ಮತದಾನದ ಪೂರ್ವತಯಾರಿ ಪೂರ್ಣ
Team Udayavani, Apr 14, 2019, 3:00 AM IST
ಬೆಂಗಳೂರು: ನಗರದ ವ್ಯಾಪ್ತಿಯ ಲೋಕಸಭೆ ಕ್ಷೇತ್ರಗಳ ಮತದಾನಕ್ಕೆ ಜಿಲ್ಲಾ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಯಾವುದೇ ಅಹಿತಕರ ಘಟನೆ ಹಾಗೂ ತಾಂತ್ರಿಕ ಗೊಂದಲಗಳು ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದರು.
ಏ.18ರಂದು ಮತದಾನ ನಡೆಯುವ ಹಿನ್ನೆಲೆಯಲ್ಲಿ ಶನಿವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ ಲೋಕಸಭೆ ಕ್ಷೇತ್ರಗಳಲ್ಲದೇ, ಬೆಂಗಳೂರು ಗ್ರಾಮಾಂತರ ಲೋಕಸಭೆಯ 3, ಚಿಕ್ಕಬಳ್ಳಾಪುರ ಲೋಕಸಭೆ ವ್ಯಾಪ್ತಿಯ ಒಂದು ವಿಧಾನಸಭಾ ಕ್ಷೇತ್ರಗಳೂ ಬರುತ್ತವೆ.
ಈ ಭಾಗಗಳಲ್ಲಿ ಒಟ್ಟು 1,600 ಮತಕೇಂದ್ರಗಳು, 8,514 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಅಲ್ಲಿ ಅಗತ್ಯ ಸಿಬ್ಬಂದಿ, ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಇನ್ನು ಮತಗಟ್ಟೆಗಳಲ್ಲಿ ಸಂಪೂರ್ಣ ಭದ್ರತೆಗೆ ಪೊಲೀಸ್, ಮಿಲಿಟರಿ, ಗೃಹರಕ್ಷಕ ದಳ ಸಿಬ್ಬಂದಿ ನೇಮಿಸಿದ್ದು, ಯಾವುದೇ ಸಮಸ್ಯೆ ಉಂಟಾಗದಂತೆ ಚುನಾವಣೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮತದಾನ ದಿನಕ್ಕೆ ಬೇಕಾಗಿರುವ ಇವಿಎಂಗಳ ತಯಾರಿ ಕಾರ್ಯ ಮುಗಿದು, ಬ್ಯಾಗಿಂಗ್ ಆಗಿದೆ. ಮತದಾನ ಸಂದರ್ಭದಲ್ಲಿ ಯಾವುದೇ ರೀತಿಯ ಆಮೀಷಕ್ಕೆ ಒಳಗಾಗುವ ಅಧಿಕಾರಿ ಹಾಗೂ ಮಿಷ ಒಡ್ಡುವವರಿಬ್ಬರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚಿಸಲಾಗಿದೆ. ಏ.16 ಸಂಜೆ 6ಗಂಟೆಗೆ 144ನೇ ಸೆಕ್ಷನ್ ಜಾರಿಯಾಗಲಿದ್ದು, ಐದಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ.
ಮಧ್ಯ ನಿಷೇಧವಿದ್ದು, ಧ್ವನಿವರ್ಧಕ ಬಳಸುವಂತಿಲ್ಲ. ಮಾಧ್ಯಮಗಳು ಕೂಡ ಚುನಾವಣೆ ಕುರಿತು ಯಾವುದೇ ಸಮೀಕ್ಷೆ ಪ್ರಕಟ, ಪ್ರಸಾರ ಮಾಡುವಂತಿಲ್ಲ. ಇನ್ನು ಮತದಾನಕ್ಕೆ 72 ಗಂಟೆ ಮುಂಚಿತವಾಗಿ ಚುನಾವಣೆಗೆ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳು ಚುನಾವಣಾ ವೆಚ್ಚದ ಮಾಹಿತಿ ಸಲ್ಲಿಸಬೇಕು ಎಂದರು.
ಶೇ.78ರಷ್ಟು ಮತದಾರರ ಚೀಟಿ ವಿತರಣೆ: ಬೆಂಗಳೂರು ನಗರದ ವ್ಯಾಪ್ತಿಯಲ್ಲಿ 72,64,796 ಮತದಾರರಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ಆ ಮತದಾರರಿಗೆ ಭಾವಚಿತ್ರವಿರುವ ಮತದಾರರ ಚೀಟಿ ಹಾಗೂ ಮಾಹಿತಿ ಪುಸ್ತಕ ವಿತರಿಸಲಾಗುತ್ತಿದೆ. ಈವರೆಗೂ ಶೇ.78ರಷ್ಟು ಮತದಾರರಿಗೆ ವಿತರಣೆ ಮಾಡಲಾಗಿದ್ದು,
ಏ.14ರ ಸಂಜೆ ಒಳಗೆ ಉಳಿದ ಎಲ್ಲಾ ಮತದಾರರಿಗೆ ವಿತರಿಸಲಾಗುವುದು. ಈ ಬಾರಿ ನೋಂದಣಿಯಾದ ಹೊಸ ಮತದಾರರಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯ ಯಶಸ್ವಿಯಾಗಿದ್ದು, ಶೇ.95ರಷ್ಟು ಮತದಾರ ಗುರುತಿನ ಚೀಟಿಯನ್ನು ಅವರ ಮನೆಗಳಿಗೆ ತಲುಪಿಸಲಾಗಿದೆ. ಉಳಿದವರು ಸಂವಹನ ಕೊರತೆಯಿಂದ ಅಲಭ್ಯವಾಗಿದ್ದು, ಅವರಿಗೂ ಶೀಘ್ರ ತಲುಪಿಸಲು ನಮ್ಮ ಅಧಿಕಾರಿಗಳು ಮುಂದಾಗಿದ್ದಾರೆ ಎಂದರು.
ಸಿಬ್ಬಂದಿ ಕೊರತೆ, ತಾಂತ್ರಿಕ ಸಮಸ್ಯೆ ಆಗದು: ಚುನಾವಣಾ ಕೆಲಸಕ್ಕೆ ಒಟ್ಟು 45 ಸಾವಿರ ಸಿಬ್ಬಂದಿಗೆ 2 ಹಂತದಲ್ಲಿ ತರಬೇತಿ ನೀಡಿದ್ದೇವೆ. ಇದರ ಜತೆಗೆ ಹೆಚ್ಚುವರಿಯಾಗಿ 4,000 ಸಿಬ್ಬಂದಿಯನ್ನು ನೂತನವಾಗಿ ನೇಮಕ ಮಾಡಿಕೊಂಡಿದ್ದು, ಅವರಿಗೆ ಏ.14ರಂದು ತರಬೇತಿ ನಡೆಯಲಿದೆ. ಒಟ್ಟು ಸಿಬ್ಬಂದಿ ಪೈಕಿ ಶೇ.10ರಷ್ಟು ಹೆಚ್ಚುವರಿ ಸಿಬ್ಬಂದಿ ಇದ್ದು, ಅವರನ್ನು ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳುತ್ತೇವೆ.
ಅಂತೆಯೇ ಇವಿಎಂ ಹಾಗೂ ಅದಕ್ಕೆ ಬಳಸುವ ಬ್ಯಾಟರಿಗಳನ್ನು ಶೇ.20ರಷ್ಟು ಹೆಚ್ಚವರಿಯಾಗಿ ಇರಿಸಿಕೊಂಡಿದ್ದೇವೆ. ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಶೇ.15ರಷ್ಟು ಅಧಿಕಾರಿಗಳು ಯಾವುದೇ ಅನುಮತಿ ಪಡೆಯದೆ ತರಬೇತಿಗೆ ಗೈರಾಗಿದ್ದು, ಅವರಿಗೆ ನೋಟಿಸ್ ಕೊಟ್ಟಿದ್ದು, ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
1,234 ಸೂಕ್ಷ್ಮ ಪರಿವೀಕ್ಷಕರು: ಈ ಹಿಂದಿನ ಚುನಾವಣೆಗಳಲ್ಲಿ ನಡೆದಿರುವ ಅಹಿತಕರ ಘಟನೆಗಳುನ್ನು ಅಧ್ಯಯನ ಮಾಡಿರುವ ಜಿಲ್ಲಾ ಚುನಾವಣಾ ಆಯೋಗ ಹಾಗೂ ಪೊಲೀಸ್ ಇಲಾಖೆ ಅಧಿಕಾರಗಳು ಒಟ್ಟಾಗಿ ಚರ್ಚಿಸಿ ಬೆಂಗಳೂರಿನ ಮೂರೂ ಲೋಕಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1,234 ಸೂಕ್ಷ್ಮಮತಗಟ್ಟೆಗಳನ್ನು ಗುರುತಿಸಿದ್ದೇವೆ. ಅಲ್ಲಿ ಕೇಂದ್ರ ಸರ್ಕಾರ ಅಧಿಕಾರಿಗಳು ಸೂಕ್ಷ್ಮ ಪರಿವೀಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಉಳಿದಂತೆ 477 ಕೇಂದ್ರಗಳಲ್ಲಿ ವೆಬ್‌ಕ್ಯಾಸ್ಟಿಂಗ್ ಮೂಲಕ ಚಲನವಲನ ಗಮನಿಸಲಾಗುತ್ತದೆ. ಜತೆಗೆ, ಪ್ರತಿ ಮತಗಟ್ಟೆಗೆ ಒಬ್ಬ ಪೊಲೀಸ್ ಪೇದೆ ಹಾಗೂ ಗೃಹ ರಕ್ಷಕ ಸಿಬ್ಬಂದಿ ನೇಮಕ ಮಾಡಲಾಗುವುದು. ಜತೆಗೆ 9 ಕಂಪನಿ ಪ್ಯಾರ ಮಿಲಿಟರಿ ಫೋರ್ಸ್ ಶನಿವಾರ ಸಂಜೆ ಬೆಂಗಳೂರಿಗೆ ಬಂದಿದ್ದು, ಅವರನ್ನು ಸೂಕ್ಷ್ಮ ಮತಗಟ್ಟೆಗಳಲ್ಲಿ ಭದ್ರತೆಗೆ ನಿಯೋಜಿಸಲಾಗುತ್ತಿದೆ ಎಂದು ಮಂಜುನಾಥ ಪ್ರಸಾದ್ ಮಾಹಿತಿ ನೀಡಿದರು.
ಸಮಾರಂಭಗಳ ಮೇಲೆ ತೀವ್ರ ನಿಗಾ: ನಗರದಲ್ಲಿ ಯಾವುದೇ ಮದುವೆ ಸಮಾರಂಭ, ಸಾಮೂಹಿಕ ಊಟ ಉಪಹಾರ ಆಯೋಜಿಸುವ ಮುನ್ನ ಸಾರ್ವಜನಿಕರು ಅದಕ್ಕೆ ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ಈ ನಿಟ್ಟಿನಲ್ಲಿ ನಗರದ ಎಲ್ಲಾ ಕಲ್ಯಾಣ ಮಂಟಪಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದು, ಅಲ್ಲಿ ಚುನಾವಣಾ ಅಕ್ರಮವಾಗದಂತೆ ಅಧಿಕಾರಿಗಳು ನಿಗಾವಹಿಸಲಿದ್ದಾರೆ.
ಮತಗಟ್ಟೆಗೆ ಮೊಬೈಲ್ ತರವುವಂತಿಲ್ಲ: ಈ ಬಾರಿ ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಮತಗಟ್ಟೆಗಳ ಸುತ್ತಲಿನ 100 ಮೀ. ವ್ಯಾಪ್ತಿಯಲ್ಲಿ ಯಾರೂ ಮೊಬೈಲ್ ಫೋನ್ ಬಳಸದಂತೆ ಸೂಚಿಸಿದ್ದು, ಮತಗಟ್ಟೆಯ ಅಧಿಕಾರಿಗಳಿಂದ ಹಿಡಿದು ಮತದಾನಕ್ಕೆ ಬರುವವರೂ ಕೂಡ ಮೊಬೈಲ್ ತರುವಂತಿಲ್ಲ. ಈ ಕುರಿತು ಮತಗಟ್ಟೆ ಬಳಿಯ ಭದ್ರತಾ ಸಿಬ್ಬಂದಿ ಅಥವಾ ಅಧಿಕಾರಿಗಳು ತಪಾಸಣೆ ನಡೆಸುತ್ತಾರೆ.
ಎರಡು ಬ್ಯಾಲೆಟ್ ಯೂನಿಟ್ ಬಳಕೆ: ಬೆಂಗಳೂರಿನ ಮೂರು ಲೋಕಸಭೆ ಕ್ಷೇತ್ರಗಳಲ್ಲಿ 16ಕ್ಕಿಂತ ಹೆಚ್ಚು ಮಂದಿ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ, ಪ್ರತಿ ಮತಗಟ್ಟೆಯಲ್ಲಿ ಎರಡು ಬ್ಯಾಲೆಟ್ ಯೂನಿಟ್ ಬಳಸಲಾಗುತ್ತಿದೆ.
ವಿದ್ಯಾರ್ಥಿಗಳಿಂದ ಸ್ವಯಂ ಸೇವೆ: ಮತಗಟ್ಟೆಗೆ ಬರುವ ಮತದಾರರಿಗೆ ಮಾಹಿತಿ ನೀಡಲು, ವಿಕಲಚೇತನರ ನೆರವಿಗೆ 1,000 ಸ್ಕೌಟ್-ಗೈಡ್ಸ್ ವಿದ್ಯಾರ್ಥಿಗಳು, 700 ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಹಾಗೂ ಇತರೆ ಕಾಲೇಜು ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಕುರಿತು ಚುನಾವಣಾ ಆಯೋಗವು ಅನುಮತಿ ನೀಡಿದೆ.
ಅಭ್ಯರ್ಥಿಗಳ ವಾಹನಗಳ ಮೇಲೆ ನಿಗಾ: ಒಂದು ಕ್ಷೇತ್ರದ ಅಭ್ಯರ್ಥಿಯು ತನ್ನ ಕಾರ್ಯಚಟುವಟಿಕೆಗೆ 10 ವಾಹನ ಮಾತ್ರ ಬಳಸಬಹುದು. ಆ ವಾಹನಗಳು ಜಿಲ್ಲಾ ಚುನಾವಣಾಧಿಕಾರಿಗಳಿಂದ ಒಪ್ಪಿಗೆ ಪಡೆದಿದ್ದು, ವಾಹನದ ಮುಂಭಾಗದಲ್ಲಿ ಅನುಮತಿ ಪತ್ರ ಹಾಕಬೇಕು. ಇವುಗಳಲ್ಲಿ 5ಕ್ಕಿಂತ ಹೆಚ್ಚು ಮಂದಿ ಕೂರುವಂತಿಲ್ಲ. ಅಲ್ಲದೇ, ಈ ವಾಹನಗಳು ಉಚಿತವಾಗಿ ಮತದಾರರಿಗೆ ಸಾರಿಗೆ ಸೌಲಭ್ಯ ಒದಗಿಸುವಂತಿಲ್ಲ. ಒಂದು ವೇಳೆ ಆ ಕುರಿತು ದೂರು ಬಂದರೆ ಆರ್‌ಟಿಒ ಹಾಗೂ ಮೋಟಾರ್ ವಾಹನ ಕಾಯ್ದೆಯಡಿ ಕೇಸ್ ದಾಖಲಿಸಲಾಗುತ್ತದೆ.
ಮತಗಟ್ಟೆಗಳಲ್ಲಿ ಮೂಲ ಸೌಕರ್ಯ: ಮತದಾರರ ಅನುಕೂಲಕ್ಕಾಗಿ ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ಪೆಂಡಾಲ್, ವಿದ್ಯುತ್, ಪ್ರತ್ಯೇಕ ಶೌಚಾಲಯ, ಅಧಿಕಾರಿಗಳಿಗೆ ಫ್ಯಾನ್ ವ್ಯವಸ್ಥೆ ಇರಲಿದೆ. ಜತೆಗೆ ಮೆಡಿಕಲ್ ಕಿಟ್‌ಗಳನ್ನೂ ಇರಿಸಲಾಗುತ್ತದೆ. ಇವುಗಳ ನಿರ್ವಹಣೆ ಹಾಗೂ ಅಧಿಕಾರಿಗಳ ಸಹಾಯಕ್ಕೆ ಒಬ್ಬ ದಿನಗೂಲಿ ನೌಕರರನ್ನು ನೇಮಿಸಲಾಗಿದೆ.
ಕ್ರಿಮಿನಲ್ ಅಪರಾಧ: ಜಾಹೀರಾತು ನೀಡದವರ ವಿರುದ್ಧ ದೂರು: ಚುನಾವಣೆಗೆ ಸ್ಪರ್ಧಿಸಿರುವ ಕ್ರಿಮಿನಲ್ ಅಪರಾಧ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳು ಆ ಬಗ್ಗೆ ಮಾಧ್ಯಮಗಳಲ್ಲಿ 3 ಬಾರಿ ಜಾಹೀರಾತು ನೀಡಲು ಇದೇ ಮೊದಲ ಬಾರಿ ಚುನಾವಣಾ ಆಯೋಗ ಸೂಚಿಸಿತ್ತು. ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಾಲ್ಕು ಮಂದಿ ಕ್ರಿಮಿನಲ್ ಅಪರಾಧ ಹಿನ್ನೆಲೆ ಹೊಂದಿದ್ದು, ಅವರಲ್ಲಿ ಬೆಂ.ಕೇಂದ್ರದಿಂದ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಮಾತ್ರ ಎರಡು ಬಾರಿ ಜಾಹೀರಾತು ನೀಡಿದ್ದಾರೆ.
ಉಳಿದಂತೆ ಬೆಂ.ಉತ್ತರದ ಪಕ್ಷೇತರ ಅಭ್ಯರ್ಥಿಗಳಾದ ಕೆ.ಎನ್.ಜಗದೀಶ್ ಕುಮಾರ್ ಹಾಗೂ ಹನುಮೇಗೌಡ, ಬೆಂಗಳೂರು ದಕ್ಷಿಣ ಕ್ಷೇತ್ರದ ಕೊಲ್ಲೂರು ಮಂಜುನಾಥ್ ನಾಯ್ಕ ಯಾವುದೇ ಜಾಹೀರಾತು ನೀಡಿಲ್ಲ. ಈ ಕುರಿತು ಅಭ್ಯರ್ಥಿಗಳಿಗೆ ನೋಟಿಸ್ ಜಾರಿ ಮಾಡಿ, ಚುನಾವಣಾ ಆಯೋಗಕ್ಕೂ ದೂರು ನೀಡಿದ್ದೇವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ
Imprisonment: ಸಂಘಟನೆಗಾಗಿ ದರೋಡೆ: ಜೆಎಂಬಿ ಉಗ್ರನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ
Fraud: ಆಂಧ್ರ ಮಾಜಿ ಸಿಎಂ ಆಪ್ತನ ಹೆಸರಲ್ಲಿ ವಂಚನೆ
Arrested: ಸರ್ಕಾರಿ ನೌಕರಿ ಆಸೆ ತೋರಿಸಿ 46 ಜನಕ್ಕೆ 1 ಕೋಟಿ ವಂಚನೆ: ರೈಲ್ವೆ ಅಧಿಕಾರಿ ಸೆರೆ
Bengaluru: ಸಿನಿಮೀಯವಾಗಿ ಬೈಕ್ ಕಳ್ಳನನ್ನು ಹಿಡಿದ ಜಲಮಂಡಳಿ ಅಧಿಕಾರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.