ಮೆರವಣಿಗೆ ಮತ್ತು ಬದುಕು !
Team Udayavani, Apr 14, 2019, 6:00 AM IST
ಬೀದಿಯಲ್ಲಿ ಮೆರವಣಿಗೆ ಸಾಗುತ್ತಿದೆ. ಒಬ್ಬನನ್ನು ಕರೆದು ಕೇಳಿ,
“ಈ ಮೆರವಣಿಗೆ ಎಲ್ಲಿಗೆ ಹೊರಟಿದೆ?’
ಅವನು ತಲೆಯಲ್ಲಾಡಿಸುತ್ತ, “ಗೊತ್ತಿಲ್ಲ’ ಎನ್ನುತ್ತಾನೆ.
“ಮತ್ತೆ ನೀನು ಹೋಗುತ್ತಿರುವುದು ಎಲ್ಲಿಗೆ?’
“ಎಲ್ಲರೂ ಹೋದಲ್ಲಿಗೆ ನಾನೂ ಹೋಗುವುದು?’
ಇದು ನಿರೀಕ್ಷಿಸಿರಬಹುದಾದ ಉತ್ತರವೇ. ಮೆರವಣಿಗೆಯಲ್ಲಿ ಸಾಗುವುದು ಎಷ್ಟೊಂದು ಸುಲಭ; ಎಲ್ಲರೂ ಸಾಗಿದಲ್ಲಿಗೆ ತಾನೂ ಸಾಗುವುದು. ಒಂದಿಷ್ಟೂ ತಲೆ ಓಡಿಸಬೇಕಾಗಿಲ್ಲ !
ಮೆರವಣಿಗೆಯ ಮುನ್ನೆಲೆಯಲ್ಲಿ ಸಾಗುತ್ತಿರುವವನಿಗೆ ಮಾತ್ರ ಅವನದೇ ಆದ ಕಷ್ಟಗಳಿವೆ. ಅದು ಅವನಾಗಿಯೇ ಮೈಮೇಲೆ ಎಳೆದುಕೊಂಡ ಕಷ್ಟಗಳು. ತನ್ನನ್ನು ಎಲ್ಲರೂ ಅನುಸರಿಸುತ್ತಿ¤ರುವಂತೆ ಮಾಡಿಕೊಂಡ ಮೇಲೆ ಸವಾಲನ್ನೂ ಎದುರಿಸಲೇಬೇಕಲ್ಲ ! ಬುದ್ಧನ ಮುಂದೆಯೂ ಇಂಥದೇ ಸವಾಲು ಇದ್ದಿರಬಹುದೆ?
ಬುದ್ಧನೇನು, ಎಲ್ಲ ದಾರ್ಶನಿಕರೂ ಎದುರಿಸಿದ್ದರು, ಗಾಂಧೀಜಿಯೂ! ಬಹುಶಃ ಜಗತ್ತಿನಲ್ಲಿ ಮೊತ್ತಮೊದಲಬಾರಿಗೆ ಲಕ್ಷಾಂತರ ಮಂದಿ ಒಬ್ಬನನ್ನು ಅನುಸರಿಸಿ ಸಾಗಿದ್ದರೆ ಅದು ಬುದ್ಧನನ್ನು ಇರಬೇಕು. ಬೃಹತ್ ಜಾತ್ರೆ, ಮಹೋತ್ಸವದ ಕಲ್ಪನೆ ಬಂದದ್ದೇ ಬೌದ್ಧರ ಪ್ರಭಾವದಿಂದ ಎಂದು ಹೇಳಲಾಗುತ್ತದೆ. ಬುದ್ಧ ಹೋದಲ್ಲೆಲ್ಲ ಜಾತ್ರೆಯೇ. ಸಂತೆಗದ್ದಲದ ನಡುವೆ ಬುದ್ಧನಿಗೆ ಒಮ್ಮೊಮ್ಮೆ ಒಂಟಿಯಾಗಬೇಕೆನ್ನಿಸಿ ತಿಂಗಳುಗಟ್ಟಲೆ ಕಾಣೆಯಾಗಿ, ಕಾಡನ್ನು ಸೇರಿ, ಧ್ಯಾನಾಸಕ್ತನಾಗಿದ್ದು, ಸಾಮಾಜಿಕ ಬದುಕಿಗೆ ಮರಳುತ್ತಿದ್ದನಂತೆ. ಕೆಲವೊಮ್ಮೆ ಒಂಟಿಯಾದಾಗ ಮಾತ್ರ ಗೊತ್ತಾಗುವುದು- ತಾನೇನು ಎಂದು. ಎಲ್ಲರ ನಡುವೆ ಇದ್ದಾಗ ಅದು ಹೇಗೋ ಸಾಗುತ್ತದೆ, ಬದುಕು.
ನಮ್ಮಲ್ಲಿ ಅನೇಕ ಮಾಪನಗಳಿವೆ. ಮೀಟರ್, ಲೀಟರ್ ಇತ್ಯಾದಿ. ಎಲ್ಲವೂ ಯೂನಿವರ್ಸಲ್ ಆಗಿರುವಂಥವು. ಒಂದು ಮೀಟರ್ ಎಂದರೆ ಎಲ್ಲ ಕಡೆಯೂ ಒಂದೇ. ಅದೇ ಅಳತೆಯಲ್ಲಿ ಸಿದ್ಧಗೊಳಿಸಿದ ವಸ್ತುಗಳೆಲ್ಲ ಒಂದೇ ಥರ. ಒಂದು ಯಂತ್ರದಲ್ಲಿ ಸಾವಿರಾರು ಗೊಂಬೆಗಳು ತಯಾರಾಗುತ್ತವೆ ಎಂದು ಭಾವಿಸಿ. ಎಲ್ಲವೂ ಒಂದೇ ಬಗೆಯವು. ಒಂದೊಂದು ಗೊಂಬೆ ಒಂದೊಂದು ಬಗೆ ಎಂದು ಹೇಳುವ ಹಾಗಿದೆಯೆ? ಇಲ್ಲವೇ ಇಲ್ಲ. ಆದರೆ, ಕೋಟಿ ಕೋಟಿ ಮಂದಿ ಮನುಷ್ಯರು ಕೋಟಿ ಕೋಟಿ ಬಗೆ. ಒಬ್ಬನಂತೆ ಮತ್ತೂಬ್ಬನಿಲ್ಲ.
ಮೆರವಣಿಗೆಯಲ್ಲಿ ನಿಲ್ಲಿಸಿದರೆ ಎಲ್ಲರೂ ಸಾಧಾರಣ ಒಂದೇ ಬಗೆಯಲ್ಲಿ ಕಾಣಿಸುತ್ತಾರೆ.
ಬದುಕೇ ಒಂದು ಮೆರವಣಿಗೆ ! ಪ್ರತಿಯೊಬ್ಬರೂ ತಮಗೆ ಅರಿವಿಲ್ಲದಂತೆಯೇ ಈ ಮೆರವಣಿಗೆಯಲ್ಲಿ ಯಾರಾದರೊಬ್ಬನ ಬೆನ್ನ ಹಿಂದೆ ನಿಂತಿರುತ್ತಾರೆೆ. ಮುಂದಿನವನು ಸಾಗಿದರೆ ತಾವೂ ಚಲಿಸುತ್ತಾರೆ.
ಸುಮ್ಮನೆ ಯೋಚಿಸಿ, ಒಬ್ಬೊಬ್ಬರು ಒಂದೊಂದು ರೀತಿ ಇರುವುದಾದರೆ, “ಸತ್ಯ’ ಎಂಬುದು ಎಲ್ಲರಿಗೂ ಒಂದೇ ಆಗುವುದು ಹೇಗೆ? ಎಲ್ಲರ ದಾರಿ ಒಂದೇ ಆಗುವುದು ಹೇಗೆ?
“ನಿನಗೆ ಹೇಗೆ ಹೊಳೆಯುತ್ತದೆಯೋ ಹಾಗೆ’ ಎಂಬಂಥ ವಿನಯವಂತಿಕೆಯ ಧೋರಣೆ ಭಾರತೀಯ ದರ್ಶನಗಳದ್ದಾಗಿತ್ತು. ಋಷಿಗಳು ಕಾಡಿಗೆ ತೆರಳಿ ಏಕಾಂತದ ಬದುಕನ್ನು ಬಯಸುತ್ತಿದ್ದರೇ ವಿನಾ ತಮ್ಮನ್ನು ಇಡೀ ಜಗತ್ತು ಅನುಸರಿಸಲಿ, ತಮ್ಮ ಹಿಂದೊಂದು ಗುಂಪು ಇರಲಿ ಎಂಬ ಆಗ್ರಹವನ್ನು ಹೊಂದಿರಲಿಲ್ಲ. ಉಪನಿಷದುಕ್ತ ಸತ್ಯ ಕೂಡ ಬಂಗಾರದ ಪಾತ್ರೆಯಡಿಯಲ್ಲಿ ಅಡಗಿತ್ತು, ಮುಚ್ಚಿರುವುದೇ ಯುಕ್ತ ಎಂಬಂತೆ.
ಯಾವುದೇ ಸಂಗತಿ ತನ್ನದು ಆಗಿರುವವರೆಗೆ ಅದು “ಬದುಕು’ ಆಗುತ್ತದೆ, “ಉಪದೇಶ’ವಾದ ಕೂಡಲೇ ಅದಕ್ಕೆ “ರಾಜಕೀಯ’ ಆಯಾಮ ಬಂದುಬಿಡುತ್ತದೆ. ನಮ್ಮ ಹೆಚ್ಚಿನ ದಾರ್ಶನಿಕರು ಬದುಕಿನ ಕೊನೆಯ ದಿನಗಳಲ್ಲಿ ಸವಾಲುಗಳನ್ನು ಎದುರಿಸಿದ್ದು ಇದೇ ಕಾರಣಕ್ಕಾಗಿ. ಚಾರ್ಲ್ಸ್ ಟೇಲರ್ ಎಂಬ ತಣ್ತೀಜ್ಞಾನಿ “ಪಾಲಿಟಿಕ್ಸ್ ಆಫ್ ರೆಕಗ್ನಿಶನ್’ ಎನ್ನುತ್ತಾನೆ.
ಒಬ್ಬ ಸಂಗೀತಗಾರ ಹಾಡುವಾಗ ಪ್ರತಿಯೊಬ್ಬನಿಗೂ ಆತ ತನಗಾಗಿ ಹಾಡುತ್ತಿರುವನೆಂದು ಭಾಸವಾಗಬೇಕು, ಆತನೂ ಅದನ್ನು ಪ್ರತಿಯೊಬ್ಬರಿಗಾಗಿ ಹಾಡಬೇಕು. ಕೇಳುಗರ ಸಂಖ್ಯೆ ಸಾವಿರಾರು ಆಗಿದ್ದಾಗ ಈ “ಇಂಟಿಮೆಸಿ’ ಸಾಧ್ಯವಾಗುವುದಿಲ್ಲ. ಹಾಗಾಗಿ, “ಮಾಸ್’ ಆದ ಕೂಡಲೇ ಯಾವುದೇ ಕಲೆಯ ಕಲಾತ್ಮಕತೆ ಉಳಿಯುವುದಿಲ್ಲ, ಅದು ಗದ್ದಲವೆನಿಸಿಬಿಡುತ್ತದೆ. ಅದು, “ವೈಯಕ್ತಿಕತೆ’ಯ ನ್ನು ಗೌರವಿಸುವುದಿಲ್ಲ. ಯಾವುದೇ ಸಂಗೀತ ಕಾರ್ಯಕ್ರಮವನ್ನು ಜಾತ್ರೆಯಂತೆ ಸಂಘಟಿಸುವುದರಿಂದ ಏನನ್ನೂ ಸಾಧಿಸಿದ ಹಾಗಾಗುವುದಿಲ್ಲ.
ನೀವು ವಾಟ್ಸಾಪ್‌ನಲ್ಲಿದ್ದೀರಿ ಎಂದಿಟ್ಟುಕೊಳ್ಳಿ. ತತ್‌ಕ್ಷಣ ಉಳಿದವರು ಕೇಳುವ ಪ್ರಶ್ನೆ, “ನೀವು ಯಾವೆಲ್ಲ ಗ್ರೂಪ್‌ಗ್ಳಲ್ಲಿದ್ದೀರಿ?’
ಇದು, ನಿಮ್ಮನ್ನು ಮೆರವಣಿಗೆಯತ್ತ ಸೆಳೆಯುವ ಹೊಸ ವರಸೆ !
ಶ್ವೇತಕೇತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.