಮಗಾರಿಗಳ ಶಂಕುಸ್ಥಾಪನೆ ಮಾಡಿದರು.
* ಗದ್ದೆಗೆ ಬರುವ ಕಾಡಾನೆ ಕಬ್ಬಿನ ರಸ ಹೀರಿದ ಮೇಲೆ ಬೇರೆ ಕಬ್ಬಿನ ಗದ್ದೆಗೆ ತೆರಳುತ್ತದೆ.
ಹಾಗೆಯೇ, ಎ.ಮಂಜು ಹಣ ಹಾಗೂ ಅಧಿಕಾರದ ಆಸೆಗಾಗಿ ಯಡಿಯೂರಪ್ಪ ಬಳಿಗೆ ತೆರಳಿದ್ದಾರೆ.
* ಮೋದಿಯದು ರಾಜಕಾರಣವಲ್ಲ, ಕೇವಲ ಮೋಡಿ ರಾಜಕಾರಣ.
* ದೇವೇಗೌಡರ ಕುಟುಂಬದಲ್ಲಿ 3ನೇ ತಲೆಮಾರಿನವನು ರಾಜಕಾರಣ ಮಾಡುತ್ತಿರುವುದು ಕುಟುಂಬದ ಅಭಿವೃದ್ಧಿಗಲ್ಲ, ಜನರ ಸೇವೆಗಾಗಿ ಎನ್ನುವುದನ್ನು ರಾಜ್ಯದ ಬಿಜೆಪಿ ಮುಖಂಡರು ಮನಗಾಣಬೇಕು.
* ನಮ್ಮ ಕುಟುಂಬ ಹಿಂಬಾಗಿಲಿನಿಂದ ರಾಜಕೀಯ ಮಾಡುತ್ತಿಲ್ಲ. ಮತದಾರರಿಂದ ನೇರವಾಗಿ ಆಯ್ಕೆಯಾಗುತ್ತಿದ್ದೇವೆ.
ನಿಮ್ಮನ್ನು ಮಾರಿಕೊಳ್ಳಬೇಡಿ: ದರ್ಶನ್
* ಕುರಿ, ನಾಯಿ, ಎತ್ತುಗಳಿಗೆ ಹೆಚ್ಚಿನ ಬೆಲೆ ಇದೆ. ಆದರೆ, ಮನುಷ್ಯರನ್ನು 500, 1000 ರೂ.ಕೊಟ್ಟು ಖರೀದಿಸುತ್ತಿದ್ದಾರೆ. ಹಣಕ್ಕಾಗಿ ನಿಮ್ಮನ್ನು ನೀವು ಮಾರಿಕೊಳ್ಳಬೇಡಿ. ಮಂಡ್ಯದ ಜನರು ಸ್ವಾಭಿಮಾನದ ಸಂಕೇತವಾಗಿದ್ದಾರೆ. ಅದನ್ನು ಎತ್ತಿ ಹಿಡಿಯಿರಿ.
* ಸುಮಲತಾ ಈ ಮಣ್ಣಿನ ಸೊಸೆ. ಜಿಲ್ಲೆಯ ಮಗಳು ಎನ್ನುವುದು ನೆನಪಿರಲಿ. ಅವರಲ್ಲಿ ಅಭಿವೃದ್ಧಿಯ ಹೊಸ ಕನಸುಗಳಿವೆ. ಭಾಷಾ ಜ್ಞಾನ ಹೊಂದಿರುವ ಅವರು ಲೋಕಸಭೆ ಪ್ರವೇಶಿಸಲು ಸಮರ್ಥರಿದ್ದಾರೆ. ಅವರು ಎಲ್ಲಿಗೂ ಓಡಿ ಹೋಗುವುದಿಲ್ಲ.
* ಅಂಬರೀಶ್‌ರನ್ನು ಪ್ರೀತಿಯಿಂದ ಪೋಷಿಸಿ ಚಿತ್ರರಂಗ, ರಾಜಕೀಯದಲ್ಲೂ ಬೆಳೆಸಿ ಅವರನ್ನು ಹೃದಯದಲ್ಲಿಟ್ಟುಕೊಂಡಿದ್ದೀರಿ. ಅದೇ ಪ್ರೀತಿ* ಅಭಿಮಾನವನ್ನು ಸುಮಲತಾಗೂ ಕೊಡಿ.
ಕೆ.ಆರ್.ಪೇಟೆ – ಸುಮಲತಾ
* ರಾಜ್ಯದ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿಯವರು ರಾಜ್ಯದ ಅಭಿವೃದ್ಧಿ, ಇತರ ಕ್ಷೇತ್ರಗಳ ಚುನಾವಣಾ ಕೆಲಸ ಮಾಡುವುದನ್ನು ಬಿಟ್ಟು ಮಂಡ್ಯ ಜಿಲ್ಲೆಯಲ್ಲಿ ಮಗನ ಗೆಲುವಿಗಾಗಿ ಕುತಂತ್ರ ಮಾಡುತ್ತಿದ್ದಾರೆ.
* ಒಬ್ಬ ಹೆಣ್ಣು ಮಗಳಾದ ನನ್ನನ್ನು ಸೋಲಿಸಿ ತಮ್ಮ ಮಗನನ್ನು ಗೆಲ್ಲಿಸಿಕೊಳ್ಳುವ ಏಕೈಕ ಉದ್ದೇಶ ಅವರದು.
* ಚುನಾವಣೆಯ ಹಿಂದಿನ ದಿನ ಜಿಲ್ಲೆಯಲ್ಲಿ ಹಣದ ಹೊಳೆಯನ್ನೆ ಹರಿಸಲು ಜೆಡಿಎಸ್‌ನವರು ಸಿದ್ದತೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಬಂದಿದೆ. ಅವರು ನೀಡುವ ಐದು ನೂರು ಅಥವಾ ಸಾವಿರ ರೂಪಾಯಿಯಿಂದ ನೀವು ಮಗಳ ಮದುವೆ ಮಾಡಲು ಸಾಧ್ಯನಾ?.ವಾಸಕ್ಕೆ ಮನೆ ಕಟ್ಟಿಕೊಳ್ಳಲು ಆಗುತ್ತಾ?. ಚಿಲ್ಲರೆ ಕಾಸಿಗೆ ನಿಮ್ಮ ಸ್ವಾಭಿಮಾನ ಬಿಡಬೇಡಿ.
* ನಿಮಗೆ ಐದು ನೂರು ಕೊಟ್ಟು ಚುನಾವಣೆಯಲ್ಲಿ ಗೆದ್ದರೆ ಅದನ್ನು ಗಳಿಸಲು ಅವರು ಭ್ರಷ್ಟಾಚಾರ ಮಾಡುತ್ತಾರೆ. ಆಗ ನಿಮ್ಮದೇ ತೆರಿಗೆ ಹಣ ಕಳ್ಳರ ಪಾಲಾಗುತ್ತದೆ.
ನನ್ನ ಮಗ ನಿಖಿಲ್ ಹುಟ್ಟುವ ಮುನ್ನವೇ ಕೆ.ಆರ್.ಪೇಟೆ ತಾಲೂಕಿಗೆ ನೀರನ್ನು ಹರಿಸುವ ಮೂಲಕ ದೇವೇಗೌಡರು ಈ ಮಣ್ಣಿನ ಮಗನಾಗಿದ್ದಾರೆ. ಆದರೆ, ಸುಮಲತಾಗೂ, ಕೆ.ಆರ್.ಪೇಟೆ ತಾಲೂಕಿಗೂ ಯಾವುದೇ ಸಂಬಂಧವಿಲ್ಲ.
-ಅನಿತಾ ಕುಮಾರಸ್ವಾಮಿ, ಶಾಸಕಿ.
ಸುಮಲತಾ ಮಾಯಾಂಗನೆಯಂತೆ ವರ್ತಿಸುತ್ತಿದ್ದಾರೆ. ಇವರು ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರನ್ನು ಮೀರಿಸುವಂತಿದ್ದಾರೆ. ಆ ಕಾರಣಕ್ಕೆ ಅವರನ್ನು ಯಾರೂ ನಂಬಬೇಡಿ.
-ಎಲ್.ಆರ್.ಶಿವರಾಮೇಗೌಡ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.