Team Udayavani, Apr 13, 2019, 3:18 PM IST
ಕೊಪ್ಪಳ: ಇಲ್ಲಿನ ತುಂಗಭದ್ರಾ, ಆಲಮಟ್ಟಿ ಜಲಾಶಯ ವಿಸ್ತಾರವಿದ್ದರೂ ರಾಜ್ಯದಲ್ಲಿ ಕುಡಿಯುವ ನೀರಿನ ಭವಣೆ ಹೆಚ್ಚಾಗಿದೆ. ಕಾಂಗ್ರೆಸ್-ಜೆಡಿಎಸ್ ಸರ್ಕಾರ ಏನೂ ಮಾಡುತ್ತಿಲ್ಲ. ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರ ಬಂದ 5 ವರ್ಷದಲ್ಲಿ ಈ ಭಾಗದ ನೀರಾವರಿ ಯೋಜನೆಗಳಿಗೆ ಸಾವಿರ ಕೋಟಿ ಅನುದಾನ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಗಂಗಾವತಿಯಲ್ಲಿ ಶುಕ್ರವಾರ ಬಿಜೆಪಿಯಿಂದ ಆಯೋಜಿಸಿದ್ದ ವಿಜಯ ಸಂಕಲ್ಪಯಾತ್ರೆಯಲ್ಲಿ ಅವರು ಮಾತನಾಡಿದರು.
ನಮ್ಮ ಸರ್ಕಾರ ಐದು ವರ್ಷದಲ್ಲಿ ಮಹತ್ವದ ಅಭಿವೃದ್ಧಿ ಕೆಲಸ ಮಾಡಿದೆ. 70 ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಏನೂ ಮಾಡಿಲ್ಲ. ಈ ಬಾರಿ ಮೋದಿ ಸರ್ಕಾರ ಅಧಿಕಾರ ಬಂದಾಕ್ಷಣ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಿದೆ. ನದಿಗಳ ಜೋಡಣೆ, ರೈಲ್ವೆ ಯೋಜನೆಗಳ ಹಾಗೂ ಹೆದ್ದಾರಿ ರಸ್ತೆಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದ್ದು, ಹಲವು ಯೋಜನೆಗಳ ಅನುಷ್ಠಾನ ಮಾಡಲಾಗುವುದು ಎಂದರು.
ನಾನು ರಾಮನವಮಿ ಮುನ್ನವೇ ಹನುಮನು ಜನಸಿದ ಭೂಮಿಗೆ ಆಗಮಿಸಿದ್ದೇನೆ. ಇಲ್ಲಿನ ಮಣ್ಣಿನ ಕಣ ಕಣದಲ್ಲೂ ಪುಣ್ಯವಿದೆ. ಇಲ್ಲಿನ ಕಣದ ಪುಣ್ಯವೂ ನನಗೆ ಸಿಗಲಿ. ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ, ಶರಣರ-ಸಂತರ, ಆಂಜನೇಯನು ನಮಗೆ ಆಶೀರ್ವದಿಸಲಿ. ಇಂದು ದೇಶದೆಲ್ಲೆಡೆಯೂ ಮತ್ತೂಮ್ಮೆ ಮೋದಿ ಅಲೆಯಾಗಿ ಕಾಣಿಸುತ್ತಿದೆ.
ಪ್ರತಿಯೊಬ್ಬರೂ ಬಿಜೆಪಿಗೆ ಮತ ನೀಡಿ ದೇಶದ ರಕ್ಷಣೆ ಮಾಡಿ ಎಂದರಲ್ಲದೇ, ಪಿಎಂ ಕಿಸಾನ್ ಯೋಜನೆ ಜಾರಿ ಮಾಡಿದರೆ ರಾಜ್ಯ ಸರ್ಕಾರ ಅಡ್ಡಗಾಲು ಹಾಕುತ್ತಿದೆ. ನಾವು ಅಧಿಕಾರಕ್ಕೆ ಬಂದಾಕ್ಷಣ ಮತ್ತೆ ಯೋಜನೆ ಅನುಷ್ಠಾನ ಮಾಡಲಿದ್ದೇವೆ ಎಂದರು.
ಸಮಾರಂಭಕ್ಕೂ ಪೂರ್ವದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಪ್ರಧಾನಿ ಮೋದಿ ರೈತರಿಗೆ
6 ಸಾವಿರ ರೂ. ಪಿಂಚಣಿ, ಮಹಿಳೆಯರಿಗೆ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಮೀಸಲು, ಆದಾಯ ತೆರಿಗೆ, ಮುದ್ರಾದಡಿ 8 ಲಕ್ಷ ಕೋಟಿ ಸಾಲ ಸೇರಿದಂತೆ ಹಲವು ಯೋಜನೆ ಜಾರಿ ಮಾಡಿದ್ದಾರೆ. ಐದು ವರ್ಷದಲ್ಲಿ ಅಭಿವೃದ್ಧಿ ಪರ್ವವೇ ನಡೆದಿದೆ ಎಂದರು.
ಚುನಾವಣೆ ನಂತರ ಕ್ರಾಂತಿಕಾರಿ ಬದಲಾವಣೆ: ದೇಶದಲ್ಲಿ ಮತ್ತೆ ಮೋದಿ ಅವರೇ ಪ್ರಧಾನಿಯಾಗಲಿದ್ದಾರೆ ಎಂದು ಕಾಂಗ್ರೆಸ್‌ನ ಜನಾರ್ದನ ಪೂಜಾರಿ ಅವರೇ ಹೇಳಿದ್ದಾರೆ. ಚುನಾವಣೆ ಬಳಿಕ ರಾಜ್ಯದಲ್ಲಿ ಕ್ರಾಂತಿಕಾರಿ ಬೆಳವಣಿಗೆ ನಡೆಯಲಿದೆ. ಮೈತ್ರಿ ಸರ್ಕಾರ ಬಡಿದಾಟ ಶುರುವಾಗುತ್ತೆ. ರಾಜ್ಯದಲ್ಲಿ ಬಿಜೆಪಿ 22, ದೇಶದಲ್ಲಿ 330 ಸ್ಥಾನ ನಾವು ಗೆಲ್ಲುತ್ತೇವೆ. ಮನಮೋಹನಸಿಂಗ್ ಅವರ 10 ವರ್ಷದಲ್ಲಿ ಅವರ ಹೆಸರು ಎಲ್ಲೂ ಕೇಳಿಲ್ಲ. ಆದರೆ 5 ವರ್ಷದಲ್ಲಿ ಮೋದಿ ಹೆಸರು ಸಣ್ಣ ಮಗುವಿಂದ ಕೇಳಿ ಬರುತ್ತಿದೆ ಎಂದರು.
ಗೂಂಡಾ ಸಂಸ್ಕೃತಿ: ಸಿಎಂ ಕುಮಾರಸ್ವಾಮಿ ಯಾರು ಹಸಿವಿನಿಂದ ಬಳಲುವರೋ ಅವರು ಸೈನ್ಯಕ್ಕೆ ಹೋಗ್ತಾರೆ ಎಂದಿದ್ದಾರೆ. ಇಂತಹ ಸಿಎಂಗೆ ನಾವು ಏನು ಅನ್ನಬೇಕು. ಗೂಂಡಾ ಸಂಸ್ಕೃತಿಯ ಸಿಎಂ ನಮಗೆ ಬೇಕಾ..? ಸಚಿವ ರೇವಣ್ಣ ಮೋದಿ ಮತ್ತೆ ಪಿಎಂ ಆದರೆ ರಾಜಕೀಯ ನಿವೃತ್ತಿ ಪಡೆವೆ ಅಂತಾರೆ. ರೇವಣ್ಣ ರಾಜಕೀಯ ನಿವೃತ್ತಿ ಪಡೆಯಲು ಸಿದ್ಧವಾಗಿರಿ. ಕೇಂದ್ರದಲ್ಲಿ ಮೋದಿ ಸರ್ಕಾರ ಬರುತ್ತೆ ಎಂದು ಹೇಳಿದ ಅವರು, ಬೂತ್ ಮಟ್ಟದಲ್ಲಿ ಪ್ರತಿಯೊಬ್ಬರೂ ಹೆಚ್ಚು ಮತ ಹಾಕಿಸಿ ಲಕ್ಷ ಮತಗಳ ಅಂತರದಲ್ಲಿ ಕೊಪ್ಪಳ, ಬಳ್ಳಾರಿ, ರಾಯಚೂರು ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಕರೆ ನೀಡಿದರು.
ಸಿಎಂ ಕ್ಷಮೆ ಕೇಳಲಿ: ಬಿಜೆಪಿ ಉಗ್ರಗಾಮಿಗಳ ತಾಂಡವ ನೃತ್ಯ ಹತ್ತಿಕ್ಕಲು ಜಮ್ಮು-ಕಾಶ್ಮೀರ ಮೀಸಲು ರದ್ದತಿಗೆ ನಾವು ವಾಗ್ಧಾನ ಮಾಡಿದೆ. ಚುನಾವಣೆ ಮುಗಿದ ಬಳಿಕ ಮೈತ್ರಿ ಸರ್ಕಾರ ಉಳಿಯಲ್ಲ. ಉಳಿಯಲು ಸಾಧ್ಯವಿಲ್ಲ. ನಾನು ಸಿಎಂ ಆಗೋದನ್ನು ತಪ್ಪಿಸಲು ಕಾಂಗ್ರೆಸ್ -ಜೆಡಿಎಸ್ ಜೊತೆ ಮೈತ್ರಿ ಮಾಡಿತು. ಸಿಎಂ ಮಾಧ್ಯಮದ ಮೇಲೂ ಧಮಕಿ ಹಾಕುಲು ಮುಂದಾಗಿದ್ದಾರೆ. ಈ ಕೂಡಲೇ ಮಾಧ್ಯಮದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಸಿಎಂ ಕುಮಾರಸ್ವಾಮಿಯಿಮದ ರೈತರಿಗೆ ಮೋಸ: ರೈತರ ಸಾಲ ಮನ್ನಾ ಮಾಡುವ ಮಾತನ್ನಾಡಿದ್ದೀರಿ. 45 ಸಾವಿರ ಕೋಟಿ ಸಾಲದಲ್ಲಿ ಈ ವರೆಗೂ 4500 ಕೋಟಿ ಸಾಲ ಮನ್ನಾ ಆಗಿದೆ. ರೈತರಿಗೆ ಮೋಸ ಮಾಡಿದ್ದೀರಿ. ಈ ಚುನಾವಣೆ ಮಹತ್ವ ಅರಿತು ಹಣ, ಹೆಂಡ, ಜಾತಿ, ತೋಳ್ಬಲದಿಂದ ಮತದಾರ ದೂರವಿರಬೇಕು. ಮೋದಿ ಹಗಲಿರುಳು ಕೆಲಸ ಮಾಡುತ್ತಿದ್ದು, ಒಂದು ದಿನವೂ ರಜೆ ಪಡೆಯದೇ ಕೆಲಸ ಮಾಡಿದ್ದಾರೆ. ನಾವು ಚುನಾವಣೆ ಮುಗಿಯುವವರೆಗೂ ವಿಶ್ರಾಂತಿ ಪಡೆಯದೇ ಮತ ಪಡೆಯಬೇಕು ಎಂದರು.
ಅಲ್ಲಿ ಮೋದಿ ಸರ್ಕಾರ, ಇಲ್ಲಿ ಬಿಜೆಪಿ ಸರ್ಕಾರ: ನದಿ ಜೋಡಣೆ ಕುರಿತು ಮೋದಿ ಭರವಸೆ ಕೊಟ್ಟಿದ್ದಾರೆ. ನೀರಾವರಿ ಯೋಜನೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. 10 ವರ್ಷದ ಹಿಂದೆ ನಮ್ಮ ದೇಶದ ಸ್ಥಿತಿ ಹೇಗಿತ್ತು? ಈ 5 ವರ್ಷದಲ್ಲಿ ನಮ್ಮ ದೇಶದ ಸ್ಥಿತಿ ಹೇಗಿದೆ ಎಂದು ಜನತೆಗೆ ಗೊತ್ತಿದೆ. ಒಬ್ಬ ದಲಿತ ನಾಯಕನನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದಾರೆ. ಇನ್ನೂ ಕೆಲವೇ ದಿನದಲ್ಲಿ ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಇಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯಲಿದೆ ಎನ್ನುವ ಮಾತನ್ನಾಡಿದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ ಮಾತನಾಡಿ, ಈ ದೇಶದ ಮುಂದಿನ ಪ್ರಧಾನಿ ಮೋದಿ ಆಗಬೇಕಿದೆ. ಬಿರು ಬಿಸಿಲಿನಲ್ಲೂ ಜನಸ್ತೋಮ ನೋಡಿದರೆ ಎರಡು ಕಣ್ಣು ಸಾಲದು. ಮೂರು ಜಿಲ್ಲೆ ಸಂಸದರನ್ನು ಗೆಲ್ಲಿಸಿ ಲೋಕಸಭೆಗೆ ಕಳಿಸಿದರೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂದರು.
ಎಲ್ಲ ನೀರಾವರಿ ಯೋಜನೆ ಪೂರ್ಣ
ಕೊಪ್ಪಳ: ಕೇಂದ್ರದಲ್ಲಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ. ಅವರ ಗೆಲುವಿಗೆ ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಯ ಅಭ್ಯರ್ಥಿ ಗೆಲ್ಲಿಸಿ ಕಳಿಸಿದರೆ ತುಂಗಭದ್ರಾ ಜಲಾಶಯ ಸೇರಿದಂತೆ ಹಲವು ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕೊಪ್ಪಳ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಹೇಳಿದರು.
ಗಂಗಾವತಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಪಕ್ಷದ ವರಿಷ್ಠರು ಈ ಭಾಗದಿಂದ ಮೂವರನ್ನು ಕಣಕ್ಕೆ ಇಳಿಸಿದ್ದಾರೆ. ನೀವು ನಮಗೆ ಆಶೀರ್ವಾದ ಮಾಡಬೇಕು. ಮೋದಿ ಭಾರತವನ್ನು ಜಗತ್ತಿಗೆ ಪರಿಚಯಸಿದ ನಾಯಕ, ಹಲವು ಯೋಜನೆ ಜಾರಿ ಮಾಡಿದ್ದಾರೆ. ಮೂರು ಜಿಲ್ಲೆಯ ಜೀವನಾಡಿ ತುಂಗಭದ್ರಾ ನದಿಯಲ್ಲಿ ಹೂಳು ತುಂಬಿದೆ. ನವಲಿ ಬಳಿ ಸಮತೋಲನ ಜಲಾಶಯ ನಿರ್ಮಾಣದ ಜೊತೆಗೆ ಸಿಂಗಟಾಲೂರು ಏತ ನೀರಾವರಿ ಪೂರ್ಣಗೊಳ್ಳಬೇಕಿದೆ. ಇದಲ್ಲದೇ ಹಲವು ನೀರಾವರಿ ಯೋಜನೆಗಳು ಪೂರ್ಣಗೊಳ್ಳಬೇಕಿದೆ ಎಂದರು.
ಈ ಭಾಗದಲ್ಲಿ ನಾಲ್ಕು ಹೆದ್ದಾರಿ ನಿರ್ಮಾಣ ಮಾಡಬೇಕಿದೆ. ಸಿಂಗಟಾಲೂರು ಯೋಜನೆ ಅನುಷ್ಠಾನಕ್ಕೆ ಪ್ರಯತ್ನ, ಸಿಂಧನೂರಿನಲ್ಲಿ ಕೇಂದ್ರ ಕೃಷಿ ವಿವಿ ಸ್ಥಾಪನೆ ಮಾಡುವುದು, ಏಮ್ಸ್ ಅನ್ನು ಹೈ.ಕ ಭಾಗಕ್ಕೆ ನೀಡುವಂತೆ ಕೇಂದ್ರಕ್ಕೆ ಒತ್ತಾಯ ಮಾಡುವೆವು. ಹಾಗಾಗಿ ಮತ್ತೂಮ್ಮೆ ಮೋದಿ ಅಧಿಕಾರಕ್ಕೆ ಬರಬೇಕಿದೆ ಎಂದರು. 18-35 ವರ್ಷದೊಳಗಿನ ಯುವಕರು ದೇಶದ ರಕ್ಷಣೆಗೆ ಮತ್ತೂಮ್ಮೆ ಮೋದಿ ಪ್ರಧಾನಿಯಾಗಲು ಪಣ ತೊಟ್ಟು ನಿಂತಿದ್ದಾರೆ. ಎಲ್ಲರೂ ನಮಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ಸಮಾರಂಭದಲ್ಲಿ ಬಳ್ಳಾರಿ ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪ, ರಾಯಚೂರು ಬಿಜೆಪಿ ರಾಜಾ ಅಮರೇಶ ನಾಯಕ, ನಟಿ ಶೃತಿ, ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಬಸವರಾಜ ದಡೇಸೂಗೂರು, ಮುಖಂಡರಾದ ರಾಜುಗೌಡ ಪಾಟೀಲ್, ರಘುನಾಥ ಮಲ್ಕಾಪುರೆ, ಸೋಮಲಿಂಗಪ್ಪ, ಶಿವರಾಜ ಪಾಟೀಲ್, ಗೋಪಾಲಕೃಷ್ಣ, ಮೃತ್ಯಂಜಯ ಜಿನಗಾ, ಎನ್ ಶಂಕ್ರಪ್ಪ, ನಾಗರತ್ನಾ ಕುಪ್ಪಿ, ವಿರೂಪಾಕ್ಷಪ್ಪ ಸಿಂಗನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.